ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಕೊರೊನಾ ಸೇನಾನಿಗಳಿಗೆ ‘ಪ್ರಜಾವಾಣಿ’ ಗೌರವ

ಕೋವಿಡ್ ನಿಯಂತ್ರಣದಲ್ಲಿ ಮಹತ್ವದ ಪಾತ್ರ ವಹಿಸಿದ ಸಾಧಕರಿಗೆ ಸನ್ಮಾನ
Last Updated 30 ಜನವರಿ 2021, 1:49 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ಸೃಷ್ಟಿಸಿದ ಭಯ ಅಷ್ಟಿಷ್ಟಲ್ಲ. ಇಡೀ ದೇಶವೇ ಲಾಕ್‌ಡೌನ್‌ನಿಂದಾಗಿ ಸ್ತಬ್ಧಗೊಂಡಿದ್ದಾಗ ಕೆಲವರು ಮಾತ್ರ ಎಲೆಮರೆ ಕಾಯಿಯಂತೆ ಕಾಯಕದಲ್ಲಿ ತೊಡಗಿದ್ದರು. ಅದರಲ್ಲೇ ಸಾರ್ಥಕ್ಯ ಕಂಡುಕೊಂಡರು.

ತೆರೆಮರೆಯಲ್ಲೇ ಸೇನಾನಿಗಳಂತೆ ಅವಿರತವಾಗಿ ಶ್ರಮಿಸಿದ್ದ ಅಂಥವರನ್ನು ಗುರುತಿಸಿದ್ದು ‘ಪ್ರಜಾವಾಣಿ’. ನಗರದ ಚೇತನಾ ಹೋಟೆಲ್‌ನಲ್ಲಿ ಶುಕ್ರವಾರ ನಡೆದ ಅಭಿನಂದನಾ ಸಮಾರಂಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 21 ಮಂದಿ ಸಾಧಕರಿಗೆ ಶ್ಲಾಘನಾ ಪತ್ರ ನೀಡಿ ಅಭಿನಂದನೆ ಸಲ್ಲಿಸಿತು. ‘ಪ್ರಜಾವಾಣಿ’ಯ ಕಾರ್ಯವೈಖರಿಯನ್ನು ಗೌರವಕ್ಕೆ ಭಾಜನರಾದವರು ಧನ್ಯತಾಭಾವದಿಂದ ಶ್ಲಾಘಿಸಿದರು.2020ರಲ್ಲಿ 20 ಮಂದಿ ಯುವ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗಿತ್ತು.

ದಾವಣಗೆರೆ, ಚಿತ್ರದುರ್ಗ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ನಿಸ್ವಾರ್ಥ ಸೇವೆ ಮಾಡಿದ ನೂರಾರು ಕೊರೊನಾ ಸೇನಾನಿಗಳ ಪ್ರತಿನಿಧಿಗಳನ್ನಾಗಿ ಇವರನ್ನು ಗೌರವಿಸಲಾಯಿತು.

ಶಿವಮೊಗ್ಗದ ಶ್ರೀರಾಂಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಜಿ.ಆರ್.ಶ್ರೀಧರ್,‘ನನ್ನ ಕಾರ್ಯ‌ಕ್ಕೆ ಪತ್ನಿ ಹಾಗೂ ಮಗ ನೀಡಿದ ಬೆಂಬಲದಿಂದ ಇದು ಸಾಧ್ಯವಾಯಿತು. ಅಲ್ಲದೇ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಮಾರ್ಗದರ್ಶನವೂ ಇಂಬು ನೀಡಿತು. ಕಳೆದ ವರ್ಷ ಮಾರ್ಚ್ ತಿಂಗಳಲ್ಲಿ ಕೊರೊನಾ ಕಾಣಿಸಿಕೊಂಡಾಗ ರೈಲ್ವೆ ಹಾಗೂ ಬಸ್ ನಿಲ್ದಾಣದಿಂದ ಸ್ಕ್ರೀನಿಂಗ್ ಮಾಡುತ್ತಿದ್ದೆವು. ಆಗ ಬಹಳ ಜನ ಕೆಲಸ ಮಾಡಲು ಹಿಂಜರಿಯುತ್ತಿದ್ದರು’ ಎಂದು ಸ್ಮರಿಸಿದರು.

ದಾವಣಗೆರೆ ಎಸ್‌ಪಿ ಕಚೇರಿಯ ಜಿಲ್ಲಾ ವಿಶೇಷ ವಿಭಾಗದ ಎ.ಆರ್‌.ಎಸ್.ಐ ಬಿ.ಕೆ.ಅಜ್ಜಯ್ಯ ಮಾತನಾಡಿ, ‘ವೈದ್ಯರ ಕೆಲಸವನ್ನು ನಾವು ನೋಡಿದ್ದೇವೆ. ಆಸ್ಪತ್ರೆಯಲ್ಲಿ ಜನರು ಸಂಚರಿಸಲು ಭಯ ಪಡುತ್ತಿದ್ದಂತಹ ಸಂದರ್ಭದಲ್ಲಿ ವೈದ್ಯರು, ನರ್ಸ್‌ಗಳು ಹಾಗೂ ‘ಡಿ’ ಗ್ರೂಪ್‌ ನೌಕರರು ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ’ ಎಂದು ಧನ್ಯವಾದ ಸಲ್ಲಿಸಿದರು.

ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ವೈದ್ಯ ಡಾ. ಪ್ರಕಾಶ್, ‘ಆರಂಭದಲ್ಲಿ ಜನರು ಆಸ್ಪತ್ರೆಗೆ ಬರಲು ಹೆದರುತ್ತಿದ್ದ ಸಂದರ್ಭದಲ್ಲಿ ಪೊಲೀಸರು, ಅಂಗನವಾಡಿ ಕಾರ್ಯಕರ್ತೆಯರು, ಮಾಧ್ಯಮದವರೂ ಸೇರಿ ಅನೇಕ ಮಂದಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ದುಡಿದು ಕೊಡುಗೆ ನೀಡಿದ್ದಾರೆ. ಅವರ ಸೇವೆಯನ್ನು ಸ್ಮರಿಸಬೇಕು’ ಎಂದರು.

‘ಪಿಪಿಇ ಕಿಟ್ ಧರಿಸುವುದು ಎಷ್ಟು ಮುಖ್ಯವೋ ಅದನ್ನು ತೆಗೆಯುವಾಗ ಅಷ್ಟೇ ಎಚ್ಚರಿಕೆ ಅಗತ್ಯ. ಆರ್ಡರ್ ಪ್ರಕಾರವೇ ತೆಗೆಯಬೇಕು. ಸ್ವಲ್ಪ ವ್ಯತ್ಯಾಸವಾದರೂ ಕೋವಿಡ್ ಹರಡುವ ಸಂಭವ ಇತ್ತು. ಪಿಪಿಇ ಕಿಟ್ ಎಲ್ಲಿಯೂ ಬೀಳದಂತೆ ಜೋಪಾನವಾಗಿ ಸಾಗಿಸುವುದು ಸವಾಲಿನ ಕೆಲಸ’ ಎಂದು ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯ ಘನತ್ಯಾಜ್ಯ ಮೇಲ್ವಿಚಾರಕ ವಿಕಾಸ್ ಹೇಳಿದರು.

‘ಪ್ರಜಾವಾಣಿ’ ದಾವಣಗೆರೆ ಬ್ಯೂರೊ ಮುಖ್ಯಸ್ಥ ವಿಶಾಖ ಎನ್., ಪ್ರಸರಣ ವಿಭಾಗದ ವ್ಯವಸ್ಥಾಪಕ ಎಸ್.ಪ್ರಕಾಶ್, ಜಾಹೀರಾತು ವಿಭಾಗದ ಹಿರಿಯ ವ್ಯವಸ್ಥಾಪಕ ಪ್ರಮೋದ್ ಭಾಗವತ್, ಮುದ್ರಣ ವಿಭಾಗದ ವ್ಯವಸ್ಥಾಪಕ ಟಿ.ಮುರಳಿಧರ್ ಅವರು ಕೊರೊನಾ ಸೇನಾನಿಗಳನ್ನು ಅಭಿನಂದಿಸಿದರು.

‘ಕೊರೊನಾ ವಾರಿಯರ್ಸ್ ಅಲ್ಲ, ವೈರಸ್ ಎಂದಿದ್ದರು’

‘ಕೊರೊನಾ ಸಂದರ್ಭ ನಾವು ಕೆಲಸ ಮುಗಿಸಿ ಹಳ್ಳಿಗಳಿಗೆ ಹೋದಾಗ ನಮ್ಮ ಕಣ್ಣುತಪ್ಪಿಸಿ ಓಡಿ ಹೋಗುತ್ತಿದ್ದರು. ನಮ್ಮ ಜೊತೆ ಕೆಲಸ ಮಾಡಿದವರಿಗೆ ಬಫರ್ ಝೋನ್‌ಗಳಲ್ಲಿ ಕೊರೊನಾ ವಾರಿಯರ್ಸ್ ಅನ್ನು ‘ನೀವು ಕೊರೊನಾ ವಾರಿಯರ್ಸ್ ಅಲ್ಲ, ಕೊರೊನಾ ವೈರಸ್’ ಎಂದು ಟೀಕಿಸಿದರು. ಕೊನೆಗೆ ನಮಗೆ ಸಹಕಾರ ಕೊಟ್ಟರು. ಕುಟುಂಬದವರು ನಮ್ಮನ್ನು ನೋಡಿ ಹಿಂಜರಿಯುವ ಸಂದರ್ಭ ಬಂದಿತ್ತು. ಆ ವೇಳೆ ಅಧಿಕಾರಿಗಳು ಮನೋಸ್ಥೈರ್ಯ ತುಂಬಿದರು. ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ನಮ್ಮ ಜೊತೆಗೆ ಮಾಧ್ಯಮಗಳು ಕೆಲಸ ಮಾಡಿವೆ’ ಎಂದು ಶಿವಮೊಗ್ಗ ಹಸೂಡಿ ಹಕ್ಕಿಪಿಕ್ಕಿ ಕ್ಯಾಂಪ್‌ನ ಆಶಾ ಕಾರ್ಯಕರ್ತೆ ಎಸ್‌.ಟಿ. ಗೀತಾ ಅವರು ಅನುಭವ ಹಂಚಿಕೊಂಡರು.

‘ಮಗಳ ಮದುವೆಗೂ ಹೋಗಲಾಗಲಿಲ್ಲ’

ದಾವಣಗೆರೆ ಎಸ್‌.ಎಂ.ಕೆ.ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ರತ್ನಮ್ಮ ಕೊರೊನಾ ಕರ್ತವ್ಯದ ಕಾರಣ ತಮ್ಮ ಮಗಳ ಮದುವೆಗೆ ಹೋಗದೇ ಇರುವುದನ್ನು ನೆನೆಸಿಕೊಂಡು ಭಾವುಕರಾದರು.

‘ಜಾಲಿನಗರದಲ್ಲೇ ಮೊದಲ ಕೇಸ್ ಕಾಣಿಸಿಕೊಂಡಿತ್ತು. 250ರಿಂದ 300 ಜನ ಎಲ್ಲರೂ ಸೇರಿ ಒಟ್ಟಾಗಿ ಕೆಲಸ ಮಾಡುತ್ತಿದ್ದೆವು. ಮಗಳ ಮದುವೆ ಇತ್ತು. ಕೋವಿಡ್ ಸಂದರ್ಭವಾದ್ದರಿಂದ ರಜೆ ಕೇಳಲು ಆಗಲಿಲ್ಲ. ನನ್ನ ನೋವನ್ನು ಯಾರಿಗೂ ಹೇಳಲಿಲ್ಲ. ‘ಪ್ರಜಾವಾಣಿ’ ನನ್ನನ್ನು ಗುರುತಿಸಿರುವುದಕ್ಕೆ ಹೆಮ್ಮೆಯಾಗುತ್ತಿದೆ’ ಎಂದರು.

‘ಸ್ವಂತ ಊರಿನಲ್ಲೇ ಕಹಿ ಅನುಭವ’

‘ಮೇ ತಿಂಗಳಲ್ಲಿ ಮೊದಲ ಪಾಸಿಟಿವ್ ಪ್ರಕರಣ ಬಂದಿದ್ದು, ಕೆಲವರು ಕೆಲಸ ಮಾಡದೇ ಬಿಟ್ಟು ಹೋದರು. ಗುತ್ತಿಗೆ ಆಧಾರದ ಮೇಲೆ ಆಯ್ಕೆಗೊಂಡಿದ್ದರಿಂದ ಉಳಿದುಕೊಳ್ಳಲು ನಮಗೆ ವ್ಯವಸ್ಥೆ ಇರಲಿಲ್ಲ. ಕ್ವಾರಂಟೈನ್ ಮುಗಿಸಿ ಗ್ರಾಮಕ್ಕೆ ಹೋದಾಗ ನಮ್ಮನ್ನು ಅನುಮಾನದ ದೃಷ್ಟಿಯಿಂದ ನೋಡುತ್ತಿದ್ದರು. ಸರಿಯಾಗಿ ಮಾತನಾಡಿಸುತ್ತಿರಲಿಲ್ಲ’ ಎಂದು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಯ ಸ್ಟಾಫ್ ನರ್ಸ್ ಜಿ.ಎ.ಸೌಮ್ಯಾ ತಮಗಾದ ಕಹಿ ಅನುಭವವ‌ನ್ನು ಹಂಚಿಕೊಂಡರು.

ಒಡಲ ಕುಡಿ ಹೊತ್ತುಕೊಂಡೇ ಕೆಲಸ

‘ಕೊರೊನಾ ಸಮಯದಲ್ಲಿ ಗರ್ಭಿಣಿಯಾಗಿದ್ದರೂ ಕೋವಿಡ್ ಸಮಯದಲ್ಲಿ ಕರ್ತವ್ಯ ನಿರ್ವಹಿಸಿದವರು ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕಿನ ಜಯಚಾಮರಾಜೇಂದ್ರ ಸಾರ್ವಜನಿಕ ಆಸ್ಪತ್ರೆಯ ಶುಶ್ರೂಷಕಿ ಎಸ್.ರೂಪಾ. ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರೇ ಇವರ ಕಾರ್ಯವೈಖರಿಯನ್ನು ಶ್ಲಾಘಿಸಿದ್ದರು.

‘ಕೊರೊನಾ ಜಾಸ್ತಿಯಾಗಿತ್ತು. ಗರ್ಭಿಣಿಯಾಗಿದ್ದರಿಂದ ಕರ್ತವ್ಯ ಮಾಡುವುದು ಬೇಡ ಎಂದು ಎಲ್ಲರೂ ಸಲಹೆ ನೀಡುತ್ತಿದ್ದರು. ಮನೆಯಲ್ಲಿ ಕುಳಿತುಕೊಳ್ಳಲು ಆಗಲಿಲ್ಲ. ಪತಿಯನ್ನು ಒಪ್ಪಿಸಿ ಕರ್ತವ್ಯಕ್ಕೆ ಮರಳಿದೆ. ಬಸ್ 120 ಕಿ.ಮೀ ಸಂಚರಿಸಿ ಕೆಲಸ ಮಾಡಿದೆ. ಇದು ನನಗೆ ತುಂಬಾ ಖುಷಿ ತಂದಿದೆ’ ಎಂದು ರೂಪಾ ಖುಷಿಯಿಂದ ಹೇಳಿದರು.

ಕರ್ತವ್ಯವೇ ಬಯಕೆಯಾದಾಗ..!

‘ಸೀಮಂತ ಮಾಡುವ ಸಮಯದಲ್ಲಿ ಕೆಲಸ ಗರ್ಭಿಣಿಯರಿಗೆ ಹಲವು ಬಯಕೆಗಳು ಇರುತ್ತವೆ. ಆದರೆ ನನ್ನ ಪತ್ನಿಗೆ ಇದ್ದಿದ್ದು, ಒಂದೇ ಬಯಕೆ. ಅದು ಕೋವಿಡ್ ಸಮಯದಲ್ಲಿ ಕೆಲಸ ಮಾಡುವುದು’ ಎಂದು ರೂಪಾ ಅವರ ಪತಿ ಪ್ರವೀಣ್‌ರಾವ್ ಅನುಭವ ಹಂಚಿಕೊಂಡರು.

‘ಪ್ರಜಾವಾಣಿ’ ಕಾರ್ಯ ಶ್ಲಾಘಿಸಿದ ಸೇನಾನಿಗಳು

ಸನ್ಮಾನ ಸ್ವೀಕರಿಸಿದ ಕೊರೊನಾ ಸೇನಾನಿಗಳು ‘ಪ್ರಜಾವಾಣಿ’ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು. ಡಾ.ಜಿ.ಆರ್.ಶ್ರೀಧರ್, ‘ನಮ್ಮಂತಹವರನ್ನು ಗುರುತಿಸಿ ‘ಪ್ರಜಾವಾಣಿ’ ಪ್ರಶಸ್ತಿ ನೀಡಿದ್ದು, ಖುಷಿ ತಂದಿದೆ’ ಎಂದು ಹೇಳಿದರು.

ಶುಶ್ರೂಷಕಿ ಎಸ್.ರೂಪಾ ಅವರ ಪತಿ ಪ್ರವೀಣ್‌ರಾವ್ ಅವರು ‘ಪ್ರಜಾವಾಣಿ’ ಮಾತೃಸಂಸ್ಥೆ ಇದ್ದ ಹಾಗೆ. ಅಕ್ಷರದಿಂದ ಊಟ ಮಾಡುತ್ತಿದ್ದೇವೆ’ ಎಂದು ಶ್ಲಾಘಿಸಿದರು.

ಪ್ರಜಾವಾಣಿ ಕೊರೊನಾ ಸೇನಾನಿ ಪ್ರಶಸ್ತಿ ಪುರಸ್ಕೃತರು

ದಾವಣಗೆರೆ ಜಿಲ್ಲೆ

*ಡಾ.ಅರುಣಾಕುಮಾರಿ, ವೈದ್ಯೆ, ಚಿಗಟೇರಿ ಜಿಲ್ಲಾ ಆಸ್ಪತ್ರೆ

*ಕೆ.ಎನ್.ನರೇಂದ್ರಕುಮಾರ್, ಆ್ಯಂಬುಲೆನ್ಸ್ ಚಾಲಕ, ಜಿಲ್ಲಾ ಆಸ್ಪತ್ರೆ

*ರತ್ನಮ್ಮ, ಕಿರಿಯ ಸಹಾಯಕಿ, ಎಸ್‌.ಎಂ.ಕೆ.ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ

*ಸ್ಫೂರ್ತಿ ಸೇವಾ ಟ್ರಸ್ಟ್: ಸಮಾಜ ಸೇವಾ ಸಂಸ್ಥೆ

*ಸಾಜಿದ್ ಅಹಮದ್, ಸಮಾಜ ಸೇವಕ, ಆಜಾದ್‌ನಗರ

*ಜೆ.ವಿ.ಗೋಪಾಲಕೃಷ್ಣ, ಪ್ರಯೋಗಾಲಯ ತಂತ್ರಜ್ಞ, ಜಿಲ್ಲಾ ಸರ್ವೇಕ್ಷಣಾ ತಂಡ

*ನವೀನ್, ಆರೋಗ್ಯ ಸಹಾಯಕ, ಜಿಲ್ಲಾ ಕೀಟಜನ್ಯ ರೋಗಗಳ ನಿಯಂತ್ರಣಾಧಿಕಾರಿ

*ಭಾಗ್ಯಮ್ಮ, ‘ಡ್ರಿ’ ಗ್ರೂಪ್ ನೌಕರೆ, ಚಿಗಟೇರಿ ಆಸ್ಪತ್ರೆ

*ಬಿ.ಕೆ.ಅ‌ಜ್ಜಯ್ಯ, ಎ.ಆರ್.ಎಸ್ಐ, ಎಸ್ಪಿ ಕಚೇರಿ, ಜಿಲ್ಲಾ ವಿಶೇಷ ವಿಭಾಗ

ಶಿವಮೊಗ್ಗ ಜಿಲ್ಲೆ

*ಎಸ್.ರೂಪಾ, ಶುಶ್ರೂಷಕಿ, ಜಯಚಾಮರಾಜೇಂದ್ರ ಸಾರ್ವಜನಿಕ ಆಸ್ಪತ್ರೆ, ತೀರ್ಥಹಳ್ಳಿ

*ಚೌಡಪ್ಪ ಕಮತರ್, ಕಾನ್‌ಸ್ಟೆಬಲ್, ದೊಡ್ಡಪೇಟೆ ಪೊಲೀಸ್ ಠಾಣೆ

*ಡಾ.ಜಿ.ಆರ್.ಶ್ರೀಧರ್, ವೈದ್ಯ, ಶ್ರೀರಾಂಪುರ ಪ್ರಾಥಮಿಕ ಆರೋಗ್ಯ ಕೇಂದ್ರ

*ಅನಸೂಯಮ್ಮ, ಶವ ಸಂಸ್ಕಾರ ಮಾಡುವವರು, ರೋಟರಿ ಚಿತಾಗಾರ

*ಸಲೀಂಖಾನ್, ಅಲ್ಲಾ ಬಕ್ಷಿ ತಂಡ, ಸಮಾಜ ಸೇವಕ

*ವಿಕಾಸ್, ಘನತ್ಯಾಜ್ಯ ನಿರ್ವಹಣೆ ಮೇಲ್ವಿಚಾರಕ, ಮೆಗ್ಗಾನ್ ಆಸ್ಪತ್ರೆ

*ಎಸ್‌.ಟಿ.ಗೀತಾ, ಆಶಾ ಕಾರ್ಯಕರ್ತೆ, ಹಸೂಡಿ ಹಕ್ಕಿಪಿಕ್ಕಿ ಕ್ಯಾಂಪ್ಚಿ

ಚಿತ್ರದುರ್ಗ ಜಿಲ್ಲೆ

*ಡಾ.ಪ್ರಕಾಶ್, ವೈದ್ಯ, ಜಿಲ್ಲಾ ಆಸ್ಪತ್ರೆ

*ಇ.ಮಂಜುನಾಥ್, ನಗರಸಭೆ ಪೌರಕಾರ್ಮಿಕ

*ರವಿಕುಮಾರ್, ನಗರಸಭೆ ಪೌರಕಾರ್ಮಿಕ

*ವೈ.ವಿ.ಬಸವರೆಡ್ಡಿ, ಹೆಡ್‌ ಕಾನ್‌ಸ್ಟೆಬಲ್, ಹೊಳಲ್ಕೆರೆ ಪೊಲೀಸ್ ಠಾಣೆ

*ಜಿ.ಎ.ಸೌಮ್ಯಾ, ಸ್ಟಾಫ್ ನರ್ಸ್, ಜಿಲ್ಲಾ ಆಸ್ಪತ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT