ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀದಿ ಬದಿ ವ್ಯಾಪಾರಿಗಳಿಗೆ ಪಿಎಂ ಸ್ವನಿಧಿ ಸಂಜೀವಿನಿ: ಗಾಯಿತ್ರಿ ಸಿದ್ಧೇಶ್ವರ

Published 8 ಏಪ್ರಿಲ್ 2024, 6:02 IST
Last Updated 8 ಏಪ್ರಿಲ್ 2024, 6:02 IST
ಅಕ್ಷರ ಗಾತ್ರ

ದಾವಣಗೆರೆ: ದೇಶದ ಕೋಟ್ಯಂತರ ಬೀದಿ ಬದಿ ವ್ಯಾಪಾರಿಗಳು ಬದುಕು ರೂಪಿಸಿಕೊಳ್ಳಲು, ಜೀವನ ಮಟ್ಟ ಸುಧಾರಿಸಿಕೊಳ್ಳಲು ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆ ಸಂಜೀವಿನಿಯಾಗಿದೆ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ಧೇಶ್ವರ ತಿಳಿಸಿದರು.

ಹಳೇ ದಾವಣಗೆರೆ ಭಾಗದ ಗಡಿಯಾರದ ಕಂಬ, ಕಾಯಿಪೇಟೆ ಮಾರ್ಕೆಟ್ ಸೇರಿದಂತೆ ವಿವಿಧ ಭಾಗಗಳಲ್ಲಿ ಬೀದಿ ಬದಿ ವ್ಯಾಪಾರಿಗಳ ಬಳಿ ಮತಯಾಚಿಸಿ ಅವರು ಮಾತನಾಡಿದರು.

‘ಕೋವಿಡ್ ಬಳಿಕ ಬೀದಿ ಬದಿ ವ್ಯಾಪಾರಿಗಳ ಬದುಕು ದುಸ್ತರವಾಗಿತ್ತು. ಲೇವಾದೇವಿಗಳ ಬಳಿಕ ಅಧಿಕ ಬಡ್ಡಿಗೆ ಹಣ ತಂದು ಸಂಕಷ್ಟಕ್ಕೆ ಒಳಗಾಗಿದ್ದರು. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪಿಎಂ ಸ್ವ-ನಿಧಿ ಯೋಜನೆ ಜಾರಿಗೆ ತಂದರು. ಈ ಯೋಜನೆಯಿಂದ ತಳ್ಳುವ ಗಾಡಿ, ಹಣ್ಣು ವ್ಯಾಪಾರಿಗಳು, ಬೀದಿ ಬದಿ ಉಡುಪು ಮಾರಾಟಗಾರರು ಸೇರಿ ವಿವಿಧ ವರ್ಗಗಳಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಮೂಲಕ ಆರ್ಥಿಕವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡಿದ್ಧಾರೆ’ ಎಂದರು.

‘ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಅಂದಾಜು 16,345 ಬೀದಿ ಬದಿ ವ್ಯಾಪಾರಿಗಳಿಗೆ ₹19 ಕೋಟಿ ಸಾಲ ನೀಡಲಾಗಿದೆ. ಇದಕ್ಕಾಗಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ನೀವು ನನಗೆ ನೀಡುವ ಒಂದೊಂದು ಮತವೂ ಮೋದಿ ಅವರಿಗೆ ನೀಡಿದಂತೆ. ನಿಮ್ಮ ಜೀವನ ಮಟ್ಟ ಇನ್ನಷ್ಟು ಸುಧಾರಿಸಲು, ನಿಮ್ಮ ಮಕ್ಕಳ ಭವಿಷ್ಯ ಉಜ್ವಲಗೊಳ್ಳಲು ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಆಗಬೇಕು’ ಎಂದು ಮನವಿ ಮಾಡಿದರು.

ಧೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಒಬಿಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್, ಬಿಜೆಪಿ ಯುವ ಮುಖಂಡರಾದ ಜಿ.ಎಸ್. ಅನಿತ್ ಕುಮಾರ್, ಪಾಲಿಕೆ ಸದಸ್ಯರಾದ ಸೋಗಿ ಶಾಂತಕುಮಾರ್, ಡಿ.ಎಲ್.ಆರ್. ಶಿವಪ್ರಕಾಶ್, ಮುಖಂಡರಾದ ಬಸವರಾಜ್, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಗ್ಯ ಪಿಸಾಳೆ, ಮಹಿಳಾ ಮೋರ್ಚಾ ಮಾಜಿ ಅಧ್ಯಕ್ಷೆ ಜಯಮ್ಮ, ರೇಣುಕಾ ಕೃಷ್ಣ, ನಾಸಿರ್ ಅಹ್ಮದ್, ಗೌತಮ್ ಜೈನ್, ಟಿಂಕರ್ ಮಂಜಣ್ಣ, ಶಿವನಗೌಡ ಪಾಟೀಲ್, ತರಕಾರಿ ಶಿವು, ಕರಾಟೆ ಕೃಷ್ಣ, ಚೇತು ಭಾಯ್ ಇದ್ದರು.

ಬಿಜೆಪಿ ಪ್ರಚಾರದ ವೇಳೆ ಘೇರಾವ್

ನಗರಪಾಲಿಕೆ 31ನೇ ವಾರ್ಡ್ ಎಸ್‌ಒಜಿ ಕಾಲೊನಿಯಲ್ಲಿ ಭಾನುವಾರ ಸಂಜೆ ಬಿಜೆಪಿ ಅಭ್ಯರ್ಥಿ ಇದ್ದ ಕಾರಿಗೆ ಘೇರಾವ್ ಹಾಕಿದ ಸ್ಥಳೀಯರು ಪ್ರಚಾರಕ್ಕೆ ವಿರೋಧ ವ್ಯಕ್ತಪಡಿಸಿದರು. ಸಂಸದರು ಕಳೆದ ಐದು ವರ್ಷ ಯಾವುದೇ ಅಭಿವೃದ್ಧಿ ಮಾಡಿಲ್ಲ. ಈ ಭಾಗದ ಜನರ ಸಮಸ್ಯ ಆಲಿಸಿಲ್ಲ. ಈಗ ಮತ ಕೇಳಲು ಬಂದಿದ್ದೀರಾ ಎಂದು ಸ್ಥಳೀಯರು ಪ್ರಶ್ನಿಸಿದರು. ಸ್ಥಳಕ್ಕೆ ಸಂಸದರನ್ನು ಕರೆಸಿ ಎಂದು ಹೇಳಿದರು ಎನ್ನಲಾಗಿದೆ. ಎಸ್.ಎಸ್. ಮಲ್ಲಿಕಾರ್ಜುನ್ ಅವರು ಈ ಹಿಂದೆ ಸಚಿವರಿದ್ದಾಗ ಅಂದಿನ ಜಿಲ್ಲಾಧಿಕಾರಿ ಕೆ. ಶಿವರಾಂ ಅವಧಿಯಲ್ಲಿ ಬಡವರಿಗೆ ಮನೆ ಕಟ್ಟಿಸಿಕೊಟ್ಟಿದ್ದಾರೆ. ನೀವು ಒಬ್ಬರಿಗೆ ಒಂದು ಮನೆ ಕೊಟ್ಟಿಲ್ಲ. ಈಗೇಕೆ ಬಂದಿದ್ದೀರಿ. ನೀವು ಇಲ್ಲಿಗೆ ಪ್ರಚಾರಕ್ಕೆ ಬರಲೇಬೇಡಿ ಎಂದು ತಾಕೀತು ಮಾಡಿದರು. ಕೆಲ ಕಾಲ ಕಾರು ಘೇರಾವ್ ಮಾಡಿ ಎಸ್.ಎಸ್. ಮಲ್ಲಿಕಾರ್ಜುನ ಪರ ಜೈಕಾರ ಹಾಕಿದರು. ಬಿಜೆಪಿ ವಿರುದ್ಧ ಧಿಕ್ಕಾರ ಕೂಗಿದರು. ಈ ಕುರಿತ ವಿಡಿಯೊ ಹರಿದಾಡಿದೆ. ಎಸ್‌ಒಜಿ ಕಾಲೊನಿ ಮುಖ್ಯರಸ್ತೆಯಲ್ಲಿ ಬಿಜೆಪಿಯವರು ಪ್ರಚಾರಕ್ಕೂ ಮುನ್ನ ಪಟಾಕಿ ಸಿಡಿಸುವ ವೇಳೆ ಜನರು ಪ್ರಶ್ನಿಸಿದರು. ಪಾಲಿಕೆಯಿಂದಲೂ ಅನುದಾನ ನೀಡಲು ತಾರತಮ್ಯ ಮಾಡಿದ್ದನ್ನು ನಾನೂ ಕೂಡ ಮುಖಂಡರಿಗೆ ಪ್ರಶ್ನಿಸಿದೆ. ಬಿಜೆಪಿಯವರು ಕಾಲೊನಿಗೆ ಬಾರದೇ ಹೊರಟು ಹೋದರು ಎಂದು ಪಾಲಿಕೆ ಸದಸ್ಯ ಪಾಮೇನಹಳ್ಳಿ ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT