ಹರಿಹರದ ಎಪಿಎಂಸಿಯಲ್ಲಿ ಬಿಳಿ ಜೋಳವನ್ನು ಚೀಲಗಳಿಗೆ ತುಂಬುತ್ತಿರುವ ಹಮಾಲಿ ಕಾರ್ಮಿಕರು
ದಾವಣಗೆರೆಯ ಎಪಿಎಂಸಿಯಲ್ಲಿ ರೈತರು ಮೆಕ್ಕೆಜೋಳವನ್ನು ತೂಕ ಮಾಡಿ ಚೀಲಕ್ಕೆ ತುಂಬುತ್ತಿರುವುದು
ದಾವಣಗೆರೆಯ ಎಪಿಎಂಸಿಯಲ್ಲಿ ಭತ್ತದ ಚೀಲ ಹೊಲಿಯುತ್ತಿರುವ ಕಾರ್ಮಿಕರು
ದಾವಣಗೆರೆಯ ಎಪಿಎಂಸಿ ಆವರಣದಲ್ಲಿ ಒಣಗಿಸಿದ ಭತ್ತವನ್ನು ರಾಶಿ ಮಾಡುತ್ತಿರುವ ಕಾರ್ಮಿಕರು
ದಾವಣಗೆರೆಯ ಎಪಿಎಂಸಿಯಲ್ಲಿ ಭತ್ತದ ಚೀಲಗಳನ್ನು ಲಾರಿಗೆ ಲೋಡ್ ಮಾಡುತ್ತಿರುವ ಹಮಾಲಿ ಕಾರ್ಮಿಕರು
ಎಪಿಎಂಸಿಯಲ್ಲಿ ರೈತ ಮೂಕ ಪ್ರೇಕ್ಷಕ
‘ಹೊಲದಲ್ಲಾದರೆ ರೈತರೇ ದರ ನಿಗದಿ ಮಾಡಬಹುದು. ಆದರೆ ಎಪಿಎಂಸಿಯಲ್ಲಿ ರೈತರು ಮೂಕ ಪ್ರೇಕ್ಷಕರಂತಿರಬೇಕು. ಕೂಲಿ ಸಾಗಣೆ ವೆಚ್ಚದ ಕಾರಣ ಎಲ್ಲ ರೈತರಿಗೂ ಎಪಿಎಂಸಿಗೆ ಫಸಲು ತರಲು ಆಗುವುದಿಲ್ಲ. ಹೊಲದಲ್ಲಿ ಎಷ್ಟು ದಿನ ಬೇಕಾದರೂ ಇಡಬಹುದು. ಆದರೆ ಎಪಿಎಂಸಿಯಲ್ಲಿ ದಾಸ್ತಾನು ಮಾಡುವುದು ಕಷ್ಟ. ಅಲ್ಲಿ ರಕ್ಷಣೆ ಇಲ್ಲ. ರಾತ್ರಿಯಿಡೀ ಕಾಯಬೇಕು. ಕಮಿಷನ್ ಕೊಡಬೇಕು. ದರದಲ್ಲೂ ವ್ಯತ್ಯಾಸ ಇರುತ್ತದೆ. ತೂಕದಲ್ಲೂ ನಷ್ಟವಾಗುತ್ತದೆ. ಈ ಎಲ್ಲ ಕಾರಣದಿಂದ ರೈತರು ಹೊಲದಲ್ಲೇ ಫಸಲು ಮಾರಾಟ ಮಾಡಲು ಉತ್ಸಾಹ ತೋರುತ್ತಾರೆ ಎಂದು ಎಪಿಎಂಸಿಯಲ್ಲಿನ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು ಕೊಳೇನಹಳ್ಳಿ ಬಿ.ಎಂ. ಸತೀಶ್. ‘ಎಪಿಎಂಸಿ ತಿದ್ದುಪಡಿ ಕಾಯ್ದೆಗೆ ವಿರೋಧ ಮಾಡುತ್ತಿರುವುದು ಸರಿಯಲ್ಲ. ಸರ್ಕಾರ ಕಮಿಷನ್ ಏಜೆಂಟ್ ಎಂದು ಪರವಾನಗಿ ನೀಡುತ್ತದೆ. ಇದರ ಅರ್ಥ ಪರೋಕ್ಷವಾಗಿ ಕಮಿಷನ್ ತೆಗೆದುಕೊಳ್ಳಬಹುದು ಎಂಬುದು. ಹಾಗಾದರೆ ಈ ವ್ಯವಸ್ಥೆ ಏನು’ ಎಂದು ಪ್ರಶ್ನಿಸುತ್ತಾರೆ. ಮಾರುಕಟ್ಟೆ ಆರಂಭದಿಂದಲೂ ಇರುವ ಪದ್ಧತಿ ‘ಖರೀದಿದಾರರ ಹಮಾಲಿಗಳು ಬೇರೆ ರೈತರ ಹಮಾಲಿಗಳು ಬೇರೆ. ಹಮಾಲಿ ಕೂಲಿ ಕೊಡುವುದು ಮಾರುಕಟ್ಟೆ ವ‌್ಯವಸ್ಥೆ ಆರಂಭದಾಗಿನಿಂದ ಇರುವ ಪದ್ಧತಿ. ರೈತರೇ ಒಂದು ತೂಕ ಮಾಡಿ ಫಸಲು ನೀಡಿದರೆ ಯಾವ ಹಮಾಲಿ ಕಾರ್ಮಿಕರೂ ಬೇಕಾಗಿಲ್ಲ. ಆದರೆ ಅದು ಆಗದ ಕಾರಣ ಹಮಾಲಿ ಕೂಲಿ ಕೊಡುವುದು ಸಹಜ’ ಎಂದು ವರ್ತಕ ಪ್ರತಿನಿಧಿ ದೊಗ್ಗಳ್ಳಿ ಬಸವರಾಜ್ ಹೇಳಿದರು. ‘ಖರೀದಿದಾರರ ಹಮಾಲಿ ಕಾರ್ಮಿಕರಿಗೆ ರೈತರು ಕೂಲಿ ಕೊಡಬೇಕಾಗಿಲ್ಲ. ಅದನ್ನು ಖರೀದಿದಾರರೇ ಕೊಡುತ್ತಾರೆ. ಆದರೆ ದಲ್ಲಾಳಿ ಅಂಗಡಿ ಹಮಾಲಿ ಕಾರ್ಮಿಕರು ರೈತರ ಕೆಲಸವನ್ನು ತಾವೇ ನಿರ್ವಹಿಸುತ್ತಾರೆ. ರಾಶಿ ಹಾಕುವುದು ಲೋಡಿಂಗ್–ಅನ್‌ಲೋಡಿಂಗ್ ಫಸಲು ಹಸನು ಮಾಡುತ್ತಾರೆ. ಆಗ ಅವರಿಗೆ ರೈತರು ಕೂಲಿ ಕೊಡಬೇಕಾದುದು ಸಹಜ. ಈ ಬಗ್ಗೆ ಚರ್ಚೆಯಾಗಲಿ’ ಎಂದರು.
ಸ್ಪಷ್ಟ ನಿರ್ಧಾರಕ್ಕೆ ಬರಲಿ ಎನ್.ಕೆ. ಆಂಜನೇಯ
ಹೊನ್ನಾಳಿ: ಫಸಲು ಖರೀದಿಯ ಹಮಾಲಿ ಕೂಲಿ ರೈತರು ಕೊಡಬೇಕು ಎಂಬುದು ಖರೀದಿದಾರರ ಒತ್ತಾಯವಾದರೆ ವ್ಯಾಪಾರಿಗಳು ಕೊಡಬೇಕು ಎಂಬುದು ತಾಲ್ಲೂಕಿನ ರೈತರ ವಾದ. ‘2020ಕ್ಕೂ ಮೊದಲು ರೈತರು ಒಂದಿಷ್ಟು ಕಾಳುಗಳನ್ನು ಹಮಾಲರಿಗೆ ಕೊಡುತ್ತಿದ್ದರು. ಆದರೆ ಇತ್ತೀಚೆಗೆ ಅವರು ಒಂದು ಬ್ಯಾಗ್‌ಗೆ ಕೇವಲ ₹ 5 ಮಾತ್ರ ಕೊಡುತ್ತಿದ್ದಾರೆ. ಇದರಿಂದ ನಮಗೆ ನಷ್ಟವಾಗುತ್ತಿದೆ. ಮೊದಲಿನಂತೆಯೇ ಅವರು ಕಾಳು ಕೊಟ್ಟರೆ ಅನುಕೂಲವಾಗುತ್ತದೆ’ ಎಂಬುದು ಹಮಾಲಿ ಕಾರ್ಮಿಕರ ಒತ್ತಾಯ. ‘ರೈತರು ತಾವೇ ಎಂಪಿಎಂಸಿ ಪ್ರಾಂಗಣಕ್ಕೆ ಫಸಲು ತಂದರೆ ಹಮಾಲಿ ಕೂಲಿ ಕೊಡಬೇಕಾಗಿಲ್ಲ. ಆದರೆ ನಾವೇ ಹಳ್ಳಿಗಳಿಗೆ ಹೋಗಿ ಖರೀದಿ ಮಾಡಿ ತಂದರೆ ಅದಕ್ಕೆ ಹಮಾಲಿ ಕೂಲಿ ಕೊಡಬೇಕಾಗುತ್ತದೆ. ವರ್ತಕರು ಹಳ್ಳಿಗಳಿಗೆ ಹೋದರೆ ಸಾರಿಗೆ ವೆಚ್ಚ ಬರುತ್ತದೆ’ ಎನ್ನುತ್ತಾರೆ ವಾಸವಿ ಟ್ರೇಡರ್ಸ್ ಮಾಲೀಕ ವಿನಾಯಕ ಶೆಟ್ಟಿ. ‘ರೈತರು ಹಣದ ಬದಲು ಕಾಳು ಕೊಟ್ಟರೆ ನಮಗೆ ಅನುಕೂಲ ಆಗುತ್ತದೆ’ ಎನ್ನುತ್ತಾರೆ ಹಮಾಲಿ ಕಾರ್ಮಿಕ ಅರಬಗಟ್ಟೆ ಚಿಕ್ಕಪ್ಪ. ‘ನಾವು ಬೆಳೆದ ಬೆಳೆಗಳನ್ನು ಎಪಿಎಂಸಿ ಪ್ರಾಂಗಣಕ್ಕೆ ತಂದು ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಎಪಿಎಂಸಿ ಕಾಯ್ದೆ ತಿದ್ದುಪಡಿಯಿಂದಾಗಿ ತೊಂದರೆಯಾಗಿದೆ. ಸರಿಯಾಗಿ ಮಳೆ ಬೆಳೆ ಇಲ್ಲ ಬೆಲೆಯೂ ಇಲ್ಲ. ಹಮಾಲರಿಗೆ ಕಾಳು ಕೊಡಲು ಸಾಧ್ಯವಿಲ್ಲ. ಖರೀದಿದಾರರೇ ಹಮಾಲಿ ಕೂಲಿ ಕೊಡಬೇಕು’ ಎನ್ನುತ್ತಾರೆ ರೈತ ಕರಿಬಸಪ್ಪ.
ಎಪಿಎಂಸಿಯಲ್ಲೇ ಮಾರಾಟ: ತಪ್ಪಲಿದೆ ಹೊರೆ ಇನಾಯತ್ ಉಲ್ಲಾ ಟಿ.
ಹರಿಹರ: ಇಲ್ಲಿನ ಎಪಿಎಂಸಿಯಲ್ಲಿ ರೈತರು ಧಾನ್ಯಗಳ ಮಾರಾಟಕ್ಕೆ ಬರುವುದು ಅಪರೂಪ. ವ್ಯಾಪಾರಿಗಳು ಗ್ರಾಮೀಣ ಭಾಗದ ಜಮೀನುಗಳಿಗೆ ತೆರಳಿ ಬೆಳೆಯನ್ನು ಖರೀದಿಸುತ್ತಾರೆ. ರೈತರೇ ವಾಹನಗಳಲ್ಲಿ ತಂದು ವ್ಯಾಪಾರಿಗಳಿಗೆ ತಲುಪಿಸುವ ರೂಢಿ ತಾಲ್ಲೂಕಿನಲ್ಲಿದೆ. ಧಾನ್ಯಗಳನ್ನು ಲೋಡ್ ಮಾಡುವಾಗ ಹಮಾಲರ ಕೂಲಿಯ ಭಾರ ದಲ್ಲಾಳಿಗಳ ಜೊತೆಗೆ ರೈತರ ಮೇಲೂ ಬೀಳುತ್ತಿದೆ. ಭತ್ತ ಮೆಕ್ಕೆಜೋಳ ಅಥವಾ ಬೇರೆ ಬೆಳೆಗಳನ್ನು ವಾಹನಗಳಿಗೆ ಲೋಡ್ ಮಾಡಿದರೆ ಹಮಾಲರಿಗೆ ವ್ಯಾಪಾರಿಗಳು ಒಂದು ಚೀಲಕ್ಕೆ ಇಂತಿಷ್ಟು ಹಣ ಪಾವತಿಸಿದರೆ ರೈತರು ಹಮಾಲರಿಗೆ ಕೂಲಿಯ ರೂಪದಲ್ಲಿ ಇಂತಿಷ್ಟು ದವಸ ಧಾನ್ಯವನ್ನು ನೀಡುವ ರೂಢಿ ಇದೆ. ವ್ಯಾಪಾರಿಯೇ ಹಮಾಲರ ಕೂಲಿಯನ್ನು ಪೂರ್ಣವಾಗಿ ಪಾವತಿಸುವುದು ನ್ಯಾಯಯುತ. ಆದರೆ ಹಮಾಲರ ಕೂಲಿ ಪಾವತಿಯ ಭಾರ ರೈತರ ಮೇಲೂ ಬೀಳುತ್ತಿದೆ. ಎಲ್ಲಾ ರೈತರು ತಮ್ಮ ಬೆಳೆಗಳನ್ನು ಇಲ್ಲಿನ ಎಪಿಎಂಸಿ ಮಾರುಕಟ್ಟೆಯಲ್ಲೇ ಮಾರಾಟ ಮಾಡಿದರೆ ರೈತರ ಮೇಲೆ ಬೀಳುತ್ತಿರುವ ಹಮಾಲಿ ಕೂಲಿಯ ಭಾರ ತಪ್ಪಬಹುದು ಎಂಬುದು ರೈತರ ಮಾತು.‘ಮಳೆ ಕೊರತೆ ಬೆಲೆಗಳ ಏರಿಳಿತದಲ್ಲಿ ಬಸವಳಿಯುವ ರೈತರ ಮೇಲೆ ಹಮಾಲಿ ಕೂಲಿಯ ಭಾರ ಹೊರೆಸುವುದು ಸರಿಯಲ್ಲ. ಹಮಾಲರ ಕೂಲಿಯನ್ನು ವ್ಯಾಪಾರಿಗಳಿಂದಲೇ ಪಾವತಿಸುವಂತಾಗಬೇಕು’ ಎಂದು ಒತ್ತಾಯಿಸುತ್ತಾರೆ ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಜಿ. ಪ್ರಭುಗೌಡ. ‘ಧಾನ್ಯಗಳನ್ನು ರಾಶಿಯಿಂದ ಚೀಲಕ್ಕೆ ತುಂಬಿ ವಾಹನಗಳಿಗೆ ಲೋಡ್ ಮಾಡಿದ್ದಕ್ಕೆ ದಲ್ಲಾಳಿ ವ್ಯಾಪಾರಸ್ಥರು ಇಂತಿಷ್ಟು ಎಂದು ಕೂಲಿ ಪಾವತಿಸುತ್ತಾರೆ. ಇದರೊಂದಿಗೆ ರೈತರೂ ಇಂತಿಷ್ಟು ಎಂದು ಬೆಳೆಯನ್ನು ಸ್ಯಾಂಪಲ್ ರೂಪದಲ್ಲಿ ಕೊಡುವ ರೂಢಿ ಇದೆ’ ಎನ್ನುತ್ತಾರೆ ದಲ್ಲಾಳಿ ವ್ಯಾಪಾರಿ ಹಲಸಬಾಳು ಬಸವರಾಜಪ್ಪ. ‘ರಾಣೆಬೆನ್ನೂರಿನಲ್ಲಿ ಬಹುತೇಕ ರೈತರು ತಮ್ಮ ಬೆಳೆಗಳನ್ನು ಎಪಿಎಂಸಿಯಲ್ಲೇ ಮಾರಾಟ ಮಾಡುತ್ತಾರೆ. ಹೀಗಾಗಿ ಅಲ್ಲಿ ರೈತರು ಹಮಾಲಿ ಕೂಲಿ ಪಾವತಿಸುವುದು ಕಡಿಮೆ. ಆದರೆ ಇಲ್ಲಿ ವ್ಯಾಪಾರಿಗಳ ಜೊತೆಗೆ ರೈತರೂ ಸ್ಯಾಂಪಲ್ ರೂಪದಲ್ಲಿ ಹಮಾಲರಿಗೆ ಇಂತಿಷ್ಟು ಧಾನ್ಯ ನೀಡುತ್ತಾರೆ’ ಎಂದು ಹಮಾಲರ ಸಂಘದ ಕಾರ್ಯದರ್ಶಿ ಗೋವಿಂದಪ್ಪ ತಿಳಿಸಿದರು.