ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | 'ಪರಿಸರ ಸಮತೋಲನಕ್ಕಾಗಿ ಕಚೇರಿ ಆವರಣದಲ್ಲಿ ಸಸಿ'

ವಿಶ್ವ ಪರಿಸರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ.
Published 6 ಜೂನ್ 2024, 6:01 IST
Last Updated 6 ಜೂನ್ 2024, 6:01 IST
ಅಕ್ಷರ ಗಾತ್ರ

ದಾವಣಗೆರೆ: ‘ಪರಿಸರ ಸಮತೋಲನಕ್ಕಾಗಿ ಜಿಲ್ಲಾಡಳಿತ ಭವನ ಸೇರಿದಂತೆ ಸರ್ಕಾರಿ ಕಚೇರಿಗಳ ಆವರಣದಲ್ಲಿ ಮರಗಳನ್ನು ಬೆಳೆಸಲು ಈ ವರ್ಷದಿಂದ ಸಸಿ ನೆಡಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ಡಾ. ವೆಂಕಟೇಶ್ ಎಂ.ವಿ. ತಿಳಿಸಿದರು.

ಜಿಲ್ಲಾಡಳಿತ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆಯಿಂದ ಜಿಲ್ಲಾಡಳಿತ ಭವನದ ಆವರಣದಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

‘ಇಲಾಖೆಗಳ ಅವರಣ ಮತ್ತು ನೀರು ಪೂರೈಕೆ ಮಾಡುವ ಟ್ಯಾಂಕ್‌ಗಳ ಸುತ್ತಮುತ್ತ ಹಾಗೂ ಖಾಲಿ ಇರುವ ಸರ್ಕಾರಿ ಜಾಗಗಳಲ್ಲಿ ಸಸಿ ನೆಡುವ ಮೂಲಕ ಪರಿಸರ ಸಮತೋಲನ ಕಾಯ್ದುಕೊಳ್ಳಲು ಯೋಜಿಸಲಾಗಿದೆ. ಜಿಲ್ಲೆಯ ರೈತ ಸಂಘಟನೆಗಳು ಸಹ ಪರಿಸರ ಸಂರಕ್ಷಣೆಗೆ ಗಿಡ, ಮರ ಬೆಳೆಸಲು ಮುಂದೆ ಬಂದಿವೆ’ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಸುರೇಶ್ ಬಿ.ಇಟ್ನಾಳ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಹೆಚ್ಚುವರಿ ಜಿಲ್ಲಾಧಿಕಾರಿ ಸೈಯ್ಯದಾ ಆಫ್ರೀನಾ ಭಾನು ಎಸ್. ಬಳ್ಳಾರಿ, ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ಇತರರು ಭಾಗವಹಿಸಿದ್ದರು.

‘ಮುಂದಿನ ಪೀಳಿಗೆಗೆ ಪರಿಸರ ರಕ್ಷಿಸಿ’

‘ನಮ್ಮ ಜೀವನದ ಅಗತ್ಯಕ್ಕೆ ಅವಶ್ಯಕ ವಸ್ತುಗಳನ್ನು ಸಂಗ್ರಹಿಸಿಡುವ ರೀತಿಯಲ್ಲಿಯೇ ನಮ್ಮ ಮುಂದಿನ ಪೀಳಿಗೆಗೆ ಪರಿಸರವನ್ನು ಉಳಿಸಿಕೊಂಡು ಹೋಗುವ ಅಗತ್ಯವಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ರಾಜೇಶ್ವರಿ ಎನ್.ಹೆಗಡೆ ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಬಾಲಭವನ ಸಮಿತಿ, ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯಗಳ ಸಹಯೋಗದಲ್ಲಿ ಮಾಕನೂರು ಮಲ್ಲೇಶಪ್ಪ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ.ಮ.ಕರೆಣ್ಣವರ ಮಾತನಾಡಿ, ‘ಆಧುನಿಕತೆ ಹೆಚ್ಚಿದಂತೆ ಜನರಲ್ಲಿ ಪರಿಸರ ಕಾಳಜಿ ಕಡಿಮೆಯಾಗುತ್ತಿದೆ. ಮಾನವರಾದ ನಮಗೆ ಪರಿಸರ ಇಲ್ಲ ಎಂದರೆ ನಮಗೆ ಜೀವನವೇ ಇಲ್ಲದಂತಾಗುತ್ತದೆ. ತಂತ್ರಜ್ಞಾನದ ಹೆಸರಿನಲ್ಲಿ ನಾವು ಪರಿಸರಕ್ಕೆ ವಿಷ ನೀಡುತ್ತಿದ್ದೇವೆ. ಈ ಬಗ್ಗೆ ಈಗಲೇ ಎಚ್ಚೆತ್ತುಕೊಳ್ಳಬೇಕು’ ಎಂದು ಸಲಹೆ ನೀಡಿದರು.

‘ಇಂದು ಎಲ್ಲಾ ಕ್ಷೇತ್ರಗಳಲ್ಲಿ ವಿಕಾಸದ ಹೆಸರಿನಲ್ಲಿ ವಿನಾಶದ ಕಡೆಗೆ ಹೋಗುತ್ತಿದ್ದೇವೆ. ಪರಿಸರ ಸಂರಕ್ಷಣೆಯಿಂದ ನಾವೆಲ್ಲ ಬದುಕಲು ಸಾಧ್ಯ. ಜೀವಿಗಳ ಪೋಷಣೆಯಲ್ಲಿ ಪರಿಸರ ಪ್ರಮುಖ ಪಾತ್ರ ವಹಿಸುತ್ತದೆ. ಪರಿಸರ ಸಮೃದ್ಧಿ, ಆರೋಗ್ಯಕರ ಜೀವನ ಭೂಮಿಯ ಮೇಲಿನ ಪ್ರತಿಯೊಂದು ಜೀವಿಯ ಅಸ್ತಿತ್ವಕ್ಕೆ ಅವಶ್ಯಕವಾಗಿದೆ’ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ  ಎಲ್.ಎಚ್.ಅರುಣಕುಮಾರ್ ಹೇಳಿದರು.

ಎಂ.ಎಂ.ಶಿಕ್ಷಣ ಮಹಾವಿದ್ಯಾಲಯದ ಕಾಲೇಜಿನ ಸಲಹಾ ಸಮಿತಿ ಉಪಾಧ್ಯಕ್ಷ ಪ್ರೊ.ಹಾಲಪ್ಪ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ಜಿ.ಕೊಟ್ರೇಶ್, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವಾಧ್ಯಕ್ಷ ಜೆ.ಬಿ.ರಾಜ್, ಎಂ.ಎಂ.ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಕೆ.ಟಿ.ನಾಗರಾಜನಾಯ್ಕ ಇದ್ದರು.

ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಅವರು ಸಸಿ ನೆಟ್ಟು ನೀರುಣಿಸಿದರು.  –ಪ್ರಜಾವಾಣಿ ಚಿತ್ರ
ದಾವಣಗೆರೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ. ವೆಂಕಟೇಶ್ ಅವರು ಸಸಿ ನೆಟ್ಟು ನೀರುಣಿಸಿದರು.  –ಪ್ರಜಾವಾಣಿ ಚಿತ್ರ

ನಗರೀಕರಣದ ಹೆಸರಿನಲ್ಲಿ ಪರಿಸರ ನಾಶ ಮಾಡಲಾಗುತ್ತಿದ್ದು ಇದರಿಂದ ಪರಿಸರ ರಕ್ಷಣೆ ಮಾಡುವ ಕುರಿತಂತೆ ಯುವಪೀಳಿಗೆ ಚಿಂತನೆ ನಡೆಸಬೇಕಿದೆ.

-ರಾಜೇಶ್ವರಿ ಎನ್.ಹೆಗಡೆ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT