ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗ್ಯಾರಂಟಿ’ ಜಾರಿ ಬಳಿಕ ಅಭಿವೃದ್ಧಿ ಕಾರ್ಯಕ್ಕೆ ವೇಗ

ಸಾಧು ವೀರಶೈವ ಸಮಾಜದಿಂದ ಸನ್ಮಾನ ಸ್ವೀಕರಿಸಿದ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್
Published 30 ಜುಲೈ 2023, 15:02 IST
Last Updated 30 ಜುಲೈ 2023, 15:02 IST
ಅಕ್ಷರ ಗಾತ್ರ

ಹೊನ್ನಾಳಿ: ಚುನಾವಣಾ ಪೂರ್ವದಲ್ಲಿ ನೀಡಿದ್ದ 5 ಭರವಸೆಗಳನ್ನು ಈಡೇರಿಸುವುದು ಸರ್ಕಾರದ ಮೊದಲ ಕರ್ತವ್ಯ. 2024ರ ಮಾರ್ಚ್ ನಂತರ ಅಭಿವೃದ್ಧಿ ಕಾರ್ಯಗಳಿಗೆ ವೇಗ ಸಿಗಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ತಿಳಿಸಿದರು.

ತಾಲ್ಲೂಕಿನ ಗೊಲ್ಲರಹಳ್ಳಿ ತರಳಬಾಳು ಸಮುದಾಯ ಭವನದಲ್ಲಿ ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲ್ಲೂಕು ಸಾಧು ವೀರಶೈವ ಸಮಾಜದ ವತಿಯಿಂದ ಚುನಾಯಿತ ಜನಪ್ರತಿನಿಧಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಮತ್ತು ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ನಮ್ಮ ಸರ್ಕಾರ ರಾಜ್ಯದ ಜನರಿಗೆ ಮೂಲ ಸೌಲಭ್ಯಗಳನ್ನು ಕೊಡುವುದರ ಜೊತೆಗೆ 5 ಗ್ಯಾರಂಟಿಗಳನ್ನು ಈಗಾಗಲೇ ಈಡೇರಿಸಿದೆ. ಭದ್ರಾ ಜಲಾಶಯದಲ್ಲಿ 164 ಅಡಿ ನೀರು ಸಂಗ್ರಹವಾದರೆ ಮಾತ್ರ ರೈತರಿಗೆ ನೀರು ನೀಡಲಾಗುತ್ತದೆ. ಸದ್ಯ 164 ಅಡಿ ನೀರು ಸಂಗ್ರಹವಾಗಿಲ್ಲ. ನೀರು ಸರಬರಾಜು ಸಲಹಾ ಸಮಿತಿ ಸಭೆ ಕರೆದು ನೀರು ಬಿಡುವ ಬಗ್ಗೆ ಶೀಘ್ರದಲ್ಲಿಯೇ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.

‘ಹರಿಹರ ತಾಲ್ಲೂಕು ಇಟ್ಟಿಗೆ ಹಾಗೂ ಮರಳು ವ್ಯಾಪಾರಕ್ಕೆ ಪ್ರಸಿದ್ಧ. ತಾಲ್ಲೂಕಿನಲ್ಲಿ ರಸ್ತೆಗಳು ತುಂಬಾ ಹಾಳಾಗಿದ್ದು,  ಅಭಿವೃದ್ಧಿಗೆ ಅನುದಾನ ಕೊಡಬೇಕು. ಹರಿಹರದಲ್ಲಿ ಯಾರೇ ಶಾಸಕರಾದರೂ, ಸರ್ಕಾರ ಮಾತ್ರ ಅವರ ಪಕ್ಷಕ್ಕೆ ವಿರುದ್ಧವಾಗಿ ಅಧಿಕಾರಕ್ಕೆ ಬರುತ್ತದೆ. ಆದಕಾರಣ ಹರಿಹರ ಅಭಿವೃದ್ಧಿಯಲ್ಲಿ ಹಿಂದುಳಿದಿದೆ’ ಎಂದು ಶಾಸಕ ಬಿ.ಪಿ. ಹರೀಶ್‌ ತಿಳಿಸಿದರು.

‘ನಾವು ಬಸವ ತತ್ವದಡಿ ಸಾಗಿದರೆ ಮಾತ್ರ ನಮ್ಮ ಸೇವೆಗಳು ಪರಿಣಾಮಕಾರಿಯಾಗಿರುತ್ತವೆ. ತರಳಬಾಳು ಗುರುಗಳ ಮಾರ್ಗದರ್ಶನದಲ್ಲಿ ನಾವೆಲ್ಲರೂ ನಡೆಯೋಣ’ ಎಂದು ಹಿರೇಕೇರೂರು ಶಾಸಕ ಯು.ಬಿ. ಬಣಕಾರ್ ಹೇಳಿದರು.

‘ಮಾಜಿ ಶಾಸಕರು ಕ್ಷೇತ್ರದಲ್ಲಿ ಏನೂ ಕೆಲಸ ಮಾಡಿಲ್ಲ. ಎಲ್ಲಾ ರಸ್ತೆಗಳು ಹಾಳಾಗಿವೆ. ಅಭಿವೃದ್ಧಿ ಕೆಲಸಗಳಿಗೆ ಮಲ್ಲಣ್ಣ ಅವರು ಹೆಚ್ಚು ಅನುದಾನ ಬೇಕು’ ಎಂದು ಶಾಸಕ ಬಸವಂತಪ್ಪ ಮನವಿ ಮಾಡಿದರು.

ಸಾಧು ವೀರಶೈವ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಎಚ್.ಆರ್. ಬಸವರಾಜಪ್ಪ ಮಾತನಾಡಿದರು. ಎಚ್.ಎ. ಗದ್ದಿಗೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಡಿ.ಜಿ. ವಿಶ್ವನಾಥ್, ಮಧುಗೌಡ, ಪಿ.ಬಿ. ಶೈಲೇಶ್, ಎ.ಬಿ. ಹನುಮಂತಪ್ಪ, ಅರಬಗಟ್ಟೆ ರಮೇಶ್, ರಮೇಶ್‍ಗೌಡ, ಶಿವ ಬ್ಯಾಂಕ್ ಅಧ್ಯಕ್ಷ ಪಿ.ಬಿ. ಶೈಲೇಶ್, ಕಾರ್ಯದರ್ಶಿ ರುದ್ರೇಶ್ ಇದ್ದರು.

ಎಸ್‍ಪಿ ವರ್ಗಾವಣೆಗೆ ಒತ್ತಾಯ

‘ಹೊನ್ನಾಳಿಯಲ್ಲಿ ತುಂಗಭದ್ರಾ ನದಿ ಹರಿದು ಹೋಗಿರುವುದರಿಂದ ಮರಳಿಗೆ ಕೊರತೆ ಇಲ್ಲ. ಆದರೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅವರು ಒಂದು ಚೀಲ ಮರಳು ನೀಡದಂತೆ ತಡೆಹಿಡಿದಿದ್ದಾರೆ. ಆದಕಾರಣ ಇಂದಿರಾ ಆವಾಸ್ ಯೋಜನೆ ಅಡಿ ಮತ್ತು ಬಹುಗ್ರಾಮ ಯೋಜನೆ ಅಡಿ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಮರಳು ಸಿಗದಿರುವುದರಿಂದ ಕಾಮಗಾರಿಗಳು ಸ್ಥಗಿತಗೊಂಡಿವೆ. ಇದರಿಂದ ನಾನೂ ಒತ್ತಡಕ್ಕೆ ಸಿಲುಕಿದ್ದೇನೆ. ನಾನು ಜನರಿಗೆ ಮರಳು ನೀಡಬೇಕಿದೆ. ಈ ಕಾರಣಕ್ಕಾದರೂ ಎಸ್‍ಪಿ ಅವರನ್ನು ವರ್ಗಾವಣೆ ಮಾಡಿ. ಕಾನೂನು ಗೀನೂನು ಏನೂ ಹೇಳಬೇಡಿ’ ಎಂದು ಶಾಸಕ ಡಿ.ಜಿ. ಶಾಂತನಗೌಡ ತಿಳಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಅರುಣ್‌ ಅವರನ್ನು ವರ್ಗಾವಣೆ ಮಾಡುವಂತೆ ಜಿಲ್ಲೆಯ ಎಲ್ಲಾ ಶಾಸಕರು ಬೇಡಿಕೆ ಇಟ್ಟಿದ್ದಾರೆ. ಈ ಬಗ್ಗೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT