ಶುಕ್ರವಾರ, ಫೆಬ್ರವರಿ 26, 2021
30 °C
ಹಾಲು ಕುಡಿಸುವ ಹಬ್ಬ ‘ಬಸವಪಂಚಮಿ’ ಕಾರ್ಯಕ್ರಮದಲ್ಲಿ ಐಜಿಪಿ ಅಮೃತಪಾಲ್‌ ಕಳವಳ

ಒಂದೆಡೆ ಊಟವಿಲ್ಲ, ಇನ್ನೊಂದೆಡೆ ಆಹಾರ ವ್ಯರ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ನಮ್ಮ ಸಮಾಜದಲ್ಲಿ ಒಂದೆಡೆ ಹಸಿವಿನಿಂದ ಜನ ಸಾಯುತ್ತಿದ್ದಾರೆ. ಇನ್ನೊಂದೆಡೆ ಆಹಾರವನ್ನು ದೇವರು, ಹಬ್ಬ, ಮದುವೆ ಹೆಸರಲ್ಲಿ ದುಂದುವೆಚ್ಚ ಮಾಡಿ ಹಾಳು ಮಾಡುತ್ತಿದ್ದಾರೆ’ ಎಂದು ಪೂರ್ವ ವಲಯ ಐಜಿಪಿ ಅಮೃತಪಾಲ್‌ ಕಳವಳ ವ್ಯಕ್ತಪಡಿಸಿದರು.

ವಿರಕ್ತಮಠದಿಂದ ದೊಡ್ಡಪೇಟೆ ವಿರಕ್ತಮಠದ ಬಸವಕೇಂದ್ರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹಾಲು ಕುಡಿಸುವ ಹಬ್ಬ ‘ಬಸವಪಂಚಮಿ’ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಹಾಲು ಕುಡಿಸಿ ಅವರು ಮಾತನಾಡಿದರು.

12ನೇ ಶತಮಾನದ ಹೊತ್ತಿನಲ್ಲಿ ದೇಶದಲ್ಲಿ ವೈದಿಕ ಸಂಪ್ರದಾಯಗಳಿಂದಾಗಿ ಕೆಟ್ಟ ಸಮಾಜ ನಿರ್ಮಾಣವಾಗಿತ್ತು. ಸಮಾಜ ಜಡ್ಡುಗಟ್ಟಿ ಹೋಗಿತ್ತು. ಕೆಟ್ಟ ಸಂಪ್ರದಾಯಗಳನ್ನು ಬದಲಾವಣೆ ಮಾಡಬೇಕು ಎಂದು ಆ ಕಾಲದ ವಿಚಾರವಂತರು ಪ್ರಯತ್ನಪಟ್ಟರು. ದಕ್ಷಿಣ ಭಾರತದಲ್ಲಿ ಅದರಲ್ಲಿಯೂ ಕರ್ನಾಟಕದಲ್ಲಿ ಬಸವಣ್ಣನ ನೇತೃತ್ವದಲ್ಲಿ ಈ ಕೆಲಸ ನಡೆಯಿತು. ಗುರುನಾನಕ್‌, ಕಬೀರ್‌, ರುಸ್ತಾನ್‌, ಮೀರಾಬಾಯಿ ಮುಂತಾದವರೂ ಬೇರೆ ಬೇರೆ ಕಾಲದಲ್ಲಿ ಇದೇ ಕೆಲಸವನ್ನು ಮಾಡಿದರು ಎಂದು ಹೇಳಿದರು.

ಈ ರೀತಿಯ ಸಾಮಾಜಿಕ ಕ್ರಾಂತಿ ನಡೆದು 800 ವರ್ಷಗಳು ದಾಟಿದರೂ ಇನ್ನೂ ಸಮಾಜದಲ್ಲಿ ಪರಿವರ್ತನೆಗಳಾಗಿಲ್ಲ. ಈಗಲೂ ಮೌಢ್ಯ ಮುಂದುವರಿದಿದೆ. ಹಾವು ಹಾಲು ಕುಡಿಯುವುದಿಲ್ಲ ಎಂದು ಗೊತ್ತಿದ್ದರೂ ಹಾಲು ಎರೆಯಲಾಗುತ್ತಿದೆ ಎಂದು ವಿಷಾದಿಸಿದರು.

ದೇಶದ ಜನಸಂಖ್ಯೆಯಲ್ಲಿ ಶೆ 30ರಷ್ಟು ಮಂದಿಗೆ ದಿನಕ್ಕೆ ಮೂರು ಹೊತ್ತು ಊಟ ಸಿಗುತ್ತಿಲ್ಲ. ಶೇ 10ರಷ್ಟು ಮಂದಿ ಒಂದೇ ಹೊತ್ತು ಊಟಕ್ಕೆ ಸೀಮಿತರಾಗಿದ್ದಾರೆ ಎಂದರು.

ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, ‘ಪಂಚಮಿ ಹಬ್ಬ ಆಚರಿಸುವುದನ್ನು ವಿರೋಧಿಸುತ್ತಿಲ್ಲ. ಆದರೆ ಹಬ್ಬವು ಮಾನವೀಯವಾಗಿರಬೇಕು. ಆದರ್ಶವಾಗಿರಬೇಕು. ದೇವರಿಗೆ ಹೂವು ಇಟ್ಟು ಭಕ್ತಿಯಿಂದ ನಮಿಸುವುದು ತಪ್ಪಲ್ಲ. ಭಕ್ತಿಯ ಹೆಸರಲ್ಲಿ ಆಹಾರ ಚೆಲ್ಲಿದರೆ ದೇವರೇ ಒಪ್ಪಲ್ಲ’ ಎಂದು ಹೇಳಿದರು.

ದೇವರು ಎಲ್ಲೆಲ್ಲೂ ಇದ್ದಾನೆ. ಸಕಲ ಜೀವರಾಶಿಗಳಲ್ಲಿಯೂ ಇದ್ದಾನೆ. ಹಸಿದವನಿಗೆ ಊಟ ಕೊಡದೇ ಯಾವ ಪೂಜೆ ಮಾಡಿದರೂ ದೇವರು ಸಂತೃಪ್ತನಾಗುವುದಿಲ್ಲ. ಪಂಚಮಿಯ ಒಂದೇ ದಿನ ದೇಶದಲ್ಲಿ 10 ದಶಲಕ್ಷ ಲೀಟರ್‌ ಹಾಲು ವ್ಯರ್ಥವಾಗುತ್ತಿದೆ. ಕೆಲವು ಸಮಯದ ಹಿಂದೆ ಗುಜರಾತ್‌ನಲ್ಲಿ ನಡೆದ ಒಂದು ಅಭಿಷೇಕದಲ್ಲಿ ₹ 16 ಕೋಟಿ ಮೌಲ್ಯದ 5.50 ಲಕ್ಷ ಲೀಟರ್‌ ತುಪ್ಪ ಸುರಿದು ವ್ಯರ್ಥ ಮಾಡಲಾಯಿತು. ದೇವರ ಹೆಸರಲ್ಲಿ ಆಹಾರ ವ್ಯರ್ಥ ಮಾಡಬೇಡಿ ಎಂದು ಕೋರಿದರು.

ಇವತ್ತು ಬಸವಣ್ಣ ಲಿಂಗೈಕ್ಯರಾದ ದಿನ. ಹಾಲನ್ನು ಹುತ್ತ, ಕಲ್ಲುಗಳಿಗೆ ಎರೆಯದೇ ಹಾಲು ಕುಡಿಯುವ ಮೂಲಕ ಬಸವ ಪಂಚಮಿಯಾಗಿ ಆಚರಿಸಬೇಕು ಎಂದು ಸಲಹೆ ನೀಡಿದರು.

ಮಹಾಲಿಂಗಪುರದ ಚನ್ನಬಸವ ಗುರೂಜಿ, ಶಿವನಕೆರೆ ಬಸವಲಿಂಗಪ್ಪ, ಮಹಾದೇವಮ್ಮ, ಎಸ್‌.ಜಿ. ಸಂಗಪ್ಪ, ಶರಣ ಬಸವ ಉಪಸ್ಥಿತರಿದ್ದರು. ಫಾರುಕು ಉಲ್ಲಾ ಸ್ವಾಗತಿಸಿದರು. ಅನುರಾಧಾ ವಂದಿಸಿದರು. ಪಿ.ಜಿ. ಪುಷ್ಪಾ ಕಾರ್ಯಕ್ರಮ ನಿರೂಪಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು