ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಧ್ವನಿವರ್ಧಕದಲ್ಲಿ ತಿಳಿಸಿ ಜಾರಿಯಾದ ಕರ್ಫ್ಯೂ

ರಾತ್ರಿ 9ರ ನಂತರ ಮನೆ ಸೇರಿದ ಜನ * ಬಾಗಿಲು ಮುಚ್ಚಿಸಿದ ಪೊಲೀಸರು
Last Updated 22 ಏಪ್ರಿಲ್ 2021, 5:21 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಜಾರಿ ಮಾಡಿರುವ ಕರ್ಫ್ಯೂ ಬುಧವಾರವೇ ರಾತ್ರಿ ಜಾರಿಯಾಯಿತು. ಪೊಲೀಸರು ಧ್ವನಿವರ್ಧಕಗಳ ಮೂಲಕ ಅಂಗಡಿ, ಹೋಟೆಲ್‌ ಸಹಿತ ಎಲ್ಲ ವರ್ತಕರಿಗೆ ರಾತ್ರಿ 8 ಗಂಟೆಯಿಂದಲೇ ಕರ್ಫ್ಯೂ ಬಗ್ಗೆ ಜಾಗೃತಿ ಮೂಡಿಸಲಾಯಿತು. ರಾತ್ರಿ 9 ಗಂಟೆಯ ನಂತರ ಪೊಲೀಸರು ಬಾಗಿಲು ಹಾಕಿಸುತ್ತಾ ಹೋದರು. ರಾತ್ರಿ 9ರ ನಂತರ ಜನರೆಲ್ಲ ಮನೆ ಸೇರಿದರು. ನಗರ ನಿರ್ಜನವಾಯಿತು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಎಸ್‌ಪಿ ಎಂ.ರಾಜೀವ್‌, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್‌, ತಹಶೀಲ್ದಾರ್‌ ಗಿರೀಶ್‌, ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಡಿವೈಎಸ್‌ಪಿ ನಾಗೇಶ್‌ ಐತಾಳ್ ಸಹಿತ ಅಧಿಕಾರಿಗಳು ರಸ್ತೆಗಿಳಿದು ವ್ಯಾಪಾರಿಗಳಿಗೆ ಜಾಗೃತಿ ಮೂಡಿಸಿ, ಅಂಗಡಿಗಳನ್ನು ಬಂದ್‌ ಮಾಡಿಸಿದರು.

ಎಲ್ಲರೂ 9 ಗಂಟೆಯ ಒಳಗೆ ತಮ್ಮ ವ್ಯಾಪಾರ ವಹಿವಾಟುಗಳನ್ನು ಬಂದ್‌ ಮಾಡುವ ಮೂಲಕ ಜನರು ಸಹಕಾರ ನೀಡಿದ್ದಾರೆ. ಹಳೇ ದಾವಣಗೆರೆ ಭಾಗದಲ್ಲಿ ಲಾಕ್‌ಡೌನ್‌ ಕಾಲದಲ್ಲಿಯೂ ಇಂಥ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಎಲ್ಲ ಕಡೆ ಉತ್ತಮ ಸ್ಪಂದನೆ ದೊರೆತಿದೆ. ಇದು ಮುಂದವರಿಯಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಅಗತ್ಯ ವಸ್ತುಗಳನ್ನು ಬಿಟ್ಟು ಉಳಿದ ವ್ಯವಹಾರಗಳು ನಾಳೆಯಿಂದ ಇರುವುದಿಲ್ಲ. ಮೇ 4ರವರೆಗೆ ಬಂದ್‌ ಇರುತ್ತವೆ ಎಂದು ಮಾಹಿತಿ ನೀಡಿದರು.

ಹಳೇಭಾಗದಲ್ಲಿ ಈ ಬಾರಿ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿಲ್ಲ. ಆದರೆ ಪ್ರತಿಷ್ಠಿತ ಬಡಾವಣೆಗಳಾದ ವಿದ್ಯಾನಗರ, ತರಳಬಾಳು, ಶಿವಕುಮಾರಸ್ವಾಮಿ ಬಡಾವಣೆ ಮುಂತಾದ ಪ್ರದೇಶಗಳಲ್ಲಿಯೇ ಪ್ರಕರಣ ಹೆಚ್ಚಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಕರ್ಫ್ಯೂ ಇದ್ದರೂ ಏನಿರುತ್ತದೆ?
ಆನ್‌ಲೈನ್‌ ಶಿಕ್ಷಣ, ದೂರ ಶಿಕ್ಷಣ. ಕ್ರೀಡಾಳುಗಳಿಗೆ ಈಜುಕೊಳ, ಸ್ಟೇಡಿಯಂ ತರಬೇತಿಗೆ ಅವಕಾಶ ಇದೆ. ಹೋಟೆಲ್‌ಗಳಿಂದ ಪಾರ್ಸೆಲ್‌ಗೆ ಮಾತ್ರ ಅವಕಾಶ. ಎಲ್ಲ ನಿರ್ಮಾಣ ಕಾಮಗಾರಿಗಳು ಇರುತ್ತವೆ. ಎಲ್ಲ ಕೈಗಾರಿಕೆಗಳು ಇರುತ್ತವೆ. ವಾಣಿಜ್ಯ ಮತ್ತು ಖಾಸಗಿ ವ್ಯಾಪಾರಿ ಕೇಂದ್ರಗಳು, ಹಾಲು, ಮಾಂಸ, ತರಕಾರಿ, ಹಣ್ಣು, ದಿನಸಿ ಸಹಿತ ಎಲ್ಲ ಆಹಾರ ಪದಾರ್ಥಗಳು. ಲಾಡ್ಜ್‌ಗಳಿರುತ್ತವೆ. ಮದ್ಯ ಪಾರ್ಸೆಲ್‌ಗೆ ಅವಕಾಶ. ಬ್ಯಾಂಕ್‌, ವಿಮೆ ಕಚೇರಿ, ಎಟಿಎಂ ಇರಲಿದೆ. ಇ–ಕಾಮರ್ಸ್‌ ಡೆಲಿವರಿಗೆ ಅವಕಾಶ. ಸೆಲೂನುಗಳು, ಬ್ಯೂಟಿ ಪಾರ್ಲರ್‌ಗಳು ಇರುತ್ತವೆ.

ರಾಜ್ಯದೊಳಗೆ ಮತ್ತು ಹೊರರಾಜ್ಯಗಳ ನಡುವೆ ಓಡಾಟಕ್ಕೆ ನಿಷೇಧವಿಲ್ಲ. ಕೋವಿಡ್‌ ಮಾರ್ಗಸೂಚಿ ಪಾಲನೆ ಮಾಡಿ ಸಂಚರಿಸಬಹುದು. ಕೆಎಸ್‌ಆರ್‌ಟಿಸಿ ಬಸ್‌, ರೈಲು, ಕ್ಯಾಬ್‌, ಆಟೊ ಸಹಿತ ಎಲ್ಲವೂ ಇರಲಿವೆ. ಕೃಷಿ ಉತ್ಪನ್ನಗಳ ಮಾರಟಕ್ಕೆ ಸಮಸ್ಯೆ ಇಲ್ಲ. ಯಾವುದೇ ಅಗತ್ಯ ವಸ್ತುಗಳ ಸಾಗಾಟ ಮಾಡಲು ತೊಂದರೆ ಇಲ್ಲ. ಆರೋಗ್ಯ ಸೇವೆ ಇರಲಿದೆ.

50 ಜನರ ಒಳಗಿದ್ದು ಮದುವೆ ಮಾಡಬಹುದು. ಅಂತ್ಯಕ್ರಿಯೆಯಲ್ಲಿ 20 ಜನ ಭಾಗವಹಿಸಬಹುದು. ಉದ್ಯೋಗಿಗಳು ಗುರುತಿನ ಚೀಟಿ ಹೊಂದಿರಬೇಕು.

ಏನಿರಲ್ಲ: ಶಾಲೆ, ಕಾಲೇಜು, ಶಿಕ್ಷಣ ಸಂಸ್ಥೆಗಳು, ತರಬೇತಿ ಕೇಂದ್ರಗಳು. ಸಿನಿಮಾ ಮಂದಿರಗಳು, ಯೋಗ ಕೇಂದ್ರಗಳು, ಸ್ಪಾ, ಕ್ರೀಡಾ ಕೇಂದ್ರಗಳು, ಸಾರ್ವಜನಿಕ ಈಜುಕೊಳ, ಸಭಾಂಗಣಗಳು ಇರುವುದಿಲ್ಲ. ಎಲ್ಲ ಧಾರ್ಮಿಕ ಕೇಂದ್ರಗಳಿಗೆ ಸಾರ್ವಜನಿಕರಿಗೆ ಪ್ರವೇಶ ಇರುವುದಿಲ್ಲ.‌

ಮೇ 4ರ ವರೆಗೆ ರಾತ್ರಿ ಕರ್ಫ್ಯೂ, ವಾರಾಂತ್ಯ ಕರ್ಫ್ಯೂ
ಜಿಲ್ಲೆಯಾದ್ಯಂತ ಕೋವಿಡ್ 19 ಸೋಂಕು ಹರಡದಂತೆ ತಡೆಯಲು ಸಿಆರ್‌ಪಿಸಿ ಕಲಂ 144 ರನ್ವಯ ಜಿಲ್ಲಾಧಿಕಾರಿ ಏ.21 ರಿಂದ ಮೇ 4 ರವರೆಗೆ ರಾತ್ರಿ 9ರಿಂದ ಬೆಳಿಗ್ಗೆ 6ರ ವರೆಗೆ ಕರ್ಫ್ಯೂ ವಿಧಿಸಲಾಗಿದೆ. ಜತೆಗೆ ವಾರಾಂತ್ಯದ ಕರ್ಫ್ಯೂವನ್ನು ಶುಕ್ರವಾರ ರಾತ್ರಿ 9ರಿಂದ ಸೋಮವಾರ ಬೆಳಿಗ್ಗೆ 6ರ ವರೆಗೆ ಘೋಷಿಸಲಾಗಿದೆ.

ಸಾರ್ವಜನಿಕರು ಕರ್ಫ್ಯೂ ವೇಳೆ ಕೆಲವು ಷರತ್ತು ಮತ್ತು ನಮೂದಿತ ಮಾರ್ಗಸೂಚಿಗಳನ್ನು ಪಾಲಿಸಬೇಕು. ಈ ಆದೇಶವನ್ನು ಉಲ್ಲಂಘಿಸಿದರೆ ಭಾರತೀಯ ದಂಡ ಸಂಹಿತೆಯ ಕಲಂ 188 ಹಾಗೂ ವಿಪತ್ತು ನಿರ್ವಹಣಾ ಕಾಯ್ದೆ 2005 ರ ಸೆಕ್ಷನ್ 51 ರಿಂದ 60 ರ ಪ್ರಕಾರ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT