ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ದಾವಣಗೆರೆ: ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ

‘ಪೊಲೀಸ್ ಚಿಣ್ಣರ ಅಂಗಳ’ ಶಾಲೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಎಸ್‌ಪಿ ಉಮಾ ಪ್ರಶಾಂತ್ ಹೇಳಿಕೆ
Published 31 ಮೇ 2024, 6:31 IST
Last Updated 31 ಮೇ 2024, 6:31 IST
ಅಕ್ಷರ ಗಾತ್ರ

ದಾವಣಗೆರೆ: ‘ಕೊಂಡಜ್ಜಿಯ ಪೊಲೀಸ್ ಪಬ್ಲಿಕ್ ಶಾಲೆ ಸೇರಿದಂತೆ ಪೊಲೀಸರ ಚಿಣ್ಣರ ಅಂಗಳದಲ್ಲಿ ಉತ್ತಮ ಶಿಕ್ಷಣ ಲಭಿಸುತ್ತಿದ್ದು, ಉತ್ತಮ ಪ್ರತಿಕ್ರಿಯೆ ಇದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ತಿಳಿಸಿದರು.

ಇಲ್ಲಿನ ಪಿ.ಜೆ. ಬಡಾವಣೆಯ ಪೊಲೀಸ್ ವಸತಿ ಗೃಹದಲ್ಲಿ ಗುರುವಾರ ಆಯೋಜಿಸಿದ್ದ ‘ಪೊಲೀಸ್ ಚಿಣ್ಣರ ಅಂಗಳ’ ಪೂರ್ವ ಪ್ರಾಥಮಿಕ ಶಾಲೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪೊಲೀಸ್ ವಸತಿ ಗೃಹದಲ್ಲಿ 500ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಇದ್ದು, ಅವರ ಮಕ್ಕಳಿಗೆ ಶಾಲೆ ಹತ್ತಿರವಾಗಲಿ ಎಂಬ ಉದ್ದೇಶದಿಂದ ಡಿಆರ್‌ಆರ್ ಮೈದಾನದ ಬಳಿ ಇದ್ದ ಶಾಲೆಯನ್ನು ವಸತಿ ಗೃಹದ ಸಮೀಪಕ್ಕೆ ಹಸ್ತಾಂತರಿಸಲಾಗಿದೆ. ಪೊಲೀಸರ ಮಕ್ಕಳಿಗೆ ಕಡಿಮೆ ದರದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಕೊಂಡಜ್ಜಿಯಲ್ಲಿ ಪೊಲೀಸ್ ಪಬ್ಲಿಕ್ ಶಾಲೆ ತೆರೆದಿದ್ದು, ಅಲ್ಲಿ 10ನೇ ತರಗತಿಯವರೆಗೆ ಮಕ್ಕಳು ಓದಲು ಅವಕಾಶವಿದೆ. ಈ ಹಿಂದೆ 200 ಮಕ್ಕಳು ಇದ್ದ ಶಾಲೆಯಲ್ಲಿ ಪ್ರಸ್ತುತ 430ಕ್ಕೂ ಹೆಚ್ಚು ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ’ ಎಂದು ಹೇಳಿದರು.

‘ಶಾಲೆಯ ಪ್ರಾಂಶುಪಾಲ ಯತೀಶ್ ಚಂದ್ರ ಮತ್ತು ಅವರ ತಂಡ ಚೆನ್ನಾಗಿ ಕೆಲಸ ಮಾಡುತ್ತಿದ್ದು, ಮಕ್ಕಳ ದಾಖಲಾತಿ ಮುಗಿದರೂ ಸಾರ್ವಜನಿಕರು ತಮ್ಮ ಮಕ್ಕಳಿಗೆ ಶಾಲೆಯಲ್ಲಿ ಸೀಟು ಕೇಳುತ್ತಿದ್ದಾರೆ. ಕಡಿಮೆ ದರದಲ್ಲಿ ಮೌಲ್ಯಾಧಾರಿತ ಶಿಕ್ಷಣ ದೊರೆಯುತ್ತಿರುವ ಕಾರಣದಿಂದಾಗಿಯೇ ದಾವಣಗೆರೆಯಲ್ಲಿ ತುಂಬಾ ಶಾಲೆಗಳು ಇದ್ದರೂ ನಮ್ಮ ಶಾಲೆಯಲ್ಲಿ ಸೀಟು ಕೇಳುತ್ತಿದ್ದಾರೆ’ ಎಂದು ಸಮರ್ಥಿಸಿಕೊಂಡರು.

‘ಕರ್ನಾಟಕ ರಾಜ್ಯ ಪೊಲೀಸ್ ಕಲ್ಯಾಣ ಮತ್ತು ಶಿಕ್ಷಣ ಟ್ರಸ್ಟ್‌ ಅಧೀನದಲ್ಲಿ ಪೊಲೀಸ್ ಪಬ್ಲಿಕ್ ಶಾಲೆ ಕಾರ್ಯ ನಿರ್ವಹಿಸುತ್ತಿದ್ದು,  ಈ ಶಾಲೆಯ ಅಡಿಯಲ್ಲಿಯೇ ಪೊಲೀಸ್ ಚಿಣ್ಣರ ಅಂಗಳ ಶಾಲೆ ನಡೆಯುತ್ತಿದೆ. ಶಾಲೆ ಶಿಕ್ಷಕರನ್ನು ನಿಯೋಜನೆ ಮಾಡಿದ್ದು, 60 ಮಕ್ಕಳಿಗೆ ಅವಕಾಶವಿರುವ ಈ ಶಾಲೆಯಲ್ಲಿ ಈಗಾಗಲೇ 30 ಮಕ್ಕಳು ಶಾಲೆಗೆ ದಾಖಲಾಗಿದ್ದಾರೆ’ ಎಂದು ಹೇಳಿದರು.

ಪೊಲೀಸರ ಚಿಣ್ಣರ ಅಂಗಳದಲ್ಲಿ ಪ್ರೀಕೆಜಿ, ಎಲ್‌ಕೆಜಿ, ಯುಕೆಜಿ ತರಗತಿಗಳು ನಡೆಯುತ್ತಿದ್ದು, ಆಟವಾಡುತ್ತಲೇ ಮಕ್ಕಳು ಕಲಿಯಬೇಕು ಎನ್ನುವ ಉದ್ದೇಶದಿಂದ ಎಲ್ಲಾ ಬಗೆಯ ಆಟದ ಸಾಮಗ್ರಿಗಳನ್ನು ತರಲಾಗಿದೆ. ಜೂನ್ 3ರಿಂದ ಶಾಲೆ ಆರಂಭವಾಗಲಿದ್ದು, ಪೊಲೀಸರ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುವುದು. ಸೀಟುಗಳು ಉಳಿದರೆ ಸಾರ್ವಜನಿಕರ ಮಕ್ಕಳಿಗೂ ನೀಡಲಾಗುವುದು’ ಎಂದು ಹೇಳಿದರು.

ಪೂರ್ವ ವಲಯದ ಐಜಿಪಿ ಕೆ.ತ್ಯಾಗರಾಜನ್ ಹಾಗೂ ಪತ್ನಿ ಸಂಗೀತಾ ತ್ಯಾಗರಾಜನ್ ಶಾಲೆಯನ್ನು ಉದ್ಘಾಟಿಸಿದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ವಿಜಯಕುಮಾರ್ ಎಂ.ಸಂತೋಷ, ಬಿ.ಮಂಜುನಾಥ್, ಗ್ರಾಮಾಂತರ ಡಿವೈಎಸ್‌ಪಿ ಪ್ರಶಾಂತ್ ಸಿದ್ದನಗೌಡರ್ ಇದ್ದರು. ಶಾಲೆಯ ಶಿಕ್ಷಕಿ ಪಲ್ಲವಿ ಸ್ವಾಗತಿಸಿ, ಪೊಲೀಸ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಯತೀಶ್ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT