ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹರಿಹರ | ನಿರ್ವಹಣೆ ಇಲ್ಲದ ಸೇತುವೆ: ವಾಹನ ಸವಾರರಿಗೆ ಸಂಕಷ್ಟ

ರೈಲ್ವೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ
Published 17 ಜೂನ್ 2024, 7:29 IST
Last Updated 17 ಜೂನ್ 2024, 7:29 IST
ಅಕ್ಷರ ಗಾತ್ರ

ಹರಿಹರ: ನಗರ ಹೊರವಲಯದ ದಾವಣಗೆರೆ ಮಾರ್ಗದ ಅಮರಾವತಿಯ ರೈಲ್ವೆ ಹಳಿಗಳ ಬಳಿ 4 ವರ್ಷಗಳ ಹಿಂದೆ ನಿರ್ಮಿಸಿದ್ದ ಮೇಲ್ಸೇತುವೆ ಹಾಗೂ ಕೆಳ ಸೇತುವೆಗಳು ನಿರ್ವಹಣೆ ಇಲ್ಲದೆ ನಲುಗುತ್ತಿದ್ದು, ವಾಹನ ಸವಾರರಿಗೆ ದುಃಸ್ವಪ್ನವಾಗಿ ಕಾಡುತ್ತಿವೆ.

ಬೀರೂರು-ಸಮ್ಮಸಗಿ ಹೆದ್ದಾರಿಯಲ್ಲಿ ರೈಲ್ವೆ ಲೆವೆಲ್ ಕ್ರಾಸಿಂಗ್‌ ಬರುತ್ತದೆ. ರೈಲು ಸಂಚರಿಸುವಾಗ ದಿನಕ್ಕೆ ಅನೇಕ ಬಾರಿ ಗೇಟು ಹಾಕಲಾಗುತ್ತದೆ. ಇದರಿಂದ ವಾಹನ ಸವಾರರಿಗೆ ಕಿರಿಕಿರಿ ಉಂಟಾಗುತ್ತಿತ್ತು. ಇದನ್ನು ತಪ್ಪಿಸಲು ಈ ಗೇಟಿನ ಮೇಲ್ಭಾಗದಲ್ಲಿ ರೈಲ್ವೆ ಇಲಾಖೆ ಮತ್ತು ರಾಜ್ಯ ಸರ್ಕಾರದ ಅನುದಾನದಲ್ಲಿ 2016-17ರಲ್ಲಿ ಮೇಲ್ಸೇತುವೆ ಹಾಗೂ ರೈಲ್ವೆ ಹಳಿಗಳ ಅಡಿಯಲ್ಲಿ ಕೆಳ ಸೇತುವೆ ನಿರ್ಮಿಸಲಾಗಿತ್ತು.

ಈ ಎರಡೂ ಸೇತುವೆಗಳೂ 2020ರಲ್ಲಿ ವಾಹನ ಸಂಚಾರಕ್ಕೆ ಮುಕ್ತವಾಗಿದ್ದವು. ಈಗ ಇವು ನಿರ್ವಹಣೆಯ ಸಮಸ್ಯೆಯಿಂದ ಬಳಲಿವೆ. ರೈಲ್ವೆ ಇಲಾಖೆಯು ಇವುಗಳ ನಿರ್ವಹಣೆಯನ್ನೇ ಮರೆತಂತಿದೆ.  

ಮೇಲ್ಸೇತುವೆಯ ಮೇಲಿನ ರಸ್ತೆಯಲ್ಲಿ ಡಾಂಬರು ಕಿತ್ತು ಹೋಗಿ ಸಾಕಷ್ಟು ಗುಂಡಿಗಳು ಬಿದ್ದಿವೆ. ಸೇತುವೆಯ ಇಕ್ಕೆಲಗಳಲ್ಲಿ ಅಡಿಗಟ್ಟಲೆ ಮಣ್ಣು ಶೇಖರಣೆಗೊಂಡಿದೆ.  ಈ ಸೇತುವೆಯ ಇಬ್ಬದಿಯಲ್ಲಿ ನಿರ್ಮಿಸಿರುವ ಸರ್ವಿಸ್ ರಸ್ತೆಗಳೂ ಕಳಪೆ ಕಾಮಗಾರಿಯಿಂದಾಗಿ ಸೊರಗಿವೆ. ಇವು ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ.

ಅರ್ಧ ಗಂಟೆ ಮಳೆ ಬಂದರೆ ಸಾಕು ಕೆಳ ಸೇತುವೆಯಲ್ಲಿ 15 ದಿನಗಳವರೆಗೂ ನೀರು ನಿಂತುಬಿಡುತ್ತದೆ. ಇದರಿಂದ ವಾಹನ ಸಂಚಾರ ದುಸ್ತರವಾಗುತ್ತದೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ಯಾವುದೇ ವ್ಯವಸ್ಥೆ ಮಾಡಿಲ್ಲ. ಇಲ್ಲಿನ ರಸ್ತೆಯೂ ಗುಂಡಿಮಯವಾಗಿದೆ.

ಅನಾಥವಾದ ಸೇತುವೆಗಳು: ಈ ಎರಡೂ ಸೇತುವೆಗಳ ನಿರ್ಮಾಣಕ್ಕೆ ರಾಜ್ಯ ಸರ್ಕಾರದೊಂದಿಗೆ ಕೈಜೋಡಿಸಿದ್ದ ರೈಲ್ವೆ ಇಲಾಖೆ ಈಗ ಜವಾಬ್ದಾರಿಯಿಂದ ನುಣುಚಿಕೊಳ್ಳಲು ಮುಂದಾಗಿದೆ. 2023ರ ಜೂನ್‌ನಲ್ಲಿ ಹರಿಹರದ ಪಿಡಬ್ಲ್ಯೂಡಿ ಎಇಇಗೆ ಪತ್ರ ಬರೆದಿರುವ ಇಲಾಖೆಯು ಸೇತುವೆಗಳನ್ನು ಪಿಡಿಬ್ಲ್ಯೂಡಿ ವ್ಯಾಪ್ತಿಗೆ ಸೇರಿಸಿಕೊಳ್ಳುವಂತೆ ಕೋರಿದೆ.

ಈ ಸೇತುವೆಗಳ ದುಃಸ್ಥಿತಿ ಹಾಗೂ ಕಳಪೆ ಕಾಮಗಾರಿಯನ್ನು ಕಂಡ ಪಿಡಿಬ್ಲ್ಯೂಡಿ ಅಧಿಕಾರಿಗಳು, ಎಲ್ಲಾ ಲೋಪಗಳನ್ನು ಸರಿಪಡಿಸಿದರಷ್ಟೇ ನಮ್ಮ ಸುಪರ್ದಿಗೆ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ. ಇಲಾಖೆಗಳ ನಡುವಣ ತಿಕ್ಕಾಟದಿಂದಾಗಿ ಉಭಯ ಸೇತುವೆಗಳೂ ನಿರ್ವಹಣೆ ಕಾಣದೇ ಅನಾಥವಾಗಿವೆ.   

ಅಮರಾವತಿ, ಜೈಭೀಮನಗರ, ಅಮರಾವತಿ ಕಾಲೊನಿ, ಆಂಜನೇಯ ಬಡಾವಣೆ, ಕೆಎಚ್‌ಬಿ ಕಾಲೊನಿಯ ನಿವಾಸಿಗಳು ಹಾಗೂ ದೊಗ್ಗಳ್ಳಿ, ಕಕ್ಕರಗೊಳ್ಳ, ಆವರಗೊಳ್ಳ, ದೊಡ್ಡಬಾತಿ, ದಾವಣಗೆರೆಗೆ ಕಡೆಗೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ಸಂಚರಿಸುವ ವಾಹನಗಳು ಈ ಸೇತುವೆಗಳನ್ನೇ ಆಶ್ರಯಿಸಿವೆ.   

ಸೇತುವೆ ನಿರ್ಮಾಣ ಕಾರ್ಯ ಮುಗಿದ ಕೂಡಲೆ (2020) ರೈಲ್ವೆ ಇಲಾಖೆ ಪಿಡಿಬ್ಲ್ಯೂಡಿಗೆ ಇವುಗಳನ್ನು ಹಸ್ತಾಂತರಿಸಬೇಕಿತ್ತು. ಅವರ ತಪ್ಪಿನಿಂದಾಗಿ ಈಗ ವಾಹನ ಸವಾರರು ಪರಿತಪಿಸುವಂತಾಗಿದೆ.   

ಕಳಪೆ ಕಾಮಗಾರಿಯಿಂದಾಗಿ ಮೇಲು ಸೇತುವೆ ಪಕ್ಕದ ಸರ್ವಿಸ್ ರಸ್ತೆಯ ಸಿಮೆಂಟ್ ಕಿತ್ತುಹೋಗಿರುವುದು 
ಕಳಪೆ ಕಾಮಗಾರಿಯಿಂದಾಗಿ ಮೇಲು ಸೇತುವೆ ಪಕ್ಕದ ಸರ್ವಿಸ್ ರಸ್ತೆಯ ಸಿಮೆಂಟ್ ಕಿತ್ತುಹೋಗಿರುವುದು 

ಈ ಎರಡೂ ಸೇತುವೆಗಳು ರೈಲ್ವೆ ಇಲಾಖೆಯಿಂದ ನಿರ್ಮಿಸಲ್ಪಟ್ಟಿದ್ದು ಬೀರೂರು-ಸಮ್ಮಸಗಿ ಹೆದ್ದಾರಿಯಲ್ಲಿ ಬರುತ್ತವೆ. ಸೇತುವೆ ಹಾಗೂ ಸರ್ವಿಸ್ ರಸ್ತೆಗಳ ಮೇಲಿನ ಡಾಂಬರು ಸಿಮೆಂಟ್ ಕಿತ್ತು ಹೋಗಿದೆ. ಕೆಳ ಸೇತುವೆಯಲ್ಲಿ ಮಳೆ ನೀರು ಸಾಗಲು ದಾರಿ ಮಾಡಿಲ್ಲ. ಇದನ್ನೆಲ್ಲಾ ಸರಿ ಮಾಡಿದರೆ ನಮ್ಮ ಸುಪರ್ದಿಗೆ ತೆಗೆದುಕೊಳ್ಳುತ್ತೇವೆ

– ಶಿವಮೂರ್ತಿ ಪಿಡಿಬ್ಲ್ಯೂಡಿ ಎಇಇ 

ಸೇತುವೆಗಳನ್ನು ಶೀಘ್ರವೇ ಪರಿಶೀಲಿಸುತ್ತೇನೆ. ಅಲ್ಲಿರುವ ಲೋಪಗಳನ್ನು ಸರಿಪಡಿಸಲು ಕ್ರಮ ಕೈಗೊಳ್ಳುತ್ತೇನೆ

– ಪ್ರಶಾಂತ್ ಕುಮಾರ್ ರೈಲ್ವೆ ಇಲಾಖೆ ಸಹಾಯಕ ವಿಭಾಗೀಯ

ಎಂಜಿನಿಯರ್  ಹತ್ತಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಸೇತುವೆಗಳ ಕಾಮಗಾರಿ ಕಳಪೆಯಾಗಿದೆ. ಹಸ್ತಾಂತರ ಪ್ರಕ್ರಿಯೆ ತಡವಾಗಿದ್ದು ನಿರ್ವಹಣೆ ಇಲ್ಲದೆ ಜನ ಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ರೈಲ್ವೆ ಅಧಿಕಾರಿಗಳ ಈ ಲೋಪ ಅಕ್ಷಮ್ಯವಾದುದು

–ಅಬ್ದುಲ್ಲಾ ಕೆ.ಎಸ್. ಯುವ ಕಾಂಗ್ರೆಸ್ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT