ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶತಮಾನ ಪೂರೈಕೆ: ಬೆಳಲಗೆರೆ ಸರ್ಕಾರಿ ಶಾಲೆಗೆ ಹೊಸ ಸ್ಪರ್ಶ

ನವೀಕರಣಗೊಂಡ ಕಟ್ಟಡದ ಉದ್ಘಾಟನಾ ಸಮಾರಂಭ ನಾಳೆ
Last Updated 7 ಅಕ್ಟೋಬರ್ 2021, 7:10 IST
ಅಕ್ಷರ ಗಾತ್ರ

ತ್ಯಾವಣಿಗೆ: ಶತಮಾನ ಪೂರೈಸಿದ್ದ ಸಮೀಪದ ಬೆಳಲಗೆರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಖಾಸಗಿ ಶಾಲೆಗಳಿಗೆ ಸಡ್ಡು ಹೊಡೆಯುವಂತಿದ್ದು, ನವೀಕರಣಗೊಂಡ ಶಾಲೆ ಉದ್ಘಾಟನೆಗೆ ಸಿದ್ಧವಾಗಿದೆ. ಅ.8ರಂದು ಉದ್ಘಾಟನಾ ಸಮಾರಂಭ ನಡೆಯಲಿದೆ.

ತರಗತಿ, ಗ್ರಂಥಾಲಯ, ಕಚೇರಿ, ದಾಸ್ತಾನು, ಕ್ರೀಡೆ, ಕಂಪ್ಯೂಟರ್ ಇನ್ನೂ ಹಲವು ಉದ್ದೇಶಗಳಿಗೆ ಅನುಕೂಲವಾಗುವಂತೆ 13 ಕೊಠಡಿಗಳಿವೆ. ಶಾಲೆಯ ಕೊಠಡಿಗಳ ಗೋಡೆಗಳ ಮೇಲೆ ಗಣಿತ, ವಿಜ್ಞಾನ, ಇಂಗ್ಲಿಷ್, ಕ್ರೀಡೆ ಹಾಗೂ ಶಾಲಾ ಪಠ್ಯ ವಿಷಯಗಳಲ್ಲದೇ ಪಠ್ಯೇತರ ವಿಷಯಗಳಿಗೂ ಆದ್ಯತೆ ನೀಡಲಾಗಿದೆ. ಜ್ಞಾನದ ಭಂಡಾರವೇ ಕಣ್ಣೆದುರಿಗೆ ಬರುವಂತಿದ್ದು, ಮಕ್ಕಳಲ್ಲಿ ಕಲಿಯುವ ಆಸಕ್ತಿ ಮೂಡಿಸುವಂತಿದೆ.

ಶಾಲಾ ಕಟ್ಟಡದ ಹೊರಭಾಗದಲ್ಲಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರ ಚಿತ್ರಗಳು ಮತ್ತು ಭದ್ರಾ ಅಣೆಕಟ್ಟೆಯ ಚಿತ್ರ ಬಿಡಿಸಲಾಗಿದೆ. ಭದ್ರಾ ನಾಲೆ ಈ ಭಾಗದ ಜೀವನಾಡಿಯಾಗಿದ್ದು, ರೈತರು ನಾಟಿ ಮಾಡುತ್ತಿರುವ ಚಿತ್ರ ಗಮನ ಸೆಳೆಯುತ್ತಿದೆ. ಭದ್ರಾ ನಾಲೆಯಿಂದ ರೈತರು ಜೀವನ ಕಟ್ಟಿಕೊಂಡಿರುವುದನ್ನು ಮಕ್ಕಳಿಗೆ ತಿಳಿಸುವ ಉದ್ದೇಶದಿಂದ ಈ ಚಿತ್ರ ಬಿಡಿಸಲಾಗಿದೆ ಎನ್ನುತ್ತಾರೆಶಿಕ್ಷಕರು.

ಶಾಲಾ ಕಟ್ಟಡ ಶಿಥಿಲಗೊಂಡಿದ್ದರಿಂದ ಜಿಲ್ಲಾ ಪಂಚಾಯಿತಿ ಸದಸ್ಯ ತೇಜಸ್ವಿ ವಿ. ಪಟೇಲ್ ನೇತೃತ್ವದಲ್ಲಿ ಎಸ್‌ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಶಿಕ್ಷಣ ಇಲಾಖೆಯಿಂದ ₹ 1 ಕೋಟಿ ಅನುದಾನ ತರಿಸಿಕೊಂಡು ಶಾಲೆ ಅಭಿವೃದ್ಧಿಪಡಿಸಿದ್ದಾರೆ. ಎಸ್‌ಡಿಎಂಸಿಯ ಮೂಲಕವೇ ಶಾಲಾ ಕಟ್ಟಡ ನಿರ್ಮಾಣಗೊಂಡಿದ್ದು, ಪ್ರತಿ ಹಂತದ ಬಿಲ್ ಪಾವತಿಗೂ ಗ್ರಾಮಸಭೆ ನಡೆಸಿ ಕಾಮಗಾರಿ ಮಾಡಿರುವುದುವಿಶೇಷ.

ಶಾಲೆಗಳಲ್ಲಿ ಕಲೆ, ಸಂಸ್ಕೃತಿ ಬಗ್ಗೆ ಮಕ್ಕಳಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕರಾವಳಿಯ ಯಕ್ಷಗಾನ, ಕೋಲಾಟ, ಭರತನಾಟ್ಯ ಜನಪದ ಸೊಗಡನ್ನು ಗೋಡೆಗಳ ಮೇಲೆ ಚಿತ್ರಿಸಲಾಗಿದೆ.

ಮಕ್ಕಳ ಮನಸ್ಸನ್ನು ಬದಲಾಯಿಸುವಂತಹ ಗೋಡೆಗಳ ಮೇಲೆ ಬರೆದಿರುವ ಸೂಕ್ತಿಗಳು ಗಮನ ಸೆಳೆಯುತ್ತವೆ. ಶಾಲಾ ಕಟ್ಟಡಕ್ಕೆ ಪೂರ್ಣ ಗ್ರಾನೈಟ್ ಅಳವಡಿಸಲಾಗಿದೆ. ಶಾಲಾ ಕೊಠಡಿಯಲ್ಲಿ ನಿರ್ಮಾಣವಾಗಿರುವ ಶಾರದಾ ದೇವಿಯ ಚಿತ್ರ ಶಾಲೆಗೆ ಕಳಸದಂತೆ ಕಂಗೊಳಿಸುತ್ತಿದೆ.

ಉದ್ಘಾಟನಾ ಸಮಾರಂಭ:ಬುಕ್ಕಸಾಗರ ಮಠದ ಕರಿಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಬಸವಾಪಟ್ಟಣದ ಶಿವಕುಮಾರ್ ಹಾಲ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವಬಿ.ಸಿ. ನಾಗೇಶ್ ಕಟ್ಟಡ ಉದ್ಘಾಟಿಸುವರು.

ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಬಸವರಾಜ ಕಾರ್ಯಕ್ರಮ ಉದ್ಘಾಟಿಸುವರು. ಶಾರದಾದೇವಿ ಪ್ರತಿಮೆಯನ್ನು ಸಂಸದ ಜಿ. ಎಂ. ಸಿದ್ದೇಶ್ವರ್ ಅನಾವರಣಗೊಳಿಸಲಿದ್ದು, ಮಾಜಿ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸ್ಮಾರ್ಟ್‌ ಕ್ಲಾಸ್ ಉದ್ಘಾಟಿಸುವರು. ಶಾಸಕ ಪ್ರೊ. ಎನ್. ಲಿಂಗಣ್ಣ ಅಧ್ಯಕ್ಷತೆ ವಹಿಸಲಿದ್ದು, ಶಾಸಕರಾದ ಮಾಡಾಳ್ ವಿರೂಪಾಕ್ಷಪ್ಪ, ಆರ್. ಪ್ರಸನ್ನಕುಮಾರ್, ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಮಂಜುನಾಥ್, ರೈತ ಮುಖಂಡ ತೇಜಸ್ವಿ ವಿ. ಪಟೇಲ್ ಭಾಗವಹಿಸುವರು.

*

ಕಾಮಗಾರಿ ಅನುಷ್ಠಾನಗೊಳ್ಳುವಾಗ ನಿಗಾ ವಹಿಸಬೇಕಾಗುತ್ತದೆ. ಜನರು ಒಂದು ತಂಡವಾಗಿ ಪ್ರಾಮಾಣಿಕತೆ ಮತ್ತು ಕಳಕಳಿಯಿಂದ ಶಾಲೆಯ ಕಾಮಗಾರಿಯಲ್ಲಿ ಭಾಗವಹಿಸಿದ್ದಾರೆ. ಇದರಿಂದ ಸುಂದರ ಕಟ್ಟಡ ನಿರ್ಮಾಣವಾಗಲು ಸಾಧ್ಯವಾಗಿದೆ.
-ತೇಜಸ್ವಿ ವಿ. ಪಟೇಲ್, ರೈತ ಮುಖಂಡ

*

ಶಾಲಾಭಿವೃದ್ಧಿ ಸಮಿತಿಯ ಸದಸ್ಯರು ಜೊತೆಗೂಡಿ ಅನುದಾನ ದುರುಪಯೋಗವಾಗದಂತೆ ನೋಡಿಕೊಂಡಿದ್ದಾರೆ. ಇದರಿಂದ ಸುಸಜ್ಜಿತ ಕಟ್ಟಡ ನಿರ್ಮಿಸಲು ಸಾಧ್ಯವಾಗಿದೆ.
-ಜೆ. ಧನಂಜಯಾಚಾರ್,ಎಸ್‌ಡಿಎಂಸಿ ಉಪಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT