ಶನಿವಾರ, ಜನವರಿ 28, 2023
23 °C
ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದ ಜೈನ ಸಮುದಾಯ

ಸಮ್ಮೇದ್ ಶಿಖರ್ಜಿ ಪ್ರವಾಸಿ ತಾಣವಾಗಿಸಲು ವಿರೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜೈನರ ಪವಿತ್ರ ತೀರ್ಥ ಕ್ಷೇತ್ರ ಜಾರ್ಖಂಡ್‌ನ ‘ಸಮ್ಮೇದ್ ಶಿಖರ್ಜಿ’ಯನ್ನು ಪ್ರವಾಸಿ ತಾಣವಾಗಿಸಲು ಜಾರ್ಖಂಡ್ ಸರ್ಕಾರ ಮುಂದಾಗಿರುವುದನ್ನು ಖಂಡಿಸಿ. ಗುಜರಾತ್‌ನ ರೋಹಿಶಾಲದಲ್ಲಿನ ಜೈನರ ತೀರ್ಥಂಕರ ಆದಿನಾಥರ ಪಾದುಕೆಗಳನ್ನು ನಾಶ ಮಾಡಿರುವುದನ್ನು ವಿರೋಧಿಸಿ ಜೈನ ಸಮುದಾಯದವರು ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.

ನಗರದ ಚೌಕಿಪೇಟೆಯಲ್ಲಿರುವ ಸುಪಾರ್ಶ್ವನಾಥ ದೇವಸ್ಥಾನದಿಂದ ಎನ್.ಆರ್.ರಸ್ತೆ, ಮಂಡಿಪೇಟೆ, ಅಶೋಕ ರಸ್ತೆ, ಮಹಾತ್ಮಾಗಾಂಧಿ ವೃತ್ತ, ಮಹಾನಗರ ಪಾಲಿಕೆಯವರೆಗೆ ‌‌ಮೆರವಣಿಗೆ ನಡೆಸಲಾಯಿತು. ಅಲ್ಲಿಂದ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಜಾರ್ಖಂಡ್ ರಾಜ್ಯದ ಗಿರಿದಿಹ್ ಜಿಲ್ಲೆಯಲ್ಲಿರುವ ಸುಮ್ಯೇದ್ ಶಿಖರ್ಜಿ ಪಾರ್ಶ್ವನಾಥ ಬೆಟ್ಟದಲ್ಲಿ ತೀರ್ಥಂಕರರು ಮೋಕ್ಷ ಪಡೆದ ಜಾಗ. ಜೈನರ ಈ ಪವಿತ್ರ ಸ್ಥಳವನ್ನು ಜಾರ್ಖಂಡ್ ಸರ್ಕಾರ ಪ್ರವಾಸಿ ತಾಣವನ್ನಾಗಿ ಮಾಡಲು ಮುಂದಾಗಿದೆ. ಜೈನ ಸಮುದಾಯದವರು ವಿರೋಧ ವ್ಯಕ್ತ ಪಡಿಸಿದ್ದರೂ ಜಾರ್ಖಂಡ್ ರಾಜ್ಯ ಸರ್ಕಾರ ಜೈನರ ತೀರ್ಥ ಕ್ಷೇತ್ರವನ್ನು ಅತಿಕ್ರಮಣ
ಮಾಡಲು ಮುಂದಾಗಿದೆ ಎಂದು ಸುಪಾರ್ಶ್ವನಾಥ ಜೈನ ಶ್ವೇತಾಂಬರ ಮೂರ್ತಿ ಪೂಜಕರ ಸಂಘದ ಅಧ್ಯಕ್ಷ ಛಗನ್ ಲಾಲ್ ಜೈನ್ ಆರೋಪಿಸಿದರು.

ಜೈನ ಧರ್ಮವು ಅಹಿಂಸೆಯನ್ನು ನಂಬುತ್ತದೆ. ಅಲ್ಲಿನ ಸರ್ಕಾರದ ನಿರ್ಧಾರದಿಂದಾಗಿ ಮಾಂಸಾಹಾರಿ ಹೋಟೆಲ್‌, ಬಾರ್‌ಗಳು ತಲೆ ಎತ್ತಲಿವೆ. ಕಾನೂನು ಬಾಹಿರ ಚಟುವಟಿಕೆಗಳು ನಡೆಯಲು ಕಾರಣ ಆಗಲಿದೆ. ಇದು ನಮ್ಮ ಧಾರ್ಮಿಕ
ಭಾವನೆಗಳಿಗೆ ಧಕ್ಕೆ ತರಲಿದೆ. ಜಾರ್ಖಂಡ್ ಸರ್ಕಾರ ಈ ಕೂಡಲೇ ತನ್ನ ನಿರ್ಧಾರ ಹಿಂಪಡೆಯಬೇಕೆಂದು ಆಗ್ರಹಿಸಿದರು.

ಇತ್ತೀಚಿನ ದಿನಗಳಲ್ಲಿ ಜೈನ ಸಮಾಜದ ಮೇಲೆ ದಾಳಿ ನಡೆಯುತ್ತಿವೆ. ತೀರ್ಥಕ್ಷೇತ್ರಗಳಿಗೆ ಬೆಂಕಿ ಇಡಲಾಗುತ್ತಿದೆ. ಗುಜರಾತ್‌ನ ರೋಹಿಶಾಲದಲ್ಲಿನ ಜೈನರ ತೀರ್ಥಂಕರ ಆದಿನಾಥರ ಪಾದುಕೆಗಳನ್ನು ಕಿಡಿಗೇಡಿಗಳು ನಾಶ ಮಾಡಿದ್ದಾರೆ. ಆರೋಪಿಗಳ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ. ಜೈನ ಸಮುದಾಯದ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದವರನ್ನು ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎರಡೂ ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಧ್ಯ ಪ್ರವೇಶಿಸಿ ಗುಜರಾತ್ ಹಾಗೂ ಜಾರ್ಖಂಡ್ ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡಬೇಕು. ಜೈನ ಸಮಾಜದ ಮೇಲೆ ನಡೆಯುತ್ತಿರುವ ದಾಳಿಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.

ಜಯಚಂದ್‌ ಜೈನ್, ಅಶೋಕ್ ಜೈನ್, ಸುನೀಲ್ ಜೈನ್, ಚಂದ್ರಪ್ರಭು ಜೈನ್, ಜಿನದತ್ ಜೈನ್‌ ,ಧನ್ಯಕುಮಾರ್ ಜೈನ್, ಅಶೋಕ್ ಬೇತೂರು, ಕಿಶೋರ್ ಜೈನ್, ದೀಪಕ್ ಜೈನ್, ಗೌತಮ್ ಜೈನ್ ಸಹಿತ ಅನೇಕರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು