ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲದ ಕಾನೂನು ಪಾಲಿಸಿಕೊಂಡೇ ರಂಜಾನ್‌ ಆಚರಣೆ

ಕೊರೊನಾ ಸಂಕಷ್ಟ: ಸರಳ ಹಬ್ಬಕ್ಕೆ ಮುಸ್ಲಿಂ ಸಮುದಾಯದ ಗುರುಗಳು, ಮುಖಂಡರ ನಿರ್ಧಾರ
Last Updated 14 ಮೇ 2021, 7:46 IST
ಅಕ್ಷರ ಗಾತ್ರ

ದಾವಣಗೆರೆ: ‘ನಾವು ಜೀವನ ನಡೆಸುವ ಕಾನೂನನ್ನು ಪಾಲಿಸಿಕೊಂಡೇ ಸರಳವಾಗಿ ರಂಜಾನ್‌ ಆಚರಣೆ ಮಾಡುತ್ತೇವೆ’

ಇಲ್ಲಿನ ಎಸ್‌ಜೆಎಂ ನಗರದ ಹೊಸಕ್ಯಾಂಪ್‌ ಮಸೀದಿಯ ಶಹೀದ್‌ ರಝಾ ಅವರು ‘ಪ್ರಜಾವಾಣಿ’ ಜತೆ ಹಂಚಿಕೊಂಡ ಮಾತುಗಳು ಇವು. ಕೊರೊನಾ ಕಾಲದಲ್ಲಿ ಮುಸ್ಲಿಂ ಸಮುದಾಯದ ಎಲ್ಲರ ಅಭಿಪ್ರಾಯವೂ ಇದೇ ಆಗಿದೆ.

‘ರಂಜಾನ್‌ ತಿಂಗಳನ್ನು ತುಂಬಾ ಒಳ್ಳೆಯದಾಗಿ ಕಳೆದೆವು. ರಂಜಾನ್‌ ಅಂದರೆ ಯಾವುದೇ ಬಡವರಿಗೆ, ಹಸಿದವರಿಗೆ ಊಟ ಕೊಡುವುದು, ಅವರಿಗೆ ಸಹಾಯ ಮಾಡುವುದು ಆಗಿದೆ. ನಮ್ಮ ಮನೆ ಬಾಗಿಲಿಗೆ ಯಾವುದೇ ಜಾತಿ, ಧರ್ಮದವರು ಬರಲಿ ಅವರಿಗೆ ಸಹಾಯ ಮಾಡುವುದು ನಮ್ಮ ಧರ್ಮ. ರಂಜಾನ್‌ ಹಸಿದುಕೊಂಡವರ ಹಸಿವು ನೀಗಿಸಿ ಬೇರೆಯವ ಖುಷಿಗೆ ಒತ್ತು ನೀಡುವುದು ನಮ್ಮ ಧರ್ಮ ಕಲಿಸಿಕೊಡುತ್ತದೆ’ ಎಂದು ತಿಳಿಸಿದರು.

‘ಕೊರೊನಾ ಸಂಕಷ್ಟದ ಕಾಲದಲ್ಲಿ ಅಂತರ ಕಾಪಾಡಿಕೊಂಡು ಐದೈದು ಜನ ಮಸೀದಿಗೆ ಹೋಗಿ ನಮಾಜ್‌ ಮಾಡಿ ಬರುತ್ತಿದ್ದೇವೆ. ಹಬ್ಬದ ದಿನವೂ ಇದೇ ನಿಯಮ ಪಾಲನೆ ಮಾಡುತ್ತೇವೆ. ಇಡೀ ಜಗತ್ತಿಗೆ ಒಳ್ಳೆಯದಾಗಲಿ, ಎಲ್ಲ ಜನರು ಖುಷಿಯಾಗಿರಲಿ ಎಂದು ಪ್ರಾರ್ಥನೆ ಮಾಡುತ್ತೇವೆ’ ಎಂದು ಹೇಳಿದರು.

‘ಸರ್ಕಾರದ ನಿಯಮಗಳನ್ನು ನಾವು ಪಾಲಿಸಿಕೊಂಡು ನಮ್ಮ ಹಬ್ಬವನ್ನು ಆಚರಿಸುತ್ತೇವೆ. ಮಸೀದಿಗೆ ಐದೈದು ಮಂದಿ ಹೋಗುತ್ತೇವೆ. ಉಳಿದವರು ಮನೆಯಲ್ಲಿಯೇ ನಮಾಜ್‌ ಮಾಡಿ, ಹಬ್ಬ ಆಚರಿಸುತ್ತಾರೆ’ ಎಂದು ರಜಾವುಲ್‌ ಮುಸ್ತಫಾ ನಗರದಲ್ಲಿ ಇರುವದಾರುಲ್‌ ಉಲೂಮ್‌ ರಜಾವುಲ್‌ ಮುಸ್ತಫಾ ವಿದ್ಯಾಸಂಸ್ಥೆಯ ಅಧ್ಯಕ್ಷ ಮೌಲನಾ ಮಹಮ್ಮದ್‌ ಹನೀಫ್‌ ರಜಾ ಮಾಹಿತಿ ನೀಡಿದರು.

‘ಇಸ್ಲಾಂ ಅಂದರೆ ಕಟ್ಟುನಿಟ್ಟಿನ ಧರ್ಮ. ಅದರಷ್ಟೇ ಉದಾರ ನಿಯಮದ ಧರ್ಮ. ಉದಾಹರಣೆಗೆ ಕತ್ತೆ, ಸತ್ತ ಪ್ರಾಣಿಗಳ ಮಾಂಸ, ಹಲಾಲ್‌ ಮಾಡದ ಮಾಂಸ ತಿನ್ನಬಾರದು ಎಂಬ ನಿಯಮ ಇದೆ.ಜತೆಗೆ ಆಹಾರ ಇಲ್ಲದೇ ಸಾಯುವ ಸ್ಥಿತಿ ಇದ್ದರೆ ಈ ನಿಯಮ ಮೀರಿ ಕತ್ತೆ ಮಾಂಸವನ್ನೂ ತಿನ್ನಬಹುದು, ಸತ್ತ ಪ್ರಾಣಿಗಳ ಮಾಂಸವೂ ತಿನ್ನಬಹುದು. ಹಾಗೆಯೇ ಹಬ್ಬವನ್ನು ಸಂಭ್ರಮದಿಂದ ಆಚರಿಸಬಹುದು. ಕಷ್ಟಕಾಲದಲ್ಲಿ ಬರೀ ಪ್ರಾರ್ಥನೆ ಮಾಡಿ ಮುಗಿಸಲೂ ಅವಕಾಶ ಇದೆ’ ಎಂದು ಸಮುದಾಯದ ಮುಖಂಡ ಕೆ. ಚಮನ್‌ಸಾಬ್‌ ವಿವರಿಸಿದರು.

ಈ ತಿಂಗಳಲ್ಲಿ ದಾನ ಧರ್ಮ ಪ್ರಮುಖವಾದುದು. ಆದಾಯ ಗಳಿಸುವ ಪ್ರತಿಯೊಬ್ಬರು ಕಷ್ಟದಲ್ಲಿ ಇರುವವರಿಗೆ ನೆರವಾಗಿ ಸಂತೃಪ್ತಿ ಕಾಣಬೇಕು. ಹಸಿವು ಎಂದರೆ ಏನು ಎಂಬುದನ್ನು ಪ್ರತಿಯೊಬ್ಬರು ಅರ್ಥ ಮಾಡಿಕೊಳ್ಳುವುದಕ್ಕಾಗಿಯೇ 30 ದಿನಗಳ ಉಪವಾಸ ಇದೆ ಎಂದು ತಿಳಿಸಿದರು.

ಕೊರೊನಾ ಕಾರಣದಿಂದ ಜವಳಿ ಅಂಗಡಿಗಳು ಮುಚ್ಚಿದ್ದರಿಂದ ಬಹಳ ಮಂದಿಗೆ ಹೊಸ ಬಟ್ಟೆ ಖರೀದಿ ಮಾಡಲು ಸಾಧ್ಯವಾಗಿಲ್ಲ. ಮೊದಲೇ ಖರೀದಿ ಮಾಡಿದವರನ್ನು ಬಿಟ್ಟು ಉಳಿದವರು ಮನೆಯಲ್ಲಿ ಇದ್ದ ಒಳ್ಳೆಯ ಬಟ್ಟೆ ಹಾಕಿಕೊಂಡು ಹಬ್ಬ ಆಚರಿಸಲಿದ್ದಾರೆ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT