ಶನಿವಾರ, ನವೆಂಬರ್ 28, 2020
26 °C
ತೀವ್ರವಾಗಿ ಏರಿದ ಪಟಾಕಿ ಬೆಲೆ l ಬಗೆಹರಿಯದ ರೆಡ್‌, ಗ್ರೀನ್‌ ಪಟಾಕಿ ಗೊಂದಲ

ಅಧಿಕಾರಿ–ವ್ಯಾಪಾರಿಗಳ ಹಗ್ಗಜಗ್ಗಾಟ: ಗ್ರಾಹಕನಿಗೆ ಹೊರೆ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಶನಿವಾರ ಸಂಜೆ ಗ್ರಾಹಕರು ಬರುವ ಹೊತ್ತಿಗೆ ಅಧಿಕಾರಿಗಳು ಬಂದು ಕಾರ್ಯಾಚರಣೆ ಎಂದು ಮೂರ್ನಾಲ್ಕು ಗಂಟೆ ವ್ಯಾಪಾರ ಇಲ್ಲದಂತೆ ಮಾಡಿದರು. ಮೊದಲೇ ವ್ಯಾಪಾರ ಕಡಿಮೆ. ಅಲ್ಪಸ್ವಲ್ಪ ವ್ಯಾಪಾರಕ್ಕೂ ತೊಂದರೆ ಕೊಟ್ಟರು’– ಇದು ಹೈಸ್ಕೂಲ್‌ ಮೈದಾನದ ಪಟಾಕಿ ವ್ಯಾಪಾರಿಗಳ ಬೇಸರ. ‘ಹಸಿರು ಪಟಾಕಿ ಮಾತ್ರ ಮಾರಾಟ ಮಾಡಬೇಕು ಎಂಬ ಸ್ಪಷ್ಟ ನಿರ್ದೇಶನ ಇದ್ದ ಮೇಲೂ ಅದನ್ನು ಉಲ್ಲಂಘಿಸಿದ್ದರಿಂದ ಕ್ರಮ ಕೈಗೊಳ್ಳಲಾಗಿದೆ’– ಇದು ಅಧಿಕಾರಿಗಳ ಸಮರ್ಥನೆ. ಇದರ ನಡುವೆ ಪಟಾಕಿ ಬೆಲೆ ಏರಿ ಗ್ರಾಹಕರಿಗೆ ಹೊರೆಯಾಗಿದೆ.

‘ನಿಯಮದ ಪ್ರಕಾರ ಅಧಿಕಾರಿಗಳು ಕ್ರಮ ಕೈಗೊಳ್ಳುವುದಕ್ಕೆ ನಮ್ಮ ಆಕ್ಷೇಪವಿಲ್ಲ. ಆದರೆ ಶುಕ್ರವಾರವೇ ಕ್ರಮ ಕೈಗೊಳ್ಳಬಹುದಿತ್ತು. ಶನಿವಾರ ಬೆಳಿಗ್ಗೆ ಸಮಯ ಇತ್ತು. ಅದೆಲ್ಲ ಬಿಟ್ಟು ಸಂಜೆ ಹೊತ್ತಿಗೆ ಬಂದು ತೊಂದರೆ
ನೀಡಿದರು. ಸರ್ಕಾರಕ್ಕೆ ಶುಲ್ಕ ಕಟ್ಟಿ, ಅನುಮತಿ ಪಡೆದು, ಬಂಡವಾಳ ಹೂಡಿದ ಮೇಲೆ ಇನ್ನೇನು ವ್ಯಾಪಾರ ಆರಂಭಗೊಂಡಿತು ಎಂಬ ಹೊತ್ತಿಗೆ ಅಧಿಕಾರಿಗಳು ಬಂದು ಕುಳಿತರು. ಇದು ವ್ಯಾಪಾರಿಗಳ ಹೊಟ್ಟೆಗೆ ಹೊಡೆದಂತೆ’ ಎಂದು ಪಟಾಕಿ ವರ್ತಕರ ಮತ್ತು ಬಳಕೆದಾರರ ಸಂಘದ ಅಧ್ಯಕ್ಷ ಡಿ.ಎಸ್‌. ಸಿದ್ಧಣ್ಣ ದೂರಿದರು.

ಹೈಸ್ಕೂಲ್‌ ಮೈದಾನದಲ್ಲಿ ಮಳಿಗೆ ಹಾಕಿದವರಲ್ಲಿ ಬಹುತೇಕರು ಕಾಯಂ ಪಟಾಕಿ ವ್ಯಾಪಾರಿಗಳಲ್ಲ. ದೀ‍ಪಾವಳಿ ಸಂದರ್ಭದಲ್ಲಿ ನಾಲ್ಕು ಕಾಸು ದುಡಿದುಕೊಳ್ಳುವವರು. ನಗರದಲ್ಲಿ ಐದು ಮಂದಿ ಹೋಲ್‌ಸೇಲ್ ಪಟಾಕಿ ವ್ಯಾಪಾರಿಗಳಿದ್ದಾರೆ. ಅವರು ಗೋದಾಮು ಹೊಂದಿದ್ದಾರೆ. ಅಲ್ಲಿಂದಲೇ ಶೇ 60ರಷ್ಟು ಪಟಾಕಿ ಪೂರೈಕೆ ಆಗುತ್ತದೆ. ಸ್ವಲ್ಪ ಪ್ರಮಾಣದಲ್ಲಷ್ಟೇ ಹೊರಗಿನಿಂದ ನೇರವಾಗಿ ತರಿಸಲಾಗುತ್ತಿದೆ. ಅಧಿಕಾರಿಗಳು ಈ ಹೋಲ್‌ಸೇಲ್‌ ಅಂಗಡಿಗಳಲ್ಲಿಯೂ ಪರೀಕ್ಷೆ ಮಾಡಬೇಕಿತ್ತಲ್ಲ. ಅದನ್ನು ಯಾಕೆ ಮಾಡಿಲ್ಲಎಂಬುದು ಅವರ ಪ್ರಶ್ನೆ.

‘ಪಟಾಕಿ ವ್ಯಾಪಾರಕ್ಕೆ ಶನಿವಾರದಿಂದ ಅವಕಾಶ ನೀಡಲಾಗಿದೆ. ಹಸಿರು ಪಟಾಕಿ ಹೊರತುಪಡಿಸಿ ಉಳಿದವುಗಳನ್ನು ಮಾರಾಟ ಮಾಡದಂತೆ ತಡೆಯಲು ಸರ್ಕಾರವು ಪೊಲೀಸ್‌ ಇಲಾಖೆ ಮತ್ತು ಪಾಲಿಕೆಗೆ ಸ್ಪಷ್ಟವಾಗಿ ನಿರ್ದೇಶನವನ್ನು ನೀಡಿತ್ತು. ಅದರಂತೆ ದಾಳಿ ಮಾಡಲಾಗಿದೆ.ಜಿಲ್ಲಾಡಳಿತದಿಂದ ಯಾರು ಅನುಮತಿ ಪಡೆದಿದ್ದಾರೋ ಅಲ್ಲಿ ಪಟಾಕಿಗಳು ನಿಯಮ ಪ್ರಕಾರಇವೆಯೇ ಎಂದು ಪರೀಕ್ಷಿಸಲಾಗಿದೆ. ನಿಯಮ ಮೀರಿದ ಪಟಾಕಿ ವಶಪಡಿಸಿಕೊಳ್ಳಲಾಗಿದೆ’ ಎಂದು ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ‘ಪ್ರಜಾವಾಣಿ’ಗೆ ತಿಳಿಸಿದರು.

ಯಾವ ಪಟಾಕಿ ಅಪಾಯಕಾರಿ?

ಹಸಿರು ಪಟಾಕಿಯನ್ನೇ ಮಾರಾಟ ಮಾಡಬೇಕು ಎಂದು 2017ರಲ್ಲಿ ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ಕಳೆದ ವರ್ಷ ಕಠಿಣ ನಿಯಮ ಮಾಡಲಾಗಿತ್ತು. ಪಟಾಕಿಯಲ್ಲಿ ಶೇ 95 ಗ್ರೀನ್‌ ಲೇಬಲ್ ಇರುವುದೇ ಆಗಿದೆ. ಶೇ 5 ಮಾತ್ರ ಬೇರೆ ಇರಬಹುದು. ರೆಡ್‌ ಲೇಬಲ್‌ಗಿಂತ ಗ್ರೀನ್‌ ಲೇಬಲ್‌ ಪಟಾಕಿಯೇ ಹೆಚ್ಚು ಅಪಾಯಕಾರಿ ಎಂಬ ಚರ್ಚೆಗಳು ಈಗ ನಡೆಯುತ್ತಿವೆ. ಯಾವುದು ಸರಿ ಎಂಬುದು ಗೊತ್ತಾಗುತ್ತಿಲ್ಲ ಎಂದು ಡಿ.ಎಸ್‌. ಸಿದ್ಧಣ್ಣ ಗೊಂದಲವನ್ನು ವಿವರಿಸಿದರು.

ಮಕ್ಕಳ ಪಟಾಕಿಗೆ ಬೇಡಿಕೆ

ಹೆಚ್ಚು ಸದ್ದು ಮಾಡುವ ಪಟಾಕಿಯ ಬದಲು ಮಕ್ಕಳು ಖುಷಿ ಪಡುವ ಬಂದೂಕು, ಬೆಳ್ಳುಳ್ಳಿ ಪಟಾಕಿ, ಸುರುಸುರು ಬತ್ತಿ, ಹನುಮಂತನ ಬಾಲ, ಭೂ ಚಕ್ರ, ಸಣ್ಣ ಹೂ ಕುಂಡ ಮುಂತಾದ ಪಟಾಕಿಗಳಿಗೆ ಹೆಚ್ಚು ಬೇಡಿಕೆ ಕಂಡುಬಂತು. ಹೆತ್ತವರು ತಮ್ಮ ಮಕ್ಕಳ ಜತೆಗೆ ಬಂದು ಅವುಗಳನ್ನು ಖರೀದಿ ಮಾಡುತ್ತಿದ್ದರು. ಕೆಲ ಮಳಿಗೆಗಳಲ್ಲಿ ಮಕ್ಕಳ ಪಟಾಕಿಗಳ ಸ್ಟಾಕ್ ಖಾಲಿಯಾಗಿತ್ತು.

ಏರಿದ ಬೆಲೆ: ಪಟಾಕಿಗಳ ಬೆಲೆ ಒಂದೇ ಸಮನೆ ಜಾಸ್ತಿಯಾಗಿದೆ. ₹ 10 ಬೆಲೆಯ ಪಟಾಕಿಯನ್ನು ₹ 30–₹ 40ಕ್ಕೆ ಮಾರಾಟ ಮಾಡುತ್ತಿದ್ದಾರೆ. ಅಧಿಕಾರಿಗಳು ದಾಳಿ ಮಾಡಿ ಒಯ್ದ ಪಟಾಕಿಯ ನಷ್ಟವನ್ನು ಇದರಲ್ಲಿ ತುಂಬಿಕೊಳ್ಳುತ್ತಿರುವುದು ಕಾಣುತ್ತಿದೆ ಎಂದು ಗ್ರಾಹಕ ಚನ್ನಬಸಪ್ಪ ಮಾಯಕೊಂಡ ದೂರಿದರು.

‘₹ 7 ಇರುವ ಬೆಳ್ಳುಳ್ಳಿ ಪಟಾಕಿಯನ್ನು ₹ 20ಕ್ಕೆ ಮಾರುತ್ತಿದ್ದಾರೆ. ಸುರುಸುರು ಬತ್ತಿಯ ಒಂದು ಪ್ಯಾಕೆಟ್‌ಗೆ ₹ 70 ಹೇಳಿದರು. ನಾನು ₹ 30ಕ್ಕಿಂತ ಜಾಸ್ತಿ ಕೊಡಲ್ಲ. ಅದರ ಬೆಲೆ‌ ಗೊತ್ತಿದೆ ಅಂದೆ. ಥಟ್ಟಂತ ಕೊಟ್ಟುಬಿಟ್ಟರು. ಗೊತ್ತಿಲ್ಲದವರಾಗಿದ್ದರೆ ₹ 70 ನೀಡಿ ಖರೀದಿಸುತ್ತಿದ್ದರು’ ಎಂದು ವಿವರಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು