ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆಯೇರಿ ಹೊಸ ವರ್ಷ ಸಂಭ್ರಮಾಚರಣೆ

ಪ್ರಸಿದ್ಧ ಸ್ಥಳಗಳಲ್ಲಿ ಹೆಚ್ಚಿದ ಸೆಲ್ಫಿ ಕ್ರೇಜ್‌ l ಕೇಕ್‌ ಕತ್ತರಿಸಿ, ಸಿಹಿ ಹಂಚಿ ಶುಭಾಶಯ ವಿನಿಮಯ
Last Updated 2 ಜನವರಿ 2020, 10:43 IST
ಅಕ್ಷರ ಗಾತ್ರ

ಚಿತ್ರದುರ್ಗ: ತುಪ್ಪದ ಕೊಳವನ್ನು ಹತ್ತಲು ತರುಣ-ತರುಣಿಯರಲ್ಲಿ ಎಲ್ಲಿಲ್ಲದ ಉತ್ಸಾಹ. ತಣ್ಣೀರು ದೋಣಿ, ಓಬವ್ವನ ಕಿಂಡಿ, ಅಕ್ಕತಂಗಿ ಹೊಂಡ, ಗೋಪಾಲಸ್ವಾಮಿ ಹೊಂಡ ಹೀಗೆ ಬಹುತೇಕ ಪ್ರಸಿದ್ಧ ಸ್ಥಳಗಳಲ್ಲಿ ಸೆಲ್ಫಿ ಕ್ರೇಜ್‌ಜೋರಾಗಿತ್ತು. ಕಣ್ಣು ಹಾಯಿಸಿದಷ್ಟೂ ದೂರ ಜನಸಾಗರವೇ ನೆರೆದಿತ್ತು.

ಇಲ್ಲಿನ ಐತಿಹಾಸಿಕ ಕಲ್ಲಿನ ಕೋಟೆಯ ಮೇಲುದುರ್ಗದಲ್ಲಿ ಬುಧವಾರ ಹೊಸ ವರ್ಷದ ಸಂಭ್ರಮಾಚರಣೆಯಲ್ಲಿ ಕಂಡ ದೃಶ್ಯಗಳಿವು. ಅದೇ ರೀತಿ ಕೆಳಭಾಗದ ಕೋಟೆ ದ್ವಾರದ ಕೌಂಟರ್ ಮುಂಭಾಗದಲ್ಲೂ ಟಿಕೆಟ್ ಪಡೆಯಲು ಸಾವಿರಾರು ಮಂದಿ ಪ್ರವಾಸಿಗರು ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದರು. ಜತೆಗೆ ಕೋಟೆ ರಸ್ತೆ ಮಾರ್ಗದಲ್ಲಿ ವಿಪರೀತ ಟ್ರಾಫಿಕ್‍ ಕಿರಿಕಿರಿ, ಜನಸಮೂಹ ದಾಟಿ ಕೋಟೆಯೊಳಗೆ ಪ್ರವೇಶ ಪಡೆಯುವುದೇ ದೊಡ್ಡ ಸವಾಲಾಗಿತ್ತು.

ಟಿಕೆಟ್‌ ಪಡೆದ ಬಹುತೇಕರು ಕೇಕ್‌ಗಳನ್ನು ಕೈಯಲ್ಲಿ ಹಿಡಿದು, ಕೋಟೆ ಪ್ರವೇಶದ್ವಾರದ ಮುಂಭಾಗದಲ್ಲೇ ಕಾಣುವ ಕಲ್ಲಿನ ನಾಗರಹಾವು, ಬಸವನ ಚಿತ್ರವನ್ನು ಬೆರಗುಗಣ್ಣಿನಿಂದ ನೋಡುತ್ತ ಬೆಟ್ಟ ಹತ್ತಲುಮುಂದಾದರು. ಮೇಲುದುರ್ಗದಲ್ಲಿ ಸ್ನೇಹಿತರು, ಹಿತೈಷಿಗಳು, ಸಂಬಂಧಿಕರೊಂದಿಗೆ ಜತೆಗೂಡಿ ಕೇಕ್ ಕತ್ತರಿಸಿ ಸಂಭ್ರಮಿಸಿದರು. ಕೋಟೆಯೊಳಗೆ ಇಷ್ಟೊಂದು ಕಲ್ಲುಗಳನ್ನು ಹೇಗೆ ಜೋಡಿಸಿರಬಹುದು ಎಂದು ಕೆಲವರು ಆಶ್ಚರ್ಯಪಟ್ಟರು.

ಕೋಟೆ ನೋಡಲೇಬೇಕೆಂದು ಇಲ್ಲಿಗೆ ಬಂದಿದ್ದ ಸಾವಿರಾರು ಪ್ರವಾಸಿಗರು ತಂಡೋಪತಂಡವಾಗಿ ಕೋಟೆಯ ಬಹುತೇಕ ಸ್ಥಳಗಳಿಗೆ ಭೇಟಿ ನೀಡಿ ವೀಕ್ಷಿಸಿದರು. ಅದರಲ್ಲಿ ಪ್ರಮುಖವಾಗಿ ಮದ್ದುಗುಂಡು, ಬೀಸುವ ಕಲ್ಲು, ಒಂಟಿಕಲ್ಲಿನ ಬಸವಣ್ಣ, ಬಂದಿಖಾನೆ, ಮಧ್ಯರಂಗ, ತುಪ್ಪದ ಕೊಳ ಅನೇಕರನ್ನು ಆಕರ್ಷಿಸಿದವು. ಏಕನಾಥೇಶ್ವರಿ, ಬನಶಂಕರಿ, ಹಿಡಂಬೇಶ್ವರ, ಸಂಪಿಗೆ ಸಿದ್ದೇಶ್ವರ, ಬೆಟ್ಟದ ಗಣಪತಿ, ವೇಣುಗೋಪಾಲಸ್ವಾಮಿ ಹೀಗೆ ಇಲ್ಲಿನ ಐತಿಹಾಸಿಕ ದೇಗುಲಗಳಿಗೆ ತೆರಳಿ ದೇವರ ದರ್ಶನ ಪಡೆಯಲು ಮುಂದಾದರು. ಈ ರೀತಿ ಹೊಸ ವರ್ಷ 2020 ಅನ್ನು ಅದ್ದೂರಿಯಾಗಿಯೇ ಬರಮಾಡಿಕೊಂಡರು.

ಕೋಟೆಯಷ್ಟೇ ಅಲ್ಲದೆ, ಆಡುಮಲ್ಲೇಶ್ವರದಲ್ಲೂ ಜನಸಂದಣಿ ಹೆಚ್ಚಿತ್ತು. ಚಂದ್ರವಳ್ಳಿ ತೋಟ, ಮುರುಘಾಮಠದ ಮುರುಘಾವನ ಸೇರಿ ಕೆಲ ಪ್ರವಾಸಿ ತಾಣಗಳಲ್ಲಿ ಹೊಸ ವರ್ಷದ ಸಂಭ್ರಮದ ಕಥನ ಬೆಳಿಗ್ಗೆ ಆರಂಭಗೊಂಡು ಸಂಜೆ 6ರ ವರೆಗೂ ಮುಂದುವರಿಯಿತು.

ಬೆಂಗಳೂರು, ತುಮಕೂರು, ದಾವಣಗೆರೆ, ಶಿವಮೊಗ್ಗ, ಕಲಬುರ್ಗಿ ಸೇರಿ ಜಿಲ್ಲೆಯ ವಿವಿಧ ಭಾಗಗಳಿಂದ ಅನೇಕರು ಕೋಟೆ ವೀಕ್ಷಿಸಲು ಬಂದಿದ್ದರು. ಹಲವು ಸ್ಥಳಗಳಲ್ಲಿ ಸಿಹಿ ಹಂಚುವ ಮೂಲಕ ಯುವಸಮೂಹ ಹೊಸ ವರ್ಷದ ಶುಭಾಶಯ ಪರಸ್ಪರ ವಿನಿಮಯ ಮಾಡಿಕೊಂಡರು. ಉತ್ಸಾಹದ ಬುಗ್ಗೆಯಂತಿದ್ದ ಯುವಕ-ಯುವತಿಯರು ಕಲ್ಲಿನ ಕೋಟೆಗೆ ಹೊಸ ಮೆರುಗು ನೀಡಿದರು. ಕೋಟೆ ಹತ್ತುವಾಗ ಇದ್ದಂತಹ ಉತ್ಸಾಹ ಇಳಿಯುವವರೆಗೂ ಕುಂದಲಿಲ್ಲ.

ಆಡುಮಲ್ಲೇಶ್ವರಹೊಸ ದಾಖಲೆ:ಇಲ್ಲಿನ ಆಡುಮಲ್ಲೇಶ್ವರ ಕಿರು ಮೃಗಾಲಯ ಹೊಸ ದಾಖಲೆ ಸೃಷ್ಟಿಸಿದೆ. ಮೃಗಾಲಯದ ಇತಿಹಾಸದಲ್ಲಿಯೇ ಅತಿ ಹೆಚ್ಚು ಪ್ರವಾಸಿಗರು ಹೊಸವರ್ಷದ ದಿನ ಭೇಟಿ ನೀಡಿದ್ದಾರೆ.
'ಬುಧವಾರ ಕಿರು ಮೃಗಾಲಯಕ್ಕೆ 3,700 ಪ್ರವಾಸಿಗರು ಭೇಟಿ ನೀಡಿದ್ದು, ₹1,04 ಲಕ್ಷ ಸಂಗ್ರಹ ಆಗಿದೆ. ಹೊಸ ವರ್ಷದ ಸಂಭ್ರಮದಲ್ಲಿ ಇರುವ ಪ್ರವಾಸಿಗರು ಮೃಗಾಲಯಕ್ಕೆ ಬಂದು ಪ್ರಾಣಿಗಳನ್ನು ಕಣ್ತುಂಬಿಕೊಂಡರು' ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೋಟೆ ಪ್ರವೇಶಕ್ಕೆ ನೂಕುನುಗ್ಗಲು:ಐತಿಹಾಸಿಕ ಏಳು ಸುತ್ತಿನ ಕೋಟೆಯ ಪ್ರವೇಶಕ್ಕೆ ಬುಧವಾರ ನೂಕುನುಗ್ಗಲು ಉಂಟಾಯಿತು. ಆದರೂ, ಪ್ರಾಚ್ಯವಸ್ತು ಮತ್ತು ಪುರಾತತ್ವ ಇಲಾಖೆಯ ಪ್ರಕಾರ 6 ಸಾವಿರ ಪ್ರವಾಸಿಗರು ಮಾತ್ರ ಭೇಟಿ ನೀಡಿದ್ದಾರೆ.

ಹೊಸ ವರ್ಷಕ್ಕೆ ಹೆಚ್ಚಿನ ಪ್ರವಾಸಿಗರು ಭೇಟಿ ನೀಡಬಹುದು ಎಂದು ಅಂದಾಜಿಸಲಾಗಿತ್ತು. ಪ್ರವೇಶ ದ್ವಾರದ ಬಳಿ ಕೌಂಟರ್ ನಿರ್ಮಿಸಿ ಸಿಬ್ಬಂದಿ ನಿಯೋಜಿಸಲಾಗಿತ್ತು. ಆದರೆ, ನಿರೀಕ್ಷೆ ಮೀರಿ ಜನರು ಬಂದಿದ್ದರಿಂದ ನಿಯಂತ್ರಿಸಲು ಸಾಧ್ಯವಾಗಿಲ್ಲ. ಹೀಗಾಗಿ ಕೋಟೆ ಪ್ರವೇಶ ದ್ವಾರದ ಬಳಿ ನೂಕುನುಗ್ಗಲು ಉಂಟಾಗಿ ಬಹುತೇಕರು ಟಿಕೆಟ್ ಪಡೆಯದೇಕೋಟೆ ವೀಕ್ಷಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT