ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಢೀರ್‌ ಏರಿದ ಕೋವಿಡ್ ಮರಣ ಪ್ರಮಾಣ

ಜಿಲ್ಲೆಯಲ್ಲಿ ಆಗಸ್ಟ್‌ನ 9 ದಿನಗಳಲ್ಲಿ 54 ಮಂದಿ ಸಾವು; ನೂರರ ಗಡಿ ದಾಟಿದ ಕೋವಿಡ್ ಮೃತರು
Last Updated 12 ಆಗಸ್ಟ್ 2020, 8:35 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ಸೋಂಕು ಸಣ್ಣ ಕಾಯಿಲೆಯಷ್ಟೆ ಎನ್ನುತ್ತಿರುವಾಗಲೇ ಕಳೆದ 10 ದಿನಗಳಲ್ಲಿ ಮರಣದ ಪ್ರಮಾಣ ತೀವ್ರ ಏರಿಕೆ ಕಂಡಿದೆ. ಈಗ ನೂರಕ್ಕೆ ತಲುಪಿದೆ.

ಜಿಲ್ಲೆಯಲ್ಲಿ ಮಾರ್ಚ್‌ನಲ್ಲೇ ಕೊರೊನಾ ಕಂಡುಬಂದಿತ್ತು. ಏಪ್ರಿಲ್‌ ಅಂತ್ಯದಲ್ಲಿ ಎರಡನೇ ಸುತ್ತಿನ ಕೊರೊನಾ ಆರಂಭಗೊಂಡಿತ್ತು. ಆದರೆ ಈ ಎರಡು ತಿಂಗಳುಗಳಲ್ಲಿ ಯಾವುದೇ ಮರಣ ಉಂಟಾಗಿರಲಿಲ್ಲ. ಮೇ 1ರಂದು ಜಾಲಿನಗರದ 69 ವರ್ಷದ ವೃದ್ಧ ಮೃತಪಟ್ಟಿದ್ದು ಜಿಲ್ಲೆಯ ಮೊದಲ ಸಾವು ಆಗಿತ್ತು. ಬಳಿಕ ಆ ತಿಂಗಳಲ್ಲಿ 48, 50, 55 ವರ್ಷದ ಮಹಿಳೆಯರು, 80 ಮತ್ತು 83 ವರ್ಷದ ವೃದ್ಧೆಯರು ಮೃತಪಟ್ಟಿದ್ದರು. ಒಟ್ಟು ಆರು ಮರಣ ಪ್ರಕರಣಗಳು ವರದಿಯಾದವು.

ಹೊಂಡದ ಸರ್ಕಲ್‌ನ 90 ವರ್ಷದ ವೃದ್ಧ, ಎಸ್‌ಎಸ್‌ಎಂ ನಗರದ 50 ವರ್ಷದ ಮಹಿಳೆ, ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ 53 ವರ್ಷದ ಪುರುಷ ಜೂನ್‌ ತಿಂಗಳಲ್ಲಿ ಮೃತಪಟ್ಟಿದ್ದರು.

ಕೊರೊನಾ ಸೋಂಕಿನಿಂದ ಮೃತಪಡುವವರ ಸಂಖ್ಯೆ ಜುಲೈನಲ್ಲಿ ಹೆಚ್ಚಳವಾಯಿತು. ಒಂದೇ ತಿಂಗಳಲ್ಲಿ 37 ಮಂದಿ ಕೊರೊನಾ ಸೋಂಕಿತರು ಮೃತಪಟ್ಟಿದ್ದರು. ಅಲ್ಲಿಗೆ ಒಟ್ಟು ಮರಣಗಳ ಸಂಖ್ಯೆ 46ಕ್ಕೇರಿತ್ತು.

ಆದರೆ ಆಗಸ್ಟ್‌ ಆರಂಭಗೊಳ್ಳುತ್ತಿದ್ದಂತೆ ಮರಣವನ್ನಪ್ಪುವವರ ಸಂಖ್ಯೆ ಒಮ್ಮೆಲೇ ಏರತೊಡಗಿತು. ಆ.10ರ ಬುಲೆಟಿನ್‌ವರೆಗೆ, ಅಂದರೆ ಆ.1ರಿಂದ 9ರ ವರೆಗೆ 54 ಮಂದಿ ಸಾವನ್ನಪ್ಪಿದ್ದಾರೆ.

ಇಲ್ಲಿಯವರೆಗೆ ಸಾವನ್ನಪ್ಪಿದವರಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಯಾರೂ ಇಲ್ಲ. ಆಜಾದ್‌ನಗರ ಮತ್ತು ರಾಣೆಬೆನ್ನೂರಿನ 21 ವರ್ಷದ ಇಬ್ಬರು ಯುವಕರೇ ಅತಿ ಕಿರಿಯರು. ಇಮಾಂನಗರದ 30 ವರ್ಷದವರು ಮಹಿಳೆಯರಲ್ಲಿ ಅತಿ ಕಿರಿಯರು. ಹೊಂಡದ ಸರ್ಕಲ್‌ನ 90 ವರ್ಷದ ವೃದ್ಧ ಅತಿ ಹಿರಿಯರು. ಒಟ್ಟು 60 ಪುರುಷರು ಮತ್ತು 40 ಮಹಿಳೆಯರು ಆ.9ರವರೆಗೆ ಮೃತಪಟ್ಟಿದ್ದಾರೆ.

‘ನಾವು ಟೆಸ್ಟ್‌ಗಳನ್ನು ಜಾಸ್ತಿ ಮಾಡಿದ್ದೇವೆ. ಹಾಗಾಗಿ ಕೊರೊನಾ ಸೋಂಕಿತರ ಪತ್ತೆ ಹೆಚ್ಚಾಗುತ್ತಿದೆ. ವಿವಿಧ ರೋಗಗಳಿದ್ದರೂ ಮುಚ್ಚಿಟ್ಟುಕೊಂಡು ಮನೆಯಲ್ಲೇ ಇರುವವರಿಂದ ತೊಂದರೆಯಾಗುತ್ತಿದೆ. ಯಾವುದೇ ಆತಂಕವಿಲ್ಲದೇ ಪರೀಕ್ಷೆ ಮಾಡಿಸಿಕೊಂಡು ಆಕ್ಸಿಜನ್‌ ಥೆರಪಿ ಮಾಡಿಸಿಕೊಂಡರೆ ಸಮಸ್ಯೆ ಆಗುವುದಿಲ್ಲ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಪ್ರತಿಕ್ರಿಯಿಸಿದರು.

‘ದುರ್ಬಲ ಆರೋಗ್ಯದವರನ್ನು ಪತ್ತೆ ಹಚ್ಚಬೇಕು ಎಂದು ನಗರಗಳ ವಾರ್ಡ್‌ ಟಾಸ್ಕ್‌ಫೋರ್ಸ್‌ಗಳಿಗೆ ಮತ್ತು ಗ್ರಾಮೀಣ ಪ್ರದೇಶದ ವಿಲೇಜ್‌ ಟಾಸ್ಕ್‌ಫೋರ್ಸ್‌ಗಳಿಗೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯಿತಿ ಸಿಇಒ ಆದೇಶ ನೀಡಿದ್ದಾರೆ. ಹಾಗಾಗಿ ಜಾಗೃತದಳವು ದುರ್ಬಲ ಆರೋಗ್ಯದವರನ್ನು ಪತ್ತೆಹಚ್ಚುತ್ತಿದೆ. ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯ, ಶ್ವಾಸಕೋಶ, ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿರುವವರು ಕೊರೊನಾ ಸೋಂಕು ಇದ್ದರೂ ಮನೆಯಲ್ಲಿಯೇ ಕುಳಿತಿದ್ದರು. ಅವರನ್ನು ಕರೆದುಕೊಂಡು ಬಂದು ಪರೀಕ್ಷೆ ನಡೆಸಿದಾಗ ಕೊರೊನಾ ಇರುವುದು ಪತ್ತೆಯಾಗುತ್ತಿದೆ. ಇನ್ನು ಕೆಲವರು ಅನಾರೋಗ್ಯ ಉಲ್ಬಣಿಸಿದ ಬಳಿಕ ಸಿಜಿ ಆಸ್ಪತ್ರೆ ಅಥವಾ ಎಸ್‌ಎಸ್‌ ಹೈಟೆಕ್‌ ಆಸ್ಪತ್ರೆಗೆ ಬರುತ್ತಿದ್ದಾರೆ’ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್‌ ವಿವರ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT