ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ 3ನೇ ಅಲೆ: ಪೋಷಕರು ಲಸಿಕೆ ಹಾಕಿಸಿಕೊಂಡು ಮಕ್ಕಳನ್ನು ರಕ್ಷಿಸಿ

ಅಧಿಕಾರಿಗಳ ಸಭೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಸಲಹೆ
Last Updated 8 ಜೂನ್ 2021, 3:38 IST
ಅಕ್ಷರ ಗಾತ್ರ

ದಾವಣಗೆರೆ:ಕೋವಿಡ್ ಮೂರನೇ ಅಲೆಯು ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿರುವುದರಿಂದ ಮಕ್ಕಳ ಬಗ್ಗೆ ಮುಂಜಾಗ್ರತೆ ವಹಿಸಬೇಕು. ಮಕ್ಕಳಿದ್ದರೆ ದೇಶ. ಹಾಗಾಗಿ ದೇಶದ ಭಾವಿ ಪ್ರಜೆಗಳನ್ನು ರಕ್ಷಿಸುವ ಕೆಲಸ ಮಾಡೋಣ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.

ಕೋವಿಡ್ ಮೂರನೇ ಅಲೆಯಲ್ಲಿ ಮಕ್ಕಳ ಬಗ್ಗೆ ಮುಂಜಾಗ್ರತೆ ಸಂಬಂಧ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ನಡೆದ ಅಧಿಕಾರಿಗಳು ಹಾಗೂ ವೈದ್ಯರ ಸಭೆಯಲ್ಲಿ ಅವರು ಮಾತನಾಡಿದರು.

‘ಪೋಷಕರು ಲಸಿಕೆ ಹಾಕಿಸಿಕೊಂಡು ಮಕ್ಕಳಲ್ಲಿ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಬೇಕು. ಜಿಲ್ಲೆಯ ಎಲ್ಲಾ ಅಧಿಕಾರಿಗಳು ಮತ್ತು ವೈದ್ಯರು ಸಮರ್ಥವಾಗಿ ಮೂರನೇ ಅಲೆಯನ್ನು ಎದುರಿಸಲು ಸಜ್ಜಾಗಬೇಕು. ಮಕ್ಕಳಲ್ಲಿ ಸೋಂಕು ಕಂಡ ಕೂಡಲೇ ಅವರಿಗೆ ಪ್ರಾಥಮಿಕ ಹಂತದಲ್ಲಿಯೇ ಪರೀಕ್ಷೆ ಮಾಡಿಸಿ ಚಿಕಿತ್ಸೆ ಕೊಡಿಸಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ‘ಈಗಾಗಲೇ ಅಂಗನವಾಡಿ ಮುಖಾಂತರ ವಿವಿಧ ತೊಂದರೆಗಳಿರುವ ಮಕ್ಕಳ ಪಟ್ಟಿ ಮಾಡಲಾಗಿದೆ. ಎರಡನೇ ಅಲೆಯಲ್ಲಿ ಹಲವು ದಾನಿಗಳು ಆಮ್ಲಜನಕ ಸಾಂದ್ರಕಗಳನ್ನು ದಾನವಾಗಿ ನೀಡಿದ್ದು, ಅವುಗಳ ಬದಲು ಮಕ್ಕಳಿಗೆ ಅಗತ್ಯವಾದ ವೆಂಟಿಲೇಟರ್‌ಗಳನ್ನು (ಪಿಐಸಿಯು) ದಾನ ಮಾಡಿದರೆ ಅನುಕೂಲವಾಗುತ್ತದೆ. 5 ಹೊರ ಜಿಲ್ಲೆಗಳ ಜನರು ಜಿಲ್ಲಾ ಆಸ್ಪತ್ರೆಗೆ ಬರುವುದರಿಂದ ಅವರೂ ಮಕ್ಕಳ ವೆಂಟಿಲೇಟರ್‌ಗಳನ್ನು ದಾನ ಮಾಡಬೇಕು’ ಎಂದು ಮನವಿ ಮಾಡಿದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ.ವಿಜಯ ಮಹಾಂತೇಶ್ ದಾನಮ್ಮನವರ್, ‘ವಿವಿಧ ಕಾಯಿಲೆಗಳಿಂದ ಬಳಲುತ್ತಿರುವ ಮಕ್ಕಳನ್ನು ಸಮೀಕ್ಷೆ ಮಾಡಿದ ಪಟ್ಟಿ ಇದ್ದರೆ ಅಂತಹವರಿಗೆ ತ್ವರಿತವಾಗಿ ಚಿಕಿತ್ಸೆ ನೀಡಿ ಅವರ ಬಗ್ಗೆ ಕಾಳಜಿ ವಹಿಸಬಹುದು. ಒಂದು ವೇಳೆ ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡುವ ಮುನ್ನವೇ ತಾಯಂದಿರಿಗೆ ಈ ಬಗ್ಗೆ ತರಬೇತಿ ನೀಡಿದರೆ ತಾಯಂದಿರು ಮಗುವನ್ನು ಸೂಕ್ತ ರೀತಿಯಲ್ಲಿ ಆರೈಕೆ ಮಾಡಬಹುದು’ ಎಂದು ಸಲಹೆ ನೀಡಿದರು.

ಡಿಎಚ್‍ಒ ಡಾ. ನಾಗರಾಜ್, ‘ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮೂರನೇ ಆಲೆ ಬರುವ ಬಗ್ಗೆ ಅಂದಾಜು ಮಾಡುತ್ತಿದ್ದು, ಒಂದು ವೇಳೆ ಮೂರನೇ ಅಲೆ ಬಂದರೆ ಪೂರ್ವ ತಯಾರಿಯ ಬಗ್ಗೆ ಪರಿಣಿತರು, ತಜ್ಞ ವೈದ್ಯರು, ಮಕ್ಕಳ ತಜ್ಞರು, ವಿವಿಧ ಮೆಡಿಕಲ್‍ ಕಾಲೇಜುಗಳ ವೈದ್ಯಾಧಿಕಾರಿಗಳು ಸಭೆ ನಡೆಸುತ್ತಿದ್ದು, ಆರೋಗ್ಯ ಇಲಾಖೆ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳುತ್ತಿದೆ. ಕಡಿಮೆ ಸೋಂಕಿರುವ ಮಕ್ಕಳನ್ನು ತಾಲ್ಲೂಕು ಮಟ್ಟದಲ್ಲಿಯೇ ಗುಣಪಡಿಸಲು ಸಾಧ್ಯ. ಗಂಭೀರ ಪ್ರಕರಣಗಳಾದರೆ ಜಿಲ್ಲಾ ಮಟ್ಟದ ಆಸ್ಪತ್ರೆಗಳಿಗೆ ಕರೆತರಲು ಸೂಚಿಸಬಹುದಾಗಿದೆ’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ನೋಡಲ್ ಅಧಿಕಾರಿ ಪ್ರಮೋದ್ ನಾಯ್ಕ್, ವೈದ್ಯಾಧಿಕಾರಿಗಳಾದ ಡಾ.ಕಾಳಪ್ಪ, ಡಾ.ಪ್ರಸಾದ್, ಡಾ.ರಮೇಶ್, ಡಾ. ಮೋಹನ್ ಮರುಳಯ್ಯ, ಜಿಲ್ಲಾ ಸರ್ಜ್‍ನ್ ಡಾ.ಜಯಪ್ರಕಾಶ್, ಆರ್‌ಸಿಎಚ್‌ ಡಾ.ಮೀನಾಕ್ಷಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ವಿಜಯ್‍ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT