ದಾವಣಗೆರೆ: ನಗರದಲ್ಲಿ ಹಾದುಹೋಗಿರುವ ರೈಲು ಹಳಿಗಳಿಗೆ ಅಡ್ಡಲಾಗಿ ವಿವಿಧೆಡೆ ಮೇಲ್ಸೇತುವೆ, ಕೆಳ ಸೇತುವೆ (ಅಂಡರ್‌ಪಾಸ್)ಗಳನ್ನು ನಿರ್ಮಿಸಲಾಗಿದ್ದು, ಅವು ಜನಸ್ನೇಹಿಯಾಗಿಲ್ಲ ಎಂಬ ಆರೋಪವಿದೆ.
ಪಿ.ಬಿ. ರಸ್ತೆಗೆ ಸಮಾನಾಂತರವಾಗಿರುವ ರೈಲ್ವೆ ಹಳಿಗೆ ಕರೂರು ರಸ್ತೆ, ಶಿವಾಲಿ ಚಿತ್ರಮಂದಿರ ರಸ್ತೆ, ರೇಣುಕ ಮಂದಿರ ಪಕ್ಕ, ರೈಲು ನಿಲ್ದಾಣದ ಪಕ್ಕ, ಅಶೋಕ ರಸ್ತೆ, ಆರ್‌ಎಂಸಿ ಲಿಂಕ್ (ಈರುಳ್ಳಿ ಮಾರುಕಟ್ಟೆ) ರಸ್ತೆ, ಡಿಸಿಎಂ ಬಳಿ ರೈಲ್ವೆ ಅಂಡರ್ ಪಾಸ್‌ಗಳನ್ನು ನಿರ್ಮಿಸಲಾಗಿದೆ. ಈ ಪೈಕಿ ಕರೂರು ರಸ್ತೆ ಅಂಡರ್‌ಪಾಸ್ ಚಿಕ್ಕದಾಗಿರುವುದರಿಂದ ವಾಹನಗಳ ಸುಗಮ ಸಂಚಾರಕ್ಕೆ ತೊಡಕಾಗಿದೆ.
ಮಳೆ ಬಂದರೆ, ರೈಲು ನಿಲ್ದಾಣದ ಪಕ್ಕದಲ್ಲಿರುವ ಅಂಡರ್‌ಪಾಸ್‌ನಲ್ಲಿ ಎದೆಮಟ್ಟದವರೆಗೆ ನೀರು ನಿಲ್ಲುತ್ತದೆ. ಇದರಿಂದಾಗಿ ಹಳೇ ದಾವಣಗೆರೆ ಭಾಗದಿಂದ ಹೊಸ ದಾವಣಗೆರೆ ಭಾಗದ ಶಾಲಾ–ಕಾಲೇಜಿಗೆ ಬರುವ ವಿದ್ಯಾರ್ಥಿಗಳು, ವ್ಯಾಪಾರಿಗಳು, ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ. ಬೈಕ್ ಮತ್ತು ಆಟೊಗಳು ಮಂಡಿಪೇಟೆ ಭಾಗದ ಕಿಷ್ಕಿಂಧೆಯಂತಹ ರಸ್ತೆಗಳಲ್ಲಿಯೇ ಸಾಗಿ ರೇಣುಕ ಮಂದಿರದ ಪಕ್ಕ ಇಲ್ಲವೇ ಅಶೋಕ ರಸ್ತೆ ಅಂಡರ್‌ಪಾಸ್ ಮೂಲಕ ಪಿ.ಬಿ.ರಸ್ತೆ ತಲುಪಬೇಕಾದ ಸ್ಥಿತಿ ಇದೆ. ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಸಂಬಂಧಪಟ್ಟ ಇಲಾಖೆಯವರು ಕಾಮಗಾರಿ ನಡೆಸುತ್ತಲೇ ಇದ್ದಾರೆ. ಇಷ್ಟಾದರೂ ಸಮಸ್ಯೆಗೆ ಪರಿಹಾರ ಮಾತ್ರ ಸಿಕ್ಕಿಲ್ಲ ಎಂದು ಆಟೊ ಚಾಲಕ ಮುನೀರ್ ಹಾಗೂ ಪಾನಿಪೂರಿ ವ್ಯಾಪಾರಿ ಎಂ.ಎನ್.ಕುಮಾರ್ ದೂರಿದರು.
‘ಅಶೋಕ ರಸ್ತೆಯಲ್ಲಿ ನಿತ್ಯ ವಾಹನ ದಟ್ಟಣೆ ಇರುತ್ತದೆ. ಇಲ್ಲಿ ಮೇಲ್ಸೇತುವೆ ನಿರ್ಮಿಸುವ ಮೂಲಕ ಸಮಸ್ಯೆ ಪರಿಹರಿಸಬೇಕು ಎಂಬ ಕೂಗು ದಶಕಗಳಿಂದ ಇತ್ತು. ಹಳೆ ಬಸ್ ನಿಲ್ದಾಣದಿಂದ ಲಿಂಗೇಶ್ವರ ಕಲ್ಯಾಣಮಂಟಪದವರೆಗೆ ರೈಲು ಹಳಿಗೆ ಸಮಾನಾಂತರವಾಗಿ ರಸ್ತೆ ಮಾಡಿ ಕೆ.ಆರ್.ರಸ್ತೆಗೆ ಇಳಿಸುವಂತೆ ಸಲಹೆ ನೀಡಿದ್ದೆವು. ಆದರೆ, ಇಲ್ಲಿನ ಜನಪ್ರತಿನಿಧಿಗಳು ಯಾರ ಅಭಿಪ್ರಾಯಗಳಿಗೂ ಮನ್ನಣೆ ನೀಡದೆ ತರಾತುರಿಯಲ್ಲಿ ಅಂಡರ್‌ಪಾಸ್ ನಿರ್ಮಿಸಿದ್ದಾರೆ. ಇದು ಸಂಪೂರ್ಣ ಅವೈಜ್ಞಾನಿಕವಾಗಿದೆ. ಪಿ.ಬಿ. ರಸ್ತೆ ಕಡೆಯಿಂದ ಬರುವ ವಾಹನಗಳು ಸಲೀಸಾಗಿ ಅಂಡರ್‌ಪಾಸ್ ಮೂಲಕ ಹೋಗುತ್ತವೆ. ಆದರೆ, ಕೆ.ಆರ್.ರಸ್ತೆಯ ಮೂಲಕ ಬರುವ ವಾಹನಗಳು ಅಂಡರ್‌ಪಾಸ್‌ಗೆ ಹೋಗಲು ಹರಸಾಹಸ ಪಡಬೇಕಾಗಿದೆ. ಸ್ಥಳಾವಕಾಶ ಕಡಿಮೆ ಇರುವುದರಿಂದ ಅಶೋಕ ಚಿತ್ರಮಂದಿರದ ಎದುರು ಯು–ಟರ್ನ್ ಮಾಡುವುದು ಕಷ್ಟವಾಗಿದೆ. ಸರಕು ಸಾಗಣೆ ವಾಹನಗಳು, ಕಾರುಗಳು, ಆಂಬುಲೆನ್ಸ್‌ಗಳು ಬಂದರೆ ಕಟ್ ಮಾಡುವುದು ಕಷ್ಟ ಆಗುವುದರಿಂದ ಹಿಂದೆ ಬರುವ ಎಲ್ಲಾ ವಾಹನಗಳು ಕಾಯಬೇಕಾದ ಪರಿಸ್ಥಿತಿ ಇದೆ. ಮಳೆ ಬಂದರೆ ಅಂಡರ್‌ಪಾಸ್‌ನಲ್ಲಿ ನೀರು ನಿಲ್ಲುತ್ತದೆ. ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲ’ ಎಂದು ಜೆಡಿಎಸ್ ಮುಖಂಡ ಜೆ.ಅಮಾನುಲ್ಲಾ ಖಾನ್ ದೂರಿದರು.
‘ಅಂಡರ್‌ಪಾಸ್‌ಗಳು, ರೈಲ್ವೆ ಗೇಟ್‌ಗಳ ಅಕ್ಕಪಕ್ಕದಲ್ಲಿ ತ್ಯಾಜ್ಯ ತಂದು ಸುರಿಯಲಾಗುತ್ತಿದೆ. ಹೊಂಡದ ಸರ್ಕಲ್ ರಸ್ತೆಯ ರೈಲ್ವೆ ಗೇಟ್ ಬಳಿ ಕುರಿ, ಕೋಳಿ, ಮೀನು ಹಾಗೂ ಇತರೆ ತ್ಯಾಜ್ಯವನ್ನು ತಂದು ಹಾಕುವುದರಿಂದ ಗಬ್ಬು ವಾಸನೆ ಬೀರುತ್ತಿದೆ. ಆ ರಸ್ತೆಯಲ್ಲಿ ಸಂಚರಿಸುವವರು ಮೂಗು ಮುಚ್ಚಿಕೊಂಡು ಓಡಾಡಬೇಕು. ರೈಲ್ವೆ ಅಂಡರ್‌ಪಾಸ್ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು, ಸಂಚಾರ ದುಸ್ತರವಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಸಮಸ್ಯೆ ಪರಿಹರಿಸುವತ್ತ ಗಮನಹರಿಸಬೇಕು’ ಎಂದು ಜಾಲಿನಗರದ ನಿವಾಸಿ ಬಾಷಾ ಆಗ್ರಹಿಸಿದರು.
ಸಮಾನಾಂತರ ರಸ್ತೆ ನಿರ್ಮಾಣವೊಂದೇ ಪರಿಹಾರ
ಅಶೋಕ ಚಿತ್ರಮಂದಿರದ ಮುಂಭಾಗದಿಂದ ಆರ್‌ಎಂಸಿ ಲಿಂಕ್ ರಸ್ತೆಯ ಅಂಡರ್‌ಪಾಸ್‌ವರೆಗೆ ರೈಲು ಹಳಿಗೆ ಸಮಾನಾಂತರವಾಗಿ ರಸ್ತೆ ನಿರ್ಮಿಸಿದಲ್ಲಿ ಅಶೋಕ ರಸ್ತೆಯ ಅಂಡರ್‌ಪಾಸ್‌ನಲ್ಲಿ ಉಂಟಾಗಿರುವ ಸಮಸ್ಯೆಗೆ ಕೊಂಚ ಪರಿಹಾರ ಸಿಗಲಿದೆ. ಕೆ.ಆರ್.ರಸ್ತೆ ಮೂಲಕ ಬರುವ ವಾಹನಗಳು ಸರಾಗವಾಗಿ ಸಂಚರಿಸಲು ಅನುಕೂಲವಾಗುತ್ತದೆ. ಆ ಜಾಗದಲ್ಲಿನ ಮಾಲೀಕರು ಇದಕ್ಕೆ ಒಪ್ಪಿದ್ದು ಜನಪ್ರತಿನಿಧಿಗಳು ಇಚ್ಛಾಶಕ್ತಿ ಪ್ರದರ್ಶಿಸಬೇಕು. ಮಾಲೀಕರ ಮನವೊಲಿಸಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು.
-ಜೆ.ಅಮಾನುಲ್ಲಾ ಖಾನ್ ಜೆಡಿಎಸ್ ಮುಖಂಡ
ಅಶೋಕರಸ್ತೆ ರೈಲ್ವೆ ಅಂಡರ್‌ಪಾಸ್ ಸಮಸ್ಯೆ ಕುರಿತು ಸಂಬಂಧಪಟ್ಟ ಎಂಜಿನಿಯರ್‌ಗಳ ಜೊತೆ ಚರ್ಚಿಸಿ ವಾಹನಗಳ ಸುಗಮ ಸಂಚಾರಕ್ಕೆ ಸೂಕ್ತ ಯೋಜನೆ ರೂಪಿಸಲಾಗುವುದು. ಸಂಗೊಳ್ಳಿರಾಯಣ್ಣ ವೃತ್ತ ಸಮೀಪದ ರೈಲ್ವೆ ಮೇಲ್ಸೇತುವೆಯ ಕೆಳಭಾಗದಲ್ಲಿ ರೈಲು ಹಳಿ ಸುತ್ತ ಫೆನ್ಸಿಂಗ್ ಮಾಡಿಸಲು ಮೇಲ್ಸೇತುವೆಗಳ ಕೆಳಭಾಗ ಹಾಗೂ ಅಂಡರ್‌ಪಾಸ್‌ಗಳ ಸುತ್ತಮುತ್ತ ಕಸ ಹಾಕದಂತೆ ಕ್ರಮ ಕೈಗೊಳ್ಳಲು ಪಾಲಿಕೆ ಆಯುಕ್ತರಿಗೆ ಸೂಚಿಸುತ್ತೇನೆಡಾ.ಪ್ರಭಾ ಮಲ್ಲಿಕಾರ್ಜುನ್ ಸಂಸದೆ
ಆತ್ಮಹತ್ಯೆ ತಾಣಗಳಾಗಿರುವ ಮೇಲ್ಸೇತುವೆ ಕೆಳಭಾಗ
ನಗರದ ಸಂಗೊಳ್ಳಿರಾಯಣ್ಣ ಸರ್ಕಲ್ ಹಾಗೂ ಎಪಿಎಂಸಿ ಮಾರುಕಟ್ಟೆ ಬಳಿ ಮೇಲ್ಸೇತುವೆಗಳನ್ನು ನಿರ್ಮಿಸಲಾಗಿದೆ. ಆದರೆ ಕಾಮಗಾರಿ ಕಳಪೆಯಾಗಿರುವ ಕಾರಣ ಅಲ್ಲಲ್ಲೇ ರಸ್ತೆ ಕುಸಿದಿದೆ ಎಂದು ಸ್ಥಳೀಯರು ದೂರಿದ್ದಾರೆ. ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ನಿರ್ಮಿಸಿರುವ ಮೇಲ್ಸೇತುವೆಯ ಕೆಳಭಾಗದಲ್ಲಿ ಗಿಡ–ಗಂಟಿಗಳು ಬೆಳೆದಿದ್ದು ರೈಲು ಹಳಿಗೆ ಸೂಕ್ತ ಗೇಟ್ ಇಲ್ಲದ ಕಾರಣ ಆತ್ಮಹತ್ಯೆಯ ತಾಣವಾಗಿ ಮಾರ್ಪಟ್ಟಿದೆ. ‘ಇಲ್ಲಿ ತಿಂಗಳಲ್ಲಿ 2–3 ಆತ್ಮಹತ್ಯೆಗಳು ಸಂಭವಿಸುವುದು ಸಾಮಾನ್ಯ. ಈಚೆಗೆ ಮಹಿಳೆಯೊಬ್ಬರು ಮಗುವನ್ನು ಕರೆದುಕೊಂಡು ಬಂದು ಹಳಿ ಮೇಲೆ ಮಲಗಿದ್ದರು. ಅವರನ್ನು ಅಲ್ಲಿಂದ ಎಳೆಯಲು ಪ್ರಯತ್ನಿಸಿದರೂ ಅವರು ಕದಲಿಲ್ಲ. ನಂತರ ಜನರನ್ನು ಸೇರಿಸಿ ಎಳೆದು ತರಬೇಕಾಯಿತು. ಕೂಡಲೇ ಪೊಲೀಸರಿಗೂ ಮಾಹಿತಿ ನೀಡಿದೆವು. ಮೇಲ್ಸೇತುವೆಗೆ ಹತ್ತಲು ಮೆಟ್ಟಿಲು ವ್ಯವಸ್ಥೆ ಇದ್ದು ಅಲ್ಲಿನ ಕಂಬಿಗೆ ನೇಣು ಹಾಕಿಕೊಳ್ಳುತ್ತಾರೆ. ಹಳಿಯ ಎರಡೂ ಬದಿಗೆ ಎತ್ತರದ ಗೋಡೆ ಕಟ್ಟಿ ಯಾರೂ ಪ್ರವೇಶಿಸಲು ಸಾಧ್ಯವಾಗದಂತೆ ನೋಡಿಕೊಳ್ಳಬೇಕು. ಅಲ್ಲಿವರೆಗೆ ಸೂಕ್ತ ಕಾವಲು ವ್ಯವಸ್ಥೆ ಮಾಡಬೇಕು’ ಎಂದು ಸಮೀಪದ ನಿವಾಸಿಯೊಬ್ಬರು ತಿಳಿಸಿದರು. ‘ಮೇಲ್ಸೇತುವೆ ಕೆಳ ಭಾಗದಲ್ಲಿ ಗಿಡ–ಗಂಟಿಗಳು ಬೆಳೆದಿರುವುದರಿಂದ ಎಲ್ಲರೂ ತ್ಯಾಜ್ಯವನ್ನು ತಂದು ಸುರಿಯುತ್ತಾರೆ. ರಾತ್ರಿ ವೇಳೆ ಕುಡುಕರು ಇಲ್ಲಿ ಬಂದು ಗಲಾಟೆ ಮಾಡುತ್ತಾರೆ. ಬಾಟಲಿಗಳನ್ನು ಒಡೆದು ಹಾಕಿರುತ್ತಾರೆ’ ಎಂದು ದೂರಿದರು.
ಇಲಾಖೆಗಳ ತಿಕ್ಕಾಟದಿಂದ ಸೊರಗಿದ ಮೇಲ್ಸೇತುವೆ
-ಇನಾಯತ್ ಉಲ್ಲಾ ಟಿ. ಹರಿಹರ
ನಗರದ ವ್ಯಾಪ್ತಿಯಲ್ಲಿಯೇ ಎರಡು ರೈಲ್ವೆ ಸೇತುವೆಗಳಿವೆ. ಒಂದು ಅಮರಾವತಿ ಬಳಿಯ ರೈಲ್ವೆ ಮೇಲ್ಸೇತುವೆ ಇನ್ನೊಂದು ಹರಪನಹಳ್ಳಿ ಹೆದ್ದಾರಿಯ ರೈಲ್ವೆ ಕೆಳ ಸೇತುವೆ. ಅಮರಾವತಿ ಬಳಿ ಹಳೆ ಪಿ.ಬಿ.ರಸ್ತೆಯಲ್ಲಿ ರೈಲ್ವೆ ಇಲಾಖೆಯು ರೈಲ್ವೆ ಮೇಲ್ಸೇತುವೆ ನಿರ್ಮಿಸಿದೆ. ಇದನ್ನು ಪಿಡಬ್ಲ್ಯೂಡಿಗೆ ಹಸ್ತಾಂತರ ಮಾಡಲು ರೈಲ್ವೆ ಇಲಾಖೆಯು ಪಿಡಬ್ಲ್ಯೂಡಿಗೆ ಪತ್ರ ಬರೆದಿದೆ. ಆದರೆ ಕಾಮಗಾರಿ ಕಳಪೆಯಾಗಿರುವ ಕಾರಣ ಸರಿಪಡಿಸಿ ಕೊಡಬೇಕು ಎಂದು ಪಿಡಬ್ಲ್ಯೂಡಿ ಅಧಿಕಾರಿಗಳು ಪಟ್ಟು ಹಿಡಿದಿದ್ದಾರೆ. ಎರಡೂ ಇಲಾಖೆಗಳಿಂದ ನಿರ್ವಹಣೆ ಇಲ್ಲದೆ ಸೇತುವೆ ಅನಾಥವಾಗಿದ್ದು ಜನ ವಾಹನ ಸಂಚಾರ ದುಸ್ತರವಾಗಿದೆ. ಈ ಸೇತುವೆ ಮೇಲಿನ ಅಕ್ಕಪಕ್ಕದ ಸರ್ವಿಸ್ ರಸ್ತೆ ಅಂಡರ್‌ಪಾಸ್ ರಸ್ತೆ ಗುಂಡಿಮಯವಾಗಿವೆ. ರಾಜ್ಯ ಹೆದ್ದಾರಿಯಾಗಿರುವುದರಿಂದ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಅರ್ಧ ಗಂಟೆ ಮಳೆ ಬಂದರೂ ಅಂಡರ್‌ಪಾಸ್‌ನಲ್ಲಿ ವಾರಗಟ್ಟಲೆ ನೀರು ನಿಂತು ಸಂಚಾರಕ್ಕೆ ಅಡ್ಡಿಯಾಗುತ್ತದೆ. ನಗರದ ಹರಪನಹಳ್ಳಿ ಹೆದ್ದಾರಿಯ ರೈಲ್ವೆ ಕೆಳ ಸೇತುವೆಯಲ್ಲಿ ಮಳೆಗಾಲದಲ್ಲಿ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆಯಾಗುತ್ತದೆ. ಪುರಾತನ ಸೇತುವೆಯನ್ನು ವಿಸ್ತರಣೆ ಮಾಡುವ ಹಾಗೂ ಮಳೆ ನೀರು ಸರಾಗವಾಗಿ ಹರಿದುಹೋಗುವ ವ್ಯವಸ್ಥೆ ಮಾಡುವ ಅಗತ್ಯವಿದೆ. ಮಳೆಗಾಲದಲ್ಲಿ ಸೇತುವೆ ಮಧ್ಯೆ ನೀರು ನಿಂತರೆ ನಗರದ ಪೂರ್ವ ಮತ್ತು ಪಶ್ಚಿಮ ಭಾಗಗಳ ನಡುವೆ ಸಂಪರ್ಕವೇ ಕಡಿತವಾಗಿ ಸಾವಿರಾರು ಜನರಿಗೆ ತೊಂದರೆಯಾಗುತ್ತದೆ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಾಢ ನಿದ್ರೆಯಲ್ಲಿದ್ದು ಎಚ್ಚೆತ್ತುಕೊಂಡು ಸಮಸ್ಯೆಗೆ ಪರಿಹಾರ ಸೂಚಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.