ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆದ್ದಾರಿ ತಡೆದು ರೈತರ ಪ್ರತಿಭಟನೆ: ತೇಜಸ್ವಿ ಪಟೇಲ್

ಕಬ್ಬಿಗೆ ₹ 3,500 ಎಫ್‌ಆರ್‌ಪಿ ನಿಗದಿಪಡಿಸಲು
Last Updated 13 ಆಗಸ್ಟ್ 2022, 4:12 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ದಾವಣಗೆರೆ: ಕಬ್ಬಿಗೆ ನಿಗದಿಪಡಿಸಿರುವ ಎಫ್‌ಆರ್‌ಪಿ (ನ್ಯಾಯಸಮ್ಮತ ಹಾಗೂ ಮೌಲ್ಯಾಧಾರಿತ ಬೆಲೆ)ಯನ್ನು ಮರು ಪರಿಶೀಲಿಸುವಂತೆ ಆಗ್ರಹಿಸಿ, ವಿದ್ಯುತ್ ಖಾಸಗೀಕರಣ ವಿರೋಧಿಸಿರಾಜ್ಯ ಕಬ್ಬು ಬೆಳೆಗಾರರ ಸಂಘದಿಂದ ಇಲ್ಲಿನ ಜಿಲ್ಲಾ ಪಂಚಾಯಿತಿ ಎದುರು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಲಾಯಿತು.

ಸಂಘದ ಉಪಾಧ್ಯಕ್ಷ ತೇಜಸ್ವಿ ಪಟೇಲ್ ನೇತೃತ್ವದಲ್ಲಿ ಜಮಾವಣೆಗೊಂಡ ರೈತರು ಎರಡು ಗಂಟೆಗಳ ಕಾಲ ಹೆದ್ದಾರಿಯಲ್ಲಿ ಕುಳಿತರು. ಕೇಂದ್ರ, ರಾಜ್ಯ ಸರ್ಕಾರ ಹಾಗೂ ಸಕ್ಕರೆ ಸಚಿವರಿಗೆ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಹೆದ್ದಾರಿಯಲ್ಲೇ ರಕ್ತದಾನ ಮಾಡಿದರು. ಶೇಂಗಾ ಬೀಜ ಹಾಗೂ ಬೆಲ್ಲ ಹಂಚಿ ಪ್ರತಿಭಟಿಸಿದರು.

‘ಕಬ್ಬಿಗೆ ಈ ಹಿಂದೆ ನಿಗದಿಪಡಿಸಿದ್ದ ₹1,900 ಎಫ್‌ಆರ್‌ಪಿ ದರವನ್ನು ಕೇಂದ್ರ ಸರ್ಕಾರವು ಕಳೆದ ವಾರ
₹ 3,050ಕ್ಕೆ ಹೆಚ್ಚಿಸಿದೆ. ಮೇಲ್ನೋಟಕ್ಕೆ ದರ ಹೆಚ್ಚಾಗಿದೆ. ಆದರೆ, ಸಕ್ಕರೆ ಕನಿಷ್ಠ ಇಳುವರಿ ಒಂದು ಟನ್ ಕಬ್ಬಿಗೆ 95 ಕೆ.ಜಿ. ಇದ್ದಿದ್ದು, 107 ಕೆ.ಜಿ. ಆಗಿದೆ. ಹೀಗಾದರೆ ರೈತರಿಗೆ ಹೇಗೆ ಲಾಭವಾಗುತ್ತದೆ’ ಎಂದು ತೇಜಸ್ವಿ ಪಟೇಲ್ ಪ್ರಶ್ನಿಸಿದರು.

‘ಕೇಂದ್ರ ಸರ್ಕಾರ ಎಫ್‌ಆರ್‌ಪಿ ಹೆಚ್ಚಿಸಿರುವುದರಿಂದ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಲಾಭವಾಗಿದೆ. ಕೃಷಿ ಉತ್ಪನ್ನಗಳ ದರ ನಿಗದಿಪಡಿಸಬೇಕಾದರೆ ಸರ್ಕಾರ ಹಣ ದುಬ್ಬರವನ್ನು ನೋಡುತ್ತದೆ. ಆದರೆ, ಪೆಟ್ರೋಲ್ ಹಾಗೂ ಡೀಸೆಲ್ ದರ ನಿಗದಿಪಡಿಸುವಾಗ ಇದನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ’ ಎಂದು ಆರೋಪಿಸಿದರು.

‘ಪ್ರತಿ ವರ್ಷವೂ ಉತ್ತರ ಕರ್ನಾಟಕದಲ್ಲಿ ಕಬ್ಬು ಬೆಳೆಗಾರರಿಗೆ ನೀಡುವ ಬಾಕಿ ಹಾಗೆಯೇ ಉಳಿಯುತ್ತದೆ. 2022–23ನೇ ಸಾಲಿಗೆ ಅನ್ವಯವಾಗುವಂತೆ 95 ಕೆ.ಜಿ. ಸಕ್ಕರೆ ಇಳುವರಿಗೆ, ಒಂದು ಟನ್ ಕಬ್ಬಿಗೆ
₹ 3,500 ಬೆಲೆ ನಿಗದಿ ಮಾಡಬೇಕು’ ಎಂದು ಅವರು ಒತ್ತಾಯಿಸಿದರು.

ಲಕ್ಕಿ ಡಿಪ್ ಆದ ನೆರೆ ಪರಿಹಾರ: ‘ಜಿಲ್ಲೆಯಲ್ಲಿ ನೆರೆ ಪರಿಹಾರ ಕೆಲವೇ ರೈತರಿಗೆ ದೊರಕಿದ್ದು, ಲಕ್ಕಿಡಿಪ್ ಎನ್ನುವಂತಾಗಿದೆ. ನಷ್ಟವನ್ನು ಪುನರ್‌ ಪರಿಶೀಲಿಸಿ ಬೆಳೆ ಹಾನಿಗೊಳಗಾದ ಎಲ್ಲಾ ರೈತರಿಗೂ ಪರಿಹಾರ ನೀಡಬೇಕು’ ಎಂದು ಮನವಿ ಮಾಡಿದರು.

ಪ್ರತಿಭಟನೆಯ ತೀವ್ರತೆಯನ್ನು ಅರಿತ ಜಿಲ್ಲಾಧಿಕಾರಿ ಶಿವಾನಂದ ಕಪಾಶಿ ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದರು. ‘ಈ ಎಲ್ಲಾ ಬೇಡಿಕೆಗಳನ್ನು ಸರ್ಕಾರಕ್ಕೆ ಕಳುಹಿಸಿಕೊಡಲಾಗುವುದು’ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಹುಚ್ಚವ್ವನಹಳ್ಳಿ ಮಂಜುನಾಥ್, ಪೂಜಾರ್ ಅಂಜಿನಪ್ಪ, ಎಂ.ಬಿ. ಮುರುಗಯ್ಯ, ಕೈದಾಳೆ ಶ್ರೀಧರ್, ತಿಪ್ಪೇಸ್ವಾಮಿ, ಕೆ. ಬಸವರಾಜಪ್ಪ, ಎಂ.ಬಿ. ಮಠದ್, ಹನುಮೇಗೌಡ ಇದ್ದರು.

ಪೊಲೀಸರು ರೈತರ ನಡುವೆ ವಾಗ್ವಾದ

ಹೆದ್ದಾರಿ ತಡೆ ವೇಳೆ ರಕ್ತದಾನಕ್ಕೆ ಪೊಲೀಸರು ಅವಕಾಶ ನೀಡದೇ ರೈತರನ್ನು ತಡೆದಾಗ ಪೊಲೀಸರು ಹಾಗೂ ರೈತರ ನಡುವೆ ವಾಗ್ವಾದ ನಡೆಯಿತು.

‘ಹೆದ್ದಾರಿಯ ಪಕ್ಕದಲ್ಲಿ ರಕ್ತದಾನ ಮಾಡಿ’ ಎಂದು ಪೊಲೀಸರು ಹೇಳಿದರು. ಆದರೆ ಪ್ರತಿಭಟನಕಾರರು, ‘ಹೆದ್ದಾರಿಯಲ್ಲೇ ರಕ್ತದಾನ ಮಾಡುತ್ತೇವೆ’ ಎಂದು ಪಟ್ಟು ಹಿಡಿದರು. ಕೊನೆಗೆ ಅವಕಾಶ
ಮಾಡಿಕೊಟ್ಟರು.

‘ರೈತರ ಮಕ್ಕಳು ಎಂದು ಹೇಳಿಕೊಳ್ಳುವ ಪೊಲೀಸರು ಇಲ್ಲಿ ಉದ್ಯಮಿಗಳ ಮಕ್ಕಳಂತೆ ವರ್ತಿಸುತ್ತೀರಿ, ನೀವು ನಿಷ್ಠೆಯಾಗಿರಬೇಕಾದುದು ಸಂವಿಧಾನಕ್ಕೆ ಹೊರತು ಸರ್ಕಾರಕ್ಕೆ ಅಲ್ಲ. ಬೇಕಾದರೆ ನಮ್ಮನ್ನು ಬಂಧಿಸಿ ಕರೆದುಕೊಂಡು ಹೋಗಿ ಕೇಂದ್ರ ಸರ್ಕಾರದ ಬಳಿ ಕೂರಿಸಿ ಅಲ್ಲಿಯೇ ನಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳುತ್ತೇವೆ’ ಎಂದು ತೇಜಸ್ವಿ ಪಟೇಲ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT