ಮಂಗಳವಾರ, ಮೇ 26, 2020
27 °C
ಹಕ್ಕಿಜ್ವರ: ಕೋಳಿ, ಮೊಟ್ಟೆ ಮಾರುಕಟ್ಟೆ ಕುಸಿತ

ಆಹಾರ ನೀಡದೇ ಕೋಳಿಗಳ ಸಾಯಿಸುತ್ತಿರುವ ಮಾಲೀಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಹಕ್ಕಿಜ್ವರದ ಭೀತಿಯಿಂದ ಕೋಳಿ ಹಾಗೂ ಮೊಟ್ಟೆಗಳು ಮಾರುಕಟ್ಟೆಯಲ್ಲಿ ಕುಸಿತ ಕಂಡಿದ್ದರಿಂದ ಇಲ್ಲಿನ ಕೋಳಿಫಾರಂ ಮಾಲೀಕರು ಆಹಾರ ನೀಡದೇ ಕೋಳಿಗಳನ್ನು ನಾಶಪಡಿಸುತ್ತಿದ್ದಾರೆ.

ಇಲ್ಲಿನ ಶಾಮನೂರು ಬಳಿ ಇರುವ ಕೆಪಿಎಂ ಕೋಳಿಫಾರಂನಲ್ಲಿ ಪ್ರತಿನಿತ್ಯ ಸಾವಿರಾರು ಕೋಳಿಗಳು ಮೃತಪಡುತ್ತಿದ್ದು, ತಹಶೀಲ್ದಾರ್ ಸಂತೋಷ್‌ ಕುಮಾರ್ ಹಾಗೂ ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಜಗದೀಶ್ ಭೇಟಿ ನೀಡಿದ ವೇಳೆ ಇದು ಬಯಲಾಗಿದೆ.

ಹಲವು ದಿನಗಳಿಂದ ಕೋಳಿಗಳು ಸಾವನ್ನಪ್ಪುತ್ತಿದ್ದು, ಕೋಳಿಫಾರಂ ಮಾಲೀಕರು ಅವೈಜ್ಞಾನಿಕವಾಗಿ ಕೋಳಿಗಳನ್ನು ನಾಶ ಮಾಡುತ್ತಿದ್ದರು. ನಾಯಿಗಳು ಸತ್ತಕೋಳಿಗಳನ್ನು ಕೊಂಡೊಯ್ಯುತ್ತಿದ್ದ ವೇಳೆ ಸಾರ್ವಜನಿಕರು ಇದನ್ನು ಗಮನಿಸಿ ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಕೋಳಿಫಾರಂ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ.

‘ಗ್ರಾಮಸ್ಥರು ಪ್ರತಿದಿವಸ 2500ರಿಂದ 3000 ಕೋಳಿಗಳು ಮೃತಪಡುತ್ತಿವೆ ಎಂದು ದೂರುತ್ತಿದ್ದು, ಕೋಳಿ ಫಾರಂ ಮಾಲೀಕ ವೈಜ್ಞಾನಿಕವಾಗಿ ಸಂಹಾರ ಮಾಡದೇ ನಿರ್ಲಕ್ಷ್ಯವಹಿಸಿದ್ದಾರೆ. ಕೋಳಿಗಳನ್ನು ಹೂಳುವಾಗ ಸುಣ್ಣ ಹಾಗೂ ರಾಸಾಯನಿಕವನ್ನು ಸಿಂಪಡಿಸಬೇಕು. ಆದರೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿದ್ದು, ನೋಟಿಸ್ ನೀಡಲಾಗಿದೆ’ ಎಂದು ತಹಶೀಲ್ದಾರ್ ಸಂತೋಷ್‌ಕುಮಾರ್ ತಿಳಿಸಿದರು.

‘ಮೊಟ್ಟೆಯ ಮಾರುಕಟ್ಟೆ ಕುಸಿದಿರುವುದರಿಂದ ಆಗಿರುವುದರಿಂದ ಮಾಲೀಕರು ಉತ್ಪಾದನೆ ಕಡಿಮೆ ಮಾಡಲು ಕೋಳಿಗಳಿಗೆ ಫೀಡ್ ಕೊಡುವುದನ್ನೇ ಕಡಿಮೆ ಮಾಡಿದ್ದಾರೆ. ನೀರು ಮತ್ತು ವಿಟಮಿನ್‌ಗಳನ್ನು ನೀಡುವುದು. ಇಲ್ಲವೇ 100 ಗ್ರಾಂ ಆಹಾರ ಕೊಡುವ ಕಡೆ 40 ಗ್ರಾಂ ಅಷ್ಟನ್ನೇ ನೀಡುವುದರಿಂದ ಕೊಳಿಗಳ ಹ್ಯೂಮಿನಿಟಿ ಕುಸಿದು ಸಾವನ್ನಪ್ಪುತ್ತಿವೆ’ ಎಂದು ಪಶುಸಂಗೋಪನಾ ಇಲಾಖೆಯ ಉಪನಿರ್ದೇಶಕ ಡಾ. ಭಾಸ್ಕರ್‌ ನಾಯ್ಕ್ ತಿಳಿಸಿದರು.

‘ಕೋವಿಡ್‌–19 ಭೀತಿಯ ಹಿನ್ನೆಲೆಯಲ್ಲಿ ಇಡೀ ದೇಶವೇ ಲಾಕ್‌ಡೌನ್ ಆಗಿರುವ ಹಿನ್ನೆಲೆಯಲ್ಲಿ ವಾಹನಗಳು ಸಂಚರಿಸುತ್ತಿಲ್ಲ. ಇದರಿಂದಾಗಿ ಕೋಳಿಗಳಿಗೆ ಅಗತ್ಯವಾಗಿ ಬೇಕಾಗಿರುವ ಫೀಡ್‌ ಹಾಗೂ ಆಹಾರ ಸರಬರಾಜು ಆಗುತ್ತಿಲ್ಲ.ಇದರಿಂದಾಗಿ ಕಂಗೆಟ್ಟಿರುವ ಕೋಳಿಫಾರಂ ಮಾಲೀಕರು ಕೋಳಿಗಳ ಸಂಹಾರಕ್ಕೆ ಮುಂದಾಗಿದ್ದಾರೆ’ ಎಂದು ಹೇಳಿದರು.

‘ಪೌಲ್ಟ್ರಿ ಫಾರಂನಲ್ಲಿ ಸಾವನ್ನಪ್ಪಿರುವ ಎರಡು ಕೋಳಿಗಳನ್ನು ಪರೀಕ್ಷಿಸಿದ್ದು, ಅವುಗಳಲ್ಲಿ ಹಕ್ಕಿಜ್ವರದ ಲಕ್ಷಣಗಳು ಇರಲಿಲ್ಲ. ಆದ್ದರಿಂದಾಗಿ ಯಾವುದೇ ಪರೀಕ್ಷೆಗೂ ಕಳುಹಿಸುತ್ತಿಲ್ಲ. ಅಲ್ಲದೇ ಕ್ಲಿನಿಕಲ್ ಅಬ್ಸರ್‌ವೇಷನ್ ಹಾಗೂ ಪೋಸ್ಟ್‌ ಮಾರ್ಟಂ ಮಾತ್ರ ಮಾಡಲಾಗುತ್ತದೆ. ಕೋಳಿಫಾರಂ ಮಾಲೀಕರು ಆಳವಾಗಿ ಹೂಳಿದ್ದಾರೆ. ಆದರೆ ಪೂರ್ತಿಯಾಗಿ ಗುಂಡಿ ಮುಚ್ಚದೇ ಇರುವುದರಿಂದ ಸಮಸ್ಯೆಯಾಗಿದೆ’ ಎನ್ನುತ್ತಾರೆ ಭಾಸ್ಕರ್ ನಾಯಕ್.

‘ಫಾರಂನಲ್ಲಿ 80ಸಾವಿರ ಕೋಳಿಗಳು ಇದ್ದು, ಹಕ್ಕಿಜ್ವರ ದೃಢಪಟ್ಟ ಬನ್ನಿಕೋಡ್‌ ಎಪಿಕ್ ಸೆಂಟರ್‌ನಿಂದ 10 ಕಿ.ಮೀ. ವ್ಯಾಪ್ತಿಗೆ ಬರುವುದರಿಂದ ಈ ಫಾರಂನಿಂದ ಕೋಳಿಗಳನ್ನು ಎಲ್ಲಿಗೂ ಸಾಗಿಸುವ ಹಾಗಿಲ್ಲ. ಆದ್ದರಿಂದ ಕೋಳಿಗಳ ನಾಶಕ್ಕೆ ಮುಂದಾಗಿದ್ದಾರೆ. ಕೋಳಿಗಳಲ್ಲಿ ಯಾವುದೇ ಲಕ್ಷಣಗಳು ಇಲ್ಲ. ಅಲ್ಲದೇ ವಾಹನಗಳು ಸಂಚಾರ ಇಲ್ಲದೇ ಇರುವುದರಿಂದ ಪ್ರಯೋಗಾಲಯಕ್ಕೆ ಕಳುಹಿಸಿಲ್ಲ. ಆದರೆ ಅದನ್ನು ಶೇಖರಿಸಿ ಇಡಲಾಗಿದೆ. ವಾರದ ಮುಂಚೆ ಸೀರಂ ಅನ್ನು ಕಳುಹಿಸಲಾಗಿದೆ’ ಎನ್ನುತ್ತಾರೆ ದಾವಣಗೆರೆ ಪಶು ಆಸ್ಪತ್ರೆಯ ಸಹಾಯಕ ನಿರ್ದೇಶಕ ಡಾ.ಜಗದೀಶ್.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು