ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಯೋಗಶೀಲ ರೈತರಿಗೆ ಸೂಕ್ತ ಬೆಂಬಲ ಸಿಗಲಿ: ತೇಜಸ್ವಿ ಪಟೇಲ್

ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮದಲ್ಲಿ ರೈತ ಮುಖಂಡ ತೇಜಸ್ವಿ ವಿ.ಪಟೇಲ್ ಅಭಿಪ್ರಾಯ
Published 24 ಡಿಸೆಂಬರ್ 2023, 7:46 IST
Last Updated 24 ಡಿಸೆಂಬರ್ 2023, 7:46 IST
ಅಕ್ಷರ ಗಾತ್ರ

ತ್ಯಾವಣಿಗೆ: ‘ರೈತರು ಗುಣಮಟ್ಟದ ಕೃಷಿ ಉತ್ಪನ್ನಗಳಿಗಾಗಿ ಕೆಲ ಕಾಲ ನಷ್ಟದ ಭಾರವನ್ನು ತಮ್ಮ ಕುಟುಂಬದ ಮೇಲೆ ಹಾಕಿ ಪ್ರಯೋಗಶೀಲ ಮನಸ್ಸಿನಿಂದ ಶ್ರಮಿಸುತ್ತಿದ್ದು, ರೈತರಿಗೆ ಸರ್ಕಾರ ಮತ್ತು ಸಮಾಜದಿಂದ ಸೂಕ್ತ ಬೆಂಬಲ ಸಿಗಬೇಕಿದೆ’ ಎಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ತೇಜಸ್ವಿ ಪಟೇಲ್ ಹೇಳಿದರು.

ತ್ಯಾವಣಿಗೆ ಸಮೀಪದ ಕುಕ್ಕವಾಡ ಗ್ರಾಮದಲ್ಲಿ ಶನಿವಾರ ಕಬ್ಬು ಬೆಳೆಗಾರರ ಸಂಘ ಐಸಿಎಆರ್ ತಳಬಾಳು ಕೃಷಿ ವಿಜ್ಞಾನ ಕೇಂದ್ರ ಹಾಗೂ ಕೃಷಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ರೈತ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಸಾವಯವ ಅಥವಾ ನೈಸರ್ಗಿಕ ಕೃಷಿಯಲ್ಲಿ ತೊಡಗಿಕೊಂಡವರಿಗೆ ಅಗತ್ಯ ಆರ್ಥಿಕ ನೆರವು, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಮಾಡಬೇಕಿದೆ. ಗುಣಾತ್ಮಕ ಕೃಷಿ ಉತ್ಪನ್ನಗಳ ಬಗ್ಗೆ ಸಾಕಷ್ಟು ನಿರೀಕ್ಷೆ ವ್ಯಕ್ತವಾಗುತ್ತಿರುತ್ತದೆ. ಆದರೆ, ಬೆಂಬಲ ಬಯಸಿದಾಗ ನಿರಾಸೆ ಆಗುವುದು ಬೇಸರದ ಸಂಗತಿ. ಹೊಸತನ ರೂಢಿಸಿಕೊಂಡಿರುವ ರೈತರು ಒಟ್ಟಾಗಿ ಸೇರಿ ತಾವು ಬೆಳೆಯುವ ಎಲ್ಲ ಉತ್ಪನ್ನಗಳಿಗೂ ಮಾರುಕಟ್ಟೆ ಸೃಷ್ಟಿಸಿಕೊಂಡು ಯಶಸ್ಸು ಗಳಿಸಬೇಕಿದೆ’ ಎಂದು ಹೇಳಿದರು.

ತಾಪಮಾನ ಕೃಷಿ ಮೇಲೆ ತುಂಬಾ ದುಷ್ಪರಿಣಾಮ ಬೀರುತ್ತಿದೆ. ಇನ್ನು ಕೆಲವು ವರ್ಷಗಳ ನಂತರ ಕೃಷಿ ಮಾಡುವುದೇ ಕಷ್ಟವೇನೋ ಎನ್ನುವಂತ ಸ್ಥಿತಿ ನಿರ್ಮಾಣವಾಗಬಹುದು. ತಾಪಮಾನ ಏರಿದರೂ ಅದಕ್ಕೆ ಅನುಗುಣವಾದ ಬೆಳೆ ಬೆಳೆಯುತ್ತ ರೈತರು ಸನ್ನದ್ಧರಾಗಬೇಕಿದೆ’ ಎಂದು ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ದೇವರಾಜ್ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆ ಮತ್ತು ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ಗುರುತಿಸಿದ 16 ಪ್ರಯೋಗಶೀಲ ರೈತರನ್ನು ಸನ್ಮಾನಿಸಲಾಯಿತು. ಕೊಳ್ಳೇಹಳ್ಳಿ ಸತೀಶ್ ಮಾತನಾಡಿದರು, ಮಲ್ಲಿಕಾರ್ಜುನ್ ನಿರೂಪಿಸಿದರು. ಡಿ.ಬಿ.ಶಂಕರ್ ಸ್ವಾಗತಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT