ಶನಿವಾರ, ಅಕ್ಟೋಬರ್ 16, 2021
22 °C
ಸಂಕಷ್ಟದಲ್ಲಿ ಜಗಳೂರು ತಾಲ್ಲೂಕಿನ ರೈತರು

ಮಳೆ ಕೊರತೆ: ಬೆಳೆಗಳಿಗೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಡಿ. ಶ್ರೀನಿವಾಸ್

ಜಗಳೂರು: ತಾಲ್ಲೂಕಿನಲ್ಲಿ ಮಳೆಯ ತೀವ್ರ ಕೊರತೆಯಿಂದಾಗಿ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ, ಶೇಂಗಾ, ರಾಗಿ ಬೆಳೆಗಳು ಒಣಗಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಕಸಬಾ ಮತ್ತು ಸೊಕ್ಕೆ ಹೋಬಳಿ ವ್ಯಾಪ್ತಿಯಲ್ಲಿ ಕಳೆದ 1 ತಿಂಗಳಿಂದ ಮಳೆ ಇಲ್ಲದೆ ತೇವಾಂಶ ಕೊರತೆ ಎದುರಾಗಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬಿಳಿಚೋಡು ಹೋಬಳಿಯಲ್ಲಿ ಮಾತ್ರ ಆಗಾಗ್ಗೆ ಉತ್ತಮವಾಗಿ ಮಳೆ ಸುರಿದಿದ್ದು, ಉಳಿದೆಡೆ ಸಮೃದ್ಧ ಮಳೆಯಾಗಿಲ್ಲ. ಕೆರೆಕಟ್ಟೆಗಳು, ಚೆಕ್ ಡ್ಯಾಂ ಹಾಗೂ ಗೋಕಟ್ಟೆಗಳು ನೀರಿಲ್ಲದೆ ಬಿರುಕು ಬಿಟ್ಟಿದ್ದು, ಅಂತರ್ಜಲ ಕುಸಿತದ ಆತಂಕ ಮೂಡಿದೆ.

ತಾಲ್ಲೂಕಿನಲ್ಲಿ ಈ ಬಾರಿಯ ಮುಂಗಾರಿನಲ್ಲಿ ಒಟ್ಟು 34 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆ ಇದ್ದು, ಕಸಬಾ ಮತ್ತು ಸೊಕ್ಕೆ ಹೋಬಳಿಯಲ್ಲಿ 15 ಸಾವಿರ ಹೆಕ್ಟೇರ್‌ನಲ್ಲಿ ಬೆಳೆಯಲಾಗಿದೆ. ಶೇಂಗಾ ಬೆಳೆ ತಾಲ್ಲೂಕಿನಲ್ಲಿ 9,419 ಹೆಕ್ಟೇರ್ ಪ್ರದೇಶದಲ್ಲಿ ಬೆಳೆಯಲಾಗಿದೆ. ಕಸಬಾ ಮತ್ತು ಸೊಕ್ಕೆ ಹೋಬಳಿ ವ್ಯಾಪ್ತಿಯಲ್ಲಿ 8,800 ಹೆಕ್ಟೇರ್‌ನಲ್ಲಿ ಶೇಂಗಾ ಬೆಳೆ ಇದ್ದು, ಕಾಯಿಕಟ್ಟುವ ಮತ್ತು ಹೂ ಬಿಡುವ ಮಹತ್ವದ ಈ ಹಂತದಲ್ಲಿ ಸತತವಾಗಿ ಮಳೆ ಕೈಕೊಟ್ಟಿರುವುದರಿಂದ ಶೇಂಗಾ, ಮೆಕ್ಕೆಜೋಳ ಮತ್ತು ರಾಗಿ ಬೆಳೆಗಳು ಒಣಗಿ ನಿಂತಿವೆ.

‘ಕಳೆದ ವರ್ಷ ಉತ್ತಮ ಮಳೆಯಾಗಿತ್ತು. ಈ ಬಾರಿ ಬಿತ್ತನೆಯಾದ ದಿನದಿಂದಲೂ ಸರಿಯಾಗಿ ಮಳೆಯಾಗಿಲ್ಲ. 6 ಎಕರೆಯಲ್ಲಿ ಮೆಕ್ಕೆಜೋಳ ಮತ್ತು 3 ಎಕೆರೆಯಲ್ಲಿ ಶೇಂಗಾ ಬೆಳೆಗಳು ಒಣಗುತ್ತಿದ್ದು,
ಸಾಲ ಮೈಮೇಲೆ ಬರುವ ಭೀತಿ ಎದುರಾಗಿದೆ’ ಎಂದು ತಾಲ್ಲೂಕಿನ ಗಿಡ್ಡನಕಟ್ಟೆ ಗ್ರಾಮದ ರೈತ
ಬಸವರಾಜಪ್ಪ ತಮ್ಮ ಅಳಲು ತೋಡಿಕೊಂಡರು.

ಈರುಳ್ಳಿ ಬೆಳೆ ನಾಶ: ಅನಾವೃಷ್ಟಿಯಿಂದ ತಾಲ್ಲೂಕಿನಲ್ಲಿ ಸಾವಿರಾರು ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ, ಶೆಂಗಾ, ರಾಗಿ ಬೆಳೆಗಳು ಒಣಗುತ್ತಿವೆ. ಮತ್ತೊಂದೆಡೆ ಕಳೆದ ಜುಲೈ ತಿಂಗಳಲ್ಲಿ ಸತತ 10 ದಿನಗಳ ಕಾಲ ಸುರಿದ ಮಳೆಯಿಂದಾಗಿ ಸುಳಿಕೊಳೆ ರೋಗದಿಂದಾಗಿ 2,400 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆ ಹಾನಿಗೀಡಾಗಿದೆ.

‘ತಾಲ್ಲೂಕಿನಲ್ಲಿ ನಾಲ್ಕೈದು ವಾರಗಳಿಂದ ಮಳೆ ಬಂದಿಲ್ಲ. ಬಿಸಿಲು ದಿನೇದಿನೇ ಹೆಚ್ಚುತ್ತಿದ್ದು, ಮಣ್ಣಿನಲ್ಲಿ ತೇವಾಂಶದ ಕೊರತೆ ಸಮಸ್ಯೆ ಎದುರಾಗಿದೆ. ಮಳೆ ಕೊರತೆಯಿಂದ ಹೆಚ್ಚಿನ ಹಾನಿ ಸಾಧ್ಯತೆ ಇದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶ್ರೀನಿವಾಸುಲು ತಿಳಿಸಿದರು.

ಕೋಟ್‌...

ಜಗಳೂರು ತಾಲ್ಲೂಕನ್ನು ಅತಿವೃಷ್ಟಿ ಅಥವಾ ಅನಾವೃಷ್ಟಿ ತಾಲ್ಲೂಕುಗಳ ಪಟ್ಟಿಯಲ್ಲಿ ಸೇರ್ಪಡೆಗೊಳಿಸಿಲ್ಲ. ಹೀಗಾಗಿ ಮಳೆ ಕೊರತೆಯಿಂದ ಬೆಳೆಹಾನಿ ಆಗಿರುವ ರೈತರಿಗೆ ಪರಿಹಾರ ನೀಡಲು ನಿಯಮಗಳು ಅಡ್ಡಿಯಾಗಲಿವೆ.

ನಾಗವೇಣಿ, ತಹಶೀಲ್ದಾರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.