ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ತವ್ಯ ಪಾಲನೆಯಲ್ಲಿ ಶ್ರದ್ಧೆಯಿರಲಿ: ಸಚಿವ ಎಸ್‌.ಆರ್‌. ಶ್ರೀನಿವಾಸ

ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ
Last Updated 26 ಜನವರಿ 2019, 12:12 IST
ಅಕ್ಷರ ಗಾತ್ರ

ದಾವಣಗೆರೆ: ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ನಾಗರಿಕರು ಶ್ರದ್ಧೆಯಿಂದ ಕರ್ತವ್ಯ ಪಾಲನೆ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್. ಶ್ರೀನಿವಾಸ ಕರೆ ನೀಡಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.

ದೇಶದ ಎಲ್ಲಾ ಪ್ರಜೆಗಳು ಕರ್ತವ್ಯಗಳನ್ನು ಪಾಲಿಸಿದರೆ ಬಲಿಷ್ಠ ರಾಷ್ಟ್ರ ನಿರ್ಮಾಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಹೀಗಾಗಿ, ಸೌಲಭ್ಯಗಳ ಪ್ರಯೋಜನ ಪಡೆದು ತೃಪ್ತಿಗೊಂಡ ಜನರು ಕರ್ತವ್ಯ ಪಾಲನೆ ಮೂಲಕ ಉತ್ತೇಜನ ನೀಡಬೇಕು. ಇದೇ ರಾಷ್ಟ್ರದ ಪ್ರಗತಿಗೆ ಶ್ರೀರಕ್ಷೆ ಎಂದರು.

ಸ್ವಾತಂತ್ರ್ಯ ಗಳಿಸಿದ ಏಳು ದಶಕಗಳಲ್ಲಿ ದೇಶ ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದೆ. ಅದೇ ರೀತಿ ಜಿಲ್ಲೆಯ ಪ್ರಗತಿಗೂ ಸರ್ಕಾರ ಶ್ರಮಿಸುತ್ತಿದೆ. ಜಿಲ್ಲೆಯ ಕೈಗಾರಿಕಾ ಕ್ಷೇತ್ರದಲ್ಲಿ 13,133 ಕೈಗಾರಿಕೆಗಳು ನೋಂದಣಿಯಾಗಿದ್ದು, ₹ 5,311 ಕೋಟಿ ಹೂಡಿಕೆಯಾಗಿದೆ. 57,892 ಜನರಿಗೆ ಉದ್ಯೋಗ ಸಿಕ್ಕಿದೆ. ಮಂಗಳೂರು ರಿಫೈನರಿ ಮತ್ತು ಪೆಟ್ರೊಕೆಮಿಕಲ್‌ ಲಿಮಿಟೆಡ್‌ ಹರಿಹರದಲ್ಲಿ ಕೃಷಿ ಆಧಾರಿತ ಜೈವಿಕ ಇಂಧನ ಘಟಕ ಆರಂಭಿಸಲು ಯೋಜನೆ ರೂಪಿಸಿದೆ. ಕರುಬರಹಳ್ಳಿ–ಸಾರಥಿ ಪ್ರದೇಶದಲ್ಲಿ 30 ಎಕರೆ ‍ಪ್ರದೇಶವನ್ನು ಕೈಗಾರಿಕೆಗಾಗಿ ಅಭಿವೃದ್ಧಿಪಡಿಸಲಾಗಿದ್ದು, ಹಂಚಿಕ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.

ಕೃಷಿ ಪ್ರಗತಿಗಾಗಿ ಕೃಷಿ ಭಾಗ್ಯ ಯೋಜನೆ ಅನುಷ್ಠಾನ, ಕೃಷಿ ಯಂತ್ರಧಾರೆ ಸ್ಥಾಪನೆ, ಬಿತ್ತನೆ ಬೀಜ ಮತ್ತು ರಸಗೊಬ್ಬರ ವಿತರಣೆ, ಹೈಟೆಕ್‌ ಕೃಷಿ ಯಂತ್ರೋಪಕರಣ ವಿತರಣೆ ಹಾಗೂ ಲಘು ನೀರಾವರಿ ಯೋಜನೆ ಜಾರಿಗೊಳಿಸಲು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಾಗುತ್ತಿದೆ ಎಂದರು.

ಆಯುಷ್‌ಮಾನ್‌ ಮತ್ತು ಆರೋಗ್ಯ ಕರ್ನಾಟಕ ಯೋಜನೆಯಡಿ ದಾವಣಗೆರೆ ಒನ್‌ನ ಮೂರು ಕೇಂದ್ರಗಳು ಹಾಗೂ ಜಿಲ್ಲಾ ಆಸ್ಪತ್ರೆ ಮೂಲಕ 5689 ಕಾರ್ಡ್‌ಗಳನ್ನು ವಿತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ರಾಜ್ಯ ಸಂಸದೀಯ ಕಾರ್ಯದರ್ಶಿ ಕೆ. ಅಬ್ದುಲ್ ಜಬ್ಬಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜೆ. ಸವಿತಾ, ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ್, ಮೇಯರ್‌ ಶೋಭಾ ಪಲ್ಲಾಗಟ್ಟೆ, ಉಪ ಮೇಯರ್‌ ಚಮನ್‌ಸಾಬ್, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಎಸ್‌ಪಿ ಆರ್. ಚೇತನ್, ಜಿಲ್ಲಾ ಪಂಚಾಯಿತಿ ಸಿಇಒ ಎಸ್. ಅಶ್ವತಿ, ಹೆಚ್ಚುವರಿ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ, ಉಪ ವಿಭಾಗಾಧಿಕಾರಿ ಕುಮಾರಸ್ವಾಮಿ, ತಹಶೀಲ್ದಾರ್ ಸಂತೊಷ್‌ಕುಮಾರ್, ಜಿಲ್ಲಾ ಮಟ್ಟದ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

* * *

1.52 ಲಕ್ಷ ರೈತರು ಸಾಲಮನ್ನಾ ಫಲಾನುಭವಿಗಳು

ಜಿಲ್ಲೆಯಲ್ಲಿ ಬೆಳೆ ಸಾಲ ಮನ್ನಾ ಯೋಜನೆಗಾಗಿ 1,52,450 ಫಲಾನುಭವಿಗಳನ್ನು ಗುರುತಿಸಲಾಗಿದೆ. ಮೊದಲ ಹಂತದಲ್ಲಿ 2,471 ರೈತರ ಸಹಕಾರ ಸಂಸ್ಥೆಗಳಲ್ಲಿನ ₹ 16.91 ಕೋಟಿ ಸಾಲ ಮನ್ನಾ ಮಾಡಲಾಗಿದೆ. ಇನ್ನುಳಿದ 1,50,321 ರೈತರ ಸಾಲ ಮನ್ನಾ ಮಾಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಸಚಿವ ಶ್ರೀನಿವಾಸ ತಿಳಿಸಿದರು.

* * *

ಆಕರ್ಷಕ ಪಥಸಂಚಲನ

ಗಣರಾಜ್ಯೋತ್ಸವದಲ್ಲಿ ಪೊಲೀಸ್‌, ಗೃಹರಕ್ಷಕ, ಅಗ್ನಿಶಾಮಕ ದಳ, ಎನ್‌ಸಿಸಿ, ಸ್ಕೌಟ್ಸ್‌ ಮತ್ತು ಗೈಡ್ಸ್‌, ಸೇವಾದಳ ಸೇರಿ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಆಕರ್ಷಕ ಪಥ ಸಂಚಲನ ನಡೆಸಿಕೊಟ್ಟರು. ಉತ್ತಮ ಪ್ರದರ್ಶನ ನೀಡಿದ ತಂಡಗಳಿಗೆ ವಿವಿಧ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಯಿತು.

1–ಜಿಲ್ಲಾ ಅರಣ್ಯ ರಕ್ಷಕದಳ, 2–ಅಬಕಾರಿ ದಳ, 3–ಗೃಹರಕ್ಷಕ ದಳ.

ಎನ್‌ಸಿಸಿ ವಿಭಾಗ: 1–ಎವಿಕೆ ಮಹಿಳಾ ಕಾಲೇಜು, 2–ಎಆರ್‌ಜಿ ಕಾಲೇಜು, 3–ಡಿಆರ್‌ಎಂ ಸೈನ್ಸ್ ಅಂಡ್ ಪಾಲಿಟೆಕ್ನಿಕ್ ಕಾಲೇಜು.

ಫ್ರೌಢಶಾಲಾ ವಿಭಾಗ: 1–ಎಸ್‌ಟಿಜೆ ಹೈಸ್ಕೂಲ್, 2–ಪಿಎಸ್‌ಎಸ್‌ಎಂಆರ್ ಪ್ರೌಢಶಾಲೆ, 3–ಮೌನೇಶ್ವರ ಕಿವುಡ ಮತ್ತು ಮೂಗರ ಶಾಲೆ.

* * *

ರಂಜಿಸಿದ ನೃತ್ಯ ಪ್ರದರ್ಶನ

ವಿದ್ಯಾರ್ಥಿಗಳು ಪ್ರದರ್ಶಿಸಿದ ದೇಶಭಕ್ತಿ ಬಿಂಬಿಸುವ ನೃತ್ಯಗಳು ರಂಜಿಸಿದವು. ಸಭಿಕರಲ್ಲಿ ದೇಶಾಭಿಮಾನ ಮೂಡಿಸಿದವು.

ನಿಂಚನ ಪಬ್ಲಿಕ್‌ ಶಾಲೆಯ 400ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪ್ರದರ್ಶಿಸಿದ ನೃತ್ಯ ರೂಪಕ ಮನಸೆಳೆಯಿತು. ಲಲಿತಾ ಇಂಟರ್‌ ನ್ಯಾಷನಲ್‌ ಶಾಲೆ ವಿದ್ಯಾರ್ಥಿಗಳು ಯುದ್ಧ ಭೂಮಿಯ ನೃತ್ಯರೂಪಕವನ್ನು ಅಚ್ಚುಕಟ್ಟಾಗಿ ಪ್ರಸ್ತುತಪಡಿಸಿದರು. ಗುರುಬಸಮ್ಮ ವಿ. ಚಿಗಟೇರಿ ಶಾಲೆ ಮಕ್ಕಳು ದೇಶದ ವಿವಿಧ ರಾಜ್ಯಗಳ ಸಂಸ್ಕೃತಿ ಬಿಂಬಿಸುವ ನೃತ್ಯದ ತುಣಕುಗಳನ್ನು ಆಕರ್ಷಕವಾಗಿ ಪ್ರದರ್ಶಿಸಿದರು.

* * *

ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ

ಡಿಎಚ್‌ಒ ಡಾ. ಎಂ.ಎಸ್. ತ್ರಿಪುಲಾಂಭ, ಜಿಲ್ಲಾ ಪಂಚಾಯಿತಿ ಯೋಜನಾ ಅಂದಾಜು ಮತ್ತು ಮೌಲ್ಯಮಾಪಾನಾಧಿಕಾರಿ ಶಾರದಾ ಜಿ. ದೊಡ್ಡಗೌಡರ್, ಎಸ್‌ಪಿ ಕಚೇರಿ ಸಹಾಯಕ ಆಡಳಿತಾಧಿಕಾರಿ ಕೃಷ್ಣಮೂರ್ತಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಎಂ. ವೀಣಾ, ನ್ಯಾಮತಿ ತಾಲ್ಲೂಕು ಕಚೇರಿ ಉಪ ತಹಶೀಲ್ದಾರ್ ಎನ್. ನಾಗರಾಜಪ್ಪ, ಸವಳಂಗ ಪಿಡಿಒ ಬಿ.ಕೆ. ರೇಖಾ ಅವರಿಗೆ 2018–19ನೇ ಸಾಲಿನ ಜಿಲ್ಲಾ ಮಟ್ಟದ ಸರ್ವೋತ್ತಮ ಸೇವಾ ಪ್ರಶಸ್ತಿ ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT