ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಸೌಹಾರ್ದ ಸಭೆಯಲ್ಲಿ ಶಾಂತಿಮಂತ್ರ ಜಪ

ಸೌಹಾರ್ದ ಕಾಪಾಡಿ: ಹಿಂದೂ–ಮುಸ್ಲಿಂ ಮುಖಂಡರಿಗೆ ಪೊಲೀಸರ ಪ್ರಾರ್ಥನೆ
Last Updated 1 ಸೆಪ್ಟೆಂಬರ್ 2018, 17:12 IST
ಅಕ್ಷರ ಗಾತ್ರ

ದಾವಣಗೆರೆ: ಸೌಹಾರ್ದಕ್ಕೆ ದಾವಣಗೆರೆ ನಗರ ಹೆಸರಾಗಿದೆ; ಇದು ಹೀಗೆ ಮುಂದುವರಿಯಬೇಕು. ಹಿಂದೂಗಳ ಹಬ್ಬದಲ್ಲಿ ಮುಸ್ಲಿಮರು, ಮುಸಲ್ಮಾನರ ಹಬ್ಬದಲ್ಲಿ ಹಿಂದೂ ಧರ್ಮಿಯರು ಭಾಗವಹಿಸೋಣ. ಸಿಹಿ ತಿಂದು ಸಂಭ್ರಮಿಸೋಣ...

–ಹೀಗೆ ಹಿಂದೂ–ಮುಸ್ಲಿಂ ಮುಖಂಡರು ಶಾಂತಿ ಮಂತ್ರ ಪಠಿಸಿದರು.

ಇಲ್ಲಿನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಯಲ್ಲಿ ಶನಿವಾರ ಗೌರಿ–ಗಣೇಶ ಹಾಗೂ ಮೊಹರಂ ಹಬ್ಬದ ಹಿನ್ನೆಲೆಯಲ್ಲಿ ಏರ್ಪಡಿಸಿದ್ದ ಸೌಹಾರ್ದ ಸಭೆಯಲ್ಲಿ ಮುಖಂಡರು ನಗರದ ಶಾಂತಿ ಕಾಪಾಡುವ ಸಂಕಲ್ಪ ಮಾಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಮಾತನಾಡಿ, ‘ಮೊಹರಂನಲ್ಲಿ ಹಿಂದೂಗಳು, ಗಣೇಶ ಚತುರ್ಥಿಯಲ್ಲಿ ಮುಸ್ಲಿಮರು ಭಾಗವಹಿಸಬೇಕು. ಹಬ್ಬದ ಆಚರಣೆಗಳನ್ನು ತಮ್ಮ ಮಕ್ಕಳಿಗೆ ತೋರಿಸಬೇಕು. ಇದರಿಂದ ಬಾಲ್ಯದಲ್ಲಿಯೇ ಮಕ್ಕಳಿಗೆ ಸೌಹಾರ್ದ ಮನೋಭಾವ ಬೆಳೆಯುತ್ತದೆ. ಭಾರತೀಯರೆಲ್ಲರೂ ಭಾವನಾತ್ಮಕವಾಗಿ ಒಂದು ಎಂದು ಬ್ರಿಟಿಷರಿಗೆ ತೋರಿಸಲು ತಿಲಕರು, ಗಣೇಶ ಹಬ್ಬದ ಸಾರ್ವಜನಿಕ ಆಚರಣೆ ಆರಂಭಿಸಿದರು. ಈಗ ಗಣೇಶ ಹಬ್ಬದಲ್ಲಿ ಎಲ್ಲರೂ ಭಾಗವಹಿಸಿ ಸೌಹಾರ್ದ ವೃದ್ಧಿಸಬೇಕು’ ಎಂದು ಕರೆ ನೀಡಿದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಆರ್‌. ಚೇತನ್‌ ಮಾತನಾಡಿ, ‘ಜನರು ಹಬ್ಬದ ಸಂಭ್ರಮವನ್ನು ಸವಿಯಬೇಕು ಎಂಬ ಕಾರಣದಿಂದ ಕಾನೂನುಗಳನ್ನು ಜಾರಿಗೆ ತರಲಾಗಿದೆ. ಅವನ್ನು ಎಲ್ಲರೂ ಗೌರವಿಸಬೇಕು. ಇದರಿಂದ ಎಲ್ಲರಿಗೂ ಒಳ್ಳೆಯದಾಗಲಿದೆ. ಕೆಲ ಕಿಡಿಗೇಡಿಗಳಿಂದ ಅಹಿತಕರ ಘಟನೆಗಳು ಸಂಭವಿಸುತ್ತವೆ. ಹೀಗಾಗಿ, ಎಲ್ಲಾ ಧರ್ಮಗಳ, ಸಂಘಟನೆಗಳ ಮುಖಂಡರು ಯುವಕರಿಗೆ ತಿಳಿಹೇಳಬೇಕು. ಅವರನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು. ಇದರಿಂದ ಶಾಂತಿ ಕಾಪಾಡಲು ಸಾಧ್ಯ’ ಎಂದರು.

ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಜೆ. ಉದೇಶ್‌, ಡಿವೈಎಸ್‌ಪಿ ಬಾಬು, ಸಿಪಿಐ ಉಮೇಶ್‌, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಂ.ಎಸ್. ತ್ರಿಪುಲಾಂಭ, ಬೆಸ್ಕಾಂ, ಮಾಲಿನ್ಯ ನಿಯಂತ್ರಣ ಮಂಡಳಿ, ಪಾಲಿಕೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT