ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ರಾಮಮಂದಿರ ಭಾರತದ ಅಸ್ಮಿತೆಯ ಸಂಕೇತ

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ ಅಭಿಪ್ರಾಯ
Published 18 ಜನವರಿ 2024, 14:35 IST
Last Updated 18 ಜನವರಿ 2024, 14:35 IST
ಅಕ್ಷರ ಗಾತ್ರ

ದಾವಣಗೆರೆ: ‘ಲಕ್ಷಾಂತರ ಜನರ ತ್ಯಾಗ, ಬಲಿದಾನದ ಫಲವಾಗಿ ಜ. 22ರಂದು ಅಯೋಧ್ಯೆಯಲ್ಲಿ ಲೋಕಾರ್ಪಣೆಗೊಳ್ಳಲಿರುವ ರಾಮ ಮಂದಿರ ಅದೊಂದು ರಾಷ್ಟ್ರಮಂದಿರ. ಭಾರತದ ಅಸ್ಮಿತೆಯ ಸಂಕೇತ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕ್ಷೇತ್ರೀಯ ಕಾರ್ಯವಾಹ ನಾ.ತಿಪ್ಪೇಸ್ವಾಮಿ ಅಭಿಪ್ರಾಯಪಟ್ಟರು.

ಸೋಮೇಶ್ವರ ಪ್ರತಿಷ್ಠಾನದ ಆಶ್ರಯದಲ್ಲಿ ಪತ್ರಕರ್ತ ರಮೇಶ್‌ ಕುಮಾರ್ ನಾಯಕ್ ಅವರು ರಚಿಸಿರುವ ‘ಮಂದಿರವಲ್ಲೇ ಕಟ್ಟಿದೆವು’ ಪುಸ್ತಕವನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

‘ರಾಮಮಂದಿರದಲ್ಲಿ ಕೇವಲ ರಾಮನ ಪ್ರತಿಮೆಯಷ್ಟೇ ಪ್ರತಿಷ್ಠಾಪನೆಯಾಗುತ್ತಿಲ್ಲ. ಬದಲಾಗಿ ಲಕ್ಷ್ಮಣ, ಸೀತೆ, ಹನುಮಂತನ ಮೂರ್ತಿಗಳು ಪ್ರತಿಷ್ಠಾಪನೆಯಾಗಲಿವೆ. ಇದು ಭಾರತದಲ್ಲಿ ಕುಟುಂಬದ ಸಂಸ್ಕೃತಿಯನ್ನು ತೋರಿಸುತ್ತದೆ. ಏಕಪತ್ನಿ ವೃತಸ್ಥ ರಾಮ ತಂದೆ–ತಾಯಿಯರ ಮಾತನ್ನು ಉಳಿಸಿಕೊಳ್ಳಲು 14 ವರ್ಷ ವನವಾಸಕ್ಕೆ ಹೋಗುತ್ತಾನೆ. ರಾಮ ಈ ದೇಶದ ಸಂಸ್ಕೃತಿಯ ಪ್ರತೀಕ. ಸಂಸ್ಕಾರ ಮಾತ್ರವಲ್ಲದೆ ದೇಶದ ಗುರುತಿನ ಪ್ರಶ್ನೆ’ ಎಂದರು.

‘ರಾಮಮಂದಿರ ರಾಷ್ಟ್ರೀಯ ಸ್ಮಾರಕವಾಗುವ ನಿಟ್ಟಿನಲ್ಲಿ ದೇಣಿಗೆ ಸಂಗ್ರಹಿಸಲು ಹೋದಾಗ ಅಭೂತಪೂರ್ವ ಸ್ವಾಗತ ಸಿಕ್ಕಿತು. ಸಾಮಾನ್ಯ ಜನರಿಂದ ಹಿಡಿದು ಶ್ರೀಮಂತರು ಶ್ರದ್ಧೆ, ಭಕ್ತಿ ತೋರಿಸಿ ದೇಣಿಗೆ ನೀಡಿದರು. ದೇಶದಲ್ಲಿ ನಮ್ಮ ಕಾರ್ಯಕರ್ತರು 12 ಕೋಟಿ ಮನೆಗಳಿಗೆ ಭೇಟಿ ನೀಡಿ, 70 ಕೋಟಿ ಜನರನ್ನು ಸಂಪರ್ಕಿಸಿದರು. ಅಂದಾಜು 5 ಲಕ್ಷ ಗ್ರಾಮಗಳಿಗೆ ಭೇಟಿ ನೀಡಿದ್ದು, ಒಟ್ಟು ₹ 3000 ಕೋಟಿ ಹಣ ಸಂಗ್ರವಾಗಿದೆ. ಜನರ ಸಂಕಲ್ಪದಿಂದ ರಾಮಮಂದಿರ ನಿರ್ಮಾಣ ಸಾಧ್ಯವಾಯಿತು’ ಎಂದರು.

‘ಹಿಂದೂ ರಾಷ್ಟ್ರ, ಹಿಂದುತ್ವ ಜಾತಿ ಸಂಕೇತವಲ್ಲ. ಅದೊಂದು ಜೀವನ ಪದ್ಧತಿ. ಕುಟುಂಬ ಪದ್ಧತಿಯೇ ದೇಶದ ಸಂಸ್ಕೃತಿ. ಕುಟುಂಬಗಳು ಬಲ ಆಗಬೇಕು. ಆ ಮೂಲಕ ಪರಿಸರ ಸ್ವಚ್ಛವಾಗಬೇಕು. ಈ ದೇಶದಲ್ಲಿ ಅನಿಷ್ಠ ಪದ್ಧತಿ ತೊಲಗಿ ಸಾಮರಸ್ಯ ಮೂಡಬೇಕು. ಅಸ್ಪೃಶ್ಯತೆ ಅಳಿಸಿ ಹಾಕುವ ನಿಟ್ಟಿನಲ್ಲಿ ಸಂಘವು ಕೆಲಸ ಮಾಡುತ್ತಿದೆ. ರಾಮ ಮಂದಿರ ನಿರ್ಮಾಣದ ಮೂಲಕ ಜಗತ್ತಿನಲ್ಲಿ ಭಾರತ ವಿಶ್ವಗುರುವಾಗುತ್ತದೆ. ಇತರೆ ದೇಶಗಳು ನಮೃತೆಯಿಂದ ತಲೆಬಾಗಲು ರಾಷ್ಟ್ರಮಂದಿರ ನಿರ್ಮಾಣ ಸಹಕಾರಿ’ ಎಂದು ಅಭಿಪ್ರಾಯಪಟ್ಟರು.

 ‘ರಾಮ ಮಂದಿರ ಕಟ್ಟಲು 496 ವರ್ಷಗಳ ಕಾಲ ಹೋರಾಟ ನಡೆಸಿದ್ದು ನಮ್ಮ ದುರ್ದೈವ. ಇದಕ್ಕೆ ನಮ್ಮನ್ಮಾಳಿದ ಸರ್ಕಾರಗಳ ನೀತಿಯೇ ಕಾರಣ. ಸ್ವಾರ್ಥ ರಾಜಕಾರಣ, ಓಲೈಕೆ ರಾಜಕೀಯದಿಂದಾಗಿ ರಾಮ ಮಂದಿರ ಕಟ್ಟುವಲ್ಲಿ ವಿಳಂಬ ಆಯಿತು. ನ್ಯಾಯಾಂಗದ ತೀರ್ಪಿನಿಂದಲೂ ವಿಳಂಬವೂ ಆಯಿತು’ ಎಂದು ಪುಸ್ತಕದ ಲೇಖಕ ರಮೇಶ್ ಕುಮಾರ್ ನಾಯಕ್ ಹೇಳಿದರು.

ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ಸೋಮೇಶ್ವರ ವಿದ್ಯಾಲಯದ ಕಾರ್ಯದರ್ಶಿ ಕೆ.ಎಂ.ಸುರೇಶ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT