ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಾಧಕರು 2022: ನಿಸ್ವಾರ್ಥ ಸೇವೆ ಗುರುತಿಸಿ 22 ಜನ ಸಾಧಕರಿಗೆ ಪ್ರಶಸ್ತಿ

22 ಜನ ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಧಕರ ಮನದಾಳ
Last Updated 9 ಜೂನ್ 2022, 7:10 IST
ಅಕ್ಷರ ಗಾತ್ರ

ದಾವಣಗೆರೆ: ‘ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುವವರ ಜೀವ ಉಳಿಸಲು ನಾವು ಶ್ರಮಿಸುತ್ತೇವೆ. ಎಲೆ ಮರೆ ಕಾಯಿಯಂತಿರುವ ನಮ್ಮ ಸೇವೆಯನ್ನು ಗುರುತಿಸಿ ಸಾಧಕರ ಪಟ್ಟ ನೀಡಿದ್ದು ‘ಪ್ರಜಾವಾಣಿ’. ನಮ್ಮ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಹುಮ್ಮಸ್ಸು ನೀಡಿದ ಪತ್ರಿಕೆಗೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು’

ನಗರದ ಅಪೂರ್ವ ರೆಸ್ಟೋರೆಂಟ್‌ನ ಸಭಾಭವನದಲ್ಲಿ ಬುಧವಾರ ನಡೆದ ‘ಪ್ರಜಾವಾಣಿ ಸಾಧಕರು–2022’ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದ ಚನ್ನಗಿರಿ ತಾಲ್ಲೂಕಿನ ಹೆಬ್ಬಳಗೆರೆ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಟಾಫ್‌ ನರ್ಸ್‌ ಹುದ್ದೆಯಲ್ಲಿರುವ ಸಾಧಕಿ ರೇಷ್ಮಾ ಅವರು ವ್ಯಕ್ತಪಡಿಸಿದ ಅಭಿಪ್ರಾಯವಿದು.

‘ನಾನೂ ಒಳಗೊಂಡಂತೆ, ಎಲೆಮರೆಯ ಕಾಯಿಯಂತೆ ಕೆಲಸ ಮಾಡುತ್ತಿರುವ 22 ಸಾಧಕರನ್ನು ಗುರುತಿಸಿ ಗೌರವಿಸಿರುವ ‘ಪ್ರಜಾವಾಣಿ’ಯ ಕಾರ್ಯವೈಖರಿ ಅಭಿನಂದನೀಯ’ ಎಂದು ಅವರು ಶ್ಲಾಘಿಸಿದರು.

‘ಕನ್ನಡದ ಹೆಮ್ಮೆಯ ಪತ್ರಿಕೆ ‘ಪ್ರಜಾವಾಣಿ’ ಸಮಾಜದ ಅಂಕು–ಡೊಂಕುಗಳನ್ನು ತಿದ್ದುವುದರ ಜೊತೆಗೆ ಸಾಧಕರನ್ನು ಗುರುತಿಸುವ ಕೆಲಸ ಮಾಡುತ್ತಿರುವುದು ಅನುಕರಣೀಯ’ ಎಂದು ಸಮಾಜ ಸೇವೆಯಲ್ಲಿ ಗುರುತಿಸಿಕೊಂಡಿರುವ ದಾವಣಗೆರೆಯ ಹೊಸಕೇರಿ ಸುರೇಶ್ ಸಾಧಕರ ಪರವಾಗಿ ಅಭಿಪ್ರಾಯಪಟ್ಟರು.

‘ಪ್ರಜೆಗಳ ವಾಣಿಯಾದ ‘ಪ್ರಜಾವಾಣಿ’ ಅತ್ಯುತ್ತಮ ಕಾರ್ಯ ಮಾಡಿದೆ. ಸಮಾಜಮುಖಿ ಕೆಲಸಗಳಲ್ಲಿ ತೊಡಗಿದವರನ್ನು ಗುರುತಿಸುವುದು ಪ್ರತಿಯೊಬ್ಬರ ಕರ್ತವ್ಯ, ಜವಾಬ್ದಾರಿಯಾಗಿದೆ. ಸಮಾಜ ಸುಸ್ಥಿರವಾಗಿರಲು, ಆರೋಗ್ಯಕರವಾಗಿರಲು ಎಲ್ಲರೂ ಶ್ರಮಿಸಬೇಕು. ಇದರಿಂದ ಉತ್ತಮ ಸಮಾಜ ನಿರ್ಮಾಣವಾಗುತ್ತದೆ’ ಎಂದುಕಾರ್ಯಕ್ರಮ ಉದ್ಘಾಟಿಸಿದ ಶಿಕ್ಷಣ ತಜ್ಞ ಡಾ.ಎಂ.ಜಿ. ಈಶ್ವರಪ್ಪ ಹೇಳಿದರು.

‘ಸಾಧನೆ ಮಾಡಲು ಶಿಸ್ತು, ಶ್ರದ್ಧೆ, ಶ್ರಮ ಬೇಕು. ಅಂತೆಯೇ ಅಂತಹ ಸಾಧಕರ ಕೆಲಸವನ್ನು ಗಮನಿಸಿ ಪ್ರೋತ್ಸಾಹಿಸಬೇಕು. ಪ್ರತಿಭೆ, ಪರಿಶ್ರಮ ಹಾಗೂ ಪ್ರಯೋಗಕ್ಕೆ ಮುಂದಾಗಬೇಕು. ಸಾಧಕರನ್ನು ವೃದ್ಧಾಪ್ಯದಲ್ಲಿ ಗುರುತಿಸುವುದು ಸಾಮಾನ್ಯ. ಆದರೆ, ‘ಪ್ರಜಾವಾಣಿ’ ಬಳಗವು ವಯಸ್ಸಿನಲ್ಲಿ ಕಿರಿಯರಾದವರನ್ನೂ ಗುರುತಿಸಿ ಬೆನ್ನು ತಟ್ಟಿದೆ’ ಎಂದು ಅವರುತಿಳಿಸಿದರು.

ವಿಭಿನ್ನವಾಗಿ ಕೆಲಸ ಮಾಡುತ್ತ ಸಾಧನೆಗೆ ಮುಂದಾಗುವವರನ್ನು ಸಮಾಜ ಆರಂಭದಲ್ಲಿ ನಿರ್ಲಕ್ಷಿಸುತ್ತದೆ. ಆದರೆ, ಶ್ರದ್ಧೆಯಿಂದ ಕೆಲಸ ಮಾಡಿದವರನ್ನು ಖಂಡಿತ ಗುರುತಿಸುತ್ತದೆ ಎಂದು ಅವರು ಪ್ರತಿಪಾದಿಸಿದರು.

‘ಪ್ರಜಾವಾಣಿ’ ಸಾಧಕರನ್ನು ಗುರುತಿಸಿರುವುದರಿಂದ ಸಮಾಜದಲ್ಲಿರುವ ಎಲ್ಲರೂ ಗುರುತಿಸುವಂತಾಗಿದೆ. ಸಮಾಜಮುಖಿ ಕೆಲಸ ಇತರರಿಗೆ ಮಾದರಿಯಾಗಬೇಕು. ಸುತ್ತ ಇರುವವರನ್ನು ಜಾಗೃತರನ್ನಾಗಿ ಮಾಡುವಂತಾಗಬೇಕು. ಸಾಧನೆಗೆ ಮುಂದಾದವರ ಕಾಲೆಳೆಯುವವರೇ ಈಗ ಅಧಿಕ ಸಂಖ್ಯೆಯಲ್ಲಿ ಸಿಗುತ್ತಾರೆ. ಅದರತ್ತ ಲಕ್ಷ್ಯವಹಿಸದೆ ಗುರಿ ತಲುಪಬೇಕು. ಸಾಧನೆ ಇತರರಿಗೆ ಪ್ರೇರಣೆಯಾಗಬೇಕು’ ಎಂದು ಕಿವಿಮಾತು ಹೇಳಿದರು.

‘ಪ್ರಜಾವಾಣಿ’ ದಾವಣಗೆರೆ ಬ್ಯೂರೊ ಮುಖ್ಯಸ್ಥ ಸಿದ್ದಯ್ಯ ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿ, ‘ಎಲೆಮರೆಯ ಕಾಯಿಯಂತೆ ಕೆಲಸ ಮಾಡುವವರನ್ನು ಗುರುತಿಸುವ ಕೆಲಸವನ್ನು ಸಂಸ್ಥೆ ಮೂರು ವರ್ಷಗಳಿಂದ ಮಾಡುತ್ತಿದೆ’ ಎಂದರು.

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಪ್ರತಿನಿಧಿಗಳಾದ ಮಂಜುನಾಥ, ಶ್ರೀನಿವಾಸ, ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ನ ಜಾಹೀರಾತು ವಿಭಾಗದ ಡಿಜಿಎಂ (ರೆಸ್ಟ್‌ ಆಫ್‌ ಕರ್ನಾಟಕ) ಅನಂತ್ ವಿ., ದಾವಣಗೆರೆ ಜಾಹೀರಾತು ವಿಭಾಗದ ವ್ಯವಸ್ಥಾಪಕ ಪ್ರಮೋದ್ ಡಿ.ಭಾಗವತ್, ಮುದ್ರಣ ವಿಭಾಗದ ಮುಖ್ಯಸ್ಥ ಮುರುಳೀಧರ್ ಹಾಜರಿದ್ದರು. ಪ್ರಸರಣ ವಿಭಾಗದ ವ್ಯವಸ್ಥಾಪಕ ಪ್ರಕಾಶ್ ಎಸ್‌. ಸ್ವಾಗತಿಸಿದರು. ವರದಿಗಾರ ಬಾಲಕೃಷ್ಣ ಪಿ.ಎಚ್. ಕಾರ್ಯಕ್ರಮ ನಿರೂಪಿಸಿದರು. ಉಪಸಂಪಾದಕಿ ಎಚ್.ಅನಿತಾವಂದಿಸಿದರು.

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಪ್ರಾಯೋಜಕತ್ವ ಹಾಗೂ ಅಪೂರ್ವ ರೆಸಾರ್ಟ್ಸ್ ಸಹಕಾರದಲ್ಲಿ ನಡೆದ ಈ ಕಾರ್ಯಕ್ರಮ ಸಂತೋಷದ ಕ್ಷಣಗಳಿಗೆ ಸಾಕ್ಷಿಯಾಯಿತು. ಸಭಾಂಗಣದಲ್ಲಿ ಅಳವಡಿಸಿದ್ದ ಫಲಕದಲ್ಲಿ ‘ಪ್ರಜಾವಾಣಿ’ಯ ಸಾಧಕರ ಪಟ್ಟಿಯಲ್ಲಿ ತಮ್ಮ ಭಾವಚಿತ್ರ ಕಂಡು ಹರ್ಷವ್ಯಕ್ತಪಡಿಸಿದರಲ್ಲದೆ, ಆ ಭಾವಚಿತ್ರದ ಮತ್ತೊಂದು ಭಾವಚಿತ್ರ ಕ್ಲಿಕ್ಕಿಸಿ ತಮ್ಮ ವಾಟ್ಸ್‌ಆ್ಯಪ್ ಸ್ಟೇಟಸ್ ಹಾಗೂ ಡಿ.ಪಿ.ಗಳಿಗೆ ಅಳವಡಿಸಿಕೊಂಡರು.ಬಹುತೇಕರು ಕುಟುಂಬ ಸದಸ್ಯರು ಹಾಗೂ ಸ್ನೇಹಿತರ ಜೊತೆ ಸೆಲ್ಫಿ ಪಡೆದರು.

ಇವರು ಪ್ರಜಾವಾಣಿ ಸಾಧಕರು

ದಾವಣಗೆರೆ:
ನಲ್ಲೂರಿನ ಸ್ಟಾಫ್ ನರ್ಸ್ ರೇಷ್ಮಾ, ಜಗಳೂರಿನ ಪರ್ವತಾರೋಹಿ ಮೈಲೇಶ್, ರಂಗಶಿಕ್ಷಣದ ಗೊಪ್ಪೇನಹಳ್ಳಿಯ ಬಿ.ಟಿ.ಅರುಣ್, ಹರಿಹರದ ಪ್ರಗತಿಪರ ರೈತ ಎಸ್‌.ಎಸ್‌.ವೆಂಕಟರಾಮಾಂಜನೇಯ, ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಹೊಸಕೇರಿ ಸುರೇಶ್, ಇಂದಿರಾನಗರದ ಕುಸ್ತಿಪಟು ಎಸ್‌.ಕೆಂಚಪ್ಪ, ಮಾವಿನಕೋಟೆಯ ಶಿಕ್ಷಕ ಅಖಿಲ್ ಪಾಷಾ.

ಶಿವಮೊಗ್ಗ:
ಗಾಯಕಿರಾದ ಟಿ.ಜೆ.ನಾಗರತ್ನ, ಸುರೇಖಾ ಹೆಗಡೆ, ದೇಹದಾರ್ಢ್ಯಪಟು ಸಿ.ಸುಲೋಚನಾ, ಕ್ರೀಡಾ ತರಬೇತುದಾರ ಬಾಳಪ್ಪ ಮಾನೆ, ರಂಗಭೂಮಿ ನಿರ್ದೇಶಕ ಚಂದ್ರಶೇಖರ ಶಾಸ್ತ್ರಿ, ಶಿಕ್ಷಕ ಎಚ್.ಮಂಜುಬಾಬು, ರಂಗಭೂಮಿ ಕಲಾವಿದ ಶಿವಕುಮಾರ ಮಾವಲಿ.

ಚಿತ್ರದುರ್ಗ:
ವನ್ಯಜೀವಿ ಛಾಯಾಗ್ರಾಹಕ ಎಂ.ಕಾರ್ತಿಕ್, ಕಡೂರಿನ ಅಂಧ ಕ್ರಿಕೆಟಿಗ ಎಚ್.ಆರ್.ವೀರೇಶ್‌, ಷಟಲ್ ಬ್ಯಾಡ್ಮಿಂಟನ್ ಆಟಗಾರ ಟಿ.ಆರ್.ಪ್ರಸನ್ನಕುಮಾರ್, ನೆಲಗೇತನಹಳ್ಳಿಯ ಜನಪದ ಕಲಾವಿದ ಚಿತ್ರಲಿಂಗಯ್ಯ, ಸ್ಟ್ರಿಂಗ್ ಆರ್ಟ್ ಕಲಾವಿದೆ ಜಿ.ಜಿ.ಐಶ್ವರ್ಯ, ರೈತ ಮಹಿಳೆ (ಎಂಜಿನಿಯರ್) ದೊಣೆಹಳ್ಳಿಯ ರೋಜಾರೆಡ್ಡಿ, ಹಿರಿಯೂರಿನ ಸಾಫ್ಟ್‌ವೇರ್ ಎಂಜಿನಿಯರ್ ಎಂ.ಭರತ್‌ಕುಮಾರ್.

‘ಸಾಧನೆ ಮಾಡುವವರನ್ನು ಹುಚ್ಚರೆನ್ನುತ್ತಾರೆ’

ಸಾಧನೆ ಮಾಡುವುದು ಸುಲಭದ ಮಾತಲ್ಲ. ಸಾಧನೆಗೆ ಮುಂದಾಗುವವರನ್ನು ಜನ ಆರಂಭದಲ್ಲಿ ಹುಚ್ಚರು ಎ‌ನ್ನುತ್ತಾರೆ. ಅವಮಾನ ಮಾಡುತ್ತಾರೆ. ಕೋವಿಡ್ ಸಮಯದಲ್ಲಿ ಪ್ರಚಾರಕ್ಕೆ ಹೋದರೆ ನಮ್ಮನ್ನು ಅಸ್ಪೃಶ್ಯರಂತೆ ಕಾಣುತ್ತಿದ್ದರು. ಕುಡಿಯಲು ನೀರನ್ನೂ ಕೊಡುತ್ತಿರಲಿಲ್ಲ. ನಮ್ಮ ಸೇವೆ ಒಂದು ಸಾಧನೆ ಎಂದು ತಿಳಿದಿದ್ದೇ ‘ಪ್ರಜಾವಾಣಿ’ ಗುರುತಿಸಿದಾಗ.

–ಹೊಸಕೇರಿ ಸುರೇಶ್, ಸಮಾಜಸೇವಕ, ಹೊನ್ನಾಳಿ

***

‘ಪ್ರಶಸ್ತಿ ಕಿರೀಟವಲ್ಲ; ಜವಾಬ್ದಾರಿ’

ದೂರದ ಹಳ್ಳಿಯಲ್ಲಿದ್ದವರನ್ನು ಗುರುತಿಸಿರುವ ‘ಪ್ರಜಾವಾಣಿ’ ಬಳಗದ ಆಲೋಚನೆ ಅದ್ಭುತವಾಗಿದೆ. ನಿಷ್ಪಕ್ಷಪಾತವಾಗಿ ಸಾಧಕರನ್ನು ಗುರುತಿಸಿದೆ. ಪ್ರಶಸ್ತಿಗಳು, ಸನ್ಮಾನಗಳು, ಬಿರುದುಗಳು ಕಿರೀಟವಲ್ಲ. ಬದಲಿಗೆ, ಅವು ಜವಾಬ್ದಾರಿ ಹೆಚ್ಚಿಸಿರುವ ಸಾಧನಗಳು.

- ಎಂ.ಕಾರ್ತಿಕ್, ವನ್ಯಜೀವಿ ಛಾಯಾಗ್ರಾಹಕ, ಚಿತ್ರದುರ್ಗ

***

ಕಳೆದ ವರ್ಷ ಇದೇ ದಿನ ತಂದೆಯನ್ನು ಕಳೆದುಕೊಂಡಿದ್ದೆ. ಇಂದು ಪ್ರಶಸ್ತಿ ಸ್ವೀಕರಿಸಿದ್ದೇನೆ. ತಂದೆಯನ್ನು ನೆನೆಪಿಸಿಕೊಂಡಾಗ ಧನಾತ್ಮಕ ಭಾವನೆ ಬರುತ್ತಿದೆ. ನಾಗತಿಹಳ್ಳಿ ಚಂದ್ರಶೇಖರ್ ಸಲಹೆ ನೀಡಿದ್ದು ಅವರನ್ನು ಸ್ಮರಿಸುತ್ತೇನೆ.

–ಇ.ಎಂ.ಸಾದತ್, ಕಿರುಚಿತ್ರ ನಿರ್ದೇಶಕ, ಜಗಳೂರು

***

’ಪ್ರಜಾವಾಣಿ’ ಹಲವು ಸಲ ನನ್ನನ್ನು ಗುರುತಿಸಿ ಪ್ರೋತ್ಸಾಹಿಸಿದೆ. ಕಲಾವಿದರನ್ನು ಪೋಷಿಸುತ್ತಿರುವ ಪ್ರಜಾವಾಣಿ ಕಾರ್ಯ ಶ್ಲಾಘನೀಯ. ಕೊರೊನಾ ಸಮಯದಲ್ಲಿ ನೀಡಿದ ನೆರವು ಅವಿಸ್ಮರಣೀಯ

–ಟಿ.ಜೆ.,ನಾಗರತ್ನ, ಗಾಯಕಿ, ಶಿವಮೊಗ್ಗ

***

‘ಪ್ರಜಾವಾಣಿ’ ಪ್ರಬುದ್ಧ ಪತ್ರಿಕೆ. ಅನೇಕ ಪ್ರತಿಭಾವಂತರನ್ನು ಗುರುತಿಸಿದೆ. ಈ ಪ್ರಶಸ್ತಿಯನ್ನು ಗುಡ್ಡೇಕೇರಿಯ ಶಿಕ್ಷಣ ಪ್ರೇಮಿ ಕಾಡಮ್ಮ ಅವರಿಗೆ ಅರ್ಪಿಸುತ್ತೇನೆ.

–ಎಚ್.ಪಿ.ಮಂಜುಬಾಬು, ಮುಖ್ಯಶಿಕ್ಷಕ, ಶಿವಮೊಗ್ಗ

***

ಹೊಸ ವರ್ಷದಲ್ಲಿ ಪ್ರಶಸ್ತಿ ಘೋಷಣೆ ಮಾಡಿದಾಗ ಹೊಸ ಹುಮ್ಮಸ್ಸು ದೊರೆತಿತ್ತು. 100 ವರ್ಷಗಳ ಕಾಲ ಈ ಕಾರ್ಯ ಮುಂದುವರಿಯಲಿ.

–ಎಚ್‌.ಆರ್. ವೀರೇಶ್, ಅಂಧ ಕ್ರಿಕೆಟಿಗ, ಚಿತ್ರದುರ್ಗ

***

ನನಗೆ ಯಾರೂ ಸ್ಫೂರ್ತಿ ಅಲ್ಲ. ನಮಗೆ ನಾವೇ ಸ್ಫೂರ್ತಿ. ಪವರ್‌ ಲಿಫ್ಟಿಂಗ್‌ ಕಷ್ಟದ ಕೆಲಸ. ರಾಷ್ಟ್ರೀಯ ಸ್ಪರ್ಧೆಯಲ್ಲಿ ಸಾಧನೆ ಮಾಡುವ ಮೂಲಕ ಚಿನ್ನದ ಪದಕ ಪಡೆಯಲು ಪ್ರಯತ್ನಿಸುತ್ತಿದ್ದೇನೆ.

–ಸಿ.ಸುಲೋಚನಾ ದೇಹದಾರ್ಢ್ಯ ಪಟು, ಶಿವಮೊಗ್ಗ–

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT