ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೇ ಆಸ್ಪತ್ರೆಗೆ ಮಂದಿ ಸಂದಣಿ, ಹಂದಿ ತೊಂದರೆ

ಪೊಲೀಸ್‌ ಹೊರಠಾಣೆ ಅಗತ್ಯ l ಭರ್ತಿಯಾಗದ ಡಿ ಗ್ರೂಪ್ ನೌಕರರ ಕೊರತೆ
Last Updated 10 ಏಪ್ರಿಲ್ 2022, 6:57 IST
ಅಕ್ಷರ ಗಾತ್ರ

ದಾವಣಗೆರೆ: ನವಜಾತ ಶಿಶು ನಾಪತ್ತೆಯಾಗಿ ಇತ್ತೀಚೆಗೆ ಎಲ್ಲರ ಗಮನ ಸೆಳೆದಿದ್ದ ಚಾಮರಾಜಪೇಟೆ ಬಳಿ ಇರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ (ಹಳೇ ಹೆರಿಗೆ ಆಸ್ಪತ್ರೆ) ಪ್ರತಿ ದಿನ 15ರಿಂದ 20 ಹೆರಿಗೆಗಳಾಗುತ್ತವೆ. ಹಾಗಾಗಿ ಭಾರಿ ಜನಸಂದಣಿ ಇರುತ್ತದೆ. ಜನರನ್ನು ನಿಯಂತ್ರಿಸುವುದೇ ಇಲ್ಲಿ ಕಷ್ಟವಾಗಿದೆ. ಅಲ್ಲದೇ ಹಂದಿ ಮಾಲೀಕರು ಹಂದಿಗಳನ್ನು ತಂದು ಇದೇ ಆಸ್ಪತ್ರೆಯಲ್ಲಿ ಆವರಣದಲ್ಲಿ ಬಿಡುತ್ತಾರೆ. ಹಂದಿಗಳನ್ನು ನಿಯಂತ್ರಿಸುವವರೇ ಇಲ್ಲವಾಗಿದೆ.

ಈ ಹೆರಿಗೆ ಆಸ್ಪತ್ರೆಯನ್ನು ಬಡವರ ಆಸ್ಪತ್ರೆ ಎಂದೇ ಕರೆಯಲಾಗುತ್ತದೆ. ಜಿಲ್ಲೆಯ ಎಲ್ಲ ಕಡೆಗಳಿಂದಷ್ಟೇ ಅಲ್ಲ, ಹೊರಜಿಲ್ಲೆಗಳಿಂದಲೂ ಹೆರಿಗೆ ಮಾಡಿಸಲು ಇಲ್ಲಿಗೆ ಜನರು ಬರುತ್ತಾರೆ. ತಿಂಗಳಿಗೆ 450ರಿಂದ 500 ಹೆರಿಗೆಗಳು ಇಲ್ಲಿ ಆಗುತ್ತವೆ ಎಂಬ ಅಂಕಿ ಅಂಶವೇ ಈ ಆಸ್ಪತ್ರೆಯ ಮಹತ್ವವನ್ನು ಸಾರುತ್ತದೆ.

100 ಬೆಡ್‌ಗಳಿಂದ 150 ಬೆಡ್‌ಗಳಿಗೆ ಇತ್ತೀಚೆಗೆ ಏರಿಸಲಾಗಿದೆ. ಅದಕ್ಕೆ ಬೇಕಾದ ಸಿಬ್ಬಂದಿ ಇನ್ನೂ ಪೂರ್ಣಪ್ರಮಾಣದಲ್ಲಿ ಬಂದಿಲ್ಲ. ಒಬ್ಬರು ಅಧೀಕ್ಷಕರು, ಐದು ಜನ ವೈದ್ಯರು ಇದ್ದಾರೆ. ಇನ್ನೂ ಮೂವರು ವೈದ್ಯರ ಕೊರತೆ ಇದೆ. ವೈದ್ಯರ ಕೊರತೆಗಿಂತಲೂ ಡಿ ಗ್ರೂಪ್‌ ಕೊರತೆ ದೊಡ್ಡ ಮಟ್ಟದಲ್ಲಿ ಕಾಡುತ್ತಿದೆ. 43 ಮಂದಿ ಮಂಜೂರು ಹುದ್ದೆಗಳಿವೆ. ಆದರೆ ಭರ್ತಿಯಾಗಿರುವುದು ನಾಲ್ಕೇ ನಾಲ್ಕು. ಉಳಿದ 39 ಖಾಲಿ ಇದೆ. ಹೊರಗುತ್ತಿಗೆಯಲ್ಲಿ ಶೇ 75ರಷ್ಟು ತುಂಬಿಕೊಳ್ಳಲು ಅವಕಾಶ ಇರುವುದಿರಂದ ಸದ್ಯ 29 ಮಂದಿ ಇದ್ದಾರೆ. ಇಬ್ಬರು ಶುಶ್ರೂಷಾಧಿಕ್ಷರ ಹುದ್ದೆ ಖಾಲಿ ಇದೆ. ಮೂವರು ಹಿರಿಯ ಶುಶ್ರೂಷಕರು ಇರಬೇಕಾದ್ದಲ್ಲಿ ಒಬ್ಬರಿದ್ದಾರೆ. ಇಬ್ಬರು ದ್ವಿತೀಯದರ್ಜೆ ಸಹಾಯಕರ ಬದಲು ಒಬ್ಬರಿದ್ದಾರೆ. ಕಿರಿಯ ಫಾರ್ಮಸಿಸ್ಟ್‌ ಇಬ್ಬರಲ್ಲಿ ಒಬ್ಬರೇ ಇದ್ದಾರೆ. ವಿದ್ಯುತ್‌ ತಂತ್ರಜ್ಞರು ಎರಡೂ ಹುದ್ದೆಗಳು ಖಾಲಿ ಇವೆ.

ಸಿಸಿಟಿವಿ ಕ್ಯಾಮೆರಾಗಳು ಇದ್ದವಾದರೂ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಕೆಲವಷ್ಟೇ ಕಾರ್ಯನಿರ್ವಹಿಸುತ್ತಿದ್ದವು. ನವಜಾತ ಶಿಶು ಕಳವು ನಡೆದಾಗ ಸಿಸಿಟಿವಿ ಕ್ಯಾಮೆರಾದಲ್ಲಿ ದೃಶ್ಯಗಳು ಸೆರೆಯಾಗಿದ್ದರು ಗುಣಮಟ್ಟ ಸರಿ ಇರಲಿಲ್ಲ. ಇದೀಗ ಈ ಪ್ರಕರಣದ ನಂತರ ಎಚ್ಚೆತ್ತುಕೊಂಡು ಈಗ ಬದಲಾಯಿಸಲಾಗುತ್ತಿದೆ.

‘ನಮ್ಮಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಇದೆ. ಆದನ್ನೆಲ್ಲ ಮ್ಯಾನೇಜ್‌ ಮಾಡಿಕೊಂಡು ಬಹಳ ಚೆನ್ನಾಗಿ ಆಸ್ಪತ್ರೆಯನ್ನು ನಡೆಸುತ್ತಿದ್ದೇವೆ. 6 ಬೆಡ್‌ಗಳ ತೀವ್ರ ನಿಗಾ ಘಟಕ ಇನ್ನೊಂದು ತಿಂಗಳಲ್ಲಿ ಆರಂಭಗೊಳ್ಳಲಿದೆ. ನೀರು ಶುದ್ಧೀಕರಣ ಘಟಕ ಇದೆ. ಇದು ಪ್ರಸಿದ್ಧ ಹೆರಿಗೆ ಆಸ್ಪತ್ರೆ ಆಗಿರುವುದರಿಂದ ದಾವಣಗೆರೆ, ಹಾವೇರಿ, ಚಿತ್ರದುರ್ಗ, ವಿಜಯನಗರ, ಬಳ್ಳಾರಿ ಸಹಿತ ವಿವಿಧ ಜಿಲ್ಲೆಗಳಿಂದ ಇಲ್ಲಿಗೆ ಬರುತ್ತಾರೆ. ಹಾಗಾಗಿ ಭಾರಿ ಜನಸಂದಣಿ ಇರುತ್ತದೆ. ಒಬ್ಬ ರೋಗಿ ಜತೆಗೆ ಒಬ್ಬರು ಆರೈಕೆಗೆ ಬರಬೇಕು ಎಂದರೆ ಜನರು ಕೇಳುವುದಿಲ್ಲ. ಇಡೀ ಕುಟುಂಬವೇ ಬಂದು ಬಿಡುತ್ತದೆ. ಇದನ್ನು ನಿಯಂತ್ರಿಸುವುದು ಕಷ್ಟವಾಗಿದೆ’ ಎನ್ನುತ್ತಾರೆ ಆಸ್ಪತ್ರೆಯ ಅಧಿಕ್ಷಕ ಡಾ. ಜೆ.ಬಿ. ನೀಲಕಂಠ.

ಹಂದಿಗಳನ್ನು ನಿಯಂತ್ರಿಸುವಂತೆ ಮಹಾನಗರ ಪಾಲಿಕೆಗೆ, ಸಂಬಂಧಿಸಿದ ಅಧಿಕಾರಿಗಳಿಗೆ 40ಕ್ಕೂ ಅಧಿಕ ಬಾರಿ ಮನವಿ ಮಾಡಲಾಗಿದೆ. ಆದರೆ ಪ್ರಯೋಜನವಾಗಿಲ್ಲ. ಹಂದಿ ಮಾಲೀಕರು ಹೊತ್ತಲ್ಲದ ಹೊತ್ತಲ್ಲಿ ತಂದು ಹಂದಿಗಳನ್ನು ಬಿಟ್ಟು ಹೋಗುತ್ತಾರೆ. ಇದೇ ಇಲ್ಲಿನ ದೊಡ್ಡ ಸಮಸ್ಯೆ ಎಂದು ಅವರು ವಿವರಿಸಿದರು.

ಕೈಯೊಡ್ಡುವುದು ಕಡಿಮೆಯಾಗಲಿ

ಆಸ್ಪತ್ರೆ ಚೆನ್ನಾಗಿದೆ. ಹೆರಿಗೆ ಮಾಡಲು ಜನ ನಂಬಿಕೆಯಿಂದ ಇಲ್ಲಿಗೆ ಬರುತ್ತಾರೆ. ಬಡವರಿಗೆ ಬಹಳ ಅನುಕೂಲ ಆಗಿದೆ. ಆದರೆ ಇಲ್ಲಿ ಸಮಸ್ಯೆಯೇ ಕೈಯೊಡ್ಡುವ ಸಿಬ್ಬಂದಿಯದ್ದಾಗಿದೆ. ದುಡ್ಡುಕೊಟ್ಟರೆ ಆಸ್ಪತ್ರೆಯ ಒಳಗೆ ಎಷ್ಟು ಮಂದಿಯನ್ನು ಬೇಕಾದರೂ ಬಿಡುತ್ತಾರೆ. ಗಂಡು ಮಗು ಹುಟ್ಟಿದರೆ ₹ 500ರಿಂದ ₹ 1000 ವರೆಗೆ, ಹೆಣ್ಣುಮಗು ಹುಟ್ಟಿದರೆ ₹ 500ರವರೆಗೆ ಸಿಬ್ಬಂದಿ ಕೇಳಿ ಪಡೆಯುತ್ತಾರೆ. ಹೀಗೆ ಸಣ್ಣ ಸಣ್ಣ ಲಂಚಗಳು ನಡೆಯುತ್ತಿರುತ್ತವೆ. ಅವುಗಳು ನಿಲ್ಲಬೇಕು. ಅಲ್ಲದೇ ಸಿಬ್ಬಂದಿಗಳು ಅವಾಚ್ಯವಾಗಿ ಬೈತಾರೆ. ಅದನ್ನು ನಿಲ್ಲಿಸಿ ಆಸ್ಪತ್ರೆಗೆ ಬರುವವರ ಜತೆಗೆ ಸೌಜನ್ಯದಿಂದ ನಡೆದುಕೊಳ್ಳಬೇಕು.

ಶಿರಿನ್‌ಬಾನು, ಹೋರಾಟಗಾರ್ತಿ

ಹೊರಗೆ ಬರೆದುಕೊಡುವುದು ನಿಲ್ಲಲಿ

ಆಸ್ಪತ್ರೆಯಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ ನಮ್ಮ ಸಂಘಟನೆಗಳ ಮಹಿಳೆಯರು ಹಲವು ಬಾರಿ ಗಮನಕ್ಕೆ ತಂದಿದ್ದಾರೆ. ನಾವು ಈ ಬಗ್ಗೆ ವೈದ್ಯರ, ಆರೋಗ್ಯ ಇಲಾಖೆಯ ಗಮನಕ್ಕೆ ಹಲವು ಬಾರಿ ತಂದಿದ್ದೇವೆ. ಕೆಲವು ಔಷಧಗಳನ್ನು ತರಲು ಹೊರಗೆ ಚೀಟಿ ಕೊಡುತ್ತಾರೆ. ಆಸ್ಪತ್ರೆಯಲ್ಲಿ ಆರೋಗ್ಯ ರಕ್ಷಾ ಸಮಿತಿ ಸಭೆಗಳು ನಿರಂತರವಾಗಿ ನಡೆಯಬೇಕು. ಆದರೆ ಇಲ್ಲಿ ನಡೆಯುತ್ತಿಲ್ಲ. ಖಾಲಿ ಇರುವ ಸಿಬ್ಬಂದಿ, ವೈದ್ಯರನ್ನು ನೇಮಕ ಮಾಡಬೇಕು. ಈ ಆಸ್ಪತ್ರೆಯನ್ನು ಉಳಿಸಬೇಕು.

ಕರಿಬಸಪ್ಪ ಎಂ., ಪ್ರಧಾನ ಕಾರ್ಯದರ್ಶಿ, ನೆರಳು ಬೀಡಿ ಕಾರ್ಮಿಕರ ಯೂನಿಯನ್

ಆಸ್ಪತ್ರೆಯಲ್ಲಿ ಸುಂದರ ಹೂತೋಟ

ಆಸ್ಪತ್ರೆಯ ಆವರಣದಲ್ಲಿ ಖಾಲಿ ಸ್ಥಳ ಇರುವಲ್ಲಿ ಎಲ್ಲ ಕಡೆಗಳಲ್ಲಿ ಹೂವಿನ ತೋಟ ನಿರ್ಮಿಸಲಾಗಿದೆ. ಕೆಲವು ಕಡೆಗಳಲ್ಲಿ ಉದ್ದಕ್ಕೆ ಬೆಳೆಯುವ ಗಿಡಳನ್ನು ನೆಡಲಾಗಿದೆ. ದಾನಿಗಳ ನೆರವಿನಿಂದ ನಿರ್ಮಿಸಲಾಗಿದೆ. ಸುತ್ತಮುತ್ತ ಮರಗಿಡಗಳಿದ್ದರೆ ಆಸ್ಪತ್ರೆಯಲ್ಲಿ ಶುದ್ಧಗಾಳಿ ಇರುತ್ತದೆ ಎಂದು ಆಸ್ಪತ್ರೆಯ ಅಧಿಕ್ಷಕ ಡಾ. ಜೆ.ಬಿ. ನೀಲಕಂಠ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT