ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಧರ್ಮ ರಾಜಕಾರಣ ಬೇಡ, ಜನಮುಖಿ ಆಡಳಿತ ನೀಡಿ: ಎಎಪಿ ಮುಖಂಡ ಬಸವರಾಜಪ್ಪ

Published 23 ಜನವರಿ 2024, 14:19 IST
Last Updated 23 ಜನವರಿ 2024, 14:19 IST
ಅಕ್ಷರ ಗಾತ್ರ

ಹರಿಹರ: ಕೇಂದ್ರದ ಬಿಜೆಪಿ ಸರ್ಕಾರ ಜನರನ್ನು ಧರ್ಮದ ಕಾರಣವಿಟ್ಟು ಪ್ರಚೋದಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸಲು ಹೊಂಚು ಹಾಕಿದೆ ಎಂದು ಆಮ್ ಆದ್ಮಿ ಪಾರ್ಟಿ ತಾಲ್ಲೂಕು ಘಟಕದ ಅಧ್ಯಕ್ಷ ಹಲಸಬಾಳು ಬಸವರಾಜಪ್ಪ ಟೀಕಿಸಿದರು.

ಪ್ರತಿ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ದೇಶದ ಜನರನ್ನು ಧರ್ಮದ ಆಧಾರದಲ್ಲಿ ವಿಘಟಿಸಿ, ಸಂಘರ್ಷದ ವಾತಾವರಣ ನಿರ್ಮಿಸುವುದು ಬಿಜೆಪಿ ತಂತ್ರವಾಗಿದೆ. ಎರಡು ಅವಧಿಯ ಆಡಳಿತದಲ್ಲಿ ಮಹತ್ತರ ಸಾಧನೆ ಮಾಡಲಾಗದ್ದರಿಂದ ಜನರ ಧಾರ್ಮಿಕ ಭಾವನೆಗಳನ್ನು ಕೆರಳಿಸುತ್ತಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಿಜೆಪಿ ಆಡಳಿತಕ್ಕೆ ಬರುವ ಮುನ್ನ ನೀಡಿದ್ದ ಸ್ವಿಸ್ ಬ್ಯಾಂಕ್‌ನಲ್ಲಿರುವ ಕಪ್ಪು ಹಣ ವಾಪಸ್‌ ತರಿಸಿ ಪ್ರತಿ ಪ್ರಜೆ ಬ್ಯಾಂಕ್ ಖಾತೆಗೆ ₹ 15 ಲಕ್ಷ ಜಮೆ, ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಸೇರಿ ಯಾವ ಭರವಸೆಗಳನ್ನೂ ಈಡೇರಿಸಿಲ್ಲ. ಬದಲಿಗೆ ಜಿಎಸ್‌ಟಿ ಜಾರಿ, ಅಡುಗೆ ಅನಿಲ, ಅಡುಗೆ ಎಣ್ಣೆ, ಆಹಾರ ಧಾನ್ಯದ ದರ ಏರಿಕೆ ಮಾಡುವ ಮೂಲಕ ಜನಸಾಮಾನ್ಯರ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕಲಾಗಿದೆ ಎಂದು ದೂರಿದರು.

ಬಿಜೆಪಿ ಮುಖಂಡರು ಸಂವಿಧಾನ ಬದಲಿಸಲೆಂದೇ ಅಧಿಕಾರಕ್ಕೆ ಬಂದಿರುವುದಾಗಿ ಹೇಳುತ್ತಾರೆ. ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ, ಅಲ್ಪಸಂಖ್ಯಾತರು, ದಲಿತರು ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಅದಾನಿ, ಅಂಬಾನಿಯಂತಹ ಹಣದಾಹಿ ಉದ್ಯಮಿಗಳಿಗೆ ಶ್ರೀರಕ್ಷೆ ನೀಡುವುದೇ ಕೇಂದ್ರ ಸರ್ಕಾರದ ಕಾಯಕವಾಗಿದೆ ಎಂದು ಆರೋಪಿಸಿದರು.

ಆಪ್ ಆಡಳಿತ ಇರುವ ದೆಹಲಿ ಮತ್ತು ಪಂಜಾಬ್‌ನಲ್ಲಿ ಉತ್ಕೃಷ್ಟ ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆಗಳು ಜನರಿಗೆ ಸಿಗುವಂತಾಗಿದೆ. ಭಷ್ಟಾಚಾರ ರಹಿತ ಆಡಳಿತ ನೀಡಲಾಗುತ್ತಿದೆ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT