ಶುಕ್ರವಾರ, 4 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಪಾಪ್ ಕಾರ್ನ್ ಮೆಕ್ಕೆಜೋಳ ಬಿರುಸಿನ ಒಕ್ಕಣೆ

ಕೆ.ಎಸ್.ವೀರೇಶ್ ಪ್ರಸಾದ್
Published : 17 ಸೆಪ್ಟೆಂಬರ್ 2024, 7:11 IST
Last Updated : 17 ಸೆಪ್ಟೆಂಬರ್ 2024, 7:11 IST
ಫಾಲೋ ಮಾಡಿ
Comments

ಸಂತೇಬೆನ್ನೂರು: ‘ಈ ಭಾಗದ ಮುಂಗಾರಿನ ಪ್ರಮುಖ ಬೆಳೆ ಪಾಪ್ ಕಾರ್ನ್ ಮೆಕ್ಕೆಜೋಳದ ಕೊಯ್ಲು ನಡೆಯುತ್ತಿದೆ. ಜೂನ್ ಮೊದಲ ವಾರದಲ್ಲಿ ಬಿತ್ತನೆ ಮಾಡಿದ್ದ ರೈತರು ಪಾಪ್ ಕಾರ್ನ್ ಒಕ್ಕಣೆಯಲ್ಲಿ ತೊಡಗಿದ್ದಾರೆ.

ತೆನೆ ಕೊಯ್ಲಿನ ನಂತರ ಯಂತ್ರದ ಮೂಲಕ ಪಾಪ್ ಕಾರ್ನ್ ಮೆಕ್ಕೆಜೋಳವನ್ನು ಪ್ರತ್ಯೇಕಿಸುವಲ್ಲಿ ನಿರತರಾಗಿದ್ದಾರೆ. ಒಣಗಿಸಲು ಬಿಸಿಲು ಬೀಳುತ್ತಿರುವುದು ವರದಾನವಾಗಿದೆ. ಶೀಘ್ರ ಒಣಗಿದರೆ ಉತ್ತಮ ಧಾರಣೆ ನಿರೀಕ್ಷೆಯಲ್ಲಿ ರೈತರಿದ್ದಾರೆ.

‘ಉತ್ತಮ ಮಳೆಯಿಂದಾಗಿ ಎಕರೆಗೆ 7ರಿಂದ 10 ಕ್ವಿಂಟಲ್‌ವರೆಗೆ ಇಳುವರಿ ಭರವಸೆ ಇದೆ’ ಎನ್ನುತ್ತಾರೆ ರೈತ ಶಿವು.

‘ಪಾಪ್ ಕಾರ್ನ್ ಮೆಕ್ಕೆಜೋಳ ಸಾಧಾರಣ ಮೆಕ್ಕೆಜೋಳಕ್ಕಿಂತ ವಿಭಿನ್ನ. ಗರಿಯೊಳಗೆ ಅವಿತ ತೆಳುವಾದ ತೆನೆ. ತೆನೆಯಲ್ಲಿ ಸಾಲುಗಟ್ಟಿದ ಕಿರಿದಾದ ಕಡು ಕಿತ್ತಳೆ ಬಣ್ಣದ ಕಾಳುಗಳು. ಹುರಿದರೆ ಭರಪೂರ ಅರಳುವ ಕಾಳು ರುಚಿಕರ. ಮಾರುಕಟ್ಟೆಯಲ್ಲಿ ಪಾಪ್ ಕಾರ್ನ್ ಹೆಸರಿನಲ್ಲಿಯೇ ಲಭ್ಯ. ರೈತರೇ ಬೀಜ ಸಂಸ್ಕರಿಸಿ ಬಿತ್ತನೆ ನಡೆಸುವುದು ವಾಡಿಕೆ. ಕಳೆದ ಬಾರಿ ಮಳೆ ಕೊರತೆಯಿಂದ ಇಳುವರಿ ತೀವ್ರ ಕುಸಿದಿತ್ತು. ಆದರೆ, ಪ್ರತಿ ಕ್ವಿಂಟಲ್‌ಗೆ ₹ 10,000 ವರೆಗೂ ಧಾರಣೆ ಲಭಿಸಿತ್ತು’ ಎನ್ನುತ್ತಾರೆ ರೈತರು.

‘ಪಾಪ್ ಕಾರ್ನ್ ಬೆಲೆ ಸ್ಥಿರತೆ ಇಲ್ಲ. ದಿನದಿಂದ ದಿನಕ್ಕೆ ಬೆಲೆ ಏರಿಳಿತ ಸಹಜ. ಸದ್ಯ ₹ 5,500 ರ ಆಜುಬಾಜು ಖರೀದಿ ನಡೆಯುತ್ತಿದೆ. ಬಿರುಸಿನ ಒಕ್ಕಣೆ ನಡೆದು ಮಾರುಕಟ್ಟೆಗೆ ಅಧಿಕ ದಾಸ್ತಾನು ಆವಕವಾದರೆ ಬೆಲೆ ಕುಸಿಯುವ ಭೀತಿಯೂ ರೈತರಲ್ಲಿದೆ. ಅಧಿಕ ಮಳೆ, ಗಿಳಿಕಾಟದ ನಷ್ಟದಲ್ಲಿಯೂ ಒಕ್ಕಣೆ ಕಾರ್ಯದಲ್ಲಿ ರೈತರು ನಿರತರಾಗಿದ್ದಾರೆ’ ಎನ್ನುತ್ತಾರೆ ವರ್ತಕರ ಸಂಘದ ಅಧ್ಯಕ್ಷ ಕೆ.ಸಿರಾಜ್ ಅಹಮದ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT