ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ಕಾಣದ ಸಂಭ್ರಮ, ಸರಳ ಆಚರಣೆ

‘ಈದ್‌ ಉಲ್‌ ಫಿತ್ರ್’‌ ಸಡಗರ ಕಸಿದ ಕೊರೊನಾ
Last Updated 23 ಮೇ 2020, 19:45 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ಈ ಬಾರಿಯ ‘ಈದ್‌ ಉಲ್‌ ಫಿತ್ರ್’‌ ಸಂಭ್ರಮ ಇಲ್ಲ. ಸರಳ ಆಚರಣೆಗೆ ಸೀಮಿತವಾಗಿದೆ.

ಬಡತನದ ಅರಿವು, ಹಸಿವಿನ ಅರಿವು ಮೂಡಿಸಿ ಮನುಷ್ಯನಿಗೆ ತಾಳ್ಮೆ, ಸಹನೆ ಕಲಿಸಿಕೊಡುವ ಉಪವಾಸದ ಆಚರಣೆಯೇ ರಂಜಾನ್‌. ಬಡವರಿಗೆ, ಅನಾಥರಿಗೆ ಸಹಾಯ ಮಾಡುತ್ತಾ ಸಂತೋಷದಲ್ಲಿ ತೊಡಗಿಸಿಕೊಳ್ಳುವುದೇ ‘ಈದ್‌ ಉಲ್‌ ಫಿತ್ರ್’. ಕೊರೊನಾ ಹಿನ್ನೆಲೆಯಲ್ಲಿ ಜನರು ಸಂಕಷ್ಟದಲ್ಲಿರುವ ಈ ಹೊತ್ತಿನಲ್ಲಿ ಈ ಬಾರಿಯ ಈದ್ ಈ ಆಶಯಗಳಿಗೆ ಹೆಚ್ಚಿನ ಮೌಲ್ಯ ತಂದಿದೆ.

ಅಂತರಂಗ ಶುದ್ಧಿ, ದಾನ, ಧರ್ಮ, ಸನ್ನಡತೆಗೆ ಮಾರ್ಗ ತೋರಿಸುವ ‘ರಂಜಾನ್’ ಮುಸ್ಲಿಮರಿಗೆ ಪವಿತ್ರ ಮಾಸ. ಒಂದು ತಿಂಗಳು ಉಪವಾಸ ವ್ರತವನ್ನು ಸಾಮೂಹಿಕ ಪ್ರಾರ್ಥನೆಯೊಂದಿಗೆ ಅಂತ್ಯಗೊಳಿಸುತ್ತಿದ್ದರು.ಸುಗಂಧ ದ್ರವ್ಯ, ಹೊಸ ಬಟ್ಟೆಗಳೊಂದಿಗೆ ಸಡಗರದಿಂದ ಹಬ್ಬ ಆಚರಿಸುತ್ತಿದ್ದರು. ಈ ಬಾರಿ ಇದಕ್ಕೆ ಅವಕಾಶವಿಲ್ಲ.

ಹಬ್ಬವನ್ನು ಸಾಂಕೇತಿಕವಾಗಿ ಆಚರಿಸಲು ಧರ್ಮಗುರುಗಳು, ಮುಖಂಡರು ಸೂಚಿಸಿದ್ದಾರೆ. ಹೀಗಾಗಿ ಮನೆಯಲ್ಲೇ ಪ್ರಾರ್ಥನೆ ನಡೆಯಲಿದೆ. ಮಸೀದಿಗಳಲ್ಲಿ ಧರ್ಮಗುರುಗಳು ಸೇರಿ 4 ಮಂದಿ ಮಾತ್ರ ಪ್ರಾರ್ಥನೆ ಸಲ್ಲಿಸಲಿದ್ದಾರೆ. ಬಳಿಕ ಸಮುದಾಯದವರು ಮನೆಗಳಲ್ಲೇ ಪ್ರಾರ್ಥನೆ ಮಾಡಲಿದ್ದಾರೆ.

ಶುಭಾಶಯ ವಿನಿಮಯ, ಖರೀದಿ ಇಲ್ಲ:ರಂಜಾನ್‌ ಸಮಯದಲ್ಲಿ ನಡೆಯುತ್ತಿದ್ದ ಇಫ್ತಾರ್‌ ಕೂಟ, ಮೀನಾ ಬಜಾರ್‌ನಲ್ಲಿ ಖರ್ಜೂರ, ಹೊಸ ಬಟ್ಟೆ ಖರೀದಿಯ ಸಂಭ್ರಮ ಕಾಣುತ್ತಿಲ್ಲ. ಸರಳ ಆಚರಣೆಗೆ ಒತ್ತು ನೀಡಲಾಗಿದೆ.

‘ಕೊರೊನಾ ಎಲ್ಲರಿಗೂ ಸಂಕಷ್ಟ ತಂದೊಡ್ಡಿದೆ. ಇಂತಹ ಸಮಯದಲ್ಲಿ ಹೊಸ ಬಟ್ಟೆ ಖರೀದಿ, ಸಂಭ್ರಮಾಚರಣೆ ಬೇಡ ಎಂದು ಸಮುದಾಯದವರಿಗೆ ತಿಳಿಸಲಾಗಿದೆ. ಪರಸ್ಪರ ಶುಭಾಶಯ ಕೋರದೆ ಮೊಬೈಲ್‌, ವಾಟ್ಸ್ಆ್ಯಪ್ ಸಂದೇಶ ಕಳುಹಿಸಲು ಮಾತ್ರ ಸೀಮಿತವಾಗಿರಲಿದೆ. ಈದ್‌ನಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರೆ ಮಾತ್ರ ಶುಭ ಎಂಬ ನಂಬಿಕೆ ಇದೆ. ಈದ್‌ ಪ್ರಾರ್ಥನೆ ಮನೆಯಲ್ಲಿ ಮಾಡಲು ಆಗುವುದಿಲ್ಲ. ಮನೆಯಲ್ಲಿ ಶುಕ್ರಾನ್‌ ಪ್ರಾರ್ಥನೆ ಮಾಡುತ್ತಾರೆ. ಹೀಗಾಗಿ ಧರ್ಮಗುರುಗಳು ಸೇರಿ 4 ಜನ ಮಾತ್ರ ಈದ್‌ ಪ್ರಾರ್ಥನೆ ಮಾಡುತ್ತಾರೆ’ ಎಂದು ಮೆಹಬೂಬ್‌ ನಗರದ ಹೈದರ್‌ ಮೊಯಿನಿ ದಾರುಲ್ ಉಲುಂ ಅಲ್‌ ಫಾಯಿಝ್‌ ಮರ್ಕಜು ತೊಯ್ಬಾ ತಿಳಿಸಿದರು.

‘ಲಾಕ್‌ಡೌನ್‌ ನಿಮಯ ಪಾಲಿಸಿ ಈದ್‌ ಆಚರಿಸಲಾಗುವುದು. ಯುಗಾದಿಯಲ್ಲಿ ಹಿಂದೂಗಳು, ಗುಡ್‌ಫ್ರೈಡೆಯಲ್ಲಿ ಕ್ರೈಸ್ತರು ಹಬ್ಬ ಆಚರಿಸಿಲ್ಲ. ಹಾಗಾಗಿ ಮುಸ್ಲಿಮರೂ ಈ ಬಾರಿ ಸರಳವಾಗಿ ಹಬ್ಬ ಆಚರಿಸುವಂತೆ ಧರ್ಮಗುರುಗಳು, ಮುಖಂಡರು ನಿರ್ಧರಿಸಿದ್ದಾರೆ. ಈ ವರ್ಷ ಸಾಮೂಹಿಕ ಪ್ರಾರ್ಥನೆ ಇರದ ಕಾರಣ ಮನೆಯಲ್ಲೇ ಹೇಗೆ ಆಚರಿಸಬೇಕು ಎಂಬ ಬಗ್ಗೆ ತಿಳಿಸಲಾಗಿದೆ’ ಎಂದು ರಜಾವುಲ್‌ ಮುಸ್ತಫಾ ನಗರದ ಅಬ್ದುಲ್‌ ಮನಾಫ್‌ ದಾರುಲ್‌ ಉಲುಂ ವಿವರಿಸಿದರು.

ರಂಜಾನ್‌ನಲ್ಲಿ ರೋಜಾಗೆ ಪ್ರಾಮುಖ್ಯತೆ
ಕಲ್ಮಾ, ನಮಾಜ್‌, ರೋಜಾ, ಜಕಾತ್‌ ಹಾಗೂ ಹಜ್‌ ಇವುಗಳನ್ನು ಇಸ್ಲಾಂ ಧರ್ಮದ ಪಂಚ ತತ್ವಗಳು ಎಂದು ಕರೆಯಲಾಗುತ್ತದೆ. ಕಲ್ಮಾ ಅಂದರೆ ಏಕದೇವರಲ್ಲಿ ವಿಶ್ವಾಸ ಇಡುವುದು ಮತ್ತು ಮಹಮ್ಮದ್‌ ಪೈಗಂಬರ್‌ ಅವರು ಕೊನೆಯ ಪ್ರವಾದಿ ಎಂದು ತಿಳಿಯುವುದು. ನಮಾಜ್ ಅಂದರೆ ಪ್ರಾರ್ಥನೆ. ದಿನಕ್ಕೆ ಐದು ಬಾರಿ ಮಾಡಬೇಕು. ಮೂರನೇಯದ್ದು ರೋಜಾ. ಅದುವೇ ರಂಜಾನ್‌ ಉಪವಾಸವಾಗಿದೆ. ಈ ನಾಲ್ಕು ತತ್ವಗಳನ್ನು ಎಲ್ಲರೂ ಪಾಲಿಸಬೇಕು. ಐದನೇಯದ್ದು ಹಜ್‌ ಎಂದರೆ ಮೆಕ್ಕಾ ಯಾತ್ರೆ. ಇದನ್ನು ಅನುಕೂಲಸ್ಥರು ಮಾತ್ರ ಮಾಡುತ್ತಾರೆ.

ಜಕಾತ್‌ಗೆ ಮನ್ನಣೆ
ಈದ್ ಅಂಗವಾಗಿ ಜಕಾತ್‌ (ದಾನ) ಅನ್ನು ಧಾನ್ಯಗಳ ರೂಪದಲ್ಲಿ ನೀಡಬೇಕು. ಕನಿಷ್ಠ 2.48 ಗ್ರಾಂ ಅಂದರೆ ಕನಿಷ್ಠ ₹ 155 ರಷ್ಟು ಧಾನ್ಯವನ್ನು ನೀಡಬೇಕು ಎಂಬುದು ಜಕಾತ್‌ ಹೇಳುತ್ತದೆ. ಇದನ್ನು ಪಾಲಿಸುತ್ತೇವೆ.ಹೊಸ ಬಟ್ಟೆ ಖರೀದಿ ಮಾಡದೆ ಅದನ್ನು ಲಾಕ್‌ಡೌನ್‌ ಸಂಕಷ್ಟದಲ್ಲಿರುವವರಿಗೆ ನೀಡಿ ಈದ್‌ ಆಚರಿಸುವಂತೆ ಸಮುದಾಯದವರಿಗೆ ಸೂಚಿಸಲಾಗಿದೆ ಎಂದುಹೈದರ್‌ ಮೊಯಿನಿ ದಾರುಲ್ ಉಲುಂ ಅಲ್‌ ಫಾಯಿಝ್‌ ಮರ್ಕಜು ತೊಯ್ಬಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT