ಗುರುವಾರ , ಏಪ್ರಿಲ್ 15, 2021
20 °C

ಪ್ಲಾಸ್ಟಿಕ್‌ನಿಂದ ಮನುಷ್ಯರೇ ಇಲ್ಲದ ಸ್ಥಿತಿ ನಿರ್ಮಾಣ: ಅತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ನಾವು ತಿನ್ನುತ್ತಿರುವ ಆಹಾರಗಳೆಲ್ಲ ಇಂದು ವಿಷವಾಗಿದೆ. ಇದರಿಂದ ಹಲವು ರೀತಿಯ ಮಾರಕ ರೋಗಗಳಿಗೆ ತುತ್ತಾಗುತ್ತಿದ್ದೇವೆ. ಇದಕ್ಕೆ ಕಡಿವಾಣ ಹಾಕಿ ಆರೋಗ್ಯವಂತ ಜೀವನ ರೂಪಿಸಿಕೊಳ್ಳಬೇಕು’ ಎಂದು ತುಮಕೂರಿನ ಚೈತನ್ಯ ಯೋಗ ವಿಕಾಸ ಸಂಸ್ಥೆ ಅಧ್ಯಕ್ಷ ಡಾ.ಶ್ರೀಶೈಲ ಎಂ. ಬದಾಮಿ ಹೇಳಿದರು.

ನಗರದ ಸೋಮೇಶ್ವರ ವಿದ್ಯಾಲಯದಲ್ಲಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ‘ಊಟದ ತಟ್ಟೆಯಲ್ಲಿ ವಿಷಗಳು‘ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

 ‘ನಾವು ಬಳಸುವ ಹಾಲು, ಮೈದಾ, ಅಡುಗೆ ಎಣ್ಣೆ, ಸಕ್ಕರೆ, ಟೀ, ಕಾಫಿ, ಉಪ್ಪು ಹಾಗೂ ನೀರು ಎಲ್ಲವೂ ಇಂದು ವಿಷವಾಗುತ್ತಿದೆ. ಇದರಿಂದ ಕ್ಯಾನ್ಸರ್‌, ಡಯಾಬಿಟಿಸ್‌, ಥೈರಾಯ್ಡ್‌ನಂತಹ ಮಾರಕರೋಗಗಳಿಗೆ ಬಲಿಯಾಗುತ್ತಿದ್ದೇವೆ. ಪಾಸ್ಟಿಕ್‌ ಪರಿಸರದ ಮೇಲೆ ಹಲವು ದುಷ್ಪರಿಣಾಮ ಬೀರುತ್ತಿದೆ. ಪ್ಲಾಸ್ಟಿಕ್‌ನ ಬಳಕೆ ಹೆಚ್ಚಾಗುತ್ತಾ ಸಾಗಿದರೆ 2050ರಲ್ಲಿ ಭೂಮಿ ಮೇಲೆ ಮನುಷ್ಯರೇ ಇಲ್ಲದ ಸ್ಥಿತಿ ನಿರ್ಮಾಣವಾಗುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಇದನ್ನು ತ್ಯಜಿಸಿ ಆರೋಗ್ಯವಂತ ಬದುಕು ಕಟ್ಟಿಕೊಳ್ಳಲು ಮುಂದಾಗಬೇಕು’ ಎಂದು ಕಿವಿಮಾತು ಹೇಳಿದರು.

‘ನಾವು ಕುಡಿಯುತ್ತಿರುವ ಪಾಕೆಟ್‌ ಹಾಲು ಪರಿಶುದ್ಧವಲ್ಲ. ಜೆರ್ಸಿ ಹಸುಗಳಿಗೆ ಚುಚ್ಚುಮದ್ದು ನೀಡಿದಾಗ ಅದು ಹಾಲಿನ ರೂಪದಲ್ಲಿ ಬರುತ್ತದೆ. ಇಂತಹ ಹಾಲನ್ನು ಕುಡಿದರೆ ಮಕ್ಕಳಲ್ಲಿ ಹಾರ್ಮೋನುಗಳ ಅಸಮತೋಲನ, ಡಯಾಬಿಟಿಸ್, ಸಂತಾನಹೀನತೆಯಂತಹ ಸಮಸ್ಯೆ ಉಂಟಾಗುತ್ತದೆ. ಮೈದಾಹಿಟ್ಟನ್ನು ಬಳಸಿ ಮಾಡುವ ಬೇಕರಿ ತಿನಿಸುಗಳನ್ನು ತಿನ್ನಬಾರದು. ಇದರಿಂದ ಹಲವು ಆರೋಗ್ಯ ಸಮಸ್ಯೆಗಳು ಕಂಡುಬರುತ್ತವೆ’ ಎಂದು ತಿಳಿಸಿದರು.

ಅಡುಗೆ ಎಣ್ಣೆ ಕೂಡ ಪರಿಶುದ್ಧವಲ್ಲ. ಪೆಟ್ರೋಲ್‌, ಡಿಸೇಲ್‌ ತೆಗೆದಾಗ ಉಳಿಯುವ ಮಿನರಲ್‌ ಆಯಿಲ್‌ಗೆ ಕಡಲೆ, ಸೂರ್ಯಕಾಂತಿ ಎಣ್ಣೆಯನ್ನು ಕೇವಲ ಸುವಾಸನೆ ಬಳಸಿ ಇಂತಹ ಎಣ್ಣೆ ತೆಗೆಯುತ್ತಾರೆ. ಇದನ್ನು ಸೇವಿಸಿದರೆ ಹೃದ್ರೋಗ, ಮೆದುಳಿನ ಸಮಸ್ಯೆಗಳು ಸೇರಿ ಹಲವು ರೋಗಗಳು ಬರುತ್ತವೆ ಎಂದು ಎಚ್ಚರಿಸಿದರು.

ಟೀ, ಕಾಫಿ ಹೆಚ್ಚಿನ ಸೇವನೆಯಿಂದ ನೀರಿನ ಅಂಶ ದೇಹದಿಂದ ಹೊರಹೋಗುತ್ತದೆ. ಇದರಿಂದ ರಕ್ತ ನೀರಿನ ಅಂಶ ಕಳೆದುಕೊಂಡು ರಕ್ತ ಗಟ್ಟಿಯಾಗಿ ಆರೋಗ್ಯ ಸಮಸ್ಯೆ ತರುತ್ತದೆ. ಪುಡಿ ಉ‌ಪ್ಪಿನಲ್ಲಿ ಸೋಡಿಯಂ ಸಿಲಿಕೇಟ್‌ ಎಂಬ ರಾಸಾಯನಿಕ ಇದ್ದು, ಇದು ಗುದದ್ವಾರದ ಕ್ಯಾನ್ಸರ್‌ಗೆ ಕಾರಣವಾಗುತ್ತದೆ. ಇದರಿಂದ ಮನುಷ್ಯ 10 ವರ್ಷಗಳಲ್ಲೇ ಸಾಯುವ ಸ್ಥಿತಿ ಬರುತ್ತದೆ ಎಂದು ಎಚ್ಚರಿಸಿದರು.

ಸೋಮೇಶ್ವರ ವಿದ್ಯಾಲಯದ ಗೌರವ ಕಾರ್ಯದರ್ಶಿ ಕೆ.ಎಂ.ಸುರೇಶ್‌, ಹಿರಿಯ ಪತ್ರಕರ್ತ ಬಾ.ಮ. ಬಸವರಾಜಯ್ಯ, ‘ರಾಸಾಯನಿಕವಾದ ಆಹಾರ ಬಳಸದೆ, ಪ್ಸಾಸ್ಟಿಕ್‌ ಮುಕ್ತವಾದ ಆಹಾರ ತಿಂದು ಆರೋಗ್ಯ ಕಾಪಾಡಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ವೀರಪ್ಪ ಎಂ.ಭಾವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲೆಯ ಪ್ರಾಚಾರ್ಯರಾದ ಪ್ರಭಾವತಿ ಎಂ., ಕೆ.ಎಂ. ಗುರುಬಸಯ್ಯ ಇದ್ದರು. ಶಿಕ್ಷಕಿ ಶಿಲ್ಪಾ ಮಠದ್‌ ಸ್ವಾಗತಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.