ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವಿರುದ್ಧದ ಕೆಲಸದ ತೀವ್ರತೆ ವಿವರಿಸಿದ ಡಾ.ಜಿ.ಡಿ. ರಾಘವನ್‌

Last Updated 11 ಜೂನ್ 2020, 3:47 IST
ಅಕ್ಷರ ಗಾತ್ರ

ದಾವಣಗೆರೆ: ‘ಒಂದು ಪ್ರಕರಣ ಪತ್ತೆಯಾದರೆ ಅವರ ಸಂಪರ್ಕಿತರನ್ನು ರಾತ್ರೋರಾತ್ರಿ ಮನೆಯಿಂದ ಕರೆ ತರಬೇಕಿತ್ತು. ಯಾಕೆಂದರೆ ಬೆಳಗಾಗಿ ಬಿಟ್ಟರೆ ಅವರು ಮತ್ತೊಂದಷ್ಟು ಮಂದಿಯ ಸಂಪರ್ಕಕ್ಕೆ ಬಂದು ಬಿಡುತ್ತಿದ್ದರು’.

ಕೊರೊನಾ ಸೋಂಕಿತರ ಪತ್ತೆ ಕಾರ್ಯದ ಪ್ರಮುಖ ರೂವಾರಿಗಳಲ್ಲಿ ಒಬ್ಬರಾಗಿರುವ ಕೊರೊನಾ ವಾರಿಯರ್‌ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್‌ ಅವರ ಮಾತಿದು. ಕೊರೊನಾ ಪತ್ತೆಯಾದಲ್ಲಿಂದ ಇಲ್ಲಿವರೆಗಿನ ವಿವರಗಳನ್ನು ಸಂಕ್ಷಿಪ್ತವಾಗಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಲಾಡ್ಜ್‌ಗಳಲ್ಲಿ ಪ್ರತ್ಯೇಕ ಕೊಠಡಿಯಲ್ಲಿ ಕ್ವಾರಂಟೈನ್‌ನಲ್ಲಿ ಹಲವರನ್ನು ಇಟ್ಟಿರುತ್ತೇವೆ. ಅದರಲ್ಲಿ ಯಾರೋ ಒಬ್ಬರಿಗೆ ಅಥವಾ ಇಬ್ಬರಿಗೆ ಪಾಸಿಟಿವ್‌ ಬಂದರೆ ಅವರನ್ನು ಕೂಡಲೇ ಸ್ಥಳಾಂತರಿಸುತ್ತಿರಲಿಲ್ಲ. ಅಲ್ಲಿ ನೆಗೆಟಿವ್‌ ಬಂದವರನ್ನು ಮೊದಲು ಬೇರೆ ಲಾಡ್ಜ್‌ಗೆ ಕಳುಹಿಸಿ ಆನಂತರ ಪಾಸಿಟಿವ್‌ ಬಂದವರನ್ನು ಆಸ್ಪತ್ರೆಗೆ ಒಯ್ಯುತ್ತಿದ್ದೆವು. ಬಳಿಕ ಲಾಡ್ಜನ್ನು ಡಿಇನ್‌ಫೆಕ್ಷನ್‌ ಮಾಡಲಾಗುತ್ತಿತ್ತು’ ಎಂದು ಕಾರ್ಯಾಚರಣೆ ವಿವರಿಸಿದರು.

‘ಈಗ ಪತ್ತೆಯಾಗುತ್ತಿರುವ ಪ್ರಕರಣಗಳಲ್ಲಿ ಬಹುತೇಕ ನಾವು ಮೊದಲೇ ಗುರುತಿಸಿ ಕ್ವಾರಂಟೈನ್‌ ಮಾಡಿದವುಗಳೇ ಆಗಿವೆ. ಬೆರಳೆಣಿಕೆಯವು ಮಾತ್ರ ಪರೋಕ್ಷ ಸಂಪರ್ಕದಿಂದ ಬಂದವುಗಳು. ನಾವು ಕ್ವಾರಂಟೈನ್‌ ಮಾಡದೇ ಎಲ್ಲವೂ ಅವರವರ ಮನೆಗಳಲ್ಲೇ ಪತ್ತೆಯಾಗಿದ್ದರೆ ಕೆಲವೇ ದಿನಗಳಲ್ಲಿ ಸಾವಿರ ದಾಟಿ ಹೋಗುತ್ತಿತ್ತು’ ಎಂದು ತಿಳಿಸಿದರು.

ಜಾಲಿನಗರದ ವೃದ್ಧರೊಬ್ಬರಲ್ಲಿ ಸೋಂಕು ಪತ್ತೆಯಾದಾಗ ಅವರ ಸಂಪರ್ಕದ 46 ಮಂದಿಯನ್ನು ರಾತ್ರಿಯೇ ಕರೆ ತರಬೇಕಿತ್ತು. ಆದರೆ ನಮ್ಮಲ್ಲಿ ಒಂದೇ ಬಸ್‌ ಇತ್ತು. ಸಿಇಒ ಪದ್ಮ ಮೇಡಂಗೆ ತಿಳಿಸಿದೆ. ಅವರು ಕೆಎಸ್‌ಆರ್‌ಟಿಸಿ ಅಧಿಕಾರಿಗಳಲ್ಲಿ ಮಾತನಾಡಿ ಬಸ್‌ ಬರುವ ಹೊತ್ತಿಗೆ ರಾತ್ರಿ 1.30 ಆಗಿತ್ತು. ಆ ಚಾಲಕನಿಗೆ ಪಿಪಿಇ ಕಿಟ್‌ ಹಾಕಿಸಿ ಎಲ್ಲರನ್ನು ಕರೆ ತರಲಾಯಿತು. ಆ 46 ಮಂದಿಯಲ್ಲಿ 22 ಮಂದಿಗೆ ಸೋಂಕು ಇರುವುದು ಆಮೇಲೆ ದೃಢಪಟ್ಟಿತ್ತು’ ಎಂದು ನೆನಪಿಸಿಕೊಂಡರು.

‘ದಿನಕ್ಕೆ 500–600 ಕರೆಗಳು ಬರುತ್ತಿದ್ದವು. ಆಸ್ಪತ್ರೆಯಲ್ಲಿ ದಾಖಲಾದವರೂ ಕರೆ ಮಾಡುತ್ತಿದ್ದರು. ಕೆಲವರು ಎಲ್ಲರಿಗೂ ಸಾವಧಾನವಾಗಿ ಉತ್ತರಿಸಿದೆ. ಜಿಲ್ಲಾಧಿಕಾರಿ, ಸಿಇಒ, ಎಸ್‌ಪಿ, ಸೆಲ್‌ ಡಿಟೆಕ್ಟಿಂಗ್‌ ತಂಡ, ಕರೆ ಮಾಡುವ ತಂಡ, ಲ್ಯಾಬ್‌ ಟೆಕ್ನಿಶಿಯನ್‌ ತಂಡ, ಸಕಾಲಕ್ಕೆ ಪಿಪಿಇ ಕಿಟ್‌ ಒದಗಿಸುವ ಶಿವಾನಂದ ದಳವಾಯಿ ತಂಡ, ಸರ್ವೆ ಮಾಡುವ ಆಶಾ ಕಾರ್ಯಕರ್ತೆಯರು, ಹಿರಿಯ ಕಿರಿಯ ಆರೋಗ್ಯ ಸಹಾಯಕರು, ಹೀಗೆ ಹಲವರ ನಿರಂತರ ಕೆಲಸಗಳಿಂದಾಗಿ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಅವರೆಲ್ಲರಿಗೂ ಆಭಾರಿಯಾಗಿದ್ದೇನೆ’ ಎಂದರು.

ಕೊರೊನಾ ನಿಯಂತ್ರಣವು ಜಿಲ್ಲಾಡಳಿತ, ಆರೋಗ್ಯ ಇಲಾಖೆಗೆ ಸಂಬಂಧಿಸಿದ್ದು ಎಂದು ತಿಳಿಯದೇ ಸಮುದಾಯದ ಸಹಕಾರ ನೀಡಿದರೆ, ರೋಗ ಲಕ್ಷಣ ಕಂಡ ಕೂಡಲೇ ಆಸ್ಪತ್ರೆಗೆ ಬಂದರೆ ಇನ್ನು ಒಂದು ತಿಂಗಳಲ್ಲಿ ಕೊರೊನಾವನ್ನು ಬೆರಳೆಣಿಕೆಯಷ್ಟಕ್ಕೆ ಇಳಿಸುತ್ತೇವೆ. ಲಾಕ್‌ಡೌನ್ ನಿಯಮಗಳನ್ನು ಜನ ಕಟ್ಟುನಿಟ್ಟಾಗಿ ಪಾಲನೆ ಮಾಡಿದ್ದರೆ ಸಮಸ್ಯೆಯೇ ಆಗಿತ್ತಿರಲಿಲ್ಲ’ ಎಂದು ಹೇಳಿದರು.

ಸವಲತ್ತು ಕೇಳದಿದ್ದರೆ ಬಯ್ಯುವ ಡಿ.ಸಿ.

‘ರಾಘವನ್‌ ಏನು ಬೇಕೋ ಕೇಳಿ. ನಾನು ಎಲ್ಲ ವ್ಯವಸ್ಥೆ ಮಾಡಿಕೊಡುತ್ತೇನೆ. ಜಿಲ್ಲೆಯಲ್ಲಿ ಕೊರೊನಾ ಪೂರ್ಣ ನಿಯಂತ್ರಣವಾಗಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರು ಪ್ರತಿದಿನ ಹೇಳುವರು. ನಾನು ಏನೂ ಕೇಳದೇ ಇದ್ದರೆ ಏನ್ರಿ ನೀವು? ಬೇಕಾದನ್ನು ಕೊಡಲು ನಾನು ತಯಾರಿದ್ದರೂ ನೀವು ಬಾಯೇ ಬಿಡುತ್ತಿಲ್ಲ ಎಂದು ಬಯ್ಯುತ್ತಿದ್ದರು. ಅವರ ಸ್ಫೂರ್ತಿ ಮತ್ತು ಬೆಂಬಲ ಮರೆಯಲು ಸಾಧ್ಯವಿಲ್ಲ’ ಎಂದು ನೆನಪಿಸಿಕೊಂಡರು.

‘ಮ್ಯಾನ್‌ಪವರ್‌, ಡಾಟ ಎಂಟ್ರಿ ವ್ಯವಸ್ಥೆ ಸಹಿತ ಕೇಳಿದ್ದನ್ನೆಲ್ಲ ತಕ್ಷಣ ಮಾಡಿಕೊಟ್ಟಿದ್ದರು. ಕ್ವಾರಂಟೈನ್‌ ಮಾಡಲು ಲಾಡ್ಜ್‌ ಸೇರಿದಂತೆ ಏನೇ ಬೇಕು ಎಂದು ರಾಘವನ್‌ ಕೇಳಿದರೆ ಒದಗಿಸಬೇಕು ಎಂದು ಪಾಲಿಕೆ ಆಯುಕ್ತರಿಗೆ ಡಿಸಿ ಸೂಚಿಸಿದ್ದರು. ನಾನು ನಡುರಾತ್ರಿ ಕೇಳಿದಾಗಲೂ ಆಯುಕ್ತ ವಿಶ್ವನಾಥ ಮುದಜ್ಜಿ ಸ್ಪಂದಿಸಿದ್ದರು’ ಎಂದು ತಿಳಿಸಿದರು.

ವಾರಕ್ಕೊಮ್ಮೆ 10 ನಿಮಿಷ ಮನೆಗೆ

‘ಲಾಕ್‌ಡೌನ್ ಸಮಯದಲ್ಲಿ ಮನೆಗೆ ಹೋಗಿ ಬರುತ್ತಿದ್ದೆ. ಏಪ್ರಿಲ್‌ ಕೊನೆಯಲ್ಲಿ ಕೊರೊನಾ ಪ್ರಕರಣ ಪತ್ತೆಯಾದ ಮೇಲೆ ಮನೆಗೆ ಹೋಗುವುದನ್ನು ಬಿಟ್ಟುಬಿಟ್ಟೆ. ವಾರಕ್ಕೊಮ್ಮೆ ಮನೆಗೆ ಹೋಗಿ 5ರಿಂದ 10 ನಿಮಿಷ ಹೊರಗೆಯೇ ನಿಲ್ಲುತ್ತೇನೆ. ಮನೆಯವರು ನನ್ನ ಬಟ್ಟೆಗಳನ್ನು ಕೊಡುತ್ತಾರೆ. ಅದನ್ನು ಹಿಡಿದುಕೊಂಡು ಮತ್ತೆ ರೂಂಗೆ ವಾಪಸ್ಸಾಗುತ್ತಿದ್ದೇನೆ’ ಎಂದು ಡಾ. ಜಿ.ಡಿ. ರಾಘವನ್‌ ವೈಯಕ್ತಿಕ ಬದುಕಿನ ಮಾಹಿತಿ ನೀಡಿದರು.

‘ಪ್ರಕರಣಗಳು ಜಾಸ್ತಿಯಾದಾಗ ನಾನು ಮನೆಗೆ ಬರುವುದಿಲ್ಲ ಎಂದು ಹೇಳಿದೆ. ಊರಿಂದ ನೂರಾರು ಕಿಲೋಮೀಟರ್‌ ದೂರ ಇರುವ ಯೋಧರು 6 ತಿಂಗಳಿಗೋ, ವರ್ಷಕ್ಕೋ ಒಮ್ಮೆ ಮನೆಗೆ ಬರುತ್ತಾರೆ. ನಾನಾದರೂ ಇಲ್ಲೇ ಪಕ್ಕದಲ್ಲಿ ಇದ್ದೇನೆ. ಸೈನಿಕರ ಕೆಲಸದ ಮುಂದೆ ನನ್ನ ಕೆಲಸ ಏನೇನೂ ಅಲ್ಲ ಎಂದು ಪತ್ನಿಗೆ, ಏಳನೇ ತರಗತಿಯಲ್ಲಿ ಓದುವ ಮಗಳಿಗೆ ತಿಳಿಸಿದೆ. ‘ಪ್ರೌಡ್‌ ಆಫ್‌ ಯು’ ಎಂದು ಮಗಳು ಈಗಲೂ ಮೆಸೇಜ್‌ ಮಾಡುತ್ತಿದ್ದಾಳೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT