ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ: ನಗರ ಸಾರಿಗೆ ವಿಸ್ತರಣೆಗೆ ಬೇಡಿಕೆ

ಹೊಸ ಬಡಾವಣೆಗೆ ಬಸ್‌ ಕೋರಿಕೆ, ರಾತ್ರಿ 10 ಗಂಟೆವರೆಗೂ ಸೇವೆಗೆ ಮನವಿ
Published : 9 ಸೆಪ್ಟೆಂಬರ್ 2024, 5:54 IST
Last Updated : 9 ಸೆಪ್ಟೆಂಬರ್ 2024, 5:54 IST
ಫಾಲೋ ಮಾಡಿ
Comments

ದಾವಣಗೆರೆ: ‘ಸ್ಮಾರ್ಟ್‌ ಸಿಟಿ’ ಹೆಗ್ಗುರುತು ಮುಡಿಗೇರಿಸಿಕೊಂಡಿರುವ ದಾವಣಗೆರೆಯ ಬೆಳವಣಿಗೆಗೆ ಅನುಗುಣವಾಗಿ ‘ನಗರ ಸಾರಿಗೆ ಸೇವೆ’ಯನ್ನು ವಿಸ್ತರಿಸುವಂತೆ ಸಾರ್ವಜನಿಕರು ಬೇಡಿಕೆ ಮುಂದಿಡುತ್ತಿದ್ದಾರೆ. ಬೆಳಿಗ್ಗೆ 6ರಿಂದ ರಾತ್ರಿ 10 ಗಂಟೆ ವರೆಗೂ ಸಿಟಿ ಬಸ್‌ ಸೇವೆ ಒದಗಿಸುವಂತೆ ಕೋರಿಕೊಳ್ಳುತ್ತಿದ್ದಾರೆ.

ರಾಜ್ಯದ 7ನೇ ಅತಿದೊಡ್ಡ ನಗರವಾಗಿರುವ ದಾವಣಗೆರೆ, ಸುಲಲಿತ ಜೀವನ ಸೂಚ್ಯಂಕದಲ್ಲಿ ಪ್ರಮುಖ ಸ್ಥಾನದಲ್ಲಿದೆ. ಆದರೆ, ನಗರ ಸಾರಿಗೆ ಸೇವೆ ಮಾತ್ರ ಸುಲಭವಾಗಿ ಸಾರ್ವಜನಿಕರಿಗೆ ಲಭಿಸುತ್ತಿಲ್ಲ. ಸಮೂಹ ಸಾರಿಗೆ ವ್ಯವಸ್ಥೆ ನಗರದಲ್ಲಿ ಸಮರ್ಪಕ ಜಾಲ ಹೊಂದಿಲ್ಲ. ಟಂಟಂ, ಆಟೊ, ಸರಕು ಸಾಗಣೆ ವಾಹನಗಳ ಮೇಲಿನ ಜನರ ಅವಲಂಬನೆ ಕಡಿಮೆಯಾಗಿಲ್ಲ.

ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 45 ವಾರ್ಡ್‌ಗಳಿವೆ. ವಿಸ್ತರಣೆಯಾಗುತ್ತಿರುವ ನಗರಕ್ಕೆ ಅಕ್ಕಪಕ್ಕದ ಗ್ರಾಮಗಳು ಸೇರ್ಪಡೆಯಾಗುತ್ತಿವೆ. ದಾವಣಗೆರೆ–ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ (ಧೂಡಾ) ನಿರ್ಮಿಸಿದ ಬಡಾವಣೆ, ಖಾಸಗಿ ಬಡಾವಣೆಗಳಲ್ಲಿ ಜನವಸತಿ ಬೆಳೆದಿದೆ. ಆದರೂ ನಗರ ಸಾರಿಗೆ ಬಸ್‌ ಸೇವೆ ಕೆಲವೇ ಭಾಗಕ್ಕೆ ಸೀಮಿತವಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಮತ್ತು ಖಾಸಗಿ ಬಸ್‌ಗಳು ಬೆರಳೆಣಿಕೆಯ ಮಾರ್ಗದಲ್ಲಿ ಮಾತ್ರ ಸಂಚರಿಸುತ್ತಿವೆ.

ದಾವಣಗೆರೆಯಲ್ಲಿ 2000ನೇ ಇಸವಿಯಲ್ಲಿ ನಗರ ಸಾರಿಗೆ ಸಂಚಾರ ಆರಂಭವಾಗಿದೆ. ಖಾಸಗಿ ಬಸ್‌ ಮಾಲೀಕರು ಪರವಾನಗಿ ಪಡೆದು ಸೇವೆ ಒದಗಿಸುತ್ತಿದ್ದರು. ಕೆಲ ವರ್ಷಗಳ ಬಳಿಕ ಇದೇ ಮಾರ್ಗಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಬಸ್‌ಗಳು ಸಂಚರಿಸತೊಡಗಿದವು. 24 ವರ್ಷಗಗಳಲ್ಲಿ ನಗರ ಸಾಕಷ್ಟು ಬೆಳೆದಿದೆ. ಇದಕ್ಕೆ ಅನುಗುಣವಾಗಿ ಹೊಸ ಮಾರ್ಗಗಳಿಗೆ ಪರವಾನಗಿ ಪಡೆದಿಲ್ಲ. ಬೇಡಿಕೆ ಇರುವ ಮಾರ್ಗಗಳನ್ನು ಪರಿಗಣಿಸಿಲ್ಲ ಎಂಬ ಕೊರಗು ಜನರಲ್ಲಿದೆ.

ಶಾಮನೂರು – ಅಕ್ತರ್‌ ವೃತ್ತ, ಶಾಮನೂರು – ಎಸ್‌.ಎಸ್‌.ಹೈಟೆಕ್‌ ಆಸ್ಪತ್ರೆ, ಸರಸ್ವತಿನಗರ – ಹೊಂಡದ ವೃತ್ತ, ಬಿಐಟಿ – ಅರಳಿ ಮರ ಹಾಗೂ ವಿದ್ಯಾನಗರ – ವಿಶ್ವವಿದ್ಯಾಲಯ ಸೇರಿ ಬೆರಳೆಣಿಕೆಯ ಮಾರ್ಗಗಳಲ್ಲಿ ಮಾತ್ರ ನಗರ ಸಾರಿಗೆ ಬಸ್‌ಗಳು ಸಂಚರಿಸುತ್ತಿವೆ. ಕೆಎಸ್‌ಆರ್‌ಟಿಸಿಯ 56 ಹಾಗೂ ಖಾಸಗಿಯ 26 ಬಸ್‌ಗಳು ಇದೇ ಮಾರ್ಗಗಳಲ್ಲಿ ಸೇವೆ ಒದಗಿಸುತ್ತಿವೆ. ಬಾಲಾಜಿ ಬಡಾವಣೆ, ಜೆ.ಎಚ್. ಪಟೇಲ್‌ ಬಡಾವಣೆ, ಹಳೆ ಕುಂದವಾಡ, ಹೊಸಕುಂದವಾಡ, ತುಂಗಭದ್ರಾ ಬಡಾವಣೆ, ಸರ್ಕಾರಿ ನೌಕರರ ಬಡಾವಣೆ, ಹರಿಹರ ರಸ್ತೆ ಸೇರಿ ಹಲವೆಡೆ ನಗರ ಸಾರಿಗೆ ಬಸ್‌ಗೆ ಬೇಡಿಕೆ ಇದೆ.

‘ಹೊಸ ಬಡಾವಣೆಗಳಿಗೆ ಬಸ್ ಸೌಲಭ್ಯಕ್ಕೆ ಕೋರಿಕೆಗಳು ಬಂದಿವೆ. ಹೊಸ ಮಾರ್ಗಗಳಲ್ಲಿ ಹಾಗೂ ಇರುವ ಮಾರ್ಗಗಳಲ್ಲಿ ಹೊಸ ಬಡಾವಣೆಗೆ ವಿಸ್ತರಿಸಲು ಹೆಚ್ಚುವರಿ ಬಸ್‌ಗಳ ಅಗತ್ಯವಿದೆ. 20 ಹೊಸ ಬಸ್‌ಗಳಿಗೆ ಪ್ರಸ್ತಾವ ಸಲ್ಲಿಸಿದ್ದೇವೆ. ಹೆಚ್ಚುವರಿ ಬಸ್‌ಗಳು ಮಂಜೂರಾದರೆ ಮಾತ್ರ ಸೇವೆ ವಿಸ್ತರಣೆ ಸಾಧ್ಯವಿದೆ’ ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಸಿದ್ದೇಶ್ವರ್ ಹೆಬ್ಬಾಳ್.

ಸೇವೆ ಒದಗಿಸುತ್ತಿರುವ ಬಸ್‌ಗಳು ಕೇಂದ್ರ ಸರ್ಕಾರದ ‘ಜೆ–ನರ್ಮ್‌’ ಯೋಜನೆಯಡಿ ನಗರಕ್ಕೆ ಮಂಜೂರಾಗಿದ್ದವು. ನಗರಾಭಿವೃದ್ಧಿ ಯೋಜನೆಯಲ್ಲಿ ಇದೇ ರೀತಿಯ ಸೌಲಭ್ಯ ಸರ್ಕಾರದಿಂದ ದೊರೆಯುವ ನಿರೀಕ್ಷೆ ಸಾರಿಗೆ ಸಂಸ್ಥೆಯದು. ನಗರ ಸಾರಿಗೆಗೆ ಸಂಪೂರ್ಣ ವಿದ್ಯುತ್‌ ಚಾಲಿತ ಬಸ್‌ ಸೌಲಭ್ಯ ಕಲ್ಪಿಸಬೇಕು ಎಂಬ ಆಲೋಚನೆಯೂ ಸರ್ಕಾರಕ್ಕಿದೆ. ಚಾರ್ಜಿಂಗ್‌ ಕೇಂದ್ರ ಸೇರಿ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT