ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂದಿ ಕಡಿಮೆ ಮಾಡಿ, ಪರ್ಯಾಯ ಉದ್ಯೋಗದತ್ತ ಗಮನಹರಿಸಿ

ಹಂದಿ ಮಾಲೀಕರಿಗೆ ನಗರಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಸಲಹೆ
Last Updated 29 ಆಗಸ್ಟ್ 2019, 15:30 IST
ಅಕ್ಷರ ಗಾತ್ರ

ದಾವಣಗೆರೆ: ನಗರದಲ್ಲಿ ಹಂದಿಗಳ ಹಾವಳಿ ಮಿತಿ ಮೀರುತ್ತಿದ್ದು, ಅವುಗಳ ಸಾಕಣೆಯನ್ನು ಕಡಿಮೆ ಮಾಡಿ, ಪರ್ಯಾಯ ಉದ್ಯೋಗದತ್ತ ಗಮನಹರಿಸಿ ಎಂದು ಮಹಾನಗರ ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಹಂದಿ ಮಾಲೀಕರಿಗೆ ಸಲಹೆ ನೀಡಿದರು.

ಮಹಾನಗರಪಾಲಿಕೆ ಸಭಾಂಗಣದಲ್ಲಿ ಗುರುವಾರ ನಡೆದ ಹಂದಿ ಮಾಲೀಕರ ಕುಂದು–ಕೊರತೆ ಸಭೆಯಲ್ಲಿ ಅವರು ಮಾತನಾಡಿದರು.

‘ಬೀಡಾಡಿ ಹಂದಿಗಳಿಂದ ಸಾರ್ವಜನಿಕರಿಗೆ ಉಪಟಳ ಜಾಸ್ತಿಯಾಗಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಸಾಕಷ್ಟು ದೂರುಗಳು ಬರುತ್ತಿವೆ. ಇದರಿಂದ ಜಿಲ್ಲಾಧಿಕಾರಿ ಆದೇಶದ ಮೇರೆಗೆ ಅವುಗಳನ್ನು ಸಾಗಿಸುವುದು ಅನಿವಾರ್ಯವಾಗಿತ್ತು. ಆದರೆ ಹಂದಿ ಮಾಲೀಕರ ಸಂಘ, ಅಖಿಲ ಕರ್ನಾಟಕ ಕುಳುವ ಮಹಾ ಸಂಘ ಹೈಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿದ್ದು, ಹೈಕೋರ್ಟ್‌ ಸೂಚನೆಯ ಅನುಸಾರ ಅಪಾಯವಾಗದಂತೆ ಕ್ರಮ ತೆಗೆದುಕೊಳ್ಳಲು ಈ ಸಭೆ ಕರೆಯಲಾಗಿದೆ’ ಎಂದರು.

‘ಬೇರೆ ನಗರಗಳಲ್ಲಿ ಮಾಲೀಕರೇ ಹಂದಿಗಳನ್ನು ಬೇರೆ ಕಡೆ ಸಾಗಿಸುತ್ತಿದ್ದು, ಆದರೆ ದಾವಣಗೆರೆಯಲ್ಲಿ ಹಂದಿಗಳ ವಿಲೇವಾರಿ ಮಾಡುತ್ತಿಲ್ಲ. ಇದರಿಂದಾಗಿ ಜನರು ಪಾಲಿಕೆಯನ್ನು ದೂರುತ್ತಿದ್ದಾರೆ. ಸ್ವಚ್ಛತೆ ಅವ್ಯವಸ್ಥೆಯಾಗಿದ್ದು, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ನೀವು ಇದಕ್ಕೆ ಬದ್ಧರಾಗಬೇಕು. ಸಮಸ್ಯೆಗಳ ಬಗ್ಗೆ ಮೇಲಧಿಕಾರಿ ಹಾಗೂ ಅಗತ್ಯಬಿದ್ದರೆ ಹೈಕೋರ್ಟ್‌ಗೂ ದೂರು ಸಲ್ಲಿಸಲಾಗುವುದು’ ಎಂದು ಹೇಳಿದರು.

ಅಖಿಲ ಕರ್ನಾಟಕ ಕುಳುವ ಮಹಾಸಂಘದ ರಾಜ್ಯಾಧ್ಯಕ್ಷ ಆನಂದಪ್ಪ ಮಾತನಾಡಿ, ‘ಹಂದಿ ಸಾಕಣೆ ನಮಗೆ ವಂಶಪಾರ್ಯಂಪರ್ಯ ವೃತ್ತಿಯಾಗಿದ್ದು, ಸ್ಮಾರ್ಟ್‌ ಸಿಟಿ ನೆಪದಲ್ಲಿ ಹಂದಿಗಳನ್ನು ಹಿಡಿದು ಹೊರ ರಾಜ್ಯಕ್ಕೆ ಸಾಗಿಸಲಾಗುತ್ತಿದೆ. ಇದರಿಂದ ನಮ್ಮ ವೃತ್ತಿ ನಾಶವಾಗುತ್ತಿದ್ದು, ನಮ್ಮ ಹೊಟ್ಟೆಯ ಮೇಲೆ ಹೊಡೆಯುವ ಕೆಲಸ ಮಾಡುತ್ತಿದೆ. ಇದರಿಂದಾಗಿ ಹೈಕೋರ್ಟ್‌ ಮೋರೆಹೋಗಬೇಕಾಯಿತು’ ಎಂದು ಹೇಳಿದರು.

‘ಹೈಕೋರ್ಟ್ ಪುನರ್ವಸತಿ ಕಲ್ಪಿಸುವಂತೆ ಆದೇಶ ನೀಡಿದರೂ ನಗರಪಾಲಿಕೆ ಈವರೆಗೆ ಹಂದಿ ಮಾಲೀಕರ ಸಭೆ ನಡೆಸಿಲ್ಲ. ಹಂದಿಗಳನ್ನು ತೆಗೆಯಬಾರದು ಎಂಬುದು ನಮ್ಮ ಉದ್ದೇಶವಲ್ಲ. ಬದಲಾಗಿ ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜೀವನ ಸಾಗಿಸುತ್ತಿದ್ದೇವೆ. ನಮಗೂ ಬದುಕಲು ಅವಕಾಶ ಮಾಡಿಕೊಡಿ. ಊರಿನ ಹೊರಗಡೆ ಪುನರ್ವಸತಿ ಕಲ್ಪಿಸಿದರೆ ಅಲ್ಲೇ ಸಾಕುತ್ತೇವೆ. ಹಂದಿಗಳ ಪಕ್ಕದಲ್ಲೇ ಮಲಗುತ್ತೇವೆ. ಶುಚಿ ಮಾಡುತ್ತೇವೆ. ಆದರೆ ಹಂದಿಯಿಂದ ಯಾವುದೇ ಕಾಯಿಲೆ ಬಂದಿಲ್ಲ. ಪುನರ್ವಸತಿ ಕಲ್ಪಿಸಿದರೆ ನಾವು ಹೊರ ಹೋಗಲು ಸಿದ್ಧರಿದ್ದೇವೆ’ ಎಂದು ಹೇಳಿದರು.

ಮಹಾನಗರ ಪಾಲಿಕೆಯ ಆರೋಗ್ಯ ಸಹಾಯಕ ನಿರ್ದೇಶಕ ಡಾ. ಚಂದ್ರಶೇಖರ್ ಸುಂಕದ್‌ ಮಾತನಾಡಿ ‘ಹಂದಿಗಳ ಮಾಲೀಕರಿಗೆ ಪುನವರ್ಸತಿ ಸೌಕರ್ಯ ಕಲ್ಪಿಸಲು ಪಾಲಿಕೆಯಿಂದ ಹಲವು ಬಾರಿ ಪ್ರಯತ್ನಿಸಲಾಗಿದೆ. ಆಲೂರಹಟ್ಟಿ ಜಾಗ ಆಯ್ಕೆ ಮಾಡಿದ್ದೆವು. ಆದರೆ ದೂರವಾಗುತ್ತದೆ ಎಂದು ಮಾಲೀಕರು ವಿರೋಧಿಸಿದ್ದರಿಂದ ಅದನ್ನು ಕೈಬಿಡಬೇಕಾಯಿತು. ದೊಡ್ಡಬಾತಿಯಲ್ಲಿ ₹50 ಲಕ್ಷ ವೆಚ್ಚದಲ್ಲಿ ಕಾರ್ಯಾರಂಭ ಮಾಡಲಾಗಿತ್ತು. ಹನಗೋಡು ಹಾಗು ಆವರಗೊಳ್ಳಗಳಲ್ಲೂ ಜಾಗ ಗುರುತಿಸಿದ್ದರೂ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರಿಂದ ಅದನ್ನು ಕೈಬಿಡಬೇಕಾಯಿತು’ ಎಂದು ಹೇಳಿದರು.

ಆರೋಗ್ಯ ನಿರೀಕ್ಷಕ ಅಲ್ತಮಸ್‌, ಪರಿಸರ ಎಂಜಿನಿಯರ್‌ ಸುನೀಲ್, ಪ್ರಥಮ ದರ್ಜೆ ಸಹಾಯಕ ಬಿ.ಎ. ವೆಂಕಟೇಶ್, ಪರಿಸರ ಅಧಿಕಾರಿಗಳಾದ ಕುಮಾರ್, ಬಸವಣ್ಣಪ್ಪ, ಶಾಲಿನಿ, ಚಿನ್ಮಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT