ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಉಚಿತ ಯೋಜನೆಗಿಂತ ದುಡಿಯುವ ಅವಕಾಶ ಕಲ್ಪಿಸಿ: ಶಾಸಕ ಬಿ.ಪಿ.ಹರೀಶ್

Published 4 ಫೆಬ್ರುವರಿ 2024, 15:46 IST
Last Updated 4 ಫೆಬ್ರುವರಿ 2024, 15:46 IST
ಅಕ್ಷರ ಗಾತ್ರ

ಹರಿಹರ: ಉಚಿತ ಯೋಜನೆಗಳ ಜಾರಿಗಿಂತ, ದುಡಿಯಲು ಅವಕಾಶ ಸೃಷ್ಟಿಸಿ ಜನರನ್ನು ಆರ್ಥಿಕವಾಗಿ ಸಬಲಗೊಳಿಸಲು ರಾಜ್ಯ ಸರ್ಕಾರ ಆದ್ಯತೆ ನೀಡಬೇಕು ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.

ಜಿಲ್ಲಾ ಮತ್ತು ತಾಲ್ಲೂಕು ಆಡಳಿತದ ಸಂಯುಕ್ತಾಶ್ರಯದಲ್ಲಿ ನಗರದ ಗುರು ಭವನದಲ್ಲಿ ಈಚೆಗೆ ಏರ್ಪಡಿಸಿದ್ದ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳ ಸರ್ಮಪಕ ಅನುಷ್ಠಾನ ಕುರಿತು ಫಲಾನುಭವಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಜ್ಯ ಸರ್ಕಾರದ ಉಚಿತ ಯೋಜನೆಗಳು ಬಸವಣ್ಣನವರ ‘ಕಾಯಕವೇ ಕೈಲಾಸ’ ತತ್ವಕ್ಕೆ ವಿರುದ್ಧವಾಗಿವೆ. ದುಡಿಮೆ ಮಾಡಿ ಬದುಕುವ ಅವಕಾಶ ಕಲ್ಪಿಸಿದರೆ ಅದು ಶಾಶ್ವತವಾಗಿ ಜನರಿಗೆ ಅನುಕೂಲ ಮಾಡಿಕೊಟ್ಟಂತಾಗುತ್ತದೆ’ ಎಂದು ಅಭಿಪ್ರಾಯಪಟ್ಟರು. 

‘ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ರಾಜ್ಯ ಸರ್ಕಾರ ಐದು ಗ್ಯಾರಂಟಿಗಳನ್ನು ಪರಿಪೂರ್ಣವಾಗಿ ಜಾರಿ ಮಾಡುವಲ್ಲಿ ವಿಫಲವಾಗಿದೆ. ಹತ್ತಾರು ಷರತ್ತು ಹಾಕಿರುವುದರಿಂದ ಗಣನೀಯ ಸಂಖ್ಯೆಯ ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆಗಳ ಲಾಭ ಸಿಕ್ಕಿಲ್ಲ’ ಎಂದು ಆರೋಪಿಸಿದರು.

ಐದೂ ಯೋಜನೆಗಳಿಗಾಗಿ ಪ್ರತಿ ತಿಂಗಳು ತಾಲ್ಲೂಕಿಗೆ ಸುಮಾರು ₹21 ಕೋಟಿಯನ್ನು ಸರ್ಕಾರ ಖರ್ಚು ಮಾಡುತ್ತಿದೆ ಎಂದ ಶಾಸಕರು, ‘ಉಚಿತ ಪ್ರಯಾಣ ಕಲ್ಪಿಸಿರುವ ‘ಶಕ್ತಿ’ ಯೋಜನೆಯಿಂದ ಮಹಿಲೆಯರಿಗೆ ಅನುಕೂಲವಾಗಿದೆ. ಆದರೆ ವಿದ್ಯಾರ್ಥಿ, ನೌಕರರು, ಪುರುಷರಿಗೆ ಸಾರಿಗೆ ಸಂಸ್ಥೆ ಬಸ್ ಹತ್ತಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಹೆಚ್ಚಿನ ಬಸ್ ಸೌಲಭ್ಯ ಮಾಡಬೇಕು’ ಎಂದು ಆಗ್ರಹಿಸಿದರು.

‘ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳು ರಾಜ್ಯದ ಜನರ ಬಡತನ ನಿರ್ಮೂಲನೆ ಮಾಡಿವೆ. ಎಲ್ಲ ವರ್ಗದ ಬಡವರ ಕಲ್ಯಾಣಕ್ಕೆ ದಾರಿದೀಪವಾಗಿವೆ’ ಎಂದು ತಹಶೀಲ್ದಾರ್ ಗುರುಬಸವರಾಜ ಹೇಳಿದರು.

ತಾಲ್ಲೂಕಿನ 48,484 ಗೃಹಲಕ್ಷ್ಮಿ ಯೋಜನೆ ಫಲಾನುಭವಿಗಳಿಗೆ ₹9.69 ಲಕ್ಷ ಹಣ ಜಮೆ ಮಾಡಲಾಗಿದೆ. 62,303 ಗೃಹಜ್ಯೋತಿ ಫಲಾನುಭವಿಗಳಿಗೆ ₹31.20 ಲಕ್ಷ ಹಣವನ್ನು ಬೆಸ್ಕಾಂಗೆ ನೀಡಲಾಗಿದೆ. ಅನ್ನಭಾಗ್ಯ ಯೋಜನೆ ಫಲಾನುಭವಿಗಳ ಖಾತೆಗೆ 3.14 ಲಕ್ಷ ಜಮೆ ಮಾಡಲಾಗಿದೆ. 567 ಯುವನಿಧಿ ಯೋಜನೆಯ ಫಲಾನುಭವಿಗಳಿಗೆ ₹17 ಲಕ್ಷ ಪಾವತಿಸಲಾಗಿದೆ. ಈವರೆಗೂ ಯೋಜನೆಗಳ ಲಾಭ ದೊರೆಯದಿದ್ದವರು ಸಂಬಂಧಿತ ಕಚೇರಿಗೆ ಸಂಪರ್ಕಿಸಬೇಕು ಎಂದು ಅವರು ಸಲಹೆ ನೀಡಿದರು. 

ಸಿಡಿಪಿಒ ಪೂರ್ಣಿಮಾ, ಬೆಸ್ಕಾಂ ಎಇಇ ನಾಗರಾಜ ನಾಯ್ಕ, ಕೆಎಸ್‌ಆರ್‌ಟಿಸಿ ನಿರೀಕ್ಷಕ ವೀರಣ್ಣ, ಎಸಿಡಿಪಿಒ ರಾಘವೇಂದ್ರ, ಆಹಾರ ನಿರೀಕ್ಷಕ ಶಿವಕುಮಾರ್, ಕಂದಾಯ ನಿರೀಕ್ಷಕ ಸಮಿರ್, ಕೆ.ಟಿ.ಗೀತಾ, ಲಕ್ಷ್ಮಿ ಹಾಗೂ ಯೋಜನೆಯ ಫಲಾನುಭವಿಗಳು ಭಾಗಿಯಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT