ಶುಕ್ರವಾರ, ಸೆಪ್ಟೆಂಬರ್ 17, 2021
30 °C
ಪುರಸಭೆ ಸಾಮಾನ್ಯ ಸಭೆಯಲ್ಲಿ ವ್ಯಕ್ತವಾಗದ ಒಮ್ಮತದ ಅಭಿಪ್ರಾಯ

ಸ್ಥಾಯಿ ಸಮಿತಿ ಸದಸ್ಯರ ಆಯ್ಕೆ ಮುಂದೂಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಗಿರಿ:  ಪುರಸಭೆಗೆ ಸ್ಥಾಯಿ ಸಮಿತಿ ಸದಸ್ಯರ ಆಯ್ಕೆಯನ್ನು ಮತ್ತೆ ಮುಂದೂಡಲಾಗಿದೆ. ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಒಮ್ಮತದ ಅಭಿಪ್ರಾಯ ವ್ಯಕ್ತವಾಗದ್ದರಿಂದ ಆಯ್ಕೆಯನ್ನು ಮುಂದೂಡಲಾಗಿದೆ ಎಂದು ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಿ ತಿಳಿಸಿದರು.

ಕಳೆದ ಬಾರಿ ನಡೆದ ಸಾಮಾನ್ಯ ಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಸದಸ್ಯರ ನಡುವೆ ವಾಗ್ವಾದ ನಡೆದು ಆಯ್ಕೆ ಪ್ರಕ್ರಿಯೆ ಸಭೆ ಮುಂದೂಡಲಾಗಿತ್ತು. ಕಾಂಗ್ರೆಸ್ ಸದಸ್ಯರು ಸಭಾತ್ಯಾಗವನ್ನೂ ಮಾಡಿದ್ದರು. ಈ ಬಾರಿಯ ಸಭೆಯಲ್ಲೂ  ಒಮ್ಮತ ಇರದ ಕಾರಣ ಮುಂದಿನ ಸಭೆಯಲ್ಲಿ ಚರ್ಚೆ ನಡೆಸೋಣ ಎಂದು ಎಲ್ಲ ಸದಸ್ಯರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.

‘ಬಿಜೆಪಿ 10, ಕಾಂಗ್ರೆಸ್ 10 ಹಾಗೂ ಜೆಡಿಎಸ್‌ನಿಂದ 3 ಸದಸ್ಯರು ಪುರಸಭೆಗೆ ಆಯ್ಕೆಯಾಗಿದ್ದಾರೆ. ಆಯ್ಕೆ ಮಾಡುವುದಾದರೆ ಬಿಜೆಪಿಯಿಂದ 3, ಕಾಂಗ್ರೆಸ್‌ನಿಂದ 3 ಹಾಗೂ ಜೆಡಿಎಸ್‌ನಿಂದ ಒಬ್ಬ ಸದಸ್ಯರನ್ನು ಸ್ಥಾಯಿ ಸಮಿತಿಗೆ ಆಯ್ಕೆ ಮಾಡಿದರೆ ನಮ್ಮ ತಕರಾರು ಏನೂ ಇರುವುದಿಲ್ಲ. ಎಲ್ಲರಿಗೂ ನ್ಯಾಯ ಸಿಕ್ಕಂತಾಗುತ್ತದೆ. ಈ ವಿಚಾರದ ಬಗ್ಗೆ ಚರ್ಚೆ ಮಾಡಬೇಕು’ ಎಂದು ನಾಮ ನಿರ್ದೇಶಿತ ಸದಸ್ಯ ಚ.ಮ. ಗುರುಸಿದ್ದಯ್ಯ ಹಾಗೂ ವಿರೋಧಪಕ್ಷದ ಸದಸ್ಯರಾದ ಜಿ. ನಿಂಗಪ್ಪ, ಅಮೀರ್ ಅಹಮದ್, ಅಸ್ಲಾಂ ಬೇಗ್ ಒತ್ತಾಯಿಸಿದರು.

ಪುರಸಭೆಯಿಂದ ಖಾಸಗಿ ಬಸ್ ನಿಲ್ದಾಣ ನಿರ್ಮಿಸಲಾಗಿದ್ದು, ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಅಲ್ಲಿ ಕೆಎಸ್ಆರ್‌ಟಿಸಿ ಬಸ್‌ ನಿಲುಗಡೆಗೆ ಅವಕಾಶ ನೀಡಲಾಗಿತ್ತು. ಆದರೆ ರಾತ್ರಿಯ ವೇಳೆ 10ಕ್ಕಿಂತ ಹೆಚ್ಚು ಕೆಎಸ್ಆರ್‌ಟಿಸಿ ಬಸ್ ಗಳನ್ನು ಈ ನಿಲ್ದಾಣದಲ್ಲಿ ನಿಲುಗಡೆ ಮಾಡುವುದರಿಂದ ಖಾಸಗಿ ಬಸ್‌ಗಳಿಗೆ ಸ್ಥಳವೇ ಇಲ್ಲದಂತಾಗಿದೆ. ಈ ಬಗ್ಗೆ ಪುರಸಭೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಸದಸ್ಯ ಪಟ್ಲಿ ನಾಗರಾಜ್ ಒತ್ತಾಯಿಸಿದರು.

ವಾಣಿಜ್ಯ ಮಳಿಗೆಗಳ ಹರಾಜು ಅವಧಿ ಶೀಘ್ರ ಮುಕ್ತಾಯವಾಗಲಿದೆ. ಆದರೆ ಕೊರೊನಾ ಕಾರಣ ಮೂರು ತಿಂಗಳು ವ್ಯಾಪಾರ ಇಲ್ಲದೇ ಬಾಡಿಗೆದಾರರಿಗೆ ನಷ್ಟವಾಗಿದೆ. ಮತ್ತೊಂದು ಅವಧಿಗೆ ಮುಂದುವರಿಸುವಂತೆ ಬಾಡಿಗೆದಾರರು ಮನವಿ ಸಲ್ಲಿಸಿದ್ದಾರೆ. ಮಾನವೀಯತೆ ದೃಷ್ಟಿಯಿಂದ ಬಾಡಿಗೆ ಪಾವತಿಸಲು ವಿನಾಯಿತಿ ನೀಡಿ, ಮಳಿಗೆಗಳನ್ನು ಮರು ಹರಾಜು ಮಾಡಬೇಕು ಎಂದು ಸರ್ವ ಸದಸ್ಯರು ಒತ್ತಾಯಿಸಿದರು.

‘ಆಯಾ ಇಲಾಖೆಯ ಅಧಿಕಾರಿಗಳು ಸಭೆಗೆ ಬಂದು ಮಾಹಿತಿಯನ್ನು ನೀಡಬೇಕು. ಇಲಾಖೆಯ ಮುಖ್ಯಸ್ಥರು ಸಭೆಗೆ ಹಾಜರಾಗಲು ನೋಟಿಸ್ ನೀಡಿ’ ಎಂದು ವಿರೋಧ ಪಕ್ಷದ ಸದಸ್ಯ ಬಿ.ಆರ್. ಹಾಲೇಶ್, ಆಡಳಿತ ಪಕ್ಷದ ಕಮಲಾ ಹರೀಶ್, ಯಶೋಧ ಬುಳ್ಳಿ, ಪರಮೇಶ್ ಪಾರಿ, ಅಣ್ಣಯ್ಯ ಒತ್ತಾಯಿಸಿದರು.

ಪಟ್ಟಣದಲ್ಲಿರುವ ಮನೆಗಳಿಗೆ ಘನ ತ್ಯಾಜ್ಯ ವಿಲೇವಾರಿ ಸೆಸ್ ಅನ್ನು ವಿಧಿಸಬೇಕೆಂದು ಪೌರಾಡಳಿತ ಇಲಾಖೆ ಆದೇಶ ಮಾಡಿದೆ. ಈ ಬಗ್ಗೆ ಪುರಸಭೆ ಸದಸ್ಯರು ನಿರ್ಧಾರ ಕೈಗೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿ ಐ. ಬಸವರಾಜ್ ಮಾಹಿತಿ ನೀಡಿದರು.

ಪುರಸಭೆ ಉಪಾಧ್ಯಕ್ಷೆ ಜರಿನಾಬಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.