ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘವಿ ದೀಪಿಕಾ ಚಂಪಕ್‌ಲಾಲ್ ಸನ್ಯಾಸ ಸ್ವೀಕಾರ

ತಾಯಿಯ ಸೇವೆ ಮುಗಿದ ಮೇಲೆ ದೇವರ ದಾರಿಯಲ್ಲಿ ನಡೆಯಲು ಮಹಿಳೆ ನಿರ್ಧಾರ
Last Updated 4 ಮಾರ್ಚ್ 2021, 2:44 IST
ಅಕ್ಷರ ಗಾತ್ರ

ದಾವಣಗೆರೆ: ಆವರಗೆರೆ ನಾಗೇಶ್ವರ ಪಾರ್ಶ್ವ ಭೈರವ ಜೈನ ದೇವಾಲಯದಲ್ಲಿ ಬುಧವಾರ ಮುಂಜಾನೆ ಚೌಕಿಪೇಟೆಯ ಮಹಿಳೆ ಸನ್ಯಾಸ ದೀಕ್ಷೆ ಪಡೆದರು.

ದಾವಣಗೆರೆಯ ಚೌಕಿಪೇಟೆಯಲ್ಲಿ ವಾಸವಾಗಿರುವ ಸಂಘವಿ ದೀಪಿಕಾ ಚಂಪಕ್‌ಲಾಲ್ (35) ಸನ್ಯಾಸ ಸ್ವೀಕರಿಸಿದವರು. ಜೈನ ಧರ್ಮದ ವಿಧಿವಿಧಾನಗಳೊಂದಿಗೆ ಲೌಕಿಕ ಜೀವನ ತೊರೆದರು. ಆಚಾರ್ಯ ಮೇಘ ದರ್ಶನ್ ಸುರೇಶ್ವರ ಮಹಾರಾಜ್, ಆಚಾರ್ಯ ಹೀರ್‌ಚಂದ್ರ ಸುರೇಶ್ವರ ಮಹಾರಾಜ್, ಅರಿಹಂತ ಪ್ರಭಾಶ್ರೀ ಮಹಾರಾಜ್, ಜಿನ್ ಪ್ರಭಾಶ್ರೀ ಮಹಾರಾಜ್, ವಿರತಿಪೂರ್ಣಶ್ರೀ ಮಹಾರಾಜ್ ಆಶೀರ್ವಾದದಲ್ಲಿ, ಸುಪಾರ್ಶ್ವನಾಥ ಜೈನ್ ಮೂರ್ತಿಪೂಜಕ ಸಂಘದ ಸಾನ್ನಿಧ್ಯದಲ್ಲಿ ದೀಕ್ಷೆ ಸ್ವೀಕರಿಸುತ್ತಾರೆ.

ದೀಪಿಕಾ ತಮ್ಮ ಧರ್ಮ ಪ್ರಚಾರಕ್ಕಾಗಿ ವರ್ಷದ 12 ತಿಂಗಳಿನಲ್ಲಿ 4 ತಿಂಗಳು ಒಂದೆಡೆ ನೆಲೆಸಿ, ಇನ್ನುಳಿದ 8 ತಿಂಗಳು ಪ್ರಚಾರ ಯಾತ್ರೆ ಮಾಡಲಿದ್ದಾರೆ.

‘ದೀಕ್ಷೆ ಸ್ವೀಕರಿಸುವ ಮೊದಲು ಅವರ ಬಳಿಯಲ್ಲಿದ್ದ ಸ್ಥಿರ ಆಸ್ತಿಯನ್ನು ಬೇರೆಯವರ ಹೆಸರಿಗೆ ಬರೆದು ಕೊಡಲಾಯಿತು. ಹಣ, ಚಿನ್ನದ ಆಭರಣಗಳು ಇನ್ನಿತರೆ ವಸ್ತುಗಳನ್ನು ದಾನ ಮಾಡಲಾಯಿತು. ಸನ್ಯಾಸತ್ವ ಸ್ವೀಕರಿಸಿದ ಬಟ್ಟೆ, ಶಾಲು, ಜೀವಿಗಳನ್ನು ಓಡಿಸಲು ಪೊರಕೆಯಂತಹ ವಸ್ತು ಸೇರಿ 14 ವಸ್ತುಗಳು ಮಾತ್ರ ಅವರ ಬಳಿ ಇರಲಿವೆ’ ಎಂದು ಸಮಾಜದ ಗೌತಮ್ ಜೈನ್ ತಿಳಿಸಿದರು.

ಈ ಕಾರ್ಯಕ್ರಮದ ಅಂಗವಾಗಿ ಮಂಗಳವಾರ ಚೌಕಿಪೇಟೆ ಸುಪಾರ್ಶ್ವನಾಥ ಜೈನ ಮಂದಿರದಿಂದ ಚೌಕಿಪೇಟೆ ಎನ್.ಆರ್. ರಸ್ತೆಯ ಮೂಲಕ ಮಂಡಿಪೇಟೆಯ ಗಡಿಯಾರ ಕಂಬ, ವಿಜಯಲಕ್ಷ್ಮಿ ರಸ್ತೆ ಮಾರ್ಗವಾಗಿ ಮತ್ತೆ ಚೌಕಿಪೇಟೆ ಜೈನ ದೇವಸ್ಥಾನದವರೆಗೆ ಮೆರವಣಿಗೆ ನಡೆಯಿತು.

10 ದಿನಗಳ ಹಿಂದೆ ಇದೇ ದೇವಸ್ಥಾನದಲ್ಲಿ ಒಂದೇ ಕುಟುಂಬದ ಐವರು ಸೇರಿ ಒಟ್ಟು ಏಳು ಮಂದಿ ದೀಕ್ಷೆ ತೆಗೆದುಕೊಂಡಿದ್ದರು.

ದೀಕ್ಷೆಗಾಗಿ ಪಣ ತೊಟ್ಟಿದ್ದ ದೀಪಿಕಾ

ಚಂಪಕಲಾಲ್‌–ವಿಮಲಾಬಾಯಿ ದಂಪತಿಯ ಆರು ಮಕ್ಕಳಲ್ಲಿ ಐದನೆಯವರಾಗಿರುವ ದೀಪಿಕಾ ದೀಕ್ಷೆ ಪಡೆಯುವುದಾಗಿ ಪಣತೊಟ್ಟು ಕುಳಿತಿದ್ದರು. ಐವರು ಅಕ್ಕಂದಿರಿಗೆ, ಒಬ್ಬ ತಮ್ಮನಿಗೆ ಮದುವೆಯಾಗಿದ್ದರೂ ದೀಪಿಕಾ ಮದುವೆಯಾಗಿರಲಿಲ್ಲ.

ಬಿ.ಕಾಂ ಪದವೀಧರೆಯಾಗಿರುವ ದೀಪಿಕಾ ಪದವಿ ಮುಗಿಯುವ ಹೊತ್ತಿಗೇ ದೀಕ್ಷೆ ಬಗ್ಗೆ ಚಿಂತನೆ ನಡೆಸಿದ್ದರು. ಆತ್ಮಕಲ್ಯಾಣದ ದಾರಿಯನ್ನು ಹಿಡಿಯಬೇಕು. ದೇವರು ತೋರಿದ ದಾರಿಯಲ್ಲಿ ನಡೆಯಬೇಕು ಎಂಬುದು ಅವರ ಚಿಂತನೆಯಾಗಿತ್ತು. ಇದರ ಜತೆಗೆ ತಾಯಿ ಕಣ್ಣಲ್ಲಿ ನೀರು ಬರಬಾರದು. ಅವರು ಇರುವವರೆಗೆ ತಾಯಿ ಸೇವೆ ಮಾಡಬೇಕು ಎಂಬುದು ಅವರ ಇಚ್ಛೆಯಾಗಿತ್ತು. ಸುಮಾರು ಏಳು ತಿಂಗಳ ಹಿಂದೆ ತಾಯಿ ಮೃತಪಟ್ಟಿದ್ದರು. ಇದೀಗ ಅವರು ದೀಕ್ಷೆ ತೆಗೆದುಕೊಂಡಿದ್ದಾರೆ ಎಂದು ಗೌತಮ್‌ ಜೈನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT