ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿಯ ಆ್ಯಕ್ಷನ್‌ ರಿಯಾಕ್ಷನ್‌ ಹೇಳಿಕೆ ಖಂಡಿಸಿ ಪ್ರತಿಭಟನೆ

Last Updated 22 ಅಕ್ಟೋಬರ್ 2021, 6:19 IST
ಅಕ್ಷರ ಗಾತ್ರ

ದಾವಣಗೆರೆ: ಆ್ಯಕ್ಷನ್‍ಗೆ ರಿಯಾಕ್ಷನ್ ಸಹಜ ಎನ್ನುವ ಮೂಲಕ ಅನೈತಿಕ ಪೊಲೀಸ್‍ಗಿರಿಗೆ ಬೆಂಬಲ ನೀಡಿ ಕೋಮು ಸೌಹಾರ್ದ ಹದಗೆಡಲು ಕಾರಣರಾದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ ಖಂಡಿಸಿ ನೆರಳು ಬೀಡಿ ಕಾರ್ಮಿಕರ ಯೂನಿಯನ್ ಗುರುವಾರ ಇಲ್ಲಿನ ಉಪ ವಿಭಾಗಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು.

ಮುಖ್ಯಮಂತ್ರಿಯಾಗಿ ಸಂವಿಧಾನಾತ್ಮಕವಾಗಿ ತೆಗೆದುಕೊಂಡ ಪ್ರಮಾಣ ವಚನದ ವಿರುದ್ಧ ಬಸವರಾಜ ಬೊಮ್ಮಾಯಿ ಅನೈತಿಕ ಪೊಲೀಸ್‍ಗಿರಿ ಬೆಂಬಲಿಸುವಂತಹ ಹೇಳಿಕೆ ನೀಡಿದ್ದಾರೆ. ಮಂಗಳೂರಿನಲ್ಲಿ ಅನೈತಿಕ ಪೊಲೀಸ್‍ಗಿರಿ, ಮತೀಯ ಗೂಂಡಾಗಿರಿ ಬೆಂಬಿಸಿದಂತಾಗಿದೆ. ಕಾನೂನು ಪಾಲನೆ ಮತ್ತು ಸಾಮಾಜಿಕ ಸಾಮರಸ್ಯ ಕಾಪಾಡಬೇಕಾದ್ದು ಸರ್ಕಾರದ ಕರ್ತವ್ಯ ಎಂದು ಪೀಪಲ್ಸ್ ಲಾಯರ್ಸ್ ಗಿಲ್ಡ್‌ ಅಧ್ಯಕ್ಷ ಅನೀಸ್ ಪಾಷ ಹೇಳಿದರು.

ಹಿಂದುತ್ವದ ಸಂಘಟನೆಗಳ ಮತೀಯ ಗೂಂಡಾಗಿರಿಯಿಂದ ರಾಜ್ಯದಲ್ಲಿ ಕೋಮು ಸೌಹಾರ್ದ ಹದಗೆಟ್ಟಿದೆ. ಮತೀಯ ಸಂಘಟನೆಗಳ ಕ್ರೌರ್ಯದಿಂದ ಸಮಾಜದಲ್ಲಿ ಮಹಿಳೆಯರು, ದಲಿತರು, ಅಲ್ಪಸಂಖ್ಯಾತರನ್ನು ಮತ್ತಷ್ಟು ಪ್ರತ್ಯೇಕಿಸಿ, ಮೂಲೆಗುಂಪು ಮಾಡಲಾಗುತ್ತಿದೆ. ಇದು ಸಂವಿಧಾನದ ಮೂಲ ತತ್ವಗಳಾದ ಸಹೋದರತೆ ಮತ್ತು ಜಾತ್ಯತೀತಕ್ಕೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ನೆರಳು ಬೀಡಿ ಕಾರ್ಮಿಕರ ಯೂನಿಯನ್ ಅಧ್ಯಕ್ಷೆ ಜಬೀನಾ ಖಾನಂ, ‘ಮುಖ್ಯಮಂತ್ರಿ ತಮ್ಮ ಹೇಳಿಕೆ ಹಿಂಪಡೆದು, ತಕ್ಷಣವೇ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು. ಸಂವಿಧಾನ ಎತ್ತಿ ಹಿಡಿಯಬೇಕು. ಧರ್ಮ-ಜಾತಿ ಹೆಸರಿನಲ್ಲಿ ನಡೆಯುವ ಅಪರಾಧಗಳನ್ನು ತಡೆಯಲು ಅಪರಾಧಿಗಳಿಗೆ ಶಿಕ್ಷಿಸಲು ಕ್ರಮ ಕೈಗೊಳ್ಳಬೇಕು. ಶಕ್ತಿ ವಾಹಿನಿ ವಿರುದ್ಧ ಯೂನಿಯನ್ ಆಫ್‌ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ ನಿರ್ದೇಶನ ಪಾಲಿಸಬೇಕು. ಅಂತರ್ಜಾತಿ, ಅಂತರಧರ್ಮೀಯ ವಿವಾಹಗಳನ್ನು ರಕ್ಷಿಸಲು ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನ ಪಾಲಿಸಬೇಕು ಎಂದು ಒತ್ತಾಯಿಸಿದರು.

ಅಂತರ್ಜಾತಿ, ಅಂತರ್ಧರ್ಮೀಯ ವಿವಾಹವಾದವರ ವಿರುದ್ಧ ನಡೆಯುವ ಹಿಂಸೆ, ಮರ್ಯಾದಾಗೇಡು ಹತ್ಯೆಗಳು, ಅನೈತಿಕ ಪೊಲೀಸ್ ಗಿರಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದರು.

ಡಿಎಸ್-4 ಜಿಲ್ಲಾ ಸಂಚಾಲಕ ಹೆಗ್ಗೆರೆ ರಂಗಪ್ಪ, ಸಿಐಟಿಯು ಮುಖಂಡ ಗುಡ್ಡಪ್ಪ, ತಿಮ್ಮಣ್ಣ, ನೆರಳು ಬೀಡಿ ಕಾರ್ಮಿಕರ ಯೂನಿಯನ್‍ನ ಎಂ. ಕರಿಬಸಪ್ಪ, ಅಲ್ಪ ಸಂಖ್ಯಾತರ ಜಾಗೃತಿ ವೇದಿಕೆಯ ಅಬ್ದುಲ್ ಘನಿ ತಾಹೀರ್, ಅಣ್ಣಯ್ಯ, ನಿಜಾಮುದ್ದೀನ್, ಶಹಬಾಜ್, ನಸ್ರೀನ್ ಬಾನು, ಶಹೀನಾ, ನಸ್ರೀನ್, ಜಯಪ್ಪ, ಶಿರೀನ್ ಬಾನು, ಗುಲ್ಜಾರ್ ಬಾನು, ರುಕ್ಸಾನಾ ಬಾನು, ಹಸೀನಾ ಬಾನು, ನಾಜೀಮಾ ಬಾನು ಅವರೂ ಇದ್ದರು.

ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್‌ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT