ಶುಕ್ರವಾರ, ಫೆಬ್ರವರಿ 26, 2021
31 °C
ಮೈಸೂರಿನ ಕೃಷ್ಣಕುಮಾರ್‌ರಿಂದ ಮಾತೃ ಸೇವಾ ಸಂಕಲ್ಪ ಯಾತ್ರೆ

ಸ್ಕೂಟರ್‌ನಲ್ಲಿ ಆಧುನಿಕ ಶ್ರವಣಕುಮಾರನ ತೀರ್ಥಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Deccan Herald

ದಾವಣಗೆರೆ: ತ್ರೇತಾಯುಗದಲ್ಲಿ ವೃದ್ಧ ತಂದೆ–ತಾಯಿಯನ್ನು ಕಾವಡಿಯಲ್ಲಿ ಕೂರಿಸಿಕೊಂಡು ತೀರ್ಥಯಾತ್ರೆ ನಡೆಸಿದ ಶ್ರವಣಕುಮಾರನ ಕಥೆಯನ್ನು ನೀವು ಕೇಳಿರಬಹುದು. ಅದೇ ರೀತಿ ಇಲ್ಲೊಬ್ಬರು ತಾಯಿಯನ್ನು ಸ್ಕೂಟರ್‌ನಲ್ಲಿ ಕೂರಿಸಿಕೊಂಡು ದೇಶದ ಹಲವು ರಾಜ್ಯಗಳಿಗೆ ತೆರಳಿ ತೀರ್ಥ ಕ್ಷೇತ್ರಗಳ ದರ್ಶನ ಮಾಡಿಸುವ ಮೂಲಕ ‘ಆಧುನಿಕ ಶ್ರವಣಕುಮಾರ’ ಎಂಬ ಖ್ಯಾತಿಯನ್ನು ಪಡೆಯುತ್ತಿದ್ದಾರೆ.

ಮೈಸೂರಿನ 39 ವರ್ಷದ ಡಿ. ಕೃಷ್ಣಕುಮಾರ್‌ ಅವರು 70 ವರ್ಷದ ತಮ್ಮ ತಾಯಿ ಚೂಡಾರತ್ನ ಅವರನ್ನು ತಮ್ಮ ತಂದೆ ಕೊಡಿಸಿದ ಹಳೆಯ ‘ಬಜಾಜ್‌ ಚೇತಕ್‌’ ಸ್ಕೂಟರ್‌ನಲ್ಲಿ ಕೂರಿಸಿಕೊಂಡು ತೀರ್ಥಯಾತ್ರೆ ಮಾಡಿಸುತ್ತಿದ್ದಾರೆ. ಜನವರಿ 16ರಂದು ಮೈಸೂರಿನಿಂದ ಯಾತ್ರೆ ಆರಂಭಿಸಿರುವ ಇವರು, ಇದುವರೆಗೆ 26 ಸಾವಿರ ಕಿ.ಮೀ ದೂರ ಕ್ರಮಿಸಿದ್ದಾರೆ.

ಭಾನುವಾರ ಸಂಜೆ ದಾವಣಗೆರೆಯ ಬ್ರಾಹ್ಮಣ ಸಮಾಜ ಸೇವಾ ಸಂಘದ ಕಚೇರಿಗೆ ಬಂದು ತಂಗಿದ ಕೃಷ್ಣಕುಮಾರ್‌ ಅವರು ‘ಪ್ರಜಾವಾಣಿ’ ಜೊತೆ ತಮ್ಮ ತೀರ್ಥಯಾತ್ರೆಯ ಕಥೆಯನ್ನು ಹಂಚಿಕೊಂಡರು.

ತಾಯಿ ಮಾತು ಪ್ರೇರಣೆ:

‘ನನ್ನ ತಾಯಿ 67 ವರ್ಷಗಳ ಕಾಲ ಅಡುಗೆ ಮನೆಗೇ ಸೀಮಿತವಾಗಿದ್ದರು. ತಂದೆ ದಕ್ಷಿಣಾಮೂರ್ತಿ ನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿದ್ದರು. ಒಬ್ಬನೇ ಮಗನಾಗಿದ್ದರಿಂದ ತಾಯಿಗೆ ನಾನೇ ಆಸರೆಯಾಗಿದ್ದೆ. ಹೀಗಾಗಿಯೇ ಮದುವೆಯಾಗದೇ ಬ್ರಹ್ಮಚಾರಿಯಾಗಿ ಉಳಿದಿದ್ದೆ. ಒಂದು ದಿನ ನನ್ನೊಂದಿಗೆ ಮಾತನಾಡುತ್ತಿದ್ದ ತಾಯಿ, ಸಮೀಪದಲ್ಲಿರುವ ಬೇಲೂರು– ಹಳೆಬೀಡನ್ನೇ ನೋಡಲು ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಬಳಿಕ ಅವರನ್ನು ಅಲ್ಲಿಗೆ ಕರೆದುಕೊಂಡು ಹೋಗಿ ಬಂದೆ. ಅವರ ಈ ಮಾತು ಅವರನ್ನು ದೇಶದ ತೀರ್ಥ ಕ್ಷೇತ್ರಗಳಿಗೆ ಕರೆದುಕೊಂಡು ಹೋಗಬೇಕು ಎಂಬುದಕ್ಕೆ ಪ್ರೇರಣೆಯಾಯಿತು’ ಎಂದು ಹೇಳಿದರು.

‘ತಾಯಿಗೆ ದೇಶದ ಹಲವು ರಾಜ್ಯಗಳ ಪ್ರಮುಖ ತೀರ್ಥಕ್ಷೇತ್ರಗಳ ದರ್ಶನ ಮಾಡಿಸಲು ಮಾತೃ ಸೇವಾ ಸಂಕಲ್ಪ ಯಾತ್ರೆಯನ್ನು ತಂದೆ ಕೊಡಿಸಿದ್ದ ಸ್ಕೂಟರ್‌ನಲ್ಲೇ ಕೈಗೊಳ್ಳಲು ನಿರ್ಧರಿಸಿದೆ. ನಮ್ಮೊಂದಿಗೆ ತಂದೆ ಇಲ್ಲದಿದ್ದರೂ, ಅವರು ಕೊಡಿಸಿದ ಸ್ಕೂಟರ್‌ ಇರುವುದರಿಂದ ನಮ್ಮೊಂದಿಗೆ ಅವರೂ ಯಾತ್ರೆ ಕೈಗೊಳ್ಳುತ್ತಿದ್ದಾರೆ ಎಂದು ಅಂದುಕೊಂಡಿದ್ದೇವೆ’ ಎಂದು ನಗೆ ಬೀರಿದರು.

‘ಮೈಸೂರಿನಿಂದ ಜನವರಿಯಲ್ಲಿ ಕೇರಳ ರಾಜ್ಯಕ್ಕೆ ಹೋಗಿ ಸುಮಾರು ಫೆಬ್ರುವರಿ ಅಂತ್ಯದವರೆಗೆ ಅಲ್ಲಿನ ತೀರ್ಥಕ್ಷೇತ್ರಗಳ ದರ್ಶನ ಪಡೆದೆವು. ನಂತರ ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರದಲ್ಲಿನ ಹಲವು ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿದೆವು. ಅಲ್ಲಿನ ಜನಜೀವನ, ಧಾರ್ಮಿಕ ಕ್ಷೇತ್ರಗಳಲ್ಲಿನ ರೀತಿ–ರಿವಾಜುಗಳನ್ನು ನೋಡಿ ತಿಳಿದುಕೊಳ್ಳುತ್ತಿದ್ದೆವು. ಸಂಜೆ 6ರೊಳಗೆ ಒಂದು ಕಡೆ ಬಂದು ನೆಲೆ ನಿಲ್ಲುತ್ತಿದ್ದೆವು. ಆಶ್ರಮ, ಮಠ, ದೇವಸ್ಥಾನ, ಸಮಾಜದ ಪರಿಚಯಸ್ಥರ ಮನೆಗಳಲ್ಲಿ ರಾತ್ರಿ ತಂಗಿಕೊಳ್ಳುತ್ತಿದ್ದೆವು’ ಎಂದು ಅನುಭವ ಹಂಚಿಕೊಂಡರು.

‘ಒಮ್ಮೆ ಮಾತ್ರ ನನಗೆ ಎರಡು ದಿನ ಜ್ವರ ಬಂದಿತ್ತು. ತಾಯಿ ಆರೋಗ್ಯವಾಗಿಯೇ ಇದ್ದಾರೆ. 16 ಸಾವಿರ ಕಿ.ಮೀ ಕ್ರಮಿಸಿದಾಗ ಒಮ್ಮೆ ಮಾತ್ರ ಟೈರ್‌ ಪಂಕ್ಚರ್‌ ಆಗಿತ್ತು. ಒಂದು ಟೈರ್‌ ಮಾತ್ರ ಬದಲಾಯಿಸಿದ್ದೇನೆ’ ಎಂದ ಅವರು, ಸ್ಕೂಟರ್‌ನ ಹಿಂದಕ್ಕೆ ಸಿಕ್ಕಿಸಿದ್ದ ಹಳೆಯ ಟೈರ್‌ ಮೇಲೆ ಒಮ್ಮೆ ಕೈನೇವರಿಸಿದರು.

ಬ್ರಾಹ್ಮಣ ಸಮಾಜದಿಂದ ಸ್ವಾಗತ:

ನಗರದ ಬ್ರಾಹ್ಮಣ ಸಮಾಜ ಸೇವಾ ಸಂಘದ ಸದಸ್ಯರು ಭಾನುವಾರ ಸಂಜೆ ಕೃಷ್ಣಕುಮಾರ್‌ ಹಾಗೂ ಚೂಡಾರತ್ನ ಅವರನ್ನು ಸ್ವಾಗತಿಸಿ ಆತಿಥ್ಯ ನೀಡಿದರು. ಈ ಸಂದರ್ಭದಲ್ಲಿ ಡಾ. ಬಿ.ಟಿ. ಅಚ್ಯುತ, ಡಾ. ಶಶಿಕಾಂತ, ಸತ್ಯನಾರಾಯಣ ಎಸ್‌.ಪಿ, ಸುಬ್ರಹ್ಮಣ್ಯ ಶರ್ಮ, ನಿರಂಜನ ಪಿ., ಬಾಲಕೃಷ್ಣ ವೈದ್ಯ, ಭೀಮೇಶ್‌ ಶರ್ಮ, ಉಮಾಶಂಕರ್‌ ದೀಕ್ಷಿತ್‌, ಎಸ್‌.ಜಿ. ರಂಗನಾಥ್‌, ಎಂ.ಜಿ. ಶ್ರೀಕಾಂತ್‌, ಮಾದವಿ ಶರ್ಮ ಅವರೂ ಹಾಜರಿದ್ದರು.

ಉಳಿತಾಯದ ಹಣದಲ್ಲಿ ಯಾತ್ರೆ

‘ನನಗೆ ತಾಯಿಯೇ ಸರ್ವಸ್ವ. ಅವರ ಸೇವೆ ಮಾಡಬೇಕು ಎಂಬ ಕಾರಣಕ್ಕೆ ಬ್ರಹ್ಮಚಾರಿಯಾಗಿಯೇ ಉಳಿಯಬೇಕು ಎಂದು 21ನೇ ವಯಸ್ಸಿಯಲ್ಲಿಯೇ ಸಂಕಲ್ಪ ಮಾಡಿದ್ದೆ. ಬೆಂಗಳೂರಿನ ಕಾರ್ಪೊರೇಟ್‌ ಕಂಪನಿಯೊಂದರಲ್ಲಿ 13 ವರ್ಷ ಕೆಲಸ ಮಾಡಿದ್ದೆ. ತಂದೆಯ ಸಾವಿನ ಬಳಿಕ ನನ್ನ ದುಡಿಮೆಯಲ್ಲಿನ ಉಳಿತಾಯದ ಹಣದಲ್ಲಿ ಯಾತ್ರೆ ಕೈಗೊಂಡಿದ್ದೇನೆ. ಯಾತ್ರೆ ಕೈಗೊಳ್ಳಲು ಯಾರಿಂದಲೂ ಹಣಕಾಸಿನ ನೆರವು ಪಡೆದಿಲ್ಲ. ಸರಳವಾಗಿ ಬದುಕು ಸಾಗಿಸುವಷ್ಟು ಹಣವನ್ನು ಉಳಿತಾಯ ಮಾಡಿದ್ದೇನೆ’ ಎನ್ನುತ್ತಾರೆ ಕೃಷ್ಣಕುಮಾರ್‌. ಅಂದಹಾಗೆ, ಇವರು ಎಸ್‌.ಎಸ್‌.ಎಲ್‌.ಸಿ. ಉತ್ತೀರ್ಣರಾಗಿದ್ದು, ಪಿಯುಸಿಗೆ ಕಾಲೇಜಿಗೆ ಹೋಗಿದ್ದರೂ ಪರೀಕ್ಷೆಗೆ ಕುಳಿತುಕೊಂಡಿರಲಿಲ್ಲ.

ವೃದ್ಧಾಪ್ಯಕ್ಕೆ ಊರುಗೋಲು

‘ಒಟ್ಟು ಕುಟುಂಬದ ತಾಪತ್ರಯದಲ್ಲಿ ಮಗನಿಗೆ ಹೆಚ್ಚು ಓದಿಸಲು ಸಾಧ್ಯವಾಗಿರಲಿಲ್ಲ. ತಂದೆ– ತಾಯಿಯ ಋಣ ತೀರಿಸಬೇಕು ಎಂಬ ಆದರ್ಶವನ್ನು ಪಾಲಿಸುತ್ತಿರುವ ಮಗ ನನಗೆ ಈ ವೃದ್ಧಾಪ್ಯದಲ್ಲಿ ಊರುಗೋಲಾಗಿದ್ದಾನೆ. ನನ್ನ ಸೇವೆ ಮಾಡಲು ವೈವಾಹಿಕ ಜೀವನವನ್ನೂ ನಡೆಸದೇ ಸ್ವಾರ್ಥವನ್ನು ಬದಿಗೊತ್ತಿ 24 ಗಂಟೆಯೂ ನನ್ನ ಜೊತೆಗಿರುತ್ತಿದ್ದಾನೆ. ಯಾತ್ರೆಯ ವೇಳೆ ದೇವರ ಮೂರ್ತಿ ಕಾಣದಿರುವಾಗ ನನ್ನನ್ನು ಎತ್ತಿಕೊಂಡು ತೋರಿಸಿದ್ದಾನೆ. ಇಂಥ ಮಗನನ್ನು ಪಡೆದ ನಾನು ಧನ್ಯ’ ಎಂದು ಚೂಡಾರತ್ನ ಅವರು ಹೆಮ್ಮೆ ಪಟ್ಟರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.