ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎನ್‌ಆರ್‌ಸಿ ಬೇಡ, ಉದ್ಯೋಗ ಬೇಕು: ಅಮೂಲ್ಯ

‘ನಾವು ಭಾರತೀಯರು’ ಹೆಸರಲ್ಲಿ ಅನಿರ್ದಿಷ್ಟಾವಧಿ ಸತ್ಯಾಗ್ರಹ
Last Updated 4 ಫೆಬ್ರುವರಿ 2020, 9:22 IST
ಅಕ್ಷರ ಗಾತ್ರ

ದಾವಣಗೆರೆ: ‘ನಮ್ಮ ಅಜ್ಜಂದಿರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದರು. ಈಗ ನಾವು ಕಳ್ಳರ ವಿರುದ್ಧ ಹೋರಾಟ ಮಾಡಬೇಕಿದೆ. ನಮಗೆ ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ಬೇಡ. ಉದ್ಯೋಗ ಬೇಕು. ಉತ್ತಮ ಶಿಕ್ಷಣ ಬೇಕು. ಸದೃಢ ಆರ್ಥಿಕ ವ್ಯವಸ್ಥೆ ಬೇಕು’ ಎಂದು ವಿದ್ಯಾರ್ಥಿ ನಾಯಕಿ ಅಮೂಲ್ಯ ಆಗ್ರಹಿಸಿದರು.

ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ವಿರುದ್ಧ ‘ನಾವು ಭಾರತೀಯರು’ ಎಂಬ ಹೆಸರಲ್ಲಿ ಇಮಾಮ್‌ ಅಹ್ಮದ್‌ ರಜಾ ಪಾರ್ಕ್‌ನಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಸತ್ಯಾಗ್ರಹದ ಮೂರನೇ ದಿನವಾದ ಸೋಮವಾರ ಭಾಗವಹಿಸಿ ಅವರು ಮಾತನಾಡಿದರು.

‘ನಾನು ಬರುವಾಗ ಇಲ್ಲಿ ಭಾವನಾತ್ಮಕವಾಗಿ ಮಾತನಾಡಬೇಡಿ ಎಂದು ಸೂಚನೆ ನೀಡಿದರು. ಆದ್ರೆ ಈ ದೇಶವನ್ನು ಭಾವನಾತ್ಮಕವಾಗಿ ಜಾತಿ ಧರ್ಮ ಒಡೆಯುತ್ತಿದ್ದಾರೆ. ಅಸ್ಸಾಂನಲ್ಲಿರುವ 3.3 ಕೋಟಿ ಜನರ ಎನ್‌ಆರ್‌ಸಿಗೆ ಸರ್ಕಾರ ₹ 1.5 ಸಾವಿರ ಕೋಟಿ ಖರ್ಚು ಮಾಡಿದೆ. ಜನರು ತಮ್ಮ ದಾಖಲೆ ಸಂಗ್ರಹಿಸಲು ₹ 8 ಸಾವಿರ ಕೋಟಿ ವೆಚ್ಚ ಮಾಡಿದ್ದಾರೆ’ ಎಂದರು.

ಬೆಂಗಳೂರಿನ ನೆಲಮಂಗಲದಲ್ಲಿರುವ ಬಂಧನಕೇಂದ್ರ ಕಟ್ಟಲು ಸಮಾಜ ಕಲ್ಯಾಣ ಇಲಾಖೆಯ ಹಣವನ್ನು ಬಳಸಲಾಗಿದೆ. ಆದರ ಇನ್ನೊಂದೆಡೆ ವಸತಿ ನಿಲಯಗಳಿಲ್ಲದೇ ದಲಿತ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದಾರೆ. ದೇಶದ ಜನಸಂಖ್ಯೆಯ ಅರ್ಧದಷ್ಟು ಇರುವ ಯುವಜನರಿಗೆ ಸಮರ್ಪಕ, ಸುಭದ್ರ ಉದ್ಯೋಗವಿಲ್ಲ. ಸರ್ಕಾರ ಎನ್‌ಪಿಆರ್‌, ಎನ್‌ಆರ್‌ಸಿಗೆ ಖರ್ಚು ಮಾಡುವ ಹತ್ತು ಲಕ್ಷ ಕೋಟಿ ರೂಪಾಯಿಯನ್ನು ಉದ್ಯೋಗ ಸೃಷ್ಟಿಸಲು ವೆಚ್ಚ ಮಾಡಿದ್ದರೆ ಹತ್ತಾರು ಕೋಟಿ ಉದ್ಯೋಗ ಸೃಷ್ಟಿಯಾಗುತ್ತಿತ್ತು ಎಂದು ತಿಳಿಸಿದರು.

ಸಿಎಎ, ಎನ್‌ಆರ್‌ಸಿ, ಎನ್‌ಪಿಆರ್‌ ರದ್ದಾಗದಿದ್ದರೆ ದೇಶದಲ್ಲಿ ಅರಾಜಕತೆ ಉಂಟಾಗಲಿದೆ. ಅಶಾಂತಿಗೆ ದಾರಿಯಾಗಲಿದೆ. ಆರ್ಥಿಕತೆ ಕುಸಿಯಲಿದೆ. ಅದನ್ನು ತಡೆಯಲು ಹೋರಾಟ ಮಾಡಲಾಗುತ್ತಿದೆ ಎಂದು ಹೇಳಿದರು.

ಜಬೀನಾಖಾನಂ, ಸಬ್ರೀನ್ ತಾಜ್, ಉಷಾ ಕೈಲಾಸದ, ಶಿರಿನ್‌ಬಾನು, ಟಿ. ಜಬೀನಾ ಆಫಾ, ಜುಬೇದಾ ಬೇಗ್ಂ, ಶಬಾನಾಬಾನು, ಗೀತಾ, ಮುಮಾಜ್ತ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT