ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಲೆಲ್ಲ ಥಳಕು; ಒಳಗಿದೆ ಕೊಳಕು- ಒಳ ರಸ್ತೆಗಳ ಗೋಳಿನ ಕಥೆ

ಅಭಿವೃದ್ಧಿ ಕಾಣದ ಒಳ ರಸ್ತೆಗಳು
Last Updated 24 ಸೆಪ್ಟೆಂಬರ್ 2021, 6:09 IST
ಅಕ್ಷರ ಗಾತ್ರ

ದಾವಣಗೆರೆ: ನಗರಕ್ಕೆ ಬಂದ ಹೊರ ಊರಿನವರು ಪಿ.ಬಿ. ರಸ್ತೆಯ ಅಲಂಕಾರಿಕ ಬೀದಿ ದೀಪಗಳು, ವಿಶಾಲವಾದ ಕಾಂಕ್ರೀಟ್‌ ರಸ್ತೆಯನ್ನು ನೋಡಿದಾಗ, ‘ದಾವಣಗೆರೆ ಎಷ್ಟೊಂದು ಬದಲಾಗಿದೆ’ ಎಂದುಕೊಳ್ಳುತ್ತಾರೆ. ಆದರೆ, ಕೆಲ ಒಳ ಬಡಾವಣೆಗಳಿಗೆ ಬರುತ್ತಿದ್ದಂತೆ ಗುಂಡಿ ಬಿದ್ದ, ಕೆಸರು ಗದ್ದೆಯಂತಾದ ರಸ್ತೆಗಳನ್ನು ಕಂಡು ಭ್ರಮನಿರಸನಗೊಳ್ಳುತ್ತಾರೆ. ‘ಮೇಲೆಲ್ಲ ಥಳಕು; ಒಳಗಿದೆ ಕೊಳಕು’ ಎಂಬ ಅರಿವು ಅವರಿಗೂ ಆಗುತ್ತದೆ.

ನಗರದ ಮುಖ್ಯ ರಸ್ತೆಗಳು ಹಾಗೂ ವಾಣಿಜ್ಯ ಕೇಂದ್ರಿತ ಬಡಾವಣೆಗಳ ರಸ್ತೆಗಳು ಕಾಂಕ್ರೀಟ್‌ ಹೊದ್ದುಕೊಂಡು ಮಿರಮಿರನೆ ಹೊಳೆಯುತ್ತಿವೆ. ಆದರೆ, ನಗರದ ಹಲವು ಒಳ ಬಡಾವಣೆಗಳಿಗೆ ಬಂದರೆ ದಶಕಗಳಿಂದಲೂ ಡಾಂಬರು ಕಾಣದ ಕಚ್ಚಾ ರಸ್ತೆಗಳು, ಗುಂಡಿ ಬಿದ್ದ ಡಾಂಬರು ರಸ್ತೆಗಳ ದರ್ಶನವಾಗುತ್ತವೆ.

ಕೆಲವೆಡೆ ಜಲ್ಲಿ ಕಲ್ಲು ಹಾಕಿ ಬಿಡಲಾಗಿದೆ. ಇನ್ನು ಕೆಲವೆಡೆ ದಶಕದ ಹಿಂದೆ ಹಾಕಿದ್ದ ಡಾಂಬರು ರಸ್ತೆಗಳು ಕಿತ್ತು ಹೋಗಿವೆ. ಮಳೆಗಾಲದಲ್ಲಿ ರಸ್ತೆಗಳು ಅಲ್ಲಲ್ಲಿ ಗದ್ದೆಯಂತಾಗಿ ಕೆಸರಿನ ಸಿಂಚನ ಮಾಡಿಸಿದರೆ, ಅವು ಬೇಸಿಗೆಯಲ್ಲಿ ದೂಳಿನ ಮಜ್ಜನ ಮಾಡಿಸುತ್ತಿವೆ.

ಒಳ ಬಡಾವಣೆಗಳ ಕೆಲ ರಸ್ತೆಗಳಿಗೆ ಇತ್ತೀಚಿನ ವರ್ಷಗಳಲ್ಲಿ ‘ಡಾಂಬರು’ ಭಾಗ್ಯ ಸಿಕ್ಕಿವೆ. ಆದರೆ, ಇನ್ನೂ ಹಲವು ರಸ್ತೆಗಳು ಅಭಿವೃದ್ಧಿಗಾಗಿ ಕಾಯುತ್ತಿವೆ. ‘ನಮ್ಮ ರಸ್ತೆಯನ್ನೂ ಅಭಿವೃದ್ಧಿ ಮಾಡಿ’ ಎಂಬ ಕೂಗನ್ನು ಅಧಿಕಾರದಲ್ಲಿರುವವರು ಕೇಳಿಸಿಕೊಳ್ಳುತ್ತಿಲ್ಲ ಎಂಬುದು ಒಳ ಬಡಾವಣೆಗಳ ನಾಗರಿಕರ ಅಳಲು.

ಜಲಸಿರಿ ಯೋಜನೆಯಡಿ ಕುಡಿಯುವ ನೀರಿನ ಪೈಪ್‌ ಅಳವಡಿಕೆ, ಭೂಮಿಯೊಳಗೆ ದೂರವಾಣಿ ಹಾಗೂ ವಿದ್ಯುತ್‌ ಕೇಬಲ್‌ ಹಾಕುವ ಕಾಮಗಾರಿ ಕೈಗೊಂಡ ಪರಿಣಾಮ ಹಲವೆಡೆ ರಸ್ತೆಗಳು ಗುಂಡಿ ಬಿದ್ದಿವೆ. ಕಾಮಗಾರಿ ಮುಗಿದ ಬಳಿಕ ಕಾಟಾಚಾರಕ್ಕೆ ಎಂಬಂತೆ ಮುಚ್ಚಿದ್ದ ಗುಂಡಿಗಳು ಅಲ್ಲಲ್ಲಿ ಮತ್ತೆ ಬಾಯ್ತೆರೆದಿವೆ. ತಗ್ಗು–ದಿನ್ನೆಯ ರಸ್ತೆಗಳಲ್ಲೇ ಸಂಚರಿಸುವ ನಾಗರಿಕರು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ಶಪಿಸುತ್ತಿದ್ದಾರೆ.

ಸಿಗದ ಸ್ಪಂದನ: ಸರಸ್ವತಿ ನಗರದ ‘ಬಿ’ ಬ್ಲಾಕ್‌ನ 1ನೇ ಮುಖ್ಯ ರಸ್ತೆಯು ಹಲವು ವರ್ಷಗಳಿಂದ ಅಭಿವೃದ್ಧಿಗಾಗಿ ಕಾಯುತ್ತಿದೆ. ಈ ರಸ್ತೆಯಲ್ಲಿ 4ನೇ ಕ್ರಾಸ್‌ ಬಳಿ ಹಲವೆಡೆ ಗುಂಡಿಗಳು ಬಿದ್ದಿವೆ. ಮಳೆ ಬಂದಾಗ ಪುಟ್ಟ ಪುಟ್ಟ ಕೆರೆಗಳು ನಿರ್ಮಾಣವಾಗುತ್ತವೆ. ರಸ್ತೆ ಪಕ್ಕದ ಮನೆಯವರಿಗೆ ವಾಹನವನ್ನೂ ನಿಲ್ಲಿಸಲಾಗುತ್ತಿಲ್ಲ. ಯಾವುದಾದರೂ ದೊಡ್ಡ ವಾಹನ ಹೋದರೆ ಕೆಸರು ನೀರು ಮನೆಯ ಗೇಟ್‌ವರೆಗೂ ಸಿಡಿಯುತ್ತಿದೆ. ಪಾಲಿಕೆ ಸದಸ್ಯರಿಗೆ ಹಲವು ಬಾರಿ ಈ ರಸ್ತೆಯನ್ನು ದುರಸ್ತಿ ಮಾಡಿಸುವಂತೆ ಹೇಳಿದರೂ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರ ಅಳಲು ತೋಡಿಕೊಳ್ಳುತ್ತಾರೆ.

‘ಜಯನಗರ ‘ಬಿ’ ಬ್ಲಾಕ್‌ನ ಕೆಲ ಒಳ ರಸ್ತೆಗಳು ಇನ್ನೂ ಡಾಂಬರು ಕಂಡಿಲ್ಲ. ಎಸ್‌.ಎಸ್‌. ಮಾರ್ಟ್‌ನ ಎದುರಿಗೆ ಮನೆ ಕಟ್ಟಿಕೊಂಡು 2008ರಿಂದಲೇ ವಾಸಿಸುತ್ತಿದ್ದೇವೆ. ಬರೀ ಜಲ್ಲಿಕಲ್ಲು ಹಾಕಿ ಹಲವು ವರ್ಷಗಳಿಂದ ಹಾಗೆಯೇ ಬಿಟ್ಟಿದ್ದಾರೆ. ಎರಡು ಬಾರಿ ಮನವಿ ಸಲ್ಲಿಸಿದ್ದರೂ ಡಾಂಬರು ಹಾಕಿಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಸ್ಥಳೀಯ ನಿವಾಸಿಯಾದ ಶಿಕ್ಷಕರೊಬ್ಬರು.

ಸರಸ್ವತಿನಗರದ ವಾಟರ್‌ ಟ್ಯಾಂಕ್‌ನಿಂದ ಕಾಳಿದಾಸ ವೃತ್ತವನ್ನು ಸಂಪರ್ಕಿಸುವ ಜಯನಗರ ‘ಎ’ ಬ್ಲಾಕ್‌ನ ಮುಖ್ಯ ರಸ್ತೆಯಲ್ಲಿ ಹಲವು ಗುಂಡಿಗಳು ಬಿದ್ದಿದ್ದು, ಸ್ಥಳೀಯ ವಾಹನ ಸವಾರರು ದಿನಾಲೂ ಸಂಚರಿಸಲು ಪರದಾಡುವಂತಾಗಿದೆ. ಜಯನಗರ ‘ಸಿ’ ಬ್ಲಾಕ್‌ನ 1ನೇ ಮುಖ್ಯ ರಸ್ತೆಯಲ್ಲೂ ಗುಂಡಿಗಳು ಬಿದ್ದಿದ್ದು, ದುರಸ್ತಿಗಾಗಿ ಕಾಯುತ್ತಿದೆ. ಎಸ್‌.ಎಸ್‌. ಆಸ್ಪತ್ರೆಯ ರಸ್ತೆಯಿಂದ ಶಕ್ತಿನಗರವನ್ನು ಸಂಪರ್ಕಿಸುವ ಮುಖ್ಯ ರಸ್ತೆಯ ನಡುವೆಯೂ ಗುಂಡಿಗಳು ಬಿದ್ದಿವೆ. ರಾಜೇಂದ್ರ ಬಡಾವಣೆ ರಸ್ತೆಗಳಿಗೂ ಅಭಿವೃದ್ಧಿ ಭಾಗ್ಯ ಸಿಕ್ಕಿಲ್ಲ.

ಡಿಸಿಎಂ ‘ಸಿ’ ಬ್ಲಾಕ್‌ಗಿಲ್ಲ ಅಭಿವೃದ್ಧಿ ಭಾಗ್ಯ: ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾಗಿರುವ ಡಿಸಿಎಂ ಬಡಾವಣೆಯ ‘ಸಿ’ ಬ್ಲಾಕ್‌ನಲ್ಲಿ ಯಾವುದೇ ರಸ್ತೆಯೂ ಇನ್ನೂ ಡಾಂಬರು ಭಾಗ್ಯವನ್ನು ಕಂಡಿಲ್ಲ. ದಶಕದ ಹಿಂದೆಯೇ ಮನೆ ಕಟ್ಟಿಕೊಂಡವರು ಕಚ್ಚಾ ರಸ್ತೆಯಲ್ಲೇ ಸಂಚರಿಸುತ್ತಿದ್ದಾರೆ. ಡಿಸಿಎಂ ಪಾರ್ಕ್‌ ಪಕ್ಕದ ಹಲವು ಒಳ ರಸ್ತೆಗಳ ಅಭಿವೃದ್ಧಿಗೂ ಕಾಲ ಕೂಡಿ ಬಂದಿಲ್ಲ.

‘ಡಿಸಿಎಂ ‘ಬಿ’ ಬ್ಲಾಕ್‌ನ 6ನೇ ಮುಖ್ಯ ರಸ್ತೆಯಲ್ಲಿ ಗುಂಡಿಗಳು ಬಿದ್ದಿದ್ದು, ಒಂದು ಬಾರಿ ಮಳೆ ಬಂದರೆ ಈ ರಸ್ತೆ 15 ದಿನ ಕೆರೆಯಂತಾಗಿರುತ್ತದೆ. ಸಂಬಂಧಿಕರು, ಸ್ನೇಹಿತರು ಇಂತಹ ಜಾಗದಲ್ಲಿದ್ದೀರಲ್ಲ ಎಂದು ಚುಚ್ಚು ಮಾತುಗಳನ್ನಾಡುತ್ತಾರೆ. ನಮ್ಮ ನಂತರ ಬಂದ ಶಕ್ತಿನಗರ, ಸರಸ್ವತಿ ಬಡಾವಣೆಗಳಲ್ಲಿ ರಸ್ತೆ ಮಾಡಲಾಗಿದೆ. ಆದಷ್ಟು ಬೇಗನೆ ಈ ರಸ್ತೆಯನ್ನೂ ಸರಿ ಮಾಡಿಕೊಡಬೇಕು’ ಎಂದು ಮನವಿ ಮಾಡುತ್ತಾರೆ ಸ್ಥಳೀಯರಾದ ರೈಲ್ವೆ ನಿವೃತ್ತ ನೌಕರ ಅಲ್ಲಾಬಕ್ಷಿ.

ರಜಾವುಲ್ಲಾ ಮುಸ್ತಫಾ ನಗರದ ಮದರಸಾ ಎದುರಿನ 2ನೇ ಮುಖ್ಯ ರಸ್ತೆಯ ಸಿಮೆಂಟ್‌ ರಸ್ತೆ ಕಿತ್ತು ಹೋಗಿ, ಸರಳುಗಳು ಮೇಲಕ್ಕೆ ಎದ್ದು ಬಂದಿವೆ. ಎದ್ದು ಬಂದಿರುವ ಸರಳುಗಳ ಮೇಲೆಯೇ ದಿನಾಲೂ ನೂರಾರು ವಾಹನಗಳು ಸಂಚರಿಸುತ್ತಿವೆ. ಇದೇ ರಸ್ತೆಯಲ್ಲಿ ಮಕ್ಕಳು ಸಹ ಸಂಚರಿಸುತ್ತಿದ್ದು, ಅಪಾಯಕಾರಿಯಾಗಿದೆ. ಮುಸ್ತಫಾ ನಗರದ 2ನೇ ಮುಖ್ಯ ರಸ್ತೆಯ 7ನೇ ಕ್ರಾಸ್‌ನಿಂದ 1ನೇ ಕ್ರಾಸ್‌ವರೆಗೂ ಕಚ್ಚಾ ರಸ್ತೆಯಿದ್ದು, ಅಭಿವೃದ್ಧಿಗೆ ಇನ್ನೂ ಕಾಲ ಕೂಡಿ ಬಂದಿಲ್ಲ.

ಆರ್‌ಟಿಒ ಸಮೀಪದ ವಿಜಯನಗರ ಬಡಾವಣೆಯ 1ನೇ ಕ್ರಾಸ್‌ನಿಂದ 3ನೇ ಕ್ರಾಸ್‌ವರೆಗೆ ಹಾಗೂ ವಿನಾಯಕ ನಗರದ ‘ಸಿ’ ಬ್ಲಾಕ್‌ನಲ್ಲಿ 1, 2 ಹಾಗೂ 3ನೇ ಮುಖ್ಯ ರಸ್ತೆಗಳು ಅಭಿವೃದ್ಧಿಗಾಗಿ ಕಾಯುತ್ತಿವೆ. ಎಸ್‌.ಎಸ್‌. ಬಡಾವಣೆಯ ‘ಬಿ’ ಬ್ಲಾಕ್‌ ಹಾಗೂ ಬಾಲಾಜಿ ನಗರದಲ್ಲೂ ಕೆಲವು ಕಚ್ಚಾ ರಸ್ತೆಗಳಿವೆ. ಇನ್ನು ನಗರದ ಹೊರವಲಯದಲ್ಲಿರುವ ಹೊಸ ಬಡಾವಣೆಗಳಲ್ಲಿನ ರಸ್ತೆಗಳ ಸ್ಥಿತಿಯಂತೂ ಹೇಳತೀರದಾಗಿದೆ.

ವಿಶೇಷ ಅನುದಾನದಲ್ಲಿ ಒಳ ರಸ್ತೆಗೆ ಆದ್ಯತೆ

‘ದಾವಣಗೆರೆಯಲ್ಲಿ ಪ್ರಮುಖ ರಸ್ತೆಗಳು ಚೆನ್ನಾಗಿವೆ. ಮುಂದಿನ ದಿನಗಳಲ್ಲಿ ಬಡಾವಣೆಯ ಒಳಗಿನ ರಸ್ತೆಗಳನ್ನು ಅಭಿವೃದ್ಧಿ ಮಾಡುವ ಅವಶ್ಯಕತೆ ಇದೆ. ಮುಖ್ಯಮಂತ್ರಿಗಳ ₹ 125 ಕೋಟಿ ವಿಶೇಷ ಅನುದಾನದಲ್ಲಿ ಒಳ ರಸ್ತೆಗಳನ್ನೂ ತೆಗೆದುಕೊಂಡಿದ್ದೇವೆ’ ಎಂದು ಮೇಯರ್‌ ಎಸ್‌.ಟಿ. ವೀರೇಶ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಡಿಸಿಎಂ ‘ಸಿ’ ಬ್ಲಾಕ್‌ನ ಎಲ್ಲಾ ರಸ್ತೆಗಳ ಅಭಿವೃದ್ಧಿ ಕಾಮಗಾರಿಯನ್ನೂ ಕೈಗೆತ್ತಿಕೊಳ್ಳುತ್ತಿದ್ದೇವೆ. ಶಕ್ತಿನಗರ– ರಾಜೇಂದ್ರ ಬಡಾವಣೆಗೆ ಹೋಗುವ ರಸ್ತೆಯನ್ನೂ ಧೂಡಾ ಅನುದಾನದಲ್ಲಿ ಅಭಿವೃದ್ಧಿಪಡಿಸುತ್ತೇವೆ’ ಎಂದು ಹೇಳಿದರು.

‘ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿ 79 ಕಿ.ಮೀ. ಒಳ ರಸ್ತೆಗಳು ಹಾಗೂ ಚರಂಡಿಗಳನ್ನು ಅಭಿವೃದ್ಧಿಪಡಿಸುತ್ತೇವೆ. ಜೊತೆಗೆ 15ನೇ ಹಣಕಾಸು ಯೋಜನೆಯಲ್ಲೂ ರಸ್ತೆ ಕಾಮಗಾರಿಗಳನ್ನು ಆದ್ಯತೆ ಮೇಲೆ ಮಾಡುತ್ತಿದ್ದೇವೆ. ತೀರಾ ಅನಿವಾರ್ಯ ಬಿದ್ದರೆ ಸಾಮಾನ್ಯ ಅನುದಾನದಲ್ಲೂ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ. ಯುಜಿಡಿ ಹಾಗೂ ಚರಂಡಿಗೆ ಪ್ರಥಮ ಆದ್ಯತೆ ನೀಡುತ್ತಿದ್ದೇವೆ. ಆ ಕೆಲಸ ಮುಗಿದ ಬಳಿಕ ರಸ್ತೆ ಅಭಿವೃದ್ಧಿ ಮಾಡುತ್ತೇವೆ’ ಎಂದು ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಮಾಹಿತಿ ನೀಡಿದರು.

‘ನಗರದ ಶೇ 50ರಷ್ಟು ಒಳ ರಸ್ತೆಗಳು ಇನ್ನೂ ಅಭಿವೃದ್ಧಿಯಾಗಿಲ್ಲ. ಆದ್ಯತೆ ಮೇಲೆ ಒಂದೆರಡು ವರ್ಷಗಳಲ್ಲಿ ಅವುಗಳನ್ನೂ ಅಭಿವೃದ್ಧಿಪಡಿಸುತ್ತೇವೆ’ ಎಂದರು.

*

ಇವರು ಏನಂತಾರೆ?

ಸರಸ್ವತಿ ಬಡಾವಣೆಯ ‘ಬಿ’ ಬ್ಲಾಕ್‌ನ 1ನೇ ಮುಖ್ಯ ರಸ್ತೆಯನ್ನು ಎಂಟು ವರ್ಷಗಳಿಂದ ದುರಸ್ತಿಗೊಳಿಸಿಲ್ಲ. ಅಕ್ಕಪಕ್ಕದ ರಸ್ತೆಗಳಿಗೆಲ್ಲ ಡಾಂಬರು ಹಾಕಲಾಗಿದೆ. ರಸ್ತೆ ದುರಸ್ತಿ ಮಾಡಿಸುವಂತೆ ಪಾಲಿಕೆ ಸದಸ್ಯರಿಗೆ ಮನವಿ ಮಾಡಿದಾಗಲೆಲ್ಲ, 15 ದಿನಗಳಲ್ಲಿ ಮಾಡಿಸುತ್ತೇವೆ ಎನ್ನುತ್ತಾರೆ. ಇದುವರೆಗೂ ಭರವಸೆ ಈಡೇರಿಲ್ಲ. ಮಳೆಗಾಲದಲ್ಲಿ ದೊಡ್ಡ ವಾಹನಗಳು ಹೋದಾಗ ನಮ್ಮ ಅಂಗಡಿಗಳಿಗೆಲ್ಲ ಕೆಸರು ನೀರು ಸಿಡಿಯುತ್ತಿದೆ.

– ತೇಜಸ್‌, ಅಕ್ಷಯ ಮೆನ್ಸ್‌ವೇರ್‌ ಅಂಗಡಿ ಮಾಲೀಕ, ಸರಸ್ವತಿನಗರ

*

ಇವತ್ತು ಹಳ್ಳಿಗಳಲ್ಲೆಲ್ಲ ಸಿಮೆಂಟ್‌ ರಸ್ತೆಗಳಾಗುತ್ತಿವೆ. ಆದರೆ, ನಮ್ಮ ಡಿಸಿಎಂ ಟೌನ್‌ಷಿಪ್‌ನ ‘ಬಿ’ ಬ್ಲಾಕ್‌ನ 6ನೇ ಮುಖ್ಯ ರಸ್ತೆಯ 3ನೇ ಕ್ರಾಸ್‌ನಲ್ಲಿ ಡಾಂಬರು ರಸ್ತೆಯನ್ನು ಸಹ ಮಾಡಿಲ್ಲ. ಮೇಯರ್‌ ಗಮನಕ್ಕೆ ಹಲವು ಬಾರಿ ತಂದಿದ್ದೇವೆ. ಅವರೂ ಸ್ಥಳ ಪರಿಶೀಲಿಸಿ, ಕಳೆದ ಬೇಸಿಗೆಯಲ್ಲೇ ರಸ್ತೆ ಮಾಡಿಕೊಡುತ್ತೇವೆ ಹೇಳಿದ್ದರು. ಮಳೆಗಾಲ ಬಂದರೂ ರಸ್ತೆ ಅಭಿವೃದ್ಧಿ ಕೆಲಸ ಮಾಡಿಲ್ಲ.

– ಎಂ. ಚಂದ್ರಶೇಖರಯ್ಯ, ಡಿಸಿಎಂ ‘ಬಿ’ ಬ್ಲಾಕ್‌ ನಿವಾಸಿ

*

ನಮ್ಮ ಈ ರಸ್ತೆಯಲ್ಲಿ ತಗ್ಗು–ದಿನ್ನೆಗಳೇ ಐತಿ. ಬೀಳೋದು, ಏಳೋದೋ ಆಗೈತಿ. ಹೀಗಾಗಿ ಒಂದು ವರ್ಷದಿಂದ ನಮ್ಮ ಮಕ್ಕಳನ್ನು ರಸ್ತೆಗೆ ಬಿಡುತ್ತಿಲ್ಲ. ಇಲ್ಲಿ ಓಡಾಡುವುದು ಬಹಳ ತೊಂದರೆ ಆಗೈತಿ. ದಯವಿಟ್ಟು ನಮ್ಮ ರಸ್ತೆಯನ್ನು ಸರಿ ಮಾಡಿಸಿಕೊಡ್ರೀ

– ಹಾಲಮ್ಮ, ಡಿಸಿಎಂ ‘ಬಿ’ ಬ್ಲಾಕ್‌ ನಿವಾಸಿ

*

ರಜಾವುಲ್ಲಾ ಮುಸ್ತಫಾ ನಗರದ ಮದರಸಾ ಎದುರಿನ 2ನೇ ಮುಖ್ಯ ರಸ್ತೆ ಕಿತ್ತು ಹೋಗಿದ್ದು, ಸರಳುಗಳು ಮೇಲಕ್ಕೆ ಎದ್ದು ಬಂದಿವೆ. ವಾಹನಗಳ ಟೈರ್‌ ಪಂಚರ್‌ ಆಗುತ್ತಿವೆ. ಕೆಲವರು ಬಿದ್ದು ಗಾಯವನ್ನೂ ಮಾಡಿಕೊಂಡಿದ್ದಾರೆ. ರಸ್ತೆಯನ್ನು ಕೂಡಲೇ ದುರಸ್ತಿಗೊಳಿಸಬೇಕು.

– ಮರ್ದಾನ್‌ ಸಾಬ್‌, ರಜಾವುಲ್ಲಾ ಮುಸ್ತಫಾ ನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT