ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭೆ ಚುನಾವಣೆ | ತಲಾ ₹ 150ರಲ್ಲಿ ಊಟೋಪಚಾರ ನೀಡುವುದೇ ಸವಾಲು- ಚುನಾವಣಾಧಿಕಾರಿ

ಮತಗಟ್ಟೆ ಸಿಬ್ಬಂದಿಗೆ ವ್ಯವಸ್ಥೆ ಮಾಡಲು ಮುಖ್ಯಶಿಕ್ಷಕರಿಗೆ ಸೂಚನೆ
ಅನಿತಾ ಎಚ್‌.
Published 6 ಮೇ 2024, 6:45 IST
Last Updated 6 ಮೇ 2024, 6:45 IST
ಅಕ್ಷರ ಗಾತ್ರ

ದಾವಣಗೆರೆ: ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆಯನ್ನು ನಡೆಸಲು ವಿವಿಧ ಮತಗಟ್ಟೆಗಳಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ತಲಾ ₹ 150ರಲ್ಲಿ ಊಟೋಪಚಾರದ ವ್ಯವಸ್ಥೆ ಮಾಡುವಂತೆ ಜಿಲ್ಲಾ ಚುನಾವಣಾಧಿಕಾರಿಯು ಮತಗಟ್ಟೆ ಸ್ಥಾಪಿಸಿರುವ ಶಾಲೆಗಳ ಸಂಬಂಧಿತ ಮುಖ್ಯ ಶಿಕ್ಷಕರಿಗೆ ಆದೇಶಿಸಿದ್ದು, ಈ ಪ್ರಮಾಣದ ಹಣವು ಅತ್ಯಲ್ಪ ಎಂಬ ಅಭಿಪ್ರಾಯ ಕೇಳಿಬಂದಿದೆ.

ಪ್ರತಿ ಮತಗಟ್ಟೆಯಲ್ಲಿ ನಾಲ್ವರು ಸಿಬ್ಬಂದಿ, ಮತದಾರರ ಸಂಖ್ಯೆ ಹೆಚ್ಚು ಇರುವ ಕಡೆ ಐವರು ಸಿಬ್ಬಂದಿ ಇರುತ್ತಾರೆ. ಇವರು ಮೇ 6ರಂದೇ ಮತಯಂತ್ರ ಹಾಗೂ ಸಂಬಂಧಿಸಿದ ಪರಿಕರಗಳ ಸಮೇತ ಮತಗಟ್ಟೆ ತಲುಪಲಿದ್ದಾರೆ. ಅಂದು ಸಂಜೆ ಲಘು ಉಪಾಹಾರ ಮತ್ತು ಟೀ/ಕಾಫಿ, ರಾತ್ರಿ ಊಟ, ಮತದಾನದ ದಿನವಾದ ಮೇ 7ರಂದು ಬೆಳಿಗ್ಗೆ ಉಪಾಹಾರ, ಮಧ್ಯಾಹ್ನದ ಊಟ ಮತ್ತು ಸಂಜೆ ಲಘು ಉಪಾಹಾರಕ್ಕಾಗಿ ₹ 600 ನೀಡಲಾಗುತ್ತಿದೆ. ತರಕಾರಿ ಹಾಗೂ ದಿನಸಿ ಬೆಲೆ ದುಬಾರಿಯಾಗಿದ್ದು, ಇಷ್ಟು ಕಡಿಮೆ ಹಣದಲ್ಲಿ ಸೂಚಿತ ಪಟ್ಟಿಯ ಪ್ರಕಾರ ಊಟೋಪಚಾರ ನೀಡುವುದು ಕಷ್ಟಸಾಧ್ಯ ಎಂದು ವಿವಿಧ ಶಾಲೆಗಳ ಮುಖ್ಯ ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.

ಪಟ್ಟಿ (ಮೆನು) ಪ್ರಕಾರ ಮೇ 6ರ ಸಂಜೆ ಖಾರ ಹಚ್ಚಿದ ಮಂಡಕ್ಕಿ ಮತ್ತು ಕಾಫಿ/ಟೀ, ರಾತ್ರಿ ಊಟಕ್ಕೆ 2 ಚಪಾತಿ, ಪಲ್ಯ, ಚಟ್ನಿ, ಅನ್ನ–ಸಾಂಬಾರ್‌ ಮತ್ತು ಮಜ್ಜಿಗೆ ನೀಡುವಂತೆ ತಿಳಿಸಲಾಗಿದೆ.

ಮೇ 7ರ ಬೆಳಿಗ್ಗೆ ಪುಲಾವ್‌, ಮೊಸರು ಬಜ್ಜಿ, ಕಾಫಿ/ಟೀ, ಮಧ್ಯಾಹ್ನ ಊಟಕ್ಕೆ 2 ಚಪಾತಿ/ರೊಟ್ಟಿ, ಪಲ್ಯ, ಹೋಳಿಗೆ, ಚಟ್ನಿ, ಉಪ್ಪಿನಕಾಯಿ, ಅನ್ನ–ಸಾಂಬಾರ್‌ ಮತ್ತು ಮಜ್ಜಿಗೆ ಹಾಗೂ ಸಂಜೆ 5ಕ್ಕೆ ಒಗ್ಗರಣೆ ಮಂಡಕ್ಕಿ ಕಾಫಿ/ಟೀ, 6.30ಕ್ಕೆ ಮತ್ತೊಮ್ಮೆ ಕಾಫಿ/ಟೀ ನೀಡಬೇಕಿದೆ.

ಪ್ರತಿ ಸಿಬ್ಬಂದಿಗೆ ನೀಡುವ ₹ 150ರಲ್ಲಿ ಇಷ್ಟು ಆಹಾರ ಪೂರೈಸಲು ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದ್ದಾರೆ.

ಮತಗಟ್ಟೆ ಸಿಬ್ಬಂದಿಗೆ ತಲಾ ₹ 150 ವೆಚ್ಚ ನಿಗದಿಪಡಿಸಿದ್ದರೆ, ಪೊಲೀಸ್‌ ಸಿಬ್ಬಂದಿಗೆ ₹ 250 ನಿಗದಿಪಡಿಸಲಾಗಿದೆ. ಈ ತಾರತಮ್ಯವೇಕೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರತಿ ಮತಗಟ್ಟೆಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ₹ 1,250, ರಾಯಚೂರು ಜಿಲ್ಲೆಯಲ್ಲಿ ₹ 1,500, ರಾಮನಗರ ಜಿಲ್ಲೆಯಲ್ಲಿ ₹ 1,300 ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ₹ 1,600 ವೆಚ್ಚವನ್ನು ಆಯಾ ಜಿಲ್ಲಾಧಿಕಾರಿಯವರು ಮಂಜೂರು ಮಾಡಿರುತ್ತಾರೆ. ಅಂತೆಯೇ ದಾವಣಗೆರೆಯಲ್ಲಿ ಮತಗಟ್ಟೆ ಸಿಬ್ಬಂದಿ ಊಟೋಪಚರಕ್ಕೆ ₹ 1,500 ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಮತ್ತು ಕಾರ್ಯದರ್ಶಿ ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಜಿಲ್ಲಾ ಚುನಾವಣಾ ಅಧಿಕಾರಿಯವರನ್ನು ಆಗ್ರಹಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲೂ ಇಷ್ಟು ಕಡಿಮೆ ವೆಚ್ಚದಲ್ಲಿ ಊಟೋಪಚಾರ ಒದಗಿಸುವುದು ಆಗದು. ಇನ್ನು ನಗರ ಪ್ರದೇಶಗಳಲ್ಲಿ ಹೋಟೆಲ್‌ಗಳಲ್ಲಿ ಖರೀದಿಸಿ ನೀಡುವುದು ಕಷ್ಟಕರ ಎಂಬ ಅಭಿಪ್ರಾಯ ಕೇಳಿಬಂದಿದೆ.

ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿ ಮತಗಟ್ಟೆಯಲ್ಲಿ ಕೆಲಸ ಮಾಡುವ ನಾಲ್ವರು ಸಿಬ್ಬಂದಿಯ ಊಟೋಪಾಚಾರಕ್ಕೆ ₹ 600 ವೆಚ್ಚ ನಿಗದಿಪಡಿಸಲಾಗಿದೆ. ಮತಗಟ್ಟೆಗೆ ಸೂಕ್ಷ್ಮ ವೀಕ್ಷಕರನ್ನು ನೇಮಿಸುತ್ತಿದ್ದು ಅವರಿಗೆ ₹ 150 ನೀಡಲಾಗುವುದು.
ಡಾ.ಎಂ.ವಿ.ವೆಂಕಟೇಶ್‌, ಜಿಲ್ಲಾ ಚುನಾವಣಾಧಿಕಾರಿ ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT