ಬುಧವಾರ, 12 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜುಲೈ 1ರಿಂದ ಖಾಸಗಿ ಬಸ್ ಸಂಚಾರ

ಪ್ರಯಾಣ ದರ ಶೇ 20ರಷ್ಟು ಏರಿಕೆ* 6 ತಿಂಗಳ ತೆರಿಗೆ ವಿನಾಯಿತಿ ನೀಡಲು ಆಗ್ರಹ
Last Updated 25 ಜೂನ್ 2021, 16:06 IST
ಅಕ್ಷರ ಗಾತ್ರ

ದಾವಣಗೆರೆ: ಜುಲೈ 1ರಿಂದ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳು ರಸ್ತೆಗಿಳಿಯಲಿದ್ದು, ಶೇ 20ರಷ್ಟು ಪ್ರಯಾಣ ದರ ಏರಿಕೆಯಾಗಲಿದೆ.

ಕೊರೊನಾ ಎರಡನೆಯ ಅಲೆಯ ಬಳಿಕ ಉಂಟಾದ ಲಾಕ್‌ಡೌನ್‌ನಿಂದಾಗಿ ನಷ್ಟಕ್ಕೆ ಒಳಗಾಗಿರುವ ದಾವಣಗೆರೆ ಜಿಲ್ಲಾ ಖಾಸಗಿ ಬಸ್ ಮಾಲೀಕರ ಸಂಘದವರು ಶುಕ್ರವಾರ ಇಲ್ಲಿನ ಅಪೂರ್ವ ರೆಸಾರ್ಟ್‌ನಲ್ಲಿ ಸಭೆ ನಡೆಸಿ ಈ ನಿರ್ಧಾರ ಕೈಗೊಂಡಿದ್ದಾರೆ.

ಸಭೆಯ ಬಳಿಕ ಸಂಘದ ಅಧ್ಯಕ್ಷ ಮಂಜುನಾಥ್ ಕಮ್ಮತ್ತಹಳ್ಳಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಲಾಕ್‌ಡೌನ್ ಸಡಿಲಿಸಿರುವ ಸರ್ಕಾರ ಬಸ್ ಓಡಾಟಕ್ಕೆ ಜೂನ್ 21ರಿಂದ ಅನುಮತಿ ನೀಡಿದೆ.ಆದರೆ, ಏಳೆಂಟು ದಿನ ಬಸ್ ಓಡಿಸಲು ₹ 47,952 ಪಾವತಿಸಬೇಕಾಗುತ್ತದೆ. ಹೀಗಾಗಿ ಜುಲೈ 1ರಿಂದ ಬಸ್‌ ಓಡಿಸಲಾಗುವುದು. ಡೀಸೆಲ್, ಟೈರ್ ಹಾಗೂ ವಾಹನಗಳ ಬಿಡಿಭಾಗಗಳ ಬೆಲೆ ಹೆಚ್ಚಿರುವುದರಿಂದ ಶೇ 20ರಷ್ಟು ಬಸ್ ಪ್ರಯಾಣ ದರ ಹೆಚ್ಚಿಸುವುದು ಅನಿವಾರ್ಯ’ ಎಂದು ಹೇಳಿದರು.

‘ಡೀಸೆಲ್ ದರ ₹95 ಆಗಿದ್ದು, ರಾಜ್ಯದಲ್ಲಿ 8ರಿಂದ 9 ಸಾವಿರ ಖಾಸಗಿ ಬಸ್‌ಗಳು ಸಂಚರಿಸುತ್ತಿವೆ. ಒಂದು ಲೀಟರ್ ಡೀಸೆಲ್‌ನಿಂದ ರಾಜ್ಯ ಸರ್ಕಾರಕ್ಕೆ ₹26 ಹಾಗೂ ಕೇಂದ್ರ ಸರ್ಕಾರಕ್ಕೆ ₹34 ತೆರಿಗೆ ಸಂದಾಯವಾಗುತ್ತಿದೆ. ಟ್ಯಾಕ್ಸಿ, ಆಟೊ ಚಾಲಕರಿಗೆ ಪ್ಯಾಕೇಜ್ ಘೋಷಿಸಿರುವ ರಾಜ್ಯ ಸರ್ಕಾರ ಖಾಸಗಿ ಬಸ್ ಚಾಲಕರು ಹಾಗೂ ಮಾಲೀಕರನ್ನು ಮರೆತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘9 ಸಾವಿರ ಬಸ್‌ಗಳಿಗೆ ಮೂರು ತಿಂಗಳಿಗೆ ₹ 383 ಕೋಟಿ, ವರ್ಷಕ್ಕೆ ₹1,542 ಕೋಟಿತೆರಿಗೆ ಸರ್ಕಾರಕ್ಕೆ ಸಂದಾಯವಾಗುತ್ತದೆ. ಇದರಲ್ಲಿ ಶೇ 10ರಷ್ಟು ಪರಿಹಾರ ನೀಡಬಹುದಿತ್ತು. ಆದರೆ ಸರ್ಕಾರ ಪರಿಹಾರ ನೀಡಿಲ್ಲ. ಬ್ಯಾಟರಿ, ಟೈರ್ ರಿಪೇರಿ, ಬಿಡಿ ಭಾಗಗಳು ಏರಿಕೆಯಾಗಿರುವುದರಿಂದ ತೆರಿಗೆಯಲ್ಲಿ ರಿಯಾಯಿತಿ ನೀಡಿದರೆ ಅನುಕೂಲವಾಗುತ್ತದೆ’ ಎಂದು ಹೇಳಿದರು.

‘ರಾಜ್ಯ ಸರ್ಕಾರ ಶೇ 50ರಷ್ಟು ಸೀಟು ತುಂಬಲು ಅವಕಾಶ ನೀಡಿದೆ. ಆದರೆ ತೆರಿಗೆ ಹಾಗೂ ಇನ್ಷುರೆನ್ಸ್ ಅನ್ನು ಶೇ 100ರಷ್ಟು ವಸೂಲಿ ಮಾಡುತ್ತಿದೆ.ಕೋವಿಡ್ ಲಾಕ್‌ಡೌನ್‌ ಸಂದರ್ಭದಲ್ಲಿ ಎರಡು ತಿಂಗಳು ಖಾಸಗಿ ಬಸ್‌ಗಳು ಮಾರ್ಗಗಳಲ್ಲಿ ಸಂಚರಿಸಲಾಗದೇ ಮಾಲೀಕರು ಸಂಕಷ್ಟದಲ್ಲಿದ್ದು, 6 ತಿಂಗಳ ತನಕ ತೆರಿಗೆಯಲ್ಲಿ ವಿನಾಯಿತಿ ನೀಡಬೇಕು. ‌ಇದರ ಜೊತೆಗೆ ಸಾಲದ ಕಂತು ಪಾವತಿಯನ್ನು ಡಿಸೆಂಬರ್‌ವರೆಗೆ ಮುಂದೂಡಬೇಕು’ ಎಂದು ಒತ್ತಾಯಿಸಿದರು.

’ಜಿಲ್ಲೆಯಲ್ಲಿ 300 ಖಾಸಗಿ ಬಸ್‌ಗಳು ಇದ್ದು, ಗ್ರಾಮಾಂತರ ಪ್ರದೇಶದಲ್ಲಿ ಸಂಚರಿಸುತ್ತಿವೆ. ಶಾಲಾ ಮಕ್ಕಳಿಗೆ, ಅಂಗವಿಕಲರಿಗೆ, ಸರ್ಕಾರಿ ನೌಕರರಿಗೆ ರಿಯಾಯಿತಿ ನೀಡಿದ್ದೇವೆ. ಕೆಎಸ್‌ಆರ್‌ಟಿಸಿ ಬಸ್‌ ನೌಕರರು ಮುಷ್ಕರದಲ್ಲಿ ತೊಡಗಿದ್ದಾಗ ನಾವು ಬಸ್‌ಗಳನ್ನು ಓಡಿಸಿ ಸರ್ಕಾರದ ಮಾನ ಮರ್ಯಾದೆ ಉಳಿಸಿದ್ದೇವೆ. ಈಗ ನಮ್ಮ ಮರ್ಯಾದೆಯನ್ನು ಸರ್ಕಾರ ಉಳಿಸಬೇಕು’ ಎಂದು ಆಗ್ರಹಿಸಿದರು.

‘ಲಾಕ್‌ಡೌನ್ ಅವಧಿಯಲ್ಲಿ ಎರಡು ತಿಂಗಳು ಬಸ್ ಸರಂಡರ್ ಮಾಡಿದ್ದೇವೆ. ಮೂರು ತಿಂಗಳಿಗೆ ಮುಂಗಡವಾಗಿ ಸರ್ಕಾರಕ್ಕೆ ಹಣ ಕಟ್ಟಿ ಬಸ್ ಓಡಿಸುತ್ತಿದ್ದೇವೆ. ಶೇ 50ರಷ್ಟು (24 ಸೀಟುಗಳು) ಮಾತ್ರ ತೆರಿಗೆ ತೆಗೆದುಕೊಳ್ಳಬೇಕು. ಈ ಕುರಿತು ಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವರಿಗೆ ಮನವಿ ಸಲ್ಲಿಸಲಾಗುವುದು’ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಎಂ.ಆರ್. ಸತೀಶ್, ಭೈರೇಶ, ಈರಣ್ಣ, ಮಹೇಶ ಪಲ್ಲಾಗಟ್ಟೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT