ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನಸಿ ವ್ಯಾಪಾರಿಗಳಿಗೂ ಜಿಲ್ಲಾಡಳಿತದಿಂದ ಪಾಸ್

ದಿನಸಿ, ತರಕಾರಿ, ಹಾಲು, ಹಣ್ಣು ವರ್ತಕರ ಸಭೆ
Last Updated 26 ಮಾರ್ಚ್ 2020, 16:28 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ಸೋಂಕು ತಡೆಗಾಗಿ ಲಾಕ್‌ಡೌನ್‌ ಮಾಡಲಾಗಿರುವುದರಿಂದ ಅಗತ್ಯ ಸೇವೆಗೆಳಿಗೆ ತೊಂದರೆಯಾಗಬಾರದು. ಹಾಗಾಗಿ ದಿನಸಿ ಅಂಗಡಿಯ ಸಿಬ್ಬಂದಿಯೂ ಸೇರಿ ಅಗತ್ಯ ಇರುವವರಿಗೆ ಪಾಸ್‌ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ದಿನಸಿ, ತರಕಾರಿ, ಹಣ್ಣು ವ್ಯಾಪಾರಿಗಳು ಮತ್ತು ಹಾಲು ಮಾರಾಟಗಾರರಿಗೆ ಅಗತ್ಯ ವಸ್ತು ಪೂರೈಸಲು ವಹಿಸಬೇಕಾದ ಕ್ರಮಗಳ ಬಗ್ಗೆ ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೊಜಿಸಲಾಗಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ಖಾಸಗಿ ಸೆಕ್ಯೂರಿಟಿ ಗಾರ್ಡ್ಸ್, ಪೆಟ್ರೋಲ್, ಗ್ಯಾಸ್, ಗ್ಯಾಸ್ ಸಿಲೆಂಡರ್ ವಿತರಕರು, ಬ್ಯಾಂಕ್, ಎ.ಟಿಎಂ, ವಿಮಾ ಕಂಪನಿಯ ಸಿಬ್ಬಂದಿ, ಆನ್‌ಲೈನ್ ಫುಡ್ ಡೆಲಿವರಿ ಹಾಗೂ ಆನ್‌ಲೈನ್ ಮೂಲಕ ಔಷಧ ಪೂರೈಸುವ ಸಿಬ್ಬಂದಿ, ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಂತಹ ಇ-ವಾಣಿಜ್ಯಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ, ಮಾಧ್ಯಮದವರು, ದಿನಸಿ ಅಂಗಡಿಗಳು, ಡೈರಿ, ಮಾಂಸ ಮತ್ತು ಮೀನು ಮಾರಾಟಗಾರರು, ಆಸ್ಪತ್ರೆಯಲ್ಲಿರುವ ಸಿಬ್ಬಂದಿ, ಐಟಿ ಕಂಪನಿ ಉದ್ಯೋಗಿಗಳು, ಬೆಸ್ಕಾಂ ಸಿಬ್ಬಂದಿಗಳು, ಬಂಡವಾಳ ಮತ್ತು ಸಾಲ ಮಾರುಕಟ್ಟೆಗಳು, ಕೋಲ್ಡ್ ಸ್ಟೋರೆಜ್ ಹಾಗೂ ವೇರ್ ಹೌಸಿಂಗ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗೆ ಪಾಸ್‌ ನೀಡಲಾಗುವುದು ಎಂದರು.

ಸರ್ಕಾರಿ ಮತ್ತು ಖಾಸಗಿ ಹಾಸ್ಪಿಟಲ್, ಔಷಧ ಅಂಗಡಿಗಳು, ಲ್ಯಾಬೊರೇಟರ್, ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್, ಆಂಬುಲೆನ್ಸ್‌ಗಳು ಕಾರ್ಯ ನಿರ್ವಹಿಸಬೇಕು. ಮೆಡಿಕಲ್ ಸಾಮಗ್ರಿಗಳ ಸರಬರಾಜು ಮತ್ತು ಆಸ್ಪತ್ರೆ ಮತ್ತು ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ಕೆಲಸ ಮಾಡುವ ಸಿಬ್ಬಂದಿನಿತ್ಯ ಓಡಾಟಕ್ಕೆ ಪಾಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.

ವಾಣಿಜ್ಯ ಮತ್ತು ಖಾಸಗಿ ವ್ಯವಹಾರ ನಡೆಸುವ ಸಂಸ್ಥೆಗಳನ್ನು ಸಂಪೂರ್ಣ ಬಂದ್ ಮಾಡಬೇಕು. ಆಹಾರ ಸಾಮಗ್ರಿ, ಕಿರಾಣಿ ಅಂಗಡಿ, ಕಾಳು ಪದಾರ್ಥಗಳು, ಹಾಲು, ಹಣ್ಣು, ಮತ್ತು ಪಶು ಆಹಾರದ ಅಂಗಡಿಗಳನ್ನು ದಿನದ 24 ಗಂಟೆಯೂ ತೆರೆಯಲು ಅವಕಾಶ ನೀಡಲಾಗಿದೆ. ನಿತ್ಯದ ಬಳಕೆಯ ಬಿಸ್ಕೆಟ್, ಬ್ರೆಡ್ ಫ್ಯಾಕ್ಟರಿ ತೆರೆಯಬಹುದು. ಬೇಕರಿಗಳು ಅಗತ್ಯ ವಸ್ತು ಬಿಟ್ಟು ಬೇರೆ ಅನಗತ್ಯ ವಸ್ತು ಮಾರಾಟ ಮಾಡಬಾರದು. ಅನಗತ್ಯ ಕೈಗಾರಿಕಾ ಸಂಸ್ಥೆಗಳನ್ನು ತೆರೆಯುವಂತಿಲ್ಲ ಎಂದು ಸೂಚನೆ ನೀಡಿದರು.

ಸಿಬ್ಬಂದಿ ಇಲ್ಲ ಎಂದು ಹೋಟೆಲ್‌ ಬಂದ್‌ ಮಾಡಬಾರದು. 10 ಮಂದಿ ಸಿಬ್ಬಂದಿ ಇರುವಲ್ಲಿ ಇಬ್ಬರು ಇದ್ದರೂ ಹಸಿವೆ ನೀಗಿಸುವ ಒಂದೆರಡು ತಿನಿಸು ತಯಾರು ಮಾಡಬೇಕು. ಅದನ್ನು ಪಾರ್ಸೆಲ್‌ ಕೊಡಬೇಕು ಎಂದು ಸೂಚಿಸಿದರು.

ಯಾವುದೇ ಧರ್ಮದ ಪ್ರಾರ್ಥನಾ ಮಂದಿರಗಳು ತೆರೆದಿರಬಾರದು. ಸಾಮೂಹಿಕ ಪ್ರಾರ್ಥನೆ, ಜಾತ್ರೆಗಳನ್ನು ನಡೆಸುವಂತಿಲ್ಲ. ಅಂತ್ಯಕ್ರಿಯೆಯಲ್ಲಿ 20ಕ್ಕಿಂತ ಹೆಚ್ಚು ಜನ ಭಾಗವಹಿಸಬಾರದು ಎಂದರು.

ಜಿಲ್ಲೆಯ ಎಲ್ಲಾ ಸಣ್ಣ-ಪುಟ್ಟ ಅಂಗಡಿಯ ವ್ಯಾಪಾರಿಗಳು ಜಿಲ್ಲಾ ಕೇಂದ್ರಕ್ಕೆ ಬಂದು ಕಿರಾಣಿ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಬಹುದು. ಎಪಿಎಂಸಿ ಮತ್ತು ಹೋಲ್‌ಸೆಲ್ ಕಿರಾಣಿ ಅಂಗಡಿಗಳು, ಮೆಡಿಕಲ್ ಶಾಪ್‌ಗಳು ಪ್ರತಿದಿನ ತೆರೆದಿಡಬೇಕು ಎಂದು ತಿಳಿಸಿದರು.

ಕ್ವಾರೆಂಟನ್‌ಗೆ ಆದೇಶಿಸಿದ್ದರೂ ಮನೆಯಲ್ಲಿ ಇರದೇ ಹೊರಗೆ ಬಂದರೆ ಅಂತಹವರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು. ಈ ಎಲ್ಲಾ ಆದೇಶಗಳನ್ನು ನೋಡಿಕೊಳ್ಳಲು ಉಪವಿಭಾಗಧಿಕಾರಿ, ತಹಶೀಲ್ದಾರರು ಮತ್ತು ದಂಡಾಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.

‘ಜೀವ ಉಳಿದರೆ ಜೀವನ. ಹಾಗಾಗಿ ಕಾನೂನು ಪಾಲನೆ ಮಾಡಬೇಕು. ಹೋಟೆಲ್‌ಗಳಲ್ಲಿ ಇರುವ ಸಿಬ್ಬಂದಿಯಿಂದ ಅಗತ್ಯ ತಿನಿಸು ತಯಾರಿಸಲಾಗುವುದು’ ಎಂದು ಮೇಯರ್ ಅಜಯ್‌ಕುಮಾರ್ ಭರವಸೆ ನೀಡಿದರು.

ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಮಂಟೇಸ್ವಾಮಿ, ಎಎಸ್‌ಪಿ ಎಂ. ರಾಜೀವ್, ಆರ್‌ಟಿಒ ಎನ್.ಜೆ. ಬಣಕಾರ್ ಅವರೂ ಇದ್ದರು.

ಸುಳ್ಳು ಸುದ್ದಿ ಹರಡಿದರೆ ಕ್ರಮ: ಎಸ್‌ಪಿ

ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ವಸ್ತುಗಳನ್ನು ನೀಡಬೇಕಾದ ಅಂಗಡಿಗಳು ಬಾಗಿಲು ಹಾಕಿದ್ದರೆ ಬಾಗಿಲು ತೆಗೆಸಲಾಗುವುದು. ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಎಲ್ಲ ಅಂಗಡಿಗಳಲ್ಲಿ ವ್ಯವಸ್ಥೆ ಮಾಡಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಧಿಕಾರಿ ಹನುಮಂತರಾಯ ತಿಳಿಸಿದರು.

ಅಗತ್ಯ ವಸ್ತುಗಳನ್ನು ಸಾಗಿಸುವ ವಾಹನಗಳಿಗೆ ತೊಂದರೆಯಾದರೆ ಸಂಪರ್ಕಿಸಿ. ಯುವಕರು ಅನಗತ್ಯವಾಗಿ ಬಂದು ಬಳಿಕ ಪೊಲೀಸ್‌ ಇಲಾಖೆಯನ್ನು ದೂರಬೇಡಿ. ಕಾನೂನು ಪಾಲನೆ ಮಾಡಿ ಎಂದು ಸಲಹೆ ನೀಡಿದರು.

ತಳ್ಳುಗಾಡಿ ವ್ಯವಸ್ಥೆ

ತರಕಾರಿ, ಇನ್ನಿತರ ಅಂಗಡಿಗಳಲ್ಲಿ ಜನಸಂದಣಿ ಉಂಟಾಗುವುದನ್ನು ತಪ್ಪಿಸಲು ಪ್ರತಿ ವಾರ್ಡ್‌ಗೆ ತಳ್ಳುಗಾಡಿಗಳ ವ್ಯವಸ್ಥೆ ಮಾಡಬೇಕು. ಮನೆಮುಂದೆಯೇ ತಳ್ಳುಗಾಡಿಗಳು ಬಂದಾಗ ಜನ ಅಂಗಡಿಗಗಳಿಗೆ ಬರುವುದು ತಪ್ಪುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಹಣ ಕಟ್ಟಿಸಬೇಡಿ: ಸ್ತ್ರೀ ಶಕ್ತಿ ಸಂಘ, ಧರ್ಮಸ್ಥಳ ಸೇರಿದಂತೆ ಅನೇಕ ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಮೂರು ವಾರ ಹಣ ಕಟ್ಟಿಸಿಕೊಳ್ಳಬಾರದು. ಕಟ್ಟಿಸಿಕೊಂಡರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

‘ಮಾಂಸದಂಗಡಿ ತೆರೆಯಲು ಅವಕಾಶ’

ಮಾಂಸದಂಗಡಿಗಳನ್ನು ತೆರೆಯಲು ಸರ್ಕಾರ ಅವಕಾಶ ನೀಡಿದೆ. ಜಿಲ್ಲೆಯಲ್ಲಿ ಹಕ್ಕಿಜ್ವರದ ಭೀತಿ ಇರುವುದರಿಂದ ಕೋಳಿ ಮಾಂಸ ಮತ್ತು ಮೊಟ್ಟೆ ಮಾರಾಟವನ್ನು ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT