ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಇಲ್ಲ: ಶ್ರೀರಾಮುಲು

Last Updated 1 ಡಿಸೆಂಬರ್ 2019, 13:01 IST
ಅಕ್ಷರ ಗಾತ್ರ

ದಾವಣಗೆರೆ: ರಾಜ್ಯದಲ್ಲಿ ಯಾವುದೇ ಪರಿಸ್ಥಿತಿಯಲ್ಲೂ ಮಧ್ಯಂತರ ಚುನಾವಣೆ ಬರುವ ಪ್ರಶ್ನೆಯೇ ಇಲ್ಲ. ಉಪ ಚುನಾವಣೆಯ 15 ಕ್ಷೇತ್ರಗಳಲ್ಲೂ ಬಿಜೆಪಿ ಜಯ ಗಳಿಸಲಿದೆ ಎಂದು ಸಚಿವ ಶ್ರೀರಾಮುಲು ವಿಶ್ವಾಸ ವ್ಯಕ್ತಪಡಿಸಿದರು.

ರಾಣೆಬೆನ್ನೂರು ಚುನಾವಣಾ ಪ್ರಚಾರಕ್ಕೆ ಹೋಗುವ ಮುನ್ನ ಇಲ್ಲಿನ ಸರಸ್ವತಿ ನಗರದ ಆಪ್ತರ ಮನೆಯಲ್ಲಿ ಶಿವಪೂಜೆ ನೆರವೇರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಎಚ್‌.ಡಿ. ದೇವೇಗೌಡರಿಗೆ ತಮ್ಮ ಪುತ್ರನ ಸರ್ಕಾರವನ್ನೇ ಉಳಿಸಿಕೊಳ್ಳಲು ಆಗಲಿಲ್ಲ. ಅವರಿಗೆ ಜನರ ಅಭಿಪ್ರಾಯ ತಿಳಿದಿಲ್ಲ. ಹಾಗಾಗಿ ಮಧ್ಯಂತರ ಚುನಾವಣೆ ಬಗ್ಗೆ ಇಲ್ಲ ಸಲ್ಲದ ಹೇಳಿಕೆ ನೀಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಮಾಜಿ ಮುಖ್ಯಮಂತ್ರಿಕುಮಾರಸ್ವಾಮಿ ದ್ವಂದ್ವ ಹೇಳಿಕೆ ನೀಡುತ್ತಿದ್ದಾರೆ. ಒಮ್ಮೆ ಸರ್ಕಾರ ಉಳಿಯುತ್ತದೆ ಎನ್ನುತ್ತಾರೆ. ಇನ್ನೊಮ್ಮೆ ಇಲ್ಲ ಎನ್ನುತ್ತಾರೆ ಎಂದು ಹೇಳಿದರು.

ರಾಜ್ಯದಲ್ಲಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಮೂರು ವರ್ಷ ಪೂರೈಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

10 ವರ್ಷಗಳ ಆಡಳಿತದಲ್ಲಿ ಲೂಟಿ ಮಾಡಿದ ಭ್ರಷ್ಟಾಚಾರದ ಹಣವನ್ನು ಕಾಂಗ್ರೆಸ್‌ ಉಪಚುನಾವಣೆಯ 15 ಕ್ಷೇತ್ರಗಳಲ್ಲೂ ಹಂಚುತ್ತಿದೆ ಎಂದು ದೂರಿದರು.

ಸಿದ್ದರಾಮಯ್ಯ ಜೊತೆ ಯಾರೂ ಇಲ್ಲ. ಅವರನ್ನು ಜೀರ್ಣಿಸಿಕೊಳ್ಳಲು ಯಾರಿಗೂ ಆಗುವುದಿಲ್ಲ. ಹಾಗಾಗಿ ಅವರ ಜೊತೆ ಮುನಿಯಪ್ಪ, ಮಲ್ಲಿಕಾರ್ಜುನ ಖರ್ಗೆಯೂ ಇಲ್ಲ. ಅವರು ಏಕಾಂಗಿಯಾಗಿದ್ದಾರೆ ಎಂದು ಹೇಳಿದರು.

ವಾಲ್ಮೀಕಿ ಸಮಾಜ ಮೀಸಲಾತಿ: ನಿರ್ಧಾರಕ್ಕೆ ಬದ್ಧ:

‘ವಾಲ್ಮೀಕಿ ಸಮಾಜಕ್ಕೆ ಶೇ 7.5 ಮೀಸಲಾತಿ ಸಂಬಂಧ ನನ್ನ ನಿರ್ಧಾರಕ್ಕೆ ಬದ್ಧ. ಮೀಸಲಾತಿ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈ ಬಗ್ಗೆ ಈಗಾಗಲೇ ಮುಖ್ಯಮಂತ್ರಿ ಜೊತೆಗೆ ಚರ್ಚೆ ನಡೆಸಿದ್ದೇನೆ’ ಎಂದು ಸಚಿವ ಶ್ರೀರಾಮುಲು ಹೇಳಿದರು.

ಮೀಸಲಾತಿ ಸಿಗದಿದ್ದರೆ ಶ್ರೀರಾಮುಲು ತಕ್ಷಣ ರಾಜೀನಾಮೆ ಕೊಡುತ್ತಾರಾ ಎಂಬ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆ ಪ್ರತಿಕ್ರಿಯಿಸಿದ ಅವರು, ‘ರಾಮುಲು ಕುರ್ಚಿಗಾಗಿ ಅಂಟಿಕೊಂಡ ವ್ಯಕ್ತಿ ಅಲ್ಲ. ಈ ಸಂಬಂಧ ನನ್ನ ನಿರ್ಧಾರ ಅಚಲ. ವರದಿ ಬಳಿಕ ಮುಖ್ಯಮಂತ್ರಿ, ಎಲ್ಲ ಶಾಸಕರ ಜೊತೆ ಮಾತುಕತೆ ನಡೆಸಿ ಮೀಸಲಾತಿ ಕೊಡಿಸುವ ಕೆಲಸ ಮಾಡುತ್ತೇನೆ’ ಎಂದರು.

ಕುಮಾರಪಟ್ಟಣಂನ ಚುನಾವಣೆ ಪ್ರಚಾರದಲ್ಲೂ ರಾಮುಲು ಇದನ್ನು ಪುನರುಚ್ಚರಿಸಿದರು.

‘ಚಿಗಟೇರಿ ಆಸ್ಪತ್ರೆಯ ವಜಾ ಮಾಡಿರುವ ಡಿ ಗ್ರೂಪ್‌ ನೌಕರರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳುವಂತೆ ಡಿಎಚ್ಒ ಅವರಿಗೆ ಸೂಚಿಸಿದ್ದೇನೆ. 15 ಜನರನ್ನು ಈಗಾಗಲೇ ಕೆಲಸಕ್ಕೆ ಸೇರಿಸಿಕೊಳ್ಳಲಾಗಿದೆ ಎಂದು ಡಿಎಚ್‌ಒ ತಿಳಿಸಿದ್ದು, ಚುನಾವಣೆ ಬಳಿಕ ಮತ್ತೆ 15 ಜನರನ್ನು ಕೆಲಸಕ್ಕೆ ಸೇರಿಸಿಕೊಳ್ಳಲಾಗುವುದು. ನಾನು ಸಚಿವನಾಗಿವರೆಗೆ ಆರೋಗ್ಯ ಇಲಾಖೆಯ ಯಾವುದೇ ನೌಕರರನ್ನು ತೆಗೆದು ಹಾಕುವುದಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT