ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆ ಕಾಯಕಲ್ಪಕ್ಕೆ ಶೀಘ್ರ ಚಾಲನೆ: ಶಾಸಕ ಎಸ್‍. ರಾಮಪ್ಪ ಮಾಹಿತಿ

Last Updated 11 ಆಗಸ್ಟ್ 2021, 3:05 IST
ಅಕ್ಷರ ಗಾತ್ರ

ಹರಿಹರ: ಮುಂಬರುವ ಬೇಸಿಗೆ ಹಂಗಾಮಿನಲ್ಲಿ ಕೊಂಡಜ್ಜಿ ಕೆರೆ ಸೇರಿ ತಾಲ್ಲೂಕಿನ ಪ್ರಮುಖ ಕೆರೆಗಳ ಕಾಯಕಲ್ಪಕ್ಕೆ ಕ್ರಿಯಾಯೋಜನೆ ಸಿದ್ಧಗೊಳಿಸಲಾಗಿದೆ ಎಂದು ಶಾಸಕ ಎಸ್‍. ರಾಮಪ್ಪ ಮಾಹಿತಿ ನೀಡಿದರು.

ತಾಲ್ಲೂಕಿನ ಕೊಂಡಜ್ಜಿ ಗ್ರಾಮದಲ್ಲಿ ಮಂಗಳವಾರ ಕೆರೆಗೆ ಬಾಗಿನ ಸಮರ್ಪಿಸಿ ನಂತರ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ತಾಲ್ಲೂಕಿನ ಪ್ರಮುಖ ಕೆರೆಗಳು ಹೂಳು ತುಂಬಿವೆ ಹಾಗೂ ಒತ್ತುವರಿಯಾಗಿವೆ. ಕೆರೆಗಳ ಹೂಳು ತೆಗೆಯಿಸುವ ಜತೆಗೆ ಹದ್ದುಬಸ್ತು ಕಾರ್ಯಕ್ಕೆ ಕ್ರಿಯಾಯೋಜನೆ ಸಿದ್ಧಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಕಾರ್ಯ ನಡೆಸಲಾಗುವುದು ಎಂದು ಭರವಸೆ ನೀಡಿದರು.

ದೇವರ ಅನುಗ್ರಹದಿಂದ ಈ ಬಾರಿ ಉತ್ತಮ ಮಳೆಯಾಗಿ ಕೆರೆ-ಕಟ್ಟೆಗಳು ತುಂಬಿವೆ. ಇದರಿಂದ ರೈತರಿಗೆ ಅನುಕೂಲವಾಗಲಿದೆ. ಆದರೆ, ಸರ್ಕಾರದ ಅವೈಜ್ಞಾನಿಕ ಕೃಷಿ ನೀತಿಯಿಂದ ರೈತರ ಬೆಳೆಗೆ ಉತ್ತಮ ಬೆಲೆ ದೊರಕದಂತಾಗಿದೆ. ಕೃಷಿ ಚಟುವಟಿಕೆ ಹಾಗೂ ರಾಸಾಯನಿಕ ಗೊಬ್ಬರದ ಬೆಲೆ ಗಗನಕ್ಕೇರಿದ್ದು, ಭತ್ತ ಹಾಗೂ ಮೆಕ್ಕೆಜೋಳದ ಬೆಲೆ ಪಾತಾಳಕ್ಕೆ ಕುಸಿದಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಭತ್ತಕ್ಕೆ ವೈಜ್ಞಾನಿಕ ಬೆಲೆ ನಿಗದಿಪಡಿಸುವ ಜತೆಗೆ ಗೊಬ್ಬರದ ದರ ಇಳಿಸುವಂತೆ ಆಗ್ರಹಿಸಿ ಮುಂದಿನ ದಿನಗಳಲ್ಲಿ ರೈತರೊಂದಿಗೆ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಮಾಜಕಲ್ಯಾಣ ಇಲಾಖೆಯಿಂದ ಪರಿಶಿಷ್ಟರ ಕಾಲೊನಿಯಲ್ಲಿ ₹ 5 ಲಕ್ಷ ಅನುದಾನದ ಹೈಮಾಸ್ಟ್ ದೀಪಗಳ ಉದ್ಘಾಟನೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ₹ 2 ಕೋಟಿ ಅನುದಾನದ ಕೌಶಲಾಭಿವೃದ್ಧಿ ತರಬೇತಿ ಕೇಂದ್ರದ ಭೂಮಿಪೂಜೆ ನೆರವೇರಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಗಂಗಾಧರ, ಸದಸ್ಯ ಭರಮಪ್ಪ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ನಿಖಿಲ್ ಕೊಂಡಜ್ಜಿ, ಬ್ಲಾಕ್ ಕಾಂಗ್ರೆಸ್ ಗ್ರಾಮಾಂತರ ಘಟಕದ ಅಧ್ಯಕ್ಷ ಎಂ.ಬಿ. ಅಬಿದಾಲಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT