ಮಂಗಳವಾರ, ಅಕ್ಟೋಬರ್ 20, 2020
21 °C
ಮಾರಾಟದಲ್ಲಿ ಶೇ 2 ರಷ್ಟು ಹೆಚ್ಚಳ: ಶಿಮುಲ್‌ ಸಾಧನೆ

ಕೊರೊನಾ ಸಂಕಷ್ಟದಲ್ಲೂ ಹಾಲು ಮಾರಾಟದಲ್ಲಿ ಪ್ರಗತಿ

ಚಂದ್ರಶೇಖರ ಆರ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಲಾಕ್‌ಡೌನ್‌, ಕೊರೊನಾ ಸಂಕಷ್ಟದ ನಡುವೆಯೂ ಹಾಲು ಮಾರಾಟ ಪ್ರಮಾಣದಲ್ಲಿ ಪ್ರಗತಿ ಸಾಧಿಸುವ ಮೂಲಕ ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಉತ್ಪಾದಕರ ಒಕ್ಕೂಟ (ಶಿಮುಲ್‌) ಸಾಧನೆ ಮಾಡಿದೆ.

ಲಾಕ್‌ಡೌನ್‌ ಪರಿಣಾಮ ಇತರೆ ಹಾಲು ಒಕ್ಕೂಟಗಳಲ್ಲಿ ಹಾಲು ಪೂರೈಕೆ ಪ್ರಮಾಣ ಹೆಚ್ಚಾಗಿ ಮಾರಾಟ ಕುಸಿತ ಕಂಡಿದ್ದರೆ ಶಿಮುಲ್‌ ಮಾರಾಟ ಪ್ರಮಾಣದಲ್ಲಿ ಅಭಿವೃದ್ಧಿ ದಾಖಲಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದೆ.

ಕೊರೊನಾ ತಂದ ಸಂಕಷ್ಟ ಡೇರಿ ಉದ್ಯಮದ ಮೇಲೂ ಗಂಭೀರ ಪರಿಣಾಮ ಬೀರಿದೆ. ಮದುವೆ, ದೇವಸ್ಥಾನ, ಹೋಟೆಲ್‌ ಕ್ಯಾಂಟೀನ್ ಹೀಗೆ ಹಲವೆಡೆ ಪ್ರತಿದಿನ ಸಾವಿರಾರು ಲೀಟರ್ ಹಾಲು, ಬೆಣ್ಣೆ, ತುಪ್ಪ, ಮೊಸರು, ಮಜ್ಜಿಗೆ ಮಾರಾಟವಾಗುತ್ತಿತ್ತು. ಆದರೆ ಕೊರೊನಾದಿಂದ ಮಾರಾಟ ನಡೆಯುತ್ತಿಲ್ಲ. ಇದರಿಂದ ಹಲವು ಹಾಲು ಒಕ್ಕೂಟಗಳಲ್ಲಿ ಮಾರಾಟ ಕುಸಿತ ಕಂಡಿದೆ.  

ಆದರೆ ಶಿಮುಲ್‌ನಲ್ಲಿ ಮಾರಾಟ ಪ್ರಮಾಣ ಹೆಚ್ಚಳವಾಗಿರುವುದು ಆಶಾದಾಯಕ ಬೆಳವಣಿಗೆ. ಲಾಕ್‌ಡೌನ್‌ನಲ್ಲೂ ಹಾಲು ಮಾರಾಟದಲ್ಲಿ ಹೆಚ್ಚಿನ ಕುಸಿತವಾಗಿಲ್ಲ. ಅಲ್ಲದೇ ಹಂತ ಹಂತವಾಗಿ ಲಾಕ್‌ಡೌನ್‌ ತೆರವಾದ ಕಾರಣ ಮಾರಾಟದಲ್ಲಿ ಶೇ 2 ರಷ್ಟು ಹೆಚ್ಚಳ ಕಂಡಿರುವುದು ಸಂಸ್ಥೆಯ ಕಾರ್ಯವೈಖರಿಗೆ ಸಾಕ್ಷಿ.‌ ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಮಾರಾಟದಲ್ಲಿ ಹೆಚ್ಚಿನ ಏರಿಕೆಯಾಗಿದೆ. 

ಹಾಲಿನ ಶೇಖರಣೆಯಲ್ಲೂ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ. ಮೊಸರು, ಬೆಣ್ಣೆ, ಸಿಹಿ ತಿನಿಸು ಸೇರಿ ಹಾಲಿನ ಉತ್ಪನ್ನಗಳನ್ನು ತಯಾರಿಸಿದ ಬಳಿಕ ಉಳಿದ ಹಾಲನ್ನು ಪೌಡರ್‌ ಮಾಡಲಾಗುತ್ತದೆ. ಹೀಗೆ ಮಾಡಲಾದ ಪೌಡರ್‌ ಕೂಡ ಉತ್ತಮ ದರಕ್ಕೆ ಮಾರಾಟವಾಗುತ್ತಿದೆ.

ಲಾಕ್‌ಡೌನ್‌ಗೂ ಮೊದಲು ಶಿಮುಲ್‌ನಲ್ಲಿ ಪ್ರತಿದಿನ 2.12 ಲಕ್ಷ ಲೀಟರ್‌ನಿಂದ 2.14 ಲಕ್ಷ ಲೀಟರ್ ವರೆಗೆ‌ ಹಾಲು ಮಾರಾಟವಾಗುತ್ತಿತ್ತು. ಈಗ 2.19 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. 

‘ಮಾರಾಟದಲ್ಲಿ ಏರಿಕೆ ಕಂಡಿರುವುದು ಖುಷಿ ತಂದಿದೆ. ಇದರ ಶ್ರೇಯ ಸಂಸ್ಥೆಯ ಎಲ್ಲರಿಗೂ ಸಲ್ಲಬೇಕು. ಹಾಲಿನ ಪೌಡರ್‌ಗೂ ಉತ್ತಮ ದರ ಬರುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಣುವ ವಿಶ್ವಾಸವಿದೆ’ ಎಂದು ಶಿಮುಲ್‌ ವ್ಯವಸ್ಥಾಪಕ ನಿರ್ದೇಶಕ ಡಾ. ಬಸವರಾಜ್‌ ಕೆ.ಎಸ್. ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು.

‘ದಾವಣಗೆರೆ, ಚಿತ್ರದುರ್ಗದಲ್ಲಿ ನಂದಿನಿ ಹಾಲು ಮಾರಾಟಕ್ಕೆ ಹೆಚ್ಚಿನ ಅವಕಾಶ ಇದೆ. ಈ ಜಿಲ್ಲೆಗಳನ್ನು ಹೆಚ್ಚು ಕೇಂದ್ರೀಕರಿಸಲಾಗುತ್ತಿದೆ. ರೈತರಿಗೆ ಶಿಮುಲ್‌ ಮೇಲೆ ಹೆಚ್ಚಿನ ನಂಬಿಕೆ ಇದೆ. ನೇರವಾಗಿ ಹಾಲು ಉತ್ಪಾದಕರ ಖಾತೆಗೆ ಹಣ ಜಮಾ ಆಗುತ್ತದೆ. ಲಾಕ್‌ಡೌನ್‌ ನಡುವೆಯೂ ಉತ್ಪಾದಕರಿಗೆ ಹಣ ಸಂದಾಯವಾಗಿದೆ’ ಎಂದು ಅವರು ಹೇಳಿದರು.  

ಹಾಲಿನ ಉತ್ಪನ್ನಗಳಿಗೆ ಎಷ್ಟೆಷ್ಟು ಬಳಕೆ:

ಪ್ರತಿದಿನ ಮೊಸರಿಗೆ 40 ಸಾವಿರ ಲೀಟರ್‌ ಹಾಲು, 1 ಲಕ್ಷ ಲೀಟರ್‌ ಮದರ್ ಡೇರಿಗೆ ಪೂರೈಕೆಯಾಗುತ್ತದೆ. 2.20 ಲಕ್ಷ ಲೀಟರ್‌ ಮಾರಾಟವಾಗುತ್ತದೆ. ಉಳಿದ 2.20 ಲಕ್ಷ ಲೀಟರ್‌ ಹಾಲನ್ನು ಪೌಡರ್‌ ಮಾಡಲಾಗುತ್ತದೆ.

***

ಹಂತ ಹಂತವಾಗಿ ಮಾರಾಟದಲ್ಲಿ ಹೆಚ್ಚಳವಾಗುತ್ತದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಣುವ ವಿಶ್ವಾಸವಿದೆ.
–ಡಾ. ಬಸವರಾಜ್‌ ಕೆ.ಎಸ್., ವ್ಯವಸ್ಥಾಪಕ ನಿರ್ದೇಶಕ, ಶಿಮುಲ್‌

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.