ದಾವಣಗೆರೆ: ನಗರದಲ್ಲಿ ಬುಧವಾರ ಸಂಜೆಯಿಂದ ರಾತ್ರಿವರೆಗೆ ಜಿಟಿ ಜಿಟಿ ಮಳೆ ಸುರಿಯಿತು. ನಗರದಲ್ಲಿ ಬೆಳಿಗ್ಗೆಯಿಂದಲೇ ಮೋಡಕವಿದ ವಾತಾವರಣ ಇತ್ತು. ಸಂಜೆ 4.30ರ ಸುಮಾರಿಗೆ ಶುರುವಾದ ತುಂತುರು ಮಳೆ ರಾತ್ರಿವರೆಗೂ ಸುರಿಯಿತು.
ಸಂಜೆ ಸುರಿದ ಮಳೆಯಿಂದಾಗಿ ಸಾರ್ವಜನಿಕರು ಛತ್ರಿ ಹಿಡಿದು ಓಡಾಡಿದರು. ವಾಹನ ಸವಾರರು ಮಳೆಯಲ್ಲೇ ಗಾಡಿ ಓಡಿಸಿದರು. ತುಂತುರು ಮಳೆಯೊಂದಿಗೆ ತಣ್ಣನೆಯ ಗಾಳಿ ಬೀಸಿದ್ದರಿಂದ ನಗರದಲ್ಲಿ ತಂಪಾದ ವಾತಾವರಣ ಸೃಷ್ಟಿಯಾಗಿತ್ತು.
ತಗ್ಗಿದ ವ್ಯಾಪಾರ: ಸಂಜೆ ಸುರಿದ ಮಳೆಯಿಂದಾಗಿ ಬೀದಿ ಬದಿ ಅಂಗಡಿಗಳ ವ್ಯಾಪಾರ ಕಡಿಮೆಯಾಯಿತು. ‘ತಳ್ಳುಗಾಡಿ ಹೋಟೆಲ್’ಗಳ ವ್ಯಾಪಾರಸ್ಥರು ಗ್ರಾಹಕರಿಲ್ಲದೆ ಗೊಣಗಿದರು. ಸಂಜೆಯ ಜಿಟಿ ಜಿಟಿ ಮಳೆಯಿಂದಾಗಿ ಸಾರ್ವಜನಿಕರು ಹೆಚ್ಚಾಗಿ ಮನೆ ಬಿಟ್ಟು ಹೊರಬಾರಲಿಲ್ಲ.