ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧಾರ್‌ಗಾಗಿ ನಸುಕಿನಿಂದಲೇ ಸರತಿ ಸಾಲು

ತಿದ್ದುಪಡಿಯೇ ಸಮಸ್ಯೆ: ವಿದ್ಯಾರ್ಥಿಗಳ ಅಲೆದಾಟ, ಸಾರ್ವಜನಿಕರ ಪರದಾಟ
Last Updated 17 ಜುಲೈ 2019, 20:00 IST
ಅಕ್ಷರ ಗಾತ್ರ

ದಾವಣಗೆರೆ: ‘ಆಧಾರ್‌ ಕಾರ್ಡ್‌ನಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಹೆಸರು, ವಿಳಾಸ ಇರಬೇಕಂತೆ. ನನ್ನ ಮಗನ ಹೆಸರು ಇಂಗ್ಲಿಷ್‌ನಲ್ಲಷ್ಟೇ ಇದೆ. ಕನ್ನಡದಲ್ಲಿ ಕೊಟ್ಟಿಲ್ಲ. ಶಾಲೆಯಲ್ಲಿ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಬೇಕಿದ್ದರೆ ಆಧಾರ್‌ ಕಾರ್ಡ್‌ ಪ್ರತಿ ನೀಡಬೇಕು. ಅದು ಸರಿ ಇಲ್ಲ ಎಂದು ವಾಪಸ್‌ ಕಳುಹಿಸಿದ್ದಾರೆ. ಸರಿಪಡಿಸಲು ನಾಲ್ಕು ಬಾರಿ ಬಂದಿದ್ದೇನೆ. ಇನ್ನೂ ಆಗಿಲ್ಲ’.

ಇದು ಮಗ ಕೌಶಿಕ್‌ ಜತೆ ತಾಲ್ಲೂಕು ಕಚೇರಿಯಲ್ಲಿ ಕಾಯುತ್ತಿದ್ದ ಬಸಾಪುರ ನಿವಾಸಿ ರಾಣಿ ಅವರ ಅಳಲು. ‘ಹೆಸರು ತಪ್ಪಿಲ್ಲ. ನಮ್ಮೆಲ್ಲರ ಆಧಾರ್‌ ಕಾರ್ಡ್‌ಗಳಲ್ಲಿ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ವಿವರ ಇದೆ. ಮಗನ ಹೆಸರು ಮಾತ್ರ ಏಕೆ ಈ ರೀತಿ ಮಾಡಿದ್ದಾರೆ ಗೊತ್ತಿಲ್ಲ. ಅವರು ಮಾಡಿದ ತಪ್ಪಿಗೆ ನಾವು ಅಲೆಯುವಂತಾಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಆಧಾರ್‌ ಕಾರ್ಡ್‌ ಮಾಡುವಾಗ ತಂದೆಯ ಹೆಸರು ನೀಡಲಾಗಿತ್ತು. ಅದಾಗುವುದಿಲ್ಲ. ಗಂಡನ ಹೆಸರು ಸೇರಿಸಿ ಅಂದಿದ್ದಾರೆ. ಬದಲಾಯಿಸಲು ಮೂರು ಬಾರಿ ಬಂದಿದ್ದರೂ ಆಗಿಲ್ಲ’ ಎನ್ನುವುದು ಕಂದಗಲ್ಲು ಹನುಮಂತಮ್ಮ ಅವರ ಸಮಸ್ಯೆ. ‘ತಾಯಿ ಹೆಸರು ಇದೆ. ಅದಾಗುವುದಿಲ್ಲವಂತೆ. ತಂದೆಯ ಹೆಸರು ಸೇರಿಸಲು ಹಲವು ಬಾರಿ ಬಂದಿದ್ದೆ. ಇವುತ್ತು ಬೆಳಿಗ್ಗೆ 6ಕ್ಕೆ ಬಂದಿದ್ದೇನೆ. ಆದರೂ ಆಗಿಲ್ಲ’ ಎನ್ನುವುದು ಕೃಷಿಕ ಅಣಜಿ ಶಿವಮೂರ್ತಿ ಅಳಲು.

ಹೆಸರು ಸರಿ ಇದ್ದರೆ ಇನಿಶಿಯಲ್‌ ಸರಿ ಇಲ್ಲ. ಎರಡೂ ಸರಿ ಇದ್ದರೆ ಹೆತ್ತವರ ಹೆಸರು ಸರಿ ಇಲ್ಲ. ಅದೂ ಇದ್ದರೆ ಹುಟ್ಟಿದ ದಿನಾಂಕ ಸರಿ ಇಲ್ಲ. ಹೀಗೆ ಒಂದಲ್ಲ ಒಂದು ತಿದ್ದುಪಡಿ ಮಾಡಲು ದಿನಾ ನೂರಾರು ಜನ ಬರುತ್ತಾರೆ. ಆದರೆ, ಒಂದು ಕಂಪ್ಯೂಟರ್‌ನಲ್ಲಿ ದಿನಕ್ಕೆ 30ಕ್ಕಿಂತ ಹೆಚ್ಚು ಮಂದಿಯ ತಿದ್ದುಪಡಿ ಮಾಡಲು ಆಗುವುದಿಲ್ಲ. ಎಲ್ಲಾ ಆದ ಮೇಲೆಯೂ ತಿರಸ್ಕೃತಗೊಂಡು ಮತ್ತೆ ಶುರುವಿನಿಂದ ಮಾಡಬೇಕಾದ ಪರಿಸ್ಥಿತಿ ಉಂಟಾಗಿದೆ.

ಫೋನ್‌ ನಂಬರ್‌ ಸರಿ ಇಲ್ಲ ಎಂದು ಕೆರೆಬಿಳಚಿ ಸುವರ್ಣಮ್ಮ, ಸೊಸೆ ಯಲ್ಲಮ್ಮಳ ಹೆಸರಲ್ಲಿ ಆಧಾರ್‌ ಕಾರ್ಡ್‌ ಇಲ್ಲ ಎಂದು ಸೊಸೆ ಜತೆ ಬಂದ ಎಸ್‌ಬಿಎಸ್‌ ನಗರದ ಲಲಿತಮ್ಮ, ನಾಲ್ವರು ಮೊಮ್ಮಕ್ಕಳಿಗೆ ಆಧಾರ್‌ ಕಾರ್ಡ್‌ ಮಾಡಿಸಲು ಬಂದ ಶಮೀಮಾ ಬಾನು, 14 ವರ್ಷ ಕಡಿಮೆ ಮಾಡಿದ್ದಾರೆ ಎಂದು ಬಂದಿರುವ ಹೊನ್ನೂರು ಶಾಂತಮ್ಮ ಎಲ್ಲರೂ ಮುಂಜಾನೆಯೇ ತಾಲ್ಲೂಕು ಕಚೇರಿಯಲ್ಲಿ ಠಿಕಾಣಿ ಹೂಡಿದವರು.

ಜಂಪೇನಹಳ್ಳಿಯ ಕುಮಾರನಾಯ್ಕ, ರಾಘವೇಂದ್ರ ನಾಯ್ಕ ಎಂಬ ಅಣ್ಣ ತಮ್ಮಂದಿರಿಗೆ ಆಧಾರ್‌ ಅಲೆದಾಟದ ಅರಿವು ಇರುವುದರಿಂದ ಮನೆಯಿಂದ ಬರುವಾಗಲೇ ಬುತ್ತಿ ಕಟ್ಟಿಕೊಂಡು ಬಂದಿದ್ದಾರೆ. ಒಬ್ಬರಾದ ಮೇಲೆ ಒಬ್ಬರು ಅಲ್ಲೇ ಊಟ ಮಾಡಿ ಮಕ್ಕಳಿಗೂ ಊಟ ಮಾಡಿಸಿದರು.

‘ಖಾಸಗಿ ಸಿಎಸ್‌ಸಿಗಳಲ್ಲಿಯೂ (ಕಾಮನ್‌ ಸರ್ವಿಸ್‌ ಸೆಂಟರ್‌) ಆಧಾರ್‌ ನೋಂದಣಿ, ತಿದ್ದುಪಡಿಗೆ ಅವಕಾಶ ನೀಡಲಾಗಿತ್ತು. ಈಗ ಅದನ್ನು ತೆಗೆದು ಹಾಕಲಾಗಿದೆ. ಸರ್ಕಾರಿ ಕಚೇರಿಗಳಲ್ಲಿ ಮಾತ್ರ ಇವೆಲ್ಲ ನಡೆಯಬೇಕು ಎಂದು ಸರ್ಕಾರ ಹೇಳಿರುವುದರಿಂದ ಸಮಸ್ಯೆಯಾಗಿದೆ. ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಒಂದು ಕಂಪ್ಯೂಟರ್‌ನಲ್ಲಿ ಮಾತ್ರ ಆಧಾರ್‌ ತಿದ್ದುಪಡಿ ಕೆಲಸಗಳಾಗುತ್ತಿದ್ದವು. ವಾರದ ಈಚೆಗೆ ಇನ್ನೊಂದು ಕಂಪ್ಯೂಟರ್‌ ಅಳವಡಿಸಿದ್ದೇವೆ. ಹೀಗಾಗಿ ಈಗ ಸುಮಾರು 60 ಮಂದಿಯ ಕೆಲಸ ಆಗುತ್ತಿದೆ’ ಎಂದು ತಹಶೀಲ್ದಾರ್‌ ಜಿ. ಸಂತೋಷ್‌ ಕುಮಾರ್‌ ಮಾಹಿತಿ ನೀಡಿದರು.

ವಿದ್ಯಾರ್ಥಿಗಳ ಗೋಳು ಕೇಳುವವರಾರು?

‘ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬೇಕಿದ್ದರೆ ಆಧಾರ್‌ ಕಾರ್ಡ್‌ ಬೇಕು. ಅದು ಸರಿ ಇರಬೇಕು. ದಾವಣಗೆರೆ ಒನ್‌ಗೆ ಹೋದರೆ ಅಲ್ಲಿ ಪುಸ್ತಕದಲ್ಲಿ ಬರೆದುಕೊಳ್ಳುತ್ತಾರೆ. ಎರಡು ತಿಂಗಳು ಬಿಟ್ಟು ಅಪ್ಲಿಕೇಶನ್‌ ಕೊಡುತ್ತಾರೆ. ಆಮೇಲೆ ಒಂದು ದಿನ ಬೆರಳಚ್ಚು, 15 ದಿನ ಬಿಟ್ಟು ಒಂದು ತಿದ್ದುಪಡಿ ಹೀಗೆ ಸಮಯ ತೆಗೆದುಕೊಳ್ಳುತ್ತಾರೆ. ಆದರೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಲು ಒಂದು ವಾರವಷ್ಟೇ ಅವಕಾಶ ಇದೆ’ ಎಂದು ವಿದ್ಯಾರ್ಥಿಗಳ ಗೋಳನ್ನು ರಾಜು ದಾವಣಗೆರೆ ತೆರೆದಿಟ್ಟರು.

ಆಧಾರ್‌ ಕಾರ್ಡ್‌ಗಾಗಿ ಅವರು ಮುಂಜಾನೆ 3 ಗಂಟೆಗೆ ಬಂದು ಸರದಿ ಸಾಲಿನಲ್ಲಿ ಮೊದಲಿಗರಾಗಿದ್ದರು. ಬೆಳಿಗ್ಗೆ 10 ಗಂಟೆಯ ನಂತರ ಆಧಾರ್‌ ಕೇಂದ್ರ ಬಾಗಿಲು ತೆರೆಯಿತಾದರೂ ಸರ್ವರ್‌ ಇಲ್ಲದ ಕಾರಣ ಪರಿಶ್ರಮ ವ್ಯರ್ಥವಾಯಿತು.

‘ಯಾವುದೇ ಆಧಾರ್‌ ಕೇಂದ್ರದಲ್ಲಿ ತಿದ್ದುಪಡಿ ಮಾಡಬಹುದು ಎಂದು ಇರುವುದರಿಂದ ಮಲೇಬೆನ್ನೂರು, ಕುಂಬಳೂರಿಗೂ ಹೋಗಿ ಪ್ರಯತ್ನಿಸಿದೆ. ಅಲ್ಲೂ ಸರ್ವರ್‌ ಇಲ್ಲ. ಹೀಗಾದರೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳ ಗತಿ ಏನು’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT