ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಪ್ಟಟ್ಟು ಇಳುವರಿಯ ಸಂಭ್ರಮ ತಂದ ‘ಭೀಮ’

ಬೀಜೋತ್ಪಾದನೆಯಲ್ಲಿ ಸ್ವಾವಲಂಬನೆಯತ್ತ ರೈತರು: ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಪ್ರೋತ್ಸಾಹ
Last Updated 5 ಜುಲೈ 2018, 13:41 IST
ಅಕ್ಷರ ಗಾತ್ರ

ದಾವಣಗೆರೆ: ನ್ಯಾಮತಿ ತಾಲ್ಲೂಕಿನ ರಾಮೇಶ್ವರ ಭಾಗದ ರೈತರ ಚಿತ್ತ ಈಗ ‘ಭೀಮ’ನತ್ತ ಹರಿದಿದೆ. ಗ್ರಾಮದ ರೈತರಿಗೆಲ್ಲಾ ‘ಭೀಮ’ ಭರಪೂರ ವರ ನೀಡಿದ್ದಾನೆ.

ಹಿಂದಿನ ವರ್ಷ ‘ಭೀಮಾ ಸೂಪರ್‌’ ತಳಿಯ ಈರುಳ್ಳಿ ಬೆಳೆದಿರುವ ರೈತರಿಗೆ ದುಪ್ಪಟ್ಟು ಇಳುವರಿ ಸಿಕ್ಕಿತ್ತು. ಸಾಮಾನ್ಯ ತಳಿಯ ಈರುಳ್ಳಿ ಎಕರೆಗೆ ಹೆಚ್ಚೆಂದರೆ 40 ಕ್ವಿಂಟಲ್‌ ಫಸಲು ಸಿಗುತ್ತದೆ. ಆದರೆ, ಭೀಮಾ ಸೂಪರ್‌ ತಳಿ ಎಕರೆಗೆ 75ಕ್ವಿಂಟಲ್‌ಗೂ ಹೆಚ್ಚು ಇಳುವರಿ ಬಂದಿತ್ತು. ಹೀಗಾಗಿ, ಈ ಭಾಗದ ರೈತರೆಲ್ಲಾ ಈಗ ‘ಭೀಮಾ ಸೂಪರ್‌’ ತಳಿಯ ಈರುಳ್ಳಿ ಬೆಳೆಯಲು ಉತ್ಸುಕರಾಗಿದ್ದಾರೆ.

ನ್ಯಾಮತಿ ತಾಲ್ಲೂಕಿನಲ್ಲಿ ತೋಟಗಾರಿಕೆ ಬೆಳೆಗಳಲ್ಲಿ ತರಕಾರಿಗಳದ್ದೇ ಕಾರುಬಾರು. ಅದರಲ್ಲೂ ಈರುಳ್ಳಿಯನ್ನೇ ಶೇ 80ರಷ್ಟು ರೈತರು ಬೆಳೆಯುತ್ತಾರೆ. ಆರುಂಡಿ, ಕೆಂಚಿಕೊಪ್ಪ, ರಾಮೇಶ್ವರ, ಮಲ್ಲಿಗೇನಹಳ್ಳಿ, ಗಂಜೇನಹಳ್ಳಿ, ಬೆಳಗುತ್ತಿಯಲ್ಲಿ ಮುಂಗಾರಿನಲ್ಲಿ ಈರುಳ್ಳಿಯೇ ಪ್ರಧಾನ ಬೆಳೆ. ಆದರೆ, ರೋಗ, ಕೀಟ ಬಾಧೆಯಿಂದಾಗಿ ಸ್ಥಳೀಯ ತಳಿ ಹೆಚ್ಚಿನ ಇಳುವರಿ ನೀಡುತ್ತಿರಲಿಲ್ಲ. ಈ ರೈತರಿಗೆ ಈಗ ಭೀಮಾ ಸೂಪರ್‌ ತಳಿ ಆಶಾಭಾವನೆ ಮೂಡಿಸಿದೆ.

‘ಭೀಮಾ ತಳಿಗೆ ರೋಗ, ಕೀಟ ಬಾಧೆ ಕಡಿಮೆ. ಇದಕ್ಕೆ ಬರ ನಿರೋಧಕ ಶಕ್ತಿಯೂ ಇರುವುದರಿಂದ ಮಳೆ ಕಡಿಮೆಯಾದರೂ ಬೆಳೆ ನಾಶವಾಗುವುದಿಲ್ಲ. ಅಲ್ಲದೇ ಈರುಳ್ಳಿ ಗೆಡ್ಡೆಗಳು ಮಧ್ಯಮ ಗಾತ್ರದಲ್ಲಿ ಇರುತ್ತವೆ. ಗೆಡ್ಡೆಯ ಕೆಂಪು ಬಣ್ಣ ತುಸು ಹೆಚ್ಚೇ ಇರುತ್ತದೆ. ಹೀಗಾಗಿ, ಭೀಮಾ ತಳಿಯ ಈರುಳ್ಳಿಗೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ₹ 5 ಹೆಚ್ಚಿನ ದರ ಸಿಕ್ಕಿದೆ’ ಎಂದು ಮಾಹಿತಿ ನೀಡುತ್ತಾರೆ ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಎಂ.ಜಿ. ಬಸವನಗೌಡ.

ಪ್ರಸಕ್ತ ಮುಂಗಾರಿನಲ್ಲಿ 60 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ಭೀಮಾ ಸೂಪರ್‌ ತಳಿಯ ಉಳ್ಳಾಗೆಡ್ಡೆ ಬೆಳೆಯಲಾಗಿದ್ದು, ಮುಂದಿನ ವರ್ಷ ಈ ತಳಿಯ ಬೆಳೆಯನ್ನು ಕನಿಷ್ಠ 250 ಎಕರೆಗೆ ವಿಸ್ತರಿಸುವ ಗುರಿಯಿದೆ ಎನ್ನುತ್ತಾರೆ ಅವರು.

‘ಬಿತ್ತನೆ ಮಾಡಿದಾಗಿನಿಂದ ಹಿಡಿದು ಕೊಯ್ಲಿಗೆ ಬರುವವರೆಗೂ ಬೆಳೆ ಉತ್ತಮವಾಗಿ ಬೆಳವಣಿಗೆ ಹೊಂದಿತು. ಅಲ್ಲದೇ ರೋಗ, ಕೀಟದ ಕಾಟ ಕಾಣಿಸಿಕೊಳ್ಳಲಿಲ್ಲ. ಮಾರುಕಟ್ಟೆಯಲ್ಲೂ ಈ ಈರುಳ್ಳಿಗೆ ಉತ್ತಮ ಬೇಡಿಕೆ ಇತ್ತು. ಹೀಗಾಗಿ, ಭೀಮಾ ಸೂಪರ್‌ ತಳಿಯನ್ನೇ ಮತ್ತೆ ಬೆಳೆಯಲು ನಿರ್ಧರಿಸಿದ್ದೇವೆ’ ಎಂದು ತಮ್ಮ ಅನುಭವ ಬಿಚ್ಚಿಡುತ್ತಾರೆ ರೈತರಾದ ಯಶೋದಮ್ಮ, ಮಲ್ಲೇಶಪ್ಪ, ಮಲ್ಲಿಕಾರ್ಜುನಪ್ಪ ಮತ್ತು ರಾಕೇಶ್‌ ಅವರು.

ರೈತರಿಂದಲೇ ಈರುಳ್ಳಿ ಬೀಜೋತ್ಪಾದನೆ:

‘ಭೀಮಾ ಸೂಪರ್‌ ತಳಿಯ ಬೀಜಗಳಿಗೆ ಹೆಚ್ಚು ಬೇಡಿಕೆ ಇದೆ. ಹೀಗಾಗಿ, ಎಲ್ಲಾ ರೈತರಿಗೂ ಈರುಳ್ಳಿ ಬಿತ್ತನೆ ಬೀಜ ಸಿಗುತ್ತಿಲ್ಲ. ಹೀಗಾಗಿ, ರೈತರದ್ದೇ ಸಂಸ್ಥೆಯಾದ ತೀರ್ಥರಾಮೇಶ್ವರ ತೋಟಗಾರಿಕಾ ಬೆಳೆಗಳ ಉತ್ಪಾದಕರ ಕಂಪನಿಯು ಬೀಜೋತ್ಪಾದನೆಗೆ ಮುಂದಾಗಿದೆ. ಬೀಜೋತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಉದ್ದೇಶ ಈ ಸಂಸ್ಥೆಗಿದೆ. ಈ ವರ್ಷ 5 ಎಕರೆಯಲ್ಲಿ ಈರುಳ್ಳಿ ಬೀಜೋತ್ಪಾದನೆ ಮಾಡಲಾಗಿದ್ದು, ಬರುವ ಚಳಿಗಾಲದ ಹಂಗಾಮಿನಲ್ಲಿ ಈ ಕ್ಷೇತ್ರವನ್ನು 25 ಎಕರೆಗೆ ವಿಸ್ತರಿಸುವ ಗುರಿ ರೈತರ ಸಂಸ್ಥೆಗಿದೆ’ ಎಂದು ತಿಳಿಸುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT