ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಸರಿಗೆ ಹೊಸ ತಾಲ್ಲೂಕು; ಕಚೇರಿಗಳು ಬೇಕು

5 ವರ್ಷ ಪೂರೈಸಿದರೂ ದೊರೆಯದ ಪೂರ್ಣ ಸೌಲಭ್ಯ
Last Updated 1 ಮಾರ್ಚ್ 2023, 4:15 IST
ಅಕ್ಷರ ಗಾತ್ರ

ನ್ಯಾಮತಿ: ಹೊನ್ನಾಳಿಯಿಂದ ಬೇರ್ಪಟ್ಟು ಹೊಸ ತಾಲ್ಲೂಕಾಗಿ ರೂಪುಗೊಂಡಿರುವ ನ್ಯಾಮತಿಯು, ಫೆ. 28ರಂದು 5ನೇ ಸಂಸ್ಥಾಪನಾ ವರ್ಷ ಪೂರೈಸಿದೆ. ಆದರೆ, ಕಂದಾಯ ಇಲಾಖೆ ಮತ್ತು ಖಜಾನೆ ಇಲಾಖೆ ಹೂರತು ಪಡಿಸಿ, ಮಿಕ್ಕ ಯಾವ ಇಲಾಖೆಯ ಕಚೇರಿಗಳೂ ಆರಂಭವಾಗದೇ ಜನರ ಆಶೋತ್ತರಗಳು ಈಡೇರದೇ ಉಳಿಯುವಂತಾಗಿದೆ.

ಜನರ ಹೋರಾಟ ಹಾಗೂ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರ ಒತ್ತಡದ ಮೇರೆಗೆ 2013ರಲ್ಲಿ ಜಗದೀಶ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ನ್ಯಾಮತಿ ಸೇರಿ 43 ಪಟ್ಟಣಗಳನ್ನು ತಾಲ್ಲೂಕು ಕೇಂದ್ರವನ್ನಾಗಿ ಘೋಷಿಸಲಾಗಿತ್ತು. 2017ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೆ 10 ತಾಲ್ಲೂಕುಗಳನ್ನು ಸೇರಿಸಿ ಒಟ್ಟು 53 ತಾಲ್ಲೂಕುಗಳನ್ನು ಘೋಷಿಸಿದ್ದರು.

ನ್ಯಾಮತಿಯಲ್ಲಿ ಪ್ರಭಾರ ತಹಶೀಲ್ದಾರ್ ನೇಮಕ ಮಾಡಿ, ಶಾಸಕ ಡಿ.ಜಿ. ಶಾಂತನಗೌಡ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಸಚಿವ ಕಾಗೋಡು ತಿಮ್ಮಪ್ಪ ಅವರು ನೂತನ ತಾಲ್ಲೂಕಿಗೆ ಚಾಲನೆ ನೀಡಿದ್ದರು. ಐದು ವರ್ಷ ಕಳೆದರೂ ಪ್ರತ್ಯೇಕ ನ್ಯಾಯಾಲಯವೂ ಇಲ್ಲ. ಒಟ್ಟು 32 ಕಚೇರಿಗಳ ಪೈಕಿ ಎರಡೇ ಕಚೇರಿಗಳಿವೆ. ಕೃಷಿ ಭೂಮಿ, ನಿವೇಶನ ಮತ್ತಿತರ ಸ್ಥಿರಾಸ್ತಿ ನೋಂದಣಿ, ಅರಣ್ಯ, ಶಿಕ್ಷಣ, ಜಲಸಂಪನ್ಮೂಲ ಇಲಾಖೆ ಸೇರಿದಂತೆ ವಿವಿಧ ಸರ್ಕಾರಿ ಕೆಲಸಗಳಿಗೆ ಜನರು ಹೊನ್ನಾಳಿಯನ್ನೇ ಅವಲಂಬಿಸುವಂತಾಗಿದೆ.

ದಾರ್ಶನಿಕರು, ರಾಷ್ಟ್ರನಾಯಕರು ಮತ್ತು ಸಂತರ ಜಯಂತಿ, ರಾಷ್ಟ್ರೀಯ ಹಬ್ಬಗಳನ್ನು ಆಚರಿಸಲಾಗುತ್ತಿದೆ. ವಿವಿಧ ಸಮುದಾಯದ ಸಂಘಟನೆ, ಸರ್ಕಾರಿ ನೌಕರರ ತಾಲ್ಲೂಕು ಸಂಘ, ಕನ್ನಡ ಸಾಹಿತ್ಯ ಪರಿಷತ್‌ನ ತಾಲ್ಲೂಕು ಘಟಕಗಳೂ ಪ್ರತ್ಯೇಕವಾಗಿಯೇ ಕಾರ್ಯ ನಿರ್ವಹಿಸುತ್ತಿವೆ.

ತಾಲ್ಲೂಕಿನ ಸಮಗ್ರ ಅಭಿವೃದ್ಧಿಗೆ ನಿಯಮಿತವಾಗಿ ಅನುದಾನವನ್ನೂ ಬಿಡುಗಡೆ ಮಾಡಲಾಗುತ್ತಿದೆ. ಆದರೆ, ಸರ್ಕಾರದ ಎಲ್ಲ ಇಲಾಖೆಗಳ ಕಚೇರಿಗಳು ಕಾರ್ಯ ನಿರ್ವಹಿಸುವಂತೆ ಸಾಮರ್ಥ್ಯ ಸೌಧ ನಿರ್ಮಿಸುವಲ್ಲಿಯೂ ಇದುವರೆಗೆ ರಾಜಕೀಯ ಇಚ್ಛಾಶಕ್ತಿ ಕಂಡುಬಂದಿಲ್ಲ ಎಂದು ನ್ಯಾಮತಿ ತಾಲ್ಲೂಕು ಹೋರಾಟ ಸಮಿತಿಯ ಸದಸ್ಯರು ಬೇಸರ ವ್ಯಕ್ತಪಡಿಸಿದ್ದಾರೆ.

ಸಾಮರ್ಥ್ಯಸೌಧ ನಿರ್ಮಾಣ ಕಾಮಗಾರಿಗೆ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆದಷ್ಟು ಬೇಗ ಹಣಕಾಸು ಇಲಾಖೆಯಿಂದ ಅನುಮೋದನೆ ಪಡೆಯಲು ಕ್ರಮ ಕೈಗೊಳ್ಳುವೆ.

-ಎಂ.ಪಿ. ರೇಣುಕಾಚಾರ್ಯ, ಸಿ.ಎಂ ರಾಜಕೀಯ ಕಾರ್ಯದರ್ಶಿ

ನ್ಯಾಮತಿ ತಾಲ್ಲೂಕು ಕೇಂದ್ರದಲ್ಲಿ ಸರ್ಕಾರಿ ಕಚೇರಿಗಳು ಆರಂಭವಾಗದೇ ಇರುವುದರಿಂದ ತೊಂದರೆಯಾಗಿದೆ. ಕಚೇರಿಗಳನ್ನು ಬೇಗ ಆರಂಭಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕಿದೆ.

-ಡಿ.ಜಿ. ಶಾಂತನಗೌಡ, ಮಾಜಿ ಶಾಸಕ

ತಾಲ್ಲೂಕು ಕೇಂದ್ರಕ್ಕಾಗಿ ಹೋರಾಟ ನಡೆಸಲಾಗಿದೆ. ಜನರ ಹಿತದೃಷ್ಟಿಯಿಂದ ಸರ್ಕಾರಿ ಕಚೇರಿಗಳು ಆರಂಭವಾದರೆ ತಾಲ್ಲೂಕು ಕೇಂದ್ರವಾಗಿರುವುದಕ್ಕೂ ಸಾರ್ಥಕವಾಗುತ್ತದೆ.

-ಡಿ.ಬಿ. ಗಂಗಪ್ಪ, ತಾಲ್ಲೂಕು ಹೋರಾಟ ಸಮಿತಿ ಅಧ್ಯಕ್ಷರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT